ಅಮೆರಿಕಕ್ಕೆ ಜೂನ್ 3ನೇ ವಾರ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳುತ್ತಿದ್ದು, ಜೂ.22ರಂದು ಅಲ್ಲಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ವಾಷಿಂಗ್ಟನ್: ಅಮೆರಿಕಕ್ಕೆ ಜೂನ್ 3ನೇ ವಾರ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳುತ್ತಿದ್ದು, ಜೂ.22ರಂದು ಅಲ್ಲಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಉಭಯಪಕ್ಷೀಯ ನಾಯಕತ್ವದ ಪರವಾಗಿ ನರೇಂದ್ರ ಮೋದಿ ಅವರನ್ನು ಅಮೆರಿಕ ಜಂಟಿ ಸಂಸತ್ತಿನ ಅಧಿವೇಶನದಲ್ಲಿ ಜೂ.22ರ ಗುರುವಾರ ಭಾಷಣ ಮಾಡಲು ಆಹ್ವಾನಿಸುತ್ತಿದ್ದೇವೆ ಎಂದು ಅಮೆರಿಕ ಸಂಸತ್ತಿನ ಪ್ರಕಟಣೆ ತಿಳಿಸಿದೆ. ಈ ಪ್ರಕಟಣೆಗೆ ಸಂಸತ್ತಿನ ಸ್ಪೀಕರ್ ಕೆವಿನ್ ಮೆಕಾರ್ತಿ, ಸಂಸತ್ತಿನ ಆಡಳಿತ ಪಕ್ಷದ ನಾಯಕ ಮಿಚ್ ಮೆಕ್‌ಕಾನೆಲ್ ಮತ್ತು ವಿಪಕ್ಷ ನಾಯಕ ಹಕೀಮ್ ಜೆಫ್ರೀಸ್ ಅವರು ಸಹಿ ಮಾಡಿದ್ದಾರೆ.
ಇಲ್ಲಿ ಭಾಷಣ ಮಾಡುತ್ತಿರುವ ಭಾರತದ 5ನೇ ಪ್ರಧಾನಿ
2ನೇ ಬಾರಿಗೆ ಪ್ರಧಾನಿ ಮೋದಿ ಅವರು ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದು, ಮೊದಲ ಬಾರಿಗೆ 2016ರ ಜೂ.8ರಂದು ಭಾಷಣ ಮಾಡಿದ್ದರು. ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಭಾಷಣ ಮಾಡಿದ ಭಾರತದ 5ನೇ ಪ್ರಧಾನಿ ಎನ್ನಿಸಿಕೊಂಡಿದ್ದರು. ಈ ಮುನ್ನ 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್, 2000ರಲ್ಲಿ ಅಟಲ್ ಬಿಹಾರಿ ವಾಜಪೇಯಿ, 1994ರಲ್ಲಿ ಪಿ.ವಿ. ನರಸಿಂಹರಾವ್, 1985ರಲ್ಲಿ ರಾಜೀವ್ ಗಾಂಧಿ ಅವರು ಭಾಷಣ ಮಾಡಿದ್ದರು.
ಬೈಡೆನ್-ಮೋದಿ ಔತಣಕೂಟದ ಟಿಕೆಟ್‌ಗೆ ಭಾರಿ ಬೇಡಿಕೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲಿ ನೀಡಲಾಗುತ್ತಿರುವ ಔತಣಕೂಟದಲ್ಲಿ ಭಾಗಿಯಾಗಲು ಅವಕಾಶ ಕೋರಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಸಾಕಷ್ಟು ಕೋರಿಕೆಗಳು ಬರುತ್ತಿವೆ. ಇದು ಮೋದಿ ಅವರ ಭೇಟಿಯ ಕುರಿತಾಗಿ ಇರುವ ಕುತೂಹಲವನ್ನು ತೋರಿಸುತ್ತದೆ ಎಂದು ಶ್ವೇತಭವನ ಹೇಳಿದೆ. ಜೂ.22ರಂದು ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಗೌರವಾರ್ಥವಾಗಿ ಅಮೆರಿಕ ಔತಣಕೂಟವನ್ನು ಆಯೋಜಿಸಿದೆ. ಈ ಕುರಿತಾಗಿ ಮಾತನಾಡಿದ ಶ್ವೇತಭವನದ ವಕ್ತಾರೆ ಕರೈನ್ ಜೀನ್ ಪೀರ್, ಇಷ್ಟೊಂದು ಪ್ರಮಾಣದಲ್ಲಿ ಕೋರಿಕೆಗಳು ಬರುತ್ತಿರುವುದು ನಿಜಕ್ಕೂ ಉತ್ತಮ ಸನ್ನಿವೇಶವಾಗಿದೆ. ಭಾರತದೊಂದಿಗೆ ಸಂಬಂಧ ಹೊಂದುವುದು ಏಕೆ ಮುಖ್ಯ ಎಂಬುದು ಇದರಿಂದ ಅರ್ಥವಾಗುತ್ತದೆ. ಅಧ್ಯಕ್ಷ ದಂಪತಿ ಕೂಡ ಪ್ರಧಾನಿ ಮೋದಿ ಅವರ ಭೇಟಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಸ್ಪ್ರೇಲಿಯಾದಲ್ಲೂ ನಮೋ ಅಲೆ: ಸಿಡ್ನಿಯಲ್ಲಿ ‘ಮೋದಿ ಮೋದಿ’ ಜೈಘೋಷ
ಇತ್ತೀಚೆಗೆ ಆಸ್ಪ್ರೇಲಿಯಾಗೆ 3 ದಿನಗಳ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು. ಸಿಡ್ನಿಯಲ್ಲಿ ಮೇ.23 ರಂದು ನಡೆದ ಅವರ ಬಹಿರಂಗ ಶೋ ವೇಳೆ ಜನರು ದಾಂಗುಡಿ ಇಟ್ಟು, ‘ಮೋದಿ ಅಲೆ’ ಸೃಷ್ಟಿಸಿದ್ದರು. ಆಸ್ಪ್ರೇಲಿಯಾಕ್ಕೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ್ದ ಅವರಿಗೆ ಸಿಡ್ನಿಯಲ್ಲಿ ಸಮಾರಂಭ ನಡೆದ ಕುಡೋಸ್ ಬ್ಯಾಂಕ್ ಅರೇನಾದಲ್ಲಿ ಭವ್ಯ ಸ್ವಾಗತ ದೊರಕಿತು. 21 ಸಾವಿರಕ್ಕೂ ಹೆಚ್ಚು ಭಾರತೀಯರು ಹಾಗೂ ಆಸ್ಪ್ರೇಲಿಯನ್ನರು ನೆರೆದಿದ್ದ ಬೃಹತ್ ಸ್ಟೇಡಿಯಂನಲ್ಲಿ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರು ಮೋದಿಗೆ ಆತ್ಮೀಯ ಅಪ್ಪುಗೆಯ ಮೂಲಕ ಸ್ವಾಗತ ಕೋರಿದರು. ಬಳಿಕ ‘ಮೋದಿ ಮೋದಿ ಮೋದಿ’ ಘೋಷಣೆ ಮೊಳಗಿತು. ಈ ಘೋಷಣೆಗಳ ನಡುವೆಯೇ ಮೋದಿ ಭಾಷಣ ಮಾಡಿದರು.
ಮೋದಿಯಿಂದ ಆಸೀಸ್ ಪ್ರಧಾನಿ, ಅಮೆರಿಕಾ ಅಧ್ಯಕ್ಷರಿಗೆ ವಿಚಿತ್ರ ಸಮಸ್ಯೆ
ಇದೇ ವೇಳೆ, ಜನರು ತ್ರಿವರ್ಣಧ್ವಜ ಹಿಡಿದು ಭಾರತ್ ಮಾತಾ ಕೀ ಜೈ ಜಯಘೋಷ ಮೊಳಗಿಸಿದರು. ಕೆಲವರು ತ್ರಿವರ್ಣ ಧ್ವಜದ ಪೇಟ ಧರಿಸಿದ್ದರು. ಮೋದಿ ಹಾಗೂ ಅಲ್ಬನೀಸ್‌ಗೆ ಇದೇ ವೇಳೆ ಹಿಂದೂ ಪುರೋಹಿತರು ಸ್ವಾಗತ ಕೋರಿ ಆಶೀರ್ವದಿಸಿದರು. ಭಾರತೀಯ ಕಲಾ ತಂಡಗಳು ಭಾರತದ ಸಂಸ್ಕೃತಿ ಪ್ರದರ್ಶಿಸುವ ನೃತ್ಯ, ಹಾಡುಗಾರಿಕೆ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಸೋಮವಾರ ರಾತ್ರಿ ಇದೇ ರೀತಿ ಸಿಡ್ನಿಯಲ್ಲಿ ಭಾರತೀಯರು ಅಪ್ಪಟ ದೇಶೀ ಉಡುಗೆಯಲ್ಲಿ ನೆರೆದು ಭರ್ಜರಿ ಸ್ವಾಗತ ಕೋರಿದ್ದರು.
