ಮಾನವ ಮೂಳೆಯಿಂದ ನಿರ್ಮಿತವಾದ ಭಯಾನಕ ಮಾದಕ ದ್ರವ್ಯವೊಂದನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಶ್ರೀಲಂಕಾದ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ
ಕೊಲಂಬೋ: ಮಾನವ ಮೂಳೆಯಿಂದ ನಿರ್ಮಿತವಾದ ಭಯಾನಕ ಮಾದಕ ದ್ರವ್ಯವೊಂದನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಶ್ರೀಲಂಕಾದ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಲಂಡನ್ ಮೂಲದ ಚಾರ್ಲೆಟ್ ಮೇ ಲಿ ಬಂಧಿತ ಆರೋಪಿ. 21 ವರ್ಷದ ಈಕೆ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು(flight attendant). ಈಕೆ 100 ಪೌಂಡ್ಸ್ ಅಂದರೆ ಅಂದಾಜು 45 ಕೇಜಿಯಷ್ಟು ಸಿಂಥೇಟಿಕ್ ಡ್ರಗ್‌ನೊಂದಿಗೆ (ಮಾನವ ಮೂಳೆಯಿಂದ ನಿರ್ಮಿತವಾದ ಭಯಾನಕ ಡ್ರಗ್) ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿನ ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಈ ಸಿಂಥೇಟಿಕ್ ಡ್ರಗ್‌ಗೆ ಕುಷ್ ಅಂತ ಹೆಸರಿಡಲಾಗಿದೆ.
ಈ ಕುಷ್ ಪಶ್ಚಿಮ ಆಫ್ರಿಕಾದಲ್ಲಿ ಹುಟ್ಟಿಕೊಂಡಂತಹ ಈ ಹೊಸ ಡ್ರಗ್, ಈ ಡ್ರಗ್ ಸೇವನೆಯಿಂದ ಸಿಯೆರಾ ಲಿಯೋನ್ ಪ್ರದೇಶವೊಂದರಲ್ಲೇ ವಾರಕ್ಕೆ ಸುಮಾರು ಒಂದು ಡಜನ್ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಬಿಬಿಸಿ ವರದಿಯ ಪ್ರಕಾರ, ಚಾರ್ಲೆಟ್ ಮೇಲೆ ಲೀ ತಂದ ಈ ಡ್ರಗ್‌ನ ಮೌಲ್ಯ 3.3 ಮಿಲಿಯನ್ ಡಾಲರ್ ಅಂದರೆ ಸುಮಾರು 28 ಕೋಟಿ ರೂ. ಇಷ್ಟೊಂದು ಮೌಲ್ಯದ ಮಾದಕವಸ್ತುವನ್ನು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶ್ರೀಲಂಕಾ ಕಸ್ಟಮ್ಸ್ ಅಧಿಕಾರಿಗಳು ಹಾಗೂ ಪೊಲೀಸರು ಆಕೆಯನ್ನು ಬಂಧಿಸಿದ್ದು, ಕೊಲಂಬೊದ ಉತ್ತರದ ಜೈಲಿನಲ್ಲಿ ಆಕೆಯನ್ನು ಇರಿಸಲಾಗಿದೆ. ಆಕೆ ಜೈಲಿನಲ್ಲಿ ನೆಲದ ಮೇಲೆಯೇ ಮಲಗಬೇಕಾಗುತ್ತದೆ. ಕುಟುಂಬವನ್ನು ಸಂಪರ್ಕಿಸುವ ಅವಕಾಶವನ್ನು ಆಕೆಗೆ ನೀಡಲಾಗಿದೆ. ಆದರೆ ಆಕೆಯ ಈ ಆರೋಪ ಸಾಬೀತಾದಲ್ಲಿ ಆಕೆಗೆ 25 ವರ್ಷಗಳವರೆಗೆ ಜೈಲು ಶಿಕ್ಷೆ ಗ್ಯಾರಂಟಿ.
ಕೊಲಂಬೊದ ಬಂಡರನಾಯಕೆ ವಿಮಾನ ನಿಲ್ದಾಣದಲ್ಲಿ ಇದುವರೆಗೆ ಪತ್ತೆಯಾದ ಅತೀದೊಡ್ಡ ಕುಶ್ ಮಾದಕ ದ್ರವ್ಯ ಜಪ್ತಿ ಪ್ರಕರಣ ಇದಾಗಿದೆ ಎಂದು ಶ್ರೀಲಂಕಾ ಕಸ್ಟಮ್ಸ್ ಮಾದಕ ದ್ರವ್ಯ ನಿಯಂತ್ರಣ ಘಟಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಲೀ ಅವರ ವಕೀಲ ಸಂಪತ್ ಪೆರೆರಾ ಬಿಬಿಸಿಗೆ ಹೇಳಿಕೆ ನೀಡಿದ್ದು, 21 ವರ್ಷದ ಯುವತಿ ಚಾರ್ಲೆಟ್ ಲೀ ಥೈಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಅವರ 30 ದಿನಗಳ ವೀಸಾ ಅವಧಿ ಮುಗಿಯಲಿದ್ದ ಕಾರಣ ಅವರನ್ನು ಬಲವಂತವಾಗಿ ಅಲ್ಲಿಂದ ಹೊರಹೋಗುವಂತೆ ಹೇಳಲಾಯ್ತು. ಹೀಗಾಗಿ ಅವರು ತಮ್ಮ ಥಾಯ್ ವೀಸಾ ನವೀಕರಣಕ್ಕಾಗಿ ಕಾಯುತ್ತಿರುವ ಸಮಯದಲ್ಲೇ ಶ್ರೀಲಂಕಾಕ್ಕೆ ಮೂರು ಗಂಟೆಗಳ ವಿಮಾನದಲ್ಲಿ ಹೋಗಲು ನಿರ್ಧರಿಸಿದರು. ಪ್ರಸ್ತುತ ನೆಗೊಂಬೊ ನಗರದ ಜೈಲಿನಲ್ಲಿ ಅವರನ್ನು ಇರಿಸಲಾಗಿದ್ದು, ಪ್ರತಿದಿನ ಅವರನ್ನು ಭೇಟಿ ಮಾಡಿ ವಿಚಾರಿಸಲು ಅವಕಾಶವಿದೆ ಎಂದಿದ್ದಾರೆ.
ನಾನು ಆ ಮಾದಕವಸ್ತುಗಳನ್ನು ಹಿಂದೆಂದೂ ನೋಡಿರಲಿಲ್ಲ. ಅವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಎಳೆದುಕೊಂಡು ಹೋದಾಗ ನಾನು ಇದನ್ನೆಲ್ಲಾ ನಿರೀಕ್ಷಿಸಿರಲಿಲ್ಲ. ಅದರಲ್ಲಿ ನನ್ನ ಎಲ್ಲಾ ವಸ್ತುಗಳಿವೇ ಎಂದು ನಾನು ಭಾವಿಸಿದೆ. ಹಾಗೆಯೇ ತನ್ನ ಸೂಟ್‌ಕೇಸ್‌ಗಳಲ್ಲಿ ಮಾದಕವಸ್ತುಗಳನ್ನು ಇಟ್ಟವರು ಯಾರು ಎಂದು ತನಗೆ ತಿಳಿದಿದೆ ಎಂದೂ ಆಕೆ ಡೈಲಿಮೇಲ್‌ಗೆ ಹೇಳಿಕೆ ನೀಡಿದ್ದಾಳೆ. ಆದರೆ ಅವರು ಯಾರು ಎಂದು ಆಕೆ ಹೆಸರು ಬಾಯ್ಬಿಟ್ಟಿಲ್ಲ.
ಈ ಕುಶ್ ಎಂದು ಕರೆಯಲ್ಪಡುವ ಈ ಡ್ರಗನ್ನು ವಿವಿಧ ವಿಷಕಾರಿ ವಸ್ತುಗಳಿಂದ ತಯಾರಿಸಲಾಗಿದೆ. ಅದರ ಮುಖ್ಯ ಅಂಶವೆಂದರೆ ಮಾನವ ಮೂಳೆ. ಈ ಮಾದಕ ವಸ್ತುವು ಮೊದಲ ಬಾರಿ ಪಶ್ಚಿಮ ಆಫ್ರಿಕಾದ ದೇಶದಲ್ಲಿ ಸುಮಾರು ಏಳು ವರ್ಷಗಳ ಹಿಂದೆ ಕಾಣಿಸಿಕೊಂಡಿತು. ಇದು ಸೇವಿಸಿದವರಿಗೆ ಹಲವಾರು ಗಂಟೆಗಳ ಕಾಲ ಉಳಿಯುವ ಸಂಮೋಹನದ(ಅಮಲು) ಉನ್ಮಾದವನ್ನು ಉಂಟು ಮಾಡುತ್ತದೆ. ಅಲ್ಲಿ ಈ ಡ್ರಗ್ ವ್ಯಾಪಕ ಸಮಸ್ಯೆಯಾಗಿ ಮಾರ್ಪಟ್ಟಿದೆ ಮತ್ತುಇದರ ಮಾರಾಟಗಾರರು ಮೂಳೆಗಾಗಿ ಸಮಾಧಿ ಅಗೆಯುವವರಾಗಿ ಬದಲಾಗಿದ್ದಾರೆ. ಇವರು ಬೇಡಿಕೆಗಳನ್ನು ಪೂರೈಸಲು ಮಾನವ ಅಸ್ಥಿಪಂಜರಗಳನ್ನು ಕದಿಯಲು ಸಾವಿರಾರು ಸಮಾಧಿಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಆಫ್ರಿಕಾದ ಸಿಯೆರಾ ಲಿಯೋನ್‌ನ ಅಧ್ಯಕ್ಷರು ಕುಶ್ ಮಾದಕದ್ರವ್ಯ ದುರುಪಯೋಗದ ಬಗ್ಗೆ ತುರ್ತು ಪರಿಸ್ಥಿತಿ ಘೋಷಿಸಿದರು. ನಮ್ಮ ದೇಶವು ಪ್ರಸ್ತುತ ಮಾದಕ ದ್ರವ್ಯಗಳ ದುರುಪಯೋಗದ ವಿನಾಶಕಾರಿ ಹಾನಿಯಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಸಿಯೆರಾ ಲಿಯೋನ್ ಅಧ್ಯಕ್ಷ ಜೂಲಿಯಸ್ ಮಾದಾ ಬಯೋ ಆ ಸಮಯದಲ್ಲಿ ಹೇಳಿಕೆ ನೀಡಿದ್ದರು.
ಇದರ ಸೇವನೆಯಿಂದ ಮಾದಕ ದ್ರವ್ಯ ವ್ಯಸನಿಗಳಲ್ಲಿ ಸಾವುಗಳು ಹೆಚ್ಚಾಗುತ್ತಿರುವುದು ಕಂಡುಬಂದಿವೆ. ಮಾದಕ ದ್ರವ್ಯವನ್ನು ನಿರ್ಮೂಲನೆ ಮಾಡಲು ಅವರು ಒಂದು ಕಾರ್ಯಪಡೆಯನ್ನು ಸ್ಥಾಪಿಸಿದ್ದು. ಮಾದಕ ವ್ಯಸನದಿಂದ ಬಳಲುತ್ತಿರುವ ಜನರಿಗೆ ಆರೈಕೆ ಮತ್ತು ಬೆಂಬಲವನ್ನು ನೀಡಲು ತರಬೇತಿ ಪಡೆದ ವೃತ್ತಿಪರರಿಂದ ಚಿಕಿತ್ಸೆ ನೀಡಲು ಪ್ರತಿ ಜಿಲ್ಲೆಯಲ್ಲಿಯೂ ಕೇಂದ್ರ ತೆರೆಯಲಾಗಿದೆ ಎಂದು ಆಗ ಅವರು ಹೇಳಿಕೆ ನೀಡಿದ್ದರು.
