ಸಾವಿರಾರು ಜನರು ಮತ್ತು ಅಮೆರಿಕ ಸೇನೆಯನ್ನೇ ಗುರಿಯಾಗಿಸಿ ಗುರುವಾರ ಎರಡು ಭೀಕರ ಆತ್ಮಾಹುತಿ ದಾಳಿ ಅಮೆರಿಕನ್‌ ಸೈನಿಕರೂ ಸೇರಿದಂತೆ 18 ಜನ ಸಾವನ್ನಪ್ಪಿ, 70ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ

ಕಾಬೂಲ್‌ (ಆ.27): ತಾಲಿಬಾನ್‌ ಆಡಳಿತದಲ್ಲಿ ಪ್ರಾಣ ಭೀತಿಯಿಂದ ದೇಶ ತೊರೆಯಲು ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿಂತಿದ್ದ ಸಾವಿರಾರು ಜನರು ಮತ್ತು ಅಮೆರಿಕ ಸೇನೆಯನ್ನೇ ಗುರಿಯಾಗಿಸಿ ಗುರುವಾರ ಎರಡು ಭೀಕರ ಆತ್ಮಾಹುತಿ ದಾಳಿ ನಡೆಸಲಾಗಿದೆ. 

ಘಟನೆಯಲ್ಲಿ ಅಮೆರಿಕನ್‌ ಸೈನಿಕರೂ ಸೇರಿದಂತೆ 18 ಜನ ಸಾವನ್ನಪ್ಪಿ, 70ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಹಲವು ಮಹಿಳೆಯರು ಮತ್ತು ಮಕ್ಕಳು ಕೂಡಾ ಸೇರಿದ್ದಾರೆ. ಚುನಾಯಿತ ಆಫ್ಘನ್‌ ಸರ್ಕಾರವನ್ನು ಪದಚ್ಯುತಗೊಳಿಸಿ ತಾಲಿಬಾನಿಗಳು ದೇಶವನ್ನು ವಶಪಡಿಸಿಕೊಂಡ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ದಾಳಿಯ ಘಟನೆ ಇದಾಗಿದೆ. ಘಟನೆ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಇದರ ಹಿಂದೆ ತನ್ನ ಕೈವಾಡವಿಲ್ಲ. ಇದರಲ್ಲಿ ಐಸಿಸ್‌ ಕೈವಾಡವಿರಬಹುದು ಎಂದು ತಾಲಿಬಾನ್‌ ಸಂಘಟನೆ ಹೇಳಿಕೆ ನೀಡಿದೆ.

ಅಮಾಯಕರನ್ನು ಗುರಿಯಾಗಿಸಿ ನಡೆದ ಈ ದಾಳಿಗೆ ವಿಶ್ವವ್ಯಾಪಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆ.31ರೊಳಗೆ ಅಮೆರಿಕ ಸೇರಿದಂತೆ ಎಲ್ಲಾ ವಿದೇಶಿ ಸೇನೆ ದೇಶ ತೊರೆಯಬೇಕು ಎಂದು ಈಗಾಗಲೇ ತಾಲಿಬಾನ್‌ ಉಗ್ರರು ಸ್ಪಷ್ಟಪಡಿಸಿದ್ದಾರೆ. ಅದರ ಬೆನ್ನಲ್ಲೇ ನಡೆದ ಈ ಸರಣಿ ದಾಳಿ, ದೇಶ ತೊರೆಯಲು ಬಯಸಿದ್ದ ಆಫ್ಘನ್‌ ಪ್ರಜೆಗಳು ಸೇರಿದಂತೆ ವಿದೇಶೀಯರ ತೆರವು ಕಾರ್ಯಾಚರಣೆಗೆ ಭಾರೀ ಅಡ್ಡಿ ಮಾಡುವ ಸಾಧ್ಯತೆ ಇದೆ.

ಅಫ್ಘನ್‌ನಲ್ಲಿ ಆತ್ಮಾಹುತಿ ದಾಳಿ, ಆರಗ ಜ್ಞಾನೇಂದ್ರ ಹೇಳಿಕೆ ನೀವೇ ಕೇಳಿ!

ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಐಸಿಸ್‌ ಸಂಘಟನೆ ಸಂಚು ರೂಪಿಸಿದೆ. ಹೀಗಾಗಿ ವಿಮಾನ ನಿಲ್ದಾಣದತ್ತ ಯಾರೂ ತೆರಳಬೇಡಿ ಎಂದು ಬ್ರಿಟನ್‌, ಅಮೆರಿಕ, ಅಸ್ಪ್ರೇಲಿಯಾ, ಜರ್ಮನಿ ಸರ್ಕಾರಗಳು ಗುರುವಾರ ಎಚ್ಚರಿಕೆ ನೀಡಿದ್ದವು. ಅದರ ಬೆನ್ನಲ್ಲೇ ಈ ಸರಣಿ ದಾಳಿಗಳು ನಡೆದಿವೆ.

ಸರಣಿ ಬಾಂಬ್‌ ಸ್ಫೋಟ: ಗುರುವಾರ ಸಂಜೆ ಭಾರತೀಯ ಕಾಲಮಾನ 8.15ರ ವೇಳೆಗೆ ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಎರಡು ಸ್ಫೋಟ ಮತ್ತು ಸರಣಿ ಗುಂಡಿನ ದಾಳಿ ನಡೆದಿದೆ. ಮೊದಲ ದಾಳಿ ವಿಮಾನ ನಿಲ್ದಾಣದ ಅಬ್ಬೇ ಗೇಟ್‌ ಬಳಿ ನಡೆದಿದೆ. ಇಲ್ಲಿ ನಡೆದ ಆತ್ಮಾಹುತಿ ಕಾರ್‌ ಬಾಂಬ್‌ ದಾಳಿಯಲ್ಲಿ ಹಲವು ಆಫ್ಘನ್‌ ನಾಗರಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಹಲವಾರು ಜನ ಗಾಯಗೊಂಡಿದ್ದಾರೆ. ಜೊತೆಗೆ ಹಲವು ಅಮೆರಿಕ ಯೋಧರಿಗೆ ಗಾಯಗಳಾಗಿವೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಪೆಂಟಗನ್‌ ಖಚಿತಪಡಿಸಿದೆ.

ಇದಾದ ಕೆಲವೇ ಹೊತ್ತಿನಲ್ಲೇ ವಿಮಾನ ನಿಲ್ದಾಣದ ಸಮೀಪದಲ್ಲೇ ಅಮೆರಿಕದ ಸೇನಾ ಪಡೆ ಇರುವ ಬಾರನ್‌ ಹೋಟೆಲ್‌ ಬಳಿ ಮತ್ತೊಂದು ದಾಳಿ ನಡೆದಿದೆ. ಈ ದಾಳಿಯಲ್ಲೂ ಹಲವರು ಸಾವನ್ನಪ್ಪಿದ್ದಾರೆ.

ಮನಕಲಕಿದ ರಕ್ತದೋಕುಳಿ: ಆತ್ಮಾಹುತಿ ದಾಳಿ ನಡೆದ ವಿಮಾನ ನಿಲ್ದಾಣದ ಬಳಿ ಎಲ್ಲೆಂದರಲ್ಲಿ ಶವಗಳು ಚೆಲ್ಲಾಡಿ, ರಕ್ತದೋಕುಳಿಯ ದೃಶ್ಯಗಳು ಮನಕಲಕುವಂತಿದ್ದವು. ಹೇಗಾದರೂ ಮಾಡಿ ದೇಶ ತೊರೆಯಬೇಕೆಂದು ಕಾದು ಕುಳಿತಿದ್ದ ಸಾವಿರಾರು ಜನ ಸ್ಫೋಟದ ಆತಂಕಕ್ಕೆ ಕಳೆದುಹೋದ ತಮ್ಮ ಕುಟುಂಬದ ಸದಸ್ಯರಿಗಾಗಿ ಹುಡುಕಾಡುತ್ತಿದ್ದ ದೃಶ್ಯಗಳು ಕಣ್ಣೀರು ತರಿಸುವಂತಿದ್ದವು.

ಸ್ಫೋಟದ ಮುನ್ನೆಚ್ಚರಿಕೆ: ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನೆರೆದಿರುವ ಜನರ ಮೇಲೆ ದಾಳಿ ನಡೆಸಲು ಐಸಿಸ್‌ ಉಗ್ರರು ಸಂಚು ರೂಪಿಸಿರುವ ಬಗ್ಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಖಚಿತವಾದ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ಬ್ರಿಟನ್‌ ರಕ್ಷಣಾ ಸಚಿವ ಜೇಮ್ಸ್‌ ಹೆಪ್ಪಿ ಬಿಬಿಸಿ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದರು. ಈ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕೂಡ ಅಫ್ಘಾನಿಸ್ತಾನದಿಂದ ಸೇನೆಯನ್ನು ಆ.31ರ ಒಳಗಾಗಿ ಹಿಂಪಡೆಯುತ್ತಿರುವುದಾಗಿ ಘೋಷಿಸಿದ ಸಂದರ್ಭದಲ್ಲಿ ಇಸ್ಲಾಮಿಕ್‌ ಸ್ಟೇಟ್‌- ಖೊರಾಸಾನ್‌ (ಐಎಸ್‌ಐ-ಕೆ)ನಿಂದ ದಾಳಿ ನಡೆಯುವ ಅಪಾಯದ ಬಗ್ಗೆ ಉಲ್ಲೇಖಿಸಿದ್ದರು.

ಸದ್ಯ ಕಾಬೂಲ್‌ ವಿಮಾನ ನಿಲ್ದಾಣ ಅಮೆರಿಕದ ಸೇನೆ ವಶದಲ್ಲಿದೆ. ಆದರೆ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹೊರಗಿನ ಪ್ರದೇಶಗಳು ತಾಲಿಬಾನ್‌ ಹಿಡಿತಕ್ಕೆ ಒಳಪಟ್ಟಿವೆ. ಇದು ಅಂತಾರಾಷ್ಟ್ರೀಯ ಪಡೆಗಳನ್ನು ದುರ್ಬಲವಾಗಿಸಿದೆ.