ಮಕ್ಕಳು ಹಠ ಮಾಡದೇ ಇರ್ಲಿ ಅಂದುಕೊಂಡು ಗೇಮ್‌ ಆಡು ಎಂದು ಮೊಬೈಲ್‌ ಕೊಟ್ಟಿದ್ದ ದಂಪತಿ ಇಂದು ಅಕ್ಷರಶಃ ದಿವಾಳಿಯಾಗಿದೆ. ಬಾಲಕಿಯ ಗೇಮ್ಸ್‌ ಗೀಳಿನಿಂದಾಗಿ ಬ್ಯಾಂಕ್‌ ಅಕೌಂಟ್‌ನಲ್ಲಿ ಸೇವಿಂಗ್ಸ್‌ನಲ್ಲಿದ್ದ 52 ಲಕ್ಷ ರೂಪಾಯಿ ಪೈಕಿ ಕೊನೆಗೆ ಇದ್ದಿದ್ದು ಬರೀ 5 ರೂಪಾಯಿ ಮಾತ್ರ! 


ನವದೆಹಲಿ (ಜೂ.8): ಮೊಬೈಲ್‌ ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಬಂದ ಬಳಿಕವಂತೂ ಚಿಕ್ಕಮಕ್ಕಳಲ್ಲಿ ಗೇಮ್‌ಗಳ ಗೀಳು ಅತಿಯಾಗತೊಡಗಿದೆ. ದಿನದ 24 ಗಂಟೆಯೂ ಮೊಬೈಲ್‌ನಲ್ಲಿ ಗೇಮ್‌ ಆಡುವ ಮಕ್ಕಳೂ ನಮ್ಮ ನಡುವೆ ಇದ್ದಾರೆ. ಆದರೆ, ಒಮ್ಮೊಮ್ಮೆ ಇದು ಮಿತಿಮೀರಿದರೆ, ಎಷ್ಟು ಅಪಾಯಕಾರಿಯಾಗಬಹುದು ಅನ್ನೋದಕ್ಕೆ ಈಗಿನ ಪ್ರಕರಣವೇ ಸಾಕ್ಷಿ. ಚೀನಾದಲ್ಲಿ 13 ವರ್ಷದ ಬಾಲಕಿ ತನ್ನ ಮೊಬೈಲ್‌ ಗೇಮ್‌ನ ಗೀಳಿನಿಂದಾಗಿ ಹಲವು ವರ್ಷಗಳ ಕಾಲ ತನ್ನ ತಂದೆ-ತಾಯಿ ಕೂಡಿಟ್ಟ ಅಷ್ಟೂ ಹಣವನ್ನು ನಾಲ್ಕು ತಿಂಗಳ ಅಂತರದಲ್ಲಿ ಬರಿದು ಮಾಡಿಬಿಟ್ಟಿದ್ದಾರೆ. ತನ್ನ ಆನ್‌ಲೈನ್‌ ಗೇಮ್ಸ್‌ ಚಟದಿಂದಾಗಿ ಬಾಲಕಿ ತನಗೆ ಗೊತ್ತಿಲ್ಲದೆ ಖರ್ಚು ಮಾಡಿದ ಹಣವೆಷ್ಟು ಗೊತ್ತಾ ಬರೋಬ್ಬರಿ 4,49,500 ಯುವಾನ್‌ ಅಂದರೆ ಭಾರತೀಯ ರೂಪಾಯಿಯಲ್ಲಿ 52.19 ಲಕ್ಷ ರೂಪಾಯಿ..! ಆಕೆ ಆಡಿದ್ದ ಹೆಚ್ಚಿನ ಆನ್‌ಲೈನ್‌ ಗೇಮ್ಸ್‌ಗಳು ಪಾವತಿ ಮಾಡಿ ಬಳಸಬಹುದಾದ ಟೂಲ್‌ಗಳನ್ನು ಹೊಂದಿದ್ದವು. ಗೇಮ್‌ ಆಡುವವರನ್ನು ಸೆಳೆದು ಹಣ ಮಾಡುವ ನಿಟ್ಟಿನಲ್ಲಿ ಈ ಪ್ಲ್ಯಾನ್‌ಅನ್ನು ಆನ್‌ಲೈನ್‌ ಗೇಮ್‌ನಲ್ಲಿ ಮಾಡಲಾಗುತ್ತದೆ. ಹಣ ಖರ್ಚು ಮಾಡಿದರೆ, ಶಕ್ತಿಯುತ ಟೂಲ್‌ಗಳು ನಿಮ್ಮದಾಗುವುದು ಮಾತ್ರವಲ್ಲ, ಆಟವನ್ನು ಇನ್ನಷ್ಟು ಉತ್ತಮವಾಗಿ ಆಡಲು ಸಾಧ್ಯವಾಗುತ್ತದೆ.

ಈ ಕುರಿತಾಗಿ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿಯನ್ನು ಪ್ರಕಟ ಮಾಡಿದೆ. ಶಾಲೆಯ ಸಮಯದಲ್ಲಿ ಮಗು ಅತಿಯಾಗಿ ಮೊಬೈಲ್‌ ಫೋನ್‌ ಬಳಕೆ ಮಾಡುತ್ತಿರುವುದನ್ನು ಆಕೆಯ ಟೀಚರ್‌ ಗಮನಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆಕೆಯ ಮೊಬೈಲ್‌ ಬಳಕೆಯನ್ನು ಗಮನಿಸಿದ ಶಿಕ್ಷಕಿ, ಬಹುಶಃ ಆಕೆ ಪೇ-ಟು-ಪ್ಲೇ ಗೇಮ್ಸ್‌ಗಳ ಗೀಳು ಅಂಟಿಸಿಕೊಂಡಿರಬಹುದು ಎಂದು ಅಂದಾಜು ಮಾಡಿದ್ದರು. ತಮ್ಮ ಗಮನಕ್ಕೆ ಈ ವಿಚಾರ ಬಂದ ಬೆನ್ನಲ್ಲಿಯೇ ಮಗುವಿನ ತಾಯಿಗೂ ಈ ವಿಚಾರ ತಿಳಿಸಿದ್ದಾರೆ. ಶಿಕ್ಷಕಿ ಹೇಳಿದ ಬಳಿಕ ಮಗುವಿನ ತಾಯಿ ಹೋಗಿ ಬ್ಯಾಂಕ್‌ ಬ್ಯಾಲೆನ್ಸ್‌ ಚೆಕ್‌ ಮಾಡಿದರೆ ಆಕೆಗೆ ಎದೆ ಒಡೆದುಹೋದಂಥ ಅನುಭವವಾಗಿದೆ.

ಮಗುವಿನ ತಾಯಿಯಾಗಿರುವ ವಾಂಗ್‌ ಬ್ಯಾಂಕ್‌ ಬ್ಯಾಲೆನ್ಸ್‌ ಚೆಕ್‌ ಮಾಡಿದಾಗ ಅದರಲ್ಲಿ ಬರೀ 0.5 ಯುವಾನ್‌ (ಕೇವಲ 5 ರೂಪಾಯಿ) ಹಣವಷ್ಟೇ ಉಳಿದಿತ್ತು. ಆದರೆ, ಆಕೆ ಏನೂಮಾಡುವಂತೆಯೂ ಇರಲಿಲ್ಲ. ಆಘಾತಗೊಂಡಿದ್ದ ಆಕೆ ಕಣ್ಣೀರು ಸುರಿಸುತ್ತಲೇ ಸಾಲುಸಾಲು ಪುಟ್ಳ ಬ್ಯಾಂಕ್‌ ಸ್ಟೇಟ್‌ಮೆಂಟ್‌ಅನ್ನು ವೈರಲ್‌ ವಿಡಿಯೋವೊಂದರಲ್ಲಿ ತೋರಿಸಿದ್ದಾರೆ. ಎಲ್ಲಾ ಸ್ಟೇಟ್‌ಮೆಂಟ್‌ಗಳಲ್ಲೂ ಹಣವನ್ನು ಮೊಬೈಲ್‌ಗೇಮ್‌ಗೆ ಪೇಮೆಂಟ್‌ ಮಾಡಲಾಗಿದೆ. ಈ ವೇಳೆ ವಾಂಗ್‌ ಅವರ ಪತಿ ಆಕೆಯನ್ನು ಸಮಾಧಾನ ಮಾಡಿದ್ದಾರೆ. 4,49,500 ಯುವಾನ್‌ ಹಣದಲ್ಲಿ 120,000 ಯುವಾನ್‌ ಅಂದರೆ, 13.93 ಲಕ್ಷ ರೂಪಾಯಿಯನ್ನು ಗೇಮ್‌ಗಳನ್ನು ಖರೀದಿ ಮಾಡಲು ಬಳಸಿದ್ದರೆ, ಅದರೊಂದಿಗೆ 210,000 ಯುವಾನ್‌ ಅಂದರೆ 24.39 ಲಕ್ಷ ರೂಪಾಯಿಯನ್ನು ಗೇಮ್‌ ಆಡುವಾಗ ಖರ್ಚು ಮಾಡಿದ್ದಾರೆ. ಅದಲ್ಲದೆ, ತಮ್ಮ ಮಗಳು ಅಂದಾಜು 100,000 ಯುವಾನ್‌ ಅಂದರೆ 11.61 ಲಕ್ಷ ರೂಪಾಯಿ ಹಣವನ್ನು ತನ್ನ 10 ಕ್ಲಾಸ್‌ಮೇಟ್‌ಗಳಿಗೆ ಗೇಮ್‌ಗಳನ್ನು ಖರೀದಿ ಮಾಡಲು ಖರ್ಚು ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

ಇಷ್ಟವಿಲ್ಲದಿದ್ದರೂ, ಭಯದಿಂದಾಗಿಯೇ ತನ್ನ ಕ್ಲಾಸ್‌ಮೇಟ್‌ಗಳಿಗೆ ಆನ್‌ಲೈನ್‌ ಗೇಮ್‌ಗಳನ್ನು ಖರೀದಿಸಿಕೊಟ್ಟಿರುವುದಾಗಿ ಬಾಲಕಿ ಹೇಳಿದ್ದಾರೆ. ನನಗೆ ಹಣ ಹಾಗೂ ಅದರ ಮೂಲದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿರುವ ಬಾಲಕಿ, ಮನೆಯಲ್ಲಿದ್ದ ಡೆಬಿಟ್‌ ಕಾರ್ಡ್‌ಅನ್ನು ನೋಡಿದಾಗ ಅದನ್ನು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ತಾವು ಇಲ್ಲದೇ ಇದ್ದಾಗ ಹಣದ ಅಗತ್ಯವಿದ್ದಲ್ಲಿ ಡೆಬಿಟ್‌ ಕಾರ್ಡ್‌ ಬಳಸಿ ಹಣ ಪಡೆಯಲು ಗೊತ್ತಾಗುವ ಸಲುವಾಗಿ ಅದರ ಪಾಸ್‌ವರ್ಡ್‌ಅನ್ನೂ ತಾಯಿ ಮಗಳಿಗೆ ತಿಳಿಸಿದ್ದಳು. ಇನ್ನು ಪ್ರತಿ ಬಾರಿ ಹಣ ವರ್ಗಾವಣೆ ಆದಾಗ, ಬಾಲಕಿ ಬಳಸುತ್ತಿದ್ದ ಮೊಬೈಲ್‌ಗೆ ಸಂದೇಶಗಳು ಬರುತ್ತಿದ್ದವು. ಮೊಬೈಲ್‌ ಗೇಮ್‌ಗಳ ಕುರಿತಾಗಿ ಬರುತ್ತಿದ್ದ ಹಣ ವರ್ಗಾವಣೆ ಸಂದೇಶಗಳನ್ನು ಆಕೆ ಡಿಲೀಟ್‌ ಮಾಡುತ್ತಿದ್ದವು. ತಾಯಿಯ ಡೆಬಿಟ್‌ ಕಾರ್ಡ್‌ಅನ್ನು ನನ್ನ ಮುಂದೆ ಬಿದ್ದಿತ್ತು. ಅದನ್ನು ನಾನು ತೆಗೆದುಕೊಂಡಿದ್ದೆ ಎಂದು ಬಾಲಕಿ ತಿಳಿಸಿದ್ದಾಳೆ.

ಸಹೋದ್ಯೋಗಿಗಳ ಟಾರ್ಗೆಟ್‌ ಹಿಂಸೆ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌ ಅಧಿಕಾರಿ, ವಿಡಿಯೋ ವೈರಲ್‌!

ಇನ್ನು ಈ ಕಥೆ ಚೀನಾದ ಸೋಶಿಯಲ್‌ ಮೀಡಿಯಾದ ವೇದಿಕೆಗಳಲ್ಲಿ ವೈರಲ್‌ ಆಗುತ್ತಿದೆ. ಇಂಥ ಪರಿಸ್ಥಿತಿ ಎದುರಾದಾಗ ಯಾರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. 13 ವರ್ಷದ ಬಾಲಕಿಗೆ ತಾನು ಏನು ಮಾಡುತ್ತಿದ್ದೇನೇ ಅನ್ನೋದು ಗೊತ್ತಿತ್ತು ಎಂದು ಕೆಲವರು ವಾದ ಮಾಡಿದ್ದರೆ, ಇನ್ನೂ ಕೆಲವರು ಪೋಷಕರು ಆಕೆಯ ಮೇಲೆ ಯಾವುದೇ ನಿಗಾ ವಹಿಸಿಲ್ಲ ಅನ್ನೋದು ಇದರಿಂದ ಗೊತ್ತಾಗಿದೆ ಎಂದಿದ್ದಾರೆ. ಮೆಕ್‌ಗಿಲ್ ವಿಶ್ವವಿದ್ಯಾಲಯದ 2022 ರ ವರದಿಯ ಪ್ರಕಾರ, ಚೀನಾದಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್ ವ್ಯಸನಿಗಳಿದ್ದಾರೆ. ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ ಮತ್ತು ಮಲೇಷ್ಯಾ ದೇಶಗಳಿವೆ. ಈ ಘಟನೆಯು ಅತಿಯಾದ ಗೇಮಿಂಗ್‌ಗೆ ಸಂಬಂಧಿಸಿದ ಅಪಾಯಗಳು ಮತ್ತು ಮಕ್ಕಳ ಡಿಜಿಟಲ್ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಪೋಷಕರ ಮಾರ್ಗದರ್ಶನದ ಪ್ರಾಮುಖ್ಯತೆಯ ಕುರಿತಾಗಿ ಎಚ್ಚರಿಕೆ ನೀಡುತ್ತದೆ.

ಮದ್ವೆ ದಿನವು ಉರಿ ಮೊಗದ ಜೊತೆ ಫೋನಲ್ಲೇ ಮುಳುಗಿದ ವರ: ವಧುವಿನ ಸ್ಥಿತಿಗೆ ಮರುಗಿದ ನೆಟ್ಟಿಗರು