* ಈವರೆಗೆ 20% ಭೂಭಾಗ ಮಾತ್ರ ರಷ್ಯಾ ವಶಕ್ಕೆ* ಸದ್ಯಕ್ಕೆ ಮುಗಿಯುವ ರೀತಿ ಕಾಣುತ್ತಿಲ್ಲ ಸಮರ* 50000 ಸಾವು: ಉಕ್ರೇನ್‌ನಲ್ಲಿ ಬಲಿಯಾದ ಯೋಧರು
ಕೀವ್/ಮಾಸ್ಕೋ(ಜೂ.04): ಸಾಕಷ್ಟು ಸಾವು-ನೋವಿಗೆ ಕಾರಣವಾಗಿರುವ ಹಾಗೂ ಇಡೀ ವಿಶ್ವದ ಮೇಲೆಯೇ ಆರ್ಥಿಕ ಮತ್ತು ಇತರೆ ದುಷ್ಪರಿಣಾಮ ಬೀರಿರುವ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ಗುರುವಾರ 100 ದಿನ ಪೂರ್ಣಗೊಂಡಿದೆ.
ರಷ್ಯಾ ವಿರೋಧಿ ಕೂಟವಾದ ಪಾಶ್ಚಾತ್ಯ ದೇಶಗಳ ನೇತೃತ್ವದ ‘ನ್ಯಾಟೋ’ ಒಕ್ಕೂಟ ಸೇರಲು ಉಕ್ರೇನ್ ತುದಿಗಾಲಲ್ಲಿ ನಿಂತಿತ್ತು. ಇದೇ ವೇಳೆ ಉಕ್ರೇನ್‌ನ ಡಾನ್‌ಬಾಸ್ ಸೇರಿದಂತೆ ತನ್ನ ಗಡಿಯಂಚಿನಲ್ಲಿರುವ 2 ಪ್ರಾಂತ್ಯಗಳ ವಶಕ್ಕೆ ರಷ್ಯಾ ಮೊದಲಿನಿಂದಲೂ ಕಣ್ಣಿಟ್ಟಿತ್ತು. ಈ ಹಿನ್ನೆಲೆಯಲ್ಲಿ 2022ರ ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿತು. ಆದರೆ ಉಕ್ರೇನ್‌ನಂಥ ಪುಟ್ಟದೇಶವನ್ನು ರಷ್ಯಾ ಬಲುಬೇಗ ವಶಪಡಿಸಿಕೊಳ್ಳಲಿದೆ ಎಂದು ಅನೇಕರು ಅಂದಾಜಿಸಿದ್ದರೂ, ಅದು ಹುಸಿಯಾಗಿದೆ. ಉಕ್ರೇನಿಗಳ ತೀವ್ರ ಪ್ರತಿರೋಧ ಹಾಗೂ ಅಂತಾರಾಷ್ಟ್ರೀಯ ಒತ್ತಡದ ಕಾರಣ ರಷ್ಯಾಗೆ ಈವರೆಗೆ ಕೇವಲ ಶೇ.20ರಷ್ಟುಉಕ್ರೇನಿ ಭಾಗವನ್ನು ಮಾತ್ರ ಸಂಪೂರ್ಣ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಉಳಿದ ಭಾಗಗಳ ವಶಕ್ಕೆ ರಷ್ಯಾ ಯುದ್ಧ ಮುಂದುವರಿಸಿದೆ. ಈಗ ನೋಡಿದರೆ ಸದ್ಯಕ್ಕೆ ಯುದ್ಧ ನಿಲ್ಲುವ ಲಕ್ಷಣವಿಲ್ಲ.
Putin Health ರಷ್ಯಾ ಅಧ್ಯಕ್ಷ ಪುಟಿನ್ ಬದುಕುಳಿಯುವುದು 3 ವರ್ಷ ಮಾತ್ರ, ಗುಪ್ತಚರ ಅಧಿಕಾರಿ ಸ್ಫೋಟಕ ಮಾಹಿತಿ!
ಸಾವು, ನೋವು:
ಉಕ್ರೇನ್-ರಷ್ಯಾ ಯುದ್ಧದಲ್ಲಿ ಎಷ್ಟುಜನ ಅಸುನೀಗಿದ್ದಾರೆ ಎಂಬ ಅಧಿಕೃತ ಅಂಕಿ-ಅಂಶ ಲಭ್ಯವಿಲ್ಲ. ರಷ್ಯಾ, ಉಕ್ರೇನ್ ಹಾಗೂ ವಿಶ್ವಸಂಸ್ಥೆಗಳು ವಿಭಿನ್ನ ಅಂಕಿ-ಅಂಶ ನೀಡುತ್ತಿದ್ದು, ಗೊಂದಲಕ್ಕೆ ಕಾರಣವಾಗಿದೆ. ಉಕ್ರೇನ್ ಸರ್ಕಾರದ ಅಂದಾಜಿನ ಪ್ರಕಾರ 27 ಸಾವಿರ ಉಕ್ರೇನಿ ನಾಗರಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಇದೇ ವೇಳೆ, 23 ಸಾವಿರ ಉಕ್ರೇನಿ ಯೋಧರನ್ನು ಕೊಂದಿದ್ದಾಗಿ ರಷ್ಯಾ ಹೇಳಿಕೊಂಡಿದೆ. ಇನ್ನು ರಷ್ಯಾದ ಸುಮಾರು 15 ಸಾವಿರ ಯೋಧರು ಸಾವನ್ನಪ್ಪಿದ್ದಾರೆ ಹಾಗೂ 40 ಸಾವಿರ ಯೋಧರು ಗಾಯಗೊಂಡಿದ್ದಾರೆ ಎಂಬ ಅಂದಾಜಿದೆ. ಆದರೆ ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಪ್ರಕಾರ, ನಿತ್ಯ 60ರಿಂದ 100 ರಷ್ಯಾ ಯೋಧರು ಯುದ್ಧದಲ್ಲಿ ಬಲಿಯಾಗುತ್ತಿದ್ದಾರೆ.
38 ಸಾವಿರ ಕಟ್ಟಡ ನಾಶ, 2.20 ಲಕ್ಷ ಜನ ನಿರ್ವಸಿತ
ರಷ್ಯಾ ದಾಳಿ ನಡೆಸಿದ್ದರಿಂದ ಉಕ್ರೇನ್‌ನ ಮರಿಯುಪೋಲ್, ಖಾರ್ಕೀವ್, ಕೀವ್ ಹಾಗೂ ಇತರ ಕೆಲವು ನಗರಗಳು ತೀವ್ರ ಹಾನಿಗೆ ಒಳಗಾಗಿವೆ. 38 ಸಾವಿರ ನಾಗರಿಕ ಕಟ್ಟಡಗಳು ನಾಶವಾಗಿದ್ದು, 2.20 ಲಕ್ಷ ಜನ ನಿರ್ವಸಿತರಾಗಿದ್ದಾರೆ. 1900 ಶಾಲಾ-ಕಾಲೇಜು ಕಟ್ಟಡ, 300 ರಸ್ತೆ ಸೇತುವೆ, 50 ರೈಲು ಸೇತುವೆ, 500 ಕಾರ್ಖಾನೆ, 500 ಆಸ್ಪತ್ರೆಗಳು ಧ್ವಂಸಗೊಂಡಿವೆ.
68 ಲಕ್ಷ ಉಕ್ರೇನಿಗಳು ವಿದೇಶಕ್ಕೆ ಪಲಾಯನ
ರಷ್ಯಾ ಸತತ ದಾಳಿ ನಡೆಸಿದ್ದರಿಂದ ಬೆಚ್ಚಿ ಬಿದ್ದು ಸುಮಾರು 68 ಲಕ್ಷ ಉಕ್ರೇನಿ ನಾಗರಿಕರು ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಆದರೆ ರಷ್ಯಾ ಕೀವ್ ಹಾಗೂ ಇತರ ಕೆಲವು ಕಡೆ ಯುದ್ಧ ಕಡಿಮೆ ಮಾಡಿದ್ದರಿಂದ 22 ಲಕ್ಷ ಜನರು ವಾಪಸು ಮರಳಿದ್ದಾರೆ ಎಂದು ವಿಶ್ವಸಂಸ್ದೆ ಹೇಳಿದೆ.
ಶೇ.20ರಷ್ಟು ಉಕ್ರೇನ್ ಭಾಗ ರಷ್ಯಾ ವಶಕ್ಕೆ
ಫೆಬ್ರವರಿಯಲ್ಲಿ ದಾಳಿ ಆರಂಭಿಸಿದಾಗಿನಿಂದ ರಷ್ಯಾ ಶೇ.20ರಷ್ಟುಉಕ್ರೇನಿ ಭಾಗವನ್ನು ವಶಪಡಿಸಿಕೊಂಡಿದೆ. ಉಕ್ರೇನ್‌ನ ಡಾನ್‌ಬಾಸ್, ಡೊನೆಟ್ಸ್$್ಕ, ಲುಹಾನ್ಸ್$್ಕ ಸೇರಿ ಹಲವು ಭಾಗಗಳು, ಮರಿಯುಪೋಲ್ ನಗರ, ಖಾಕೀವ್‌ನ ಬಹುತೇಕ ಭಾಗ ರಷ್ಯಾ ವಶದಲ್ಲಿವೆ.
ವಿಶ್ವ ಬುದ್ಧನ ಪಥದಲ್ಲಿ ಸಾಗಬೇಕು: ಯುದ್ಧದ ವೇಳೆ ಶಾಂತಿಗೆ ಕಾಪಾಡಲು ನಮೋ ಸೂತ್ರ
ಯುದ್ಧದ ಪರಿಣಾಮ ಅಪಾರ
ಯುದ್ಧವು 2 ದೇಶಗಳ ನಡುವಿನದ್ದಾಗಿದ್ದರೂ ವಿಶ್ವದ ಆರ್ಥಿಕತೆ ಮೇಲೆ ಅಪಾರ ಪರಿಣಾಮ ಬೀರಿದೆ. ರಷ್ಯಾ ಹಾಗೂ ಉಕ್ರೇನ್ ದೇಶಗಳು ತೈಲೋತ್ಪನ್ನ ಹಾಗೂ ಅನೇಕ ಕೃಷಿ ಉತ್ಪನ್ನಗಳ ಪೂರೈಕೆಯಲ್ಲಿ ಮುಂಚೂಣಿ ದೇಶಗಳಾಗಿದ್ದವು. ಯುದ್ಧದ ಕಾರಣ ಪೂರೈಕೆ ವ್ಯತ್ಯಯವಾಗಿದ್ದು, ಬೆಲೆ ಏರಿಕೆ-ತೈಲ ಹಾಗೂ ಆಹಾರ ಅಭಾವ ತಲೆದೋರಿದೆ. ಇನ್ನೊಂದೆಡೆ ರಷ್ಯಾ ಮೇಲೂ ಯುದ್ಧ ಪರಿಣಾಮ ಬೀರಿದೆ. ರಷ್ಯಾದ ತೈಲೋತ್ಪನ್ನ ಆಮದನ್ನು ಹಲವು ಪಾಶ್ಚಾತ್ಯ ದೇಶಗಳು ನಿಲ್ಲಿಸಿದ್ದು, ಇದರಿಂದ ರಷ್ಯಾ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ.
ಪುಟಿನ್, ಝೆಲೆನ್‌ಸ್ಕಿ ಮೇಲೆ ವಿಶ್ವದ ಚಿತ್ತ
ಯುದ್ಧ ಆರಂಭದ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ವಿಶ್ವದ ಅನೇಕ ದೇಶಗಳ ಪಾಲಿಗೆ ವಿಲನ್‌ನಂತೆ ಕಾಣಿಸಿದ್ದಾರೆ. ಇದೇ ವೇಳೆ ದೊಡ್ಡ ದೇಶ ರಷ್ಯಾವನ್ನು ಧೈರ್ಯದಿಂದ ಎದುರಿಸುತ್ತ, ಸೋಲು ಒಪ್ಪಿಕೊಳ್ಳದೇ ಖಡಕ್ಕಾಗಿ ನಿಂತಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
