ವಿಶ್ವ ಬುದ್ಧನ ಪಥದಲ್ಲಿ ಸಾಗಬೇಕು: ಯುದ್ಧದ ವೇಳೆ ಶಾಂತಿಗೆ ಕಾಪಾಡಲು ನಮೋ ಸೂತ್ರ

* ಜಪಾನ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಭಾಷಣ

* ವಿಶ್ವ ಇಂದು ಬುದ್ಧನ ಪಥದಲ್ಲಿ ಸಾಗಬೇಕು: ಮೋದಿ

* ಯುದ್ಧದ ವೇಳೆ ಶಾಂತಿಗೆ ಕಾಪಾಡಲು ನಮೋ ಸೂತ್ರ

 

Every Japanese should visit India once in their life says PM Modi in Tokyo pod

ಟೋಕಿಯೋ(ಮೇ.24): ಇಡೀ ವಿಶ್ವ ಇಂದು ಎದುರಿಸುತ್ತಿರುವ ಸವಾಲುಗಳಿಂದ ಮಾನವೀಯತೆಯನ್ನು ಉಳಿಸಲು ಭಗವಾನ್‌ ಬುದ್ಧ ತೋರಿಸಿದ ಮಾರ್ಗದಲ್ಲಿ ನಡೆಯುವುದೊಂದೇ ವಿಶ್ವಕ್ಕಿರುವ ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಪಾನ್‌ ಪ್ರವಾಸದ ವೇಳೆ ಸೋಮವಾರ ಇಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ ‘ಹಿಂಸಾಚಾರ, ಅರಾಜಕತೆ, ಭಯೋತ್ಪಾದನೆ ಅಥವಾ ಹವಾಮಾನ ಬದಲಾವಣೆಯಂಥ ಯಾವುದೇ ಸಮಸ್ಯೆಯಾಗಲಿ, ಇಂದು ವಿಶ್ವ ಎದುರಿಸುತ್ತಿರುವ ಸವಾಲುಗಳಿಂದ ಮಾನವೀಯತೆಯನ್ನು ಉಳಿಸಲು ನಾವೆಲ್ಲರೂ ಬುದ್ಧನ ಪಥದಲ್ಲಿ ಸಾಗಬೇಕು. ಸಮಸ್ಯೆ ಎಷ್ಟೇ ದೊಡ್ಡದಾಗಿರಲಿ, ಬುದ್ಧನ ಆರ್ಶೀವಾದದಿಂದಾಗಿ ಭಾರತ ಮಾನವೀಯತೆಯನ್ನು ಉಳಿಸಿಕೊಂಡು ಬರುವ ಕೆಲಸ ಮಾಡುತ್ತಿದೆ. ಕಳೆದ 100 ವರ್ಷಗಳಲ್ಲೇ ಕಂಡ ಬೃಹತ್‌ ಸಂಕಷ್ಟವಾದ ಕೋವಿಡ್‌ ಸಮಯದಲ್ಲೂ ಭಾರತ ವಿಶ್ವದ 100ಕ್ಕೂ ಹೆಚ್ಚು ದೇಶಗಳಿಗೆ ನೆರವು ನೀಡಲು ಕಾರಣವಾಗಿದ್ದು, ಇದೇ ಬುದ್ಧನ ಪಥ’ ಎಂದು ಮೋದಿ ಬಣ್ಣಿಸಿದರು.

‘ಕಳೆದ 2 ವರ್ಷಗಳಲ್ಲಿ ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಆದ ಅಡಚಣೆಯು, ಇಡೀ ಪೂರೈಕೆ ವ್ಯವಸ್ಥೆ ಜಾಲವನ್ನೇ ಪ್ರಶ್ನೆ ಮಾಡುವಂತಿದೆ. ಭವಿಷ್ಯದಲ್ಲಿ ಇಂಥ ಅಡ್ಡಿಯನ್ನು ದೂರ ಮಾಡಲು ನಾವು ‘ಆತ್ಮನಿರ್ಭರ ಭಾರತ’ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ. ನಮ್ಮ ಆತ್ಮನಿರ್ಭರ ಭಾರತ ಸಂಕಲ್ಪ ಕೇವಲ ಭಾರತಕ್ಕಾಗಿ ಮಾತ್ರವಲ್ಲ, ಇದು ಇಡೀ ವಿಶ್ವಕ್ಕೆ ಸ್ಥಿರ ಮತ್ತು ಸುಸ್ಥಿರ ಪೂರೈಕೆ ವ್ಯವಸ್ಥೆಗೆ ಒಂದು ದೊಡ್ಡ ಹೂಡಿಕೆ ಇದ್ದಂತೆ’ ಎಂದು ಮೋದಿ ಹೇಳಿದರು.

ವಿವೇಕಾನಂದರ ಸ್ಮರಣೆ:

ಈ ನಡುವೆ, ಪ್ರತಿ ಭಾರತೀಯರೂ ಜೀವಮಾನದಲ್ಲಿ ಒಮ್ಮೆಯಾದರೂ ಜಪಾನ್‌ಗೆ ಭೇಟಿ ನೀಡಿ ಎಂಬ ಸ್ವಾಮಿ ವಿವೇಕಾನಂದರ ಮಾತುಗಳನ್ನು ಉಲ್ಲೇಖಿಸುತ್ತಾ, ಪ್ರತಿಯೊಬ್ಬ ಜಪಾನಿಯರೂ ತಮ್ಮ ಜೀವನಮಾನದಲ್ಲಿ ಒಮ್ಮೆಯಾಧರೂ ಭಾರತಕ್ಕೆ ಭೇಟಿ ನೀಡಬೇಕು ಎಂದು ಕರೆ ಕೊಡುತ್ತೇನೆ. ಜೊತೆಗೆ ಭಾರತ್‌ ಚಲೋ, ಭಾರತ್‌ ಸೇ ಜುಡೋ ಆಂದೋಲನದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಅದನ್ನು ಇನ್ನಷ್ಟುಮುಂದಕ್ಕೆ ಕೊಂಡೊಯ್ಯಬೇಕು ಎಂದು ಮೋದಿ ಕರೆಕೊಟ್ಟರು.

ಜಪಾನ್‌ ನೈಸರ್ಗಿಕ ಪಾಲುದಾರ:

ಇದೇ ವೇಳೆ ಭಾರತ ಮತ್ತು ಜಪಾನ್‌ ದೇಶಗಳನ್ನು ನೈಸರ್ಗಿಕ ಪಾಲುದಾರರು ಎಂದು ಬಣ್ಣಿಸಿದ ಮೋದಿ, ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದರು. ನಾನು ಜಪಾನ್‌ಗೆ ಭೇಟಿ ನೀಡಿದಾಗಲೆಲ್ಲಾ, ಇಲ್ಲಿನ ಜನರ ಅಪರೂಪದ ಪ್ರೀತಿಯನ್ನು ಕಾಣುತ್ತೇನೆ. ನಿಮ್ಮ ಪೈಕಿ ಬಹಳಷ್ಟುಜನರು ಜಪಾನ್‌ನಲ್ಲೇ ನೆಲೆಸಿ, ಇಲ್ಲಿಯ ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡಿದ್ದೀರಿ. ಇದರ ಹೊರತಾಗಿಯೂ ಭಾರತೀಯ ಸಂಸ್ಕೃತಿ ಮತ್ತು ಭಾಷೆ ಕುರಿತ ನಿಮ್ಮ ಅಭಿಮಾನ, ಪ್ರೀತಿ ದಿನೇ ದಿನೇ ಬೆಳೆಯುತ್ತಲೇ ಇದೆ ಎಂದು ಇಲ್ಲಿನ ಭಾರತೀಯ ಸಮುದಾಯದವರನ್ನು ಹೊಗಳಿದರು.

ಸರ್ಕಾರದ ಸಾಧನೆ ಸ್ಮರಣೆ:

ಇದೇ ವೇಳೆ ‘ಆರೋಗ್ಯ ಮೂಲಸೌಕರ್ಯ ವಲಯದಲ್ಲಿ ಭಾರತದಾದ್ಯಂತ ಆರಂಭಿಸಲಾದ ವೆಲ್‌ನೆಸ್‌ ಸೆಂಟರ್‌, ಹವಾಮಾನ ಬದಲಾವಣೆ ಸಮಸ್ಯೆಯಿಂದ ವಿಶ್ವವನ್ನು ಕಾಪಾಡಲು 2070ರ ವೇಳೆಗೆ ಭಾರತ ಶೂನ್ಯ ಇಂಗಾಲ ಬಿಡುಗಡೆ ಮಟ್ಟತಲುಪುವ ಗುರಿ ಹಾಕಿಕೊಂಡಿರುವ ಬಗ್ಗೆ, ಭಾರತದ ಬ್ಯಾಂಕಿಂಗ್‌ ವಲಯದಲ್ಲಿ ಡಿಜಿಟಲ್‌ ಕ್ರಾಂತಿಯ ಸಾಧನೆ ಬಗ್ಗೆ, ದೇಶವು ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಮುಂದಿನ 25 ವರ್ಷಗಳ ಗುರಿಯನ್ನು ರೂಪಿಸುತ್ತಿರುವ ಬಗ್ಗೆ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ, ಆಡಳಿತದಲ್ಲಿ ಸರ್ಕಾರ ತಂದ ಸುಧಾರಣೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಸ್ಥಳೀಯ ಭಾರತೀಯ ಸಮುದಾಯದ ಮುಂದೆ ಮೋದಿ ಹರವಿದರು.

Latest Videos
Follow Us:
Download App:
  • android
  • ios