ಇರಾನ್‌ಗೆ ಅಂತಿಮ ಗಡುವು ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದೇ ರಾತ್ರಿಯಲ್ಲಿ ದೇಶವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ, ಇರಾನ್‌ನಲ್ಲಿ ಪತನಗೊಂಡ ವಿಮಾನದ ಸಿಬ್ಬಂದಿಯೊಬ್ಬರ ಐತಿಹಾಸಿಕ ರಕ್ಷಣಾ ಕಾರ್ಯಾಚರಣೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ
ವಾಷಿಂಗ್ಟನ್ (ಏ.7): ‘ಇರಾನ್‌ಗೆ ನಾವು ವಿಧಿಸಿರುವ ಮಂಗಳವಾರ ರಾತ್ರಿ 8ರ ಗಡುವು (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 5.30) ಅಂತಿಮವಾಗಿದೆ. ಇದಾದ ನಂತರ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ವಶಪಡಿಸಿಕೊಳ್ಳಬಹುದು. ಬಹುಶಃ ನಾಳೆ ರಾತ್ರಿ ಕಾರ್ಯಾಚರಣೆ ನಡೆಸಬಹುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಸೋಮವಾರ ರಾತ್ರಿ 10.45ಕ್ಕೆ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಇಡೀ ರಾಷ್ಟ್ರವನ್ನು ಒಂದೇ ರಾತ್ರಿಯಲ್ಲಿ, ಬಹುಶಃ ನಾಳೆ ರಾತ್ರಿಯಲ್ಲಿ ವಶಪಡಿಸಿಕೊಳ್ಳಬಹುದು’ ಎಂದು ಹೇಳಿದರು.
‘ಈ ಬಾರಿ ಇರಾನ್‌ಗೆ ಹೋರ್ಮುಜ್ ಜಲಸಂಧಿಯನ್ನು ತೆರೆಯಲು ನೀಡಿರುವ ಗಡುವು ಅಂತಿಮವಾಗಿದೆ. ಅವರು ಮಾಡಬೇಕಾದ್ದನ್ನು ಮಾಡಿದರೆ ಅದು ಬೇಗನೆ ಕೊನೆಗೊಳ್ಳಬಹುದು. ಇಲ್ಲದೇ ಹೋದಲ್ಲಿ ಮನಸ್ಸು ಮಾಡಿದರೆ ನಾನು ತೈಲವನ್ನು ತೆಗೆದುಕೊಳ್ಳುತ್ತೇನೆ’ ಎಂದು ಎಚ್ಚರಿಸಿದರು.
‘ಅವರು (ಇರಾನ್) ಕೆಲವು ಕೆಲಸಗಳನ್ನು ಮಾಡಬೇಕು. ಏನೆಂಬುದು ಅವರಿಗೆ ತಿಳಿದಿದೆ. ಮಾತುಕತೆಯ ಹಂತ 1 ಹಾಗೂ ಹಂತ 2ರಲ್ಲಿ ಹುಚ್ಚರು ಬಂದಿದ್ದರು. ಆದರೆ ಈಗ ಅವರಿಗಿಂತ ಹೆಚ್ಚು ಸಮಂಜಸ ಜನರು ಮಾತುಕತೆಗೆ ಬಂದಿದ್ದಾರೆ’ ಎಂದರು.
‘ಅವರು ನನ್ನ ಎದುರು ಅಳುವುದು ಬೇಡ. ‘ಅಂಕಲ್’ ಎನ್ನುವುದೂ ಬೇಡ. ಆದರೆ ಅವರು ಕೊನೆಗೆ ಹಾಗೆ ಅಂದೇ ಅನ್ನುತ್ತಾರೆ. ಹೆಚ್ಚೂ ಕಡಿಮೆ ಆದರೆ ಆದರೆ ವಿದ್ಯುತ್ ಸಿಗುವುದಿಲ್ಲ. ಯಾವುದೇ ಸೇತುವೆ ಸಿಗದು. ಅವರಿಗೆ ಏನೂ ಉಳಿಸುವುದಿಲ್ಲ’ ಎಂದು ಕುಟುಕಿದರು.
ಕಾರ್ಯಾಚರಣೆ ಐತಿಹಾಸಿಕ:
ಇದೇ ವೇಳೆ, ಇನ್ನು ಭಾನುವಾರ ಇರಾನ್‌ನಲ್ಲಿ ಪತನವಾದ ಎಫ್ -15 ಇ ವಿಮಾನದ ಸಿಬ್ಬಂದಿಯೊಬ್ಬರನ್ನು ರಕ್ಷಿಸಿದ ರೋಚಕ ಕಾರ್ಯಾಚರಣೆ ಬಗ್ಗೆಯೂ ಮಾತನಾಡಿದ ಅವರು, ‘ಇಂದು ಅತ್ಯಂತ ದೊಡ್ಡ, ಅತ್ಯಂತ ಸಂಕೀರ್ಣ, ಅತ್ಯಂತ ಭಯಾನಕ ಶೋಧವಾಗಿತ್ತು. ಅದರ ಯಶಸ್ಸನ್ನು ಆಚರಿಸಲು ನಾವು ಇಲ್ಲಿ ಸೇರಿದ್ದೇವೆ’ ಎಂದು ಶ್ಲಾಘಿಸಿದರು.
‘ಓರ್ವ ಯೋಧನನ್ನು ಶೋಧಿಸಲು ಇನ್ನೊಂದು ದೇಶಕ್ಕೆ 200 ಯೋಧರ ಕಳಿಸಲಾಯಿತು. 64 ಯುದ್ಧವಿಮಾನಗಳು, 48 ಇಂಧನ ತುಂಬುವ ಟ್ಯಾಂಕರ್‌ಗಳು ಮತ್ತು 13 ರಕ್ಷಣಾ ವಿಮಾನಗಳು ಸೇರಿದಂತೆ 155 ವಿಮಾನಗಳನ್ನು ನಿಯೋಜಿಸಲಾಗಿತ್ತು’ ಎಂದು ಕೊಂಡಾಡಿದರು.
ಮಾಧ್ಯಮಗಳಿಗೆ ಎಚ್ಚರಿಕೆ:
‘ಇನ್ನು ಸೂಕ್ಷ್ಮ ಕಾರ್ಯಾಚರಣೆಯ ವಿಷಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ. ಅಂಥ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸುವೆ’ ಎಂದು ಟ್ರಂಪ್ ಬೆದರಿಕೆ ಹಾಕಿದರು ಮತ್ತು ಸುದ್ದಿಯನ್ನು ಪ್ರಕಟಿಸಿದ ಸುದ್ದಿ ಸಂಸ್ಥೆಯು ತಮ್ಮ ಮೂಲಗಳನ್ನು ಬಹಿರಂಗಪಡಿಸದಿದ್ದರೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.


