ಸ್ವಂತ ಉದ್ಯೋಗ ಶುರು ಮಾಡ್ಬೇಕೆಂಬ ಬಯಕೆ ಅನೇಕ ಮಹಿಳೆಯರಿಗಿದೆ. ಆದ್ರೆ ಹೂಡಿಕೆ ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ. ಮಹಿಳೆಯರಿಗಾಗಿಯೇ ಸರ್ಕಾರ ಸಾಕಷ್ಟು ಯೋಜನೆ ಶುರು ಮಾಡಿದೆ. ಅದ್ರಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಕೂಡ ಒಂದು.
ಯಾವುದೇ ಒಂದು ವ್ಯವಹಾರ ಶುರು ಮಾಡಲು ಹಣಕಾಸಿನ ಅಗತ್ಯವಿರುತ್ತದೆ. ಪ್ರತಿಯೊಬ್ಬರ ಕೈನಲ್ಲಿ ವ್ಯವಹಾರವೊಂದಕ್ಕೆ ಹೂಡಿಕೆ ಮಾಡುವಷ್ಟು ಹಣವಿರೋದಿಲ್ಲ. ಸಾಲದ ಮೂಲಕವೇ ವ್ಯವಹಾರ ಶುರು ಮಾಡುವುದು ಅನಿವಾರ್ಯ. ಕಷ್ಟಪಟ್ಟು ದುಡಿಯುವ ಮನಸ್ಸಿದ್ದು, ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಸಾಮರ್ಥ್ಯವಿದ್ರೂ ಸಾಲ ಮಾಡಲು ಪ್ರತಿಯೊಬ್ಬರೂ ಹಿಂದೇಟು ಹಾಕ್ತಾರೆ. ಅದ್ರಲ್ಲೂ ಮಹಿಳೆಯರು ಹೊಸದೊಂದು ವ್ಯವಹಾರ ಶುರು ಮಾಡ್ಬೇಕೆಂದ್ರೆ ಸಾಕಷ್ಟು ಸವಾಲು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈಗಿನ ದಿನಗಳಲ್ಲಿ ಸ್ಟಾರ್ಟ್ ಅಪ್ (Start Up) ಕಂಪನಿಗಳಿಗೆ ಸರ್ಕಾರದಿಂದ ಸಾಕಷ್ಟು ನೆರವು ಸಿಗ್ತಿದೆ. ಮಹಿಳೆಯರಿಗೆ ಸ್ವಂತ ವ್ಯವಹಾರ (Business) ಶುರು ಮಾಡಲು ಸರ್ಕಾರ ಪ್ರೋತ್ಸಾಹ ನೀಡ್ತಿದೆ. ಮಹಿಳೆ (Woman) ಯರು ಸ್ವಾವಲಂಬಿಯಾಗ್ಬೇಕು, ಆರ್ಥಿಕ ಸಮಸ್ಯೆಯಿಂದ ಹೊರಗೆ ಬರಬೇಕು, ಹೊಸ ಹೊಸ ಉದ್ಯಮಗಳನ್ನು ಶುರು ಮಾಡಿ ಯಶಸ್ವಿಯಾಗ್ಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಮಹಿಳೆಯರ ಅನುಕೂಲಕ್ಕಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದೆ. ನಾವಿಂದು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
Inspiration Story ಕಾಶ್ಮೀರದಲ್ಲಿ ಕೆಫೆ ಆರಂಭಿಸಿ ಯಶಸ್ವಿಯಾದ ಮಹಿಳೆ
ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆ ಅಂದ್ರೇನು? : ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮೊದಲ ಬಾರಿಗೆ ತಮ್ಮ ಉದ್ಯಮವನ್ನು ಪ್ರಾರಂಭಿಸುವ ಮಹಿಳಾ ಉದ್ಯಮಿಗಳಿ ಆರ್ಥಿಕ ನೆರವು ನೀಡಲು ಶುರುವಾದ ಯೋಜನೆ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಾಗಿದೆ. ಎಂಟರ್‌ಪ್ರೈಸ್ ಉತ್ಪಾದನಾ ಸೇವೆಗಳು, ಕೃಷಿ ಸಂಬಂಧಿತ ಚಟುವಟಿಕೆಗಳು ಅಥವಾ ವ್ಯಾಪಾರ ವಲಯದಲ್ಲಿ ಬರುವ ಉದ್ಯಮಗಳಿಗೆ ಮಾತ್ರ ಇದ್ರಲ್ಲಿ ಸಾಲಗಳು ಲಭ್ಯವಿರುತ್ತವೆ.
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಸಿಗುತ್ತೆ ಇಷ್ಟು ಸಾಲ : ಈ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ 10 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯಿಂದ ಸಿಗುವ ಪ್ರಯೋಜನ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಮತ್ತು ಎಲ್ಲಾ ವರ್ಗದ ಮಹಿಳೆಯರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸಿದ್ದು, ಹಣದ ಕೊರತೆ ಕಾಡ್ತಿದೆ ಎನ್ನುವವರು ಇದ್ರ ಲಾಭ ಪಡೆಯಬಹುದು. ಈ ಯೋಜನೆಯಡಿ ಉದ್ಯಮ ಆರಂಭಿಸುವ ಉದ್ಯಮಿಗಳು 3 ವರ್ಷಗಳವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಯೋಜನೆಯಡಿ ಸಾಲ ಪಡೆದು ಉದ್ಯೋಗ ಶುರು ಮಾಡುವ ಜನರು ಬೇರೆಯವರಿಗೆ ಉದ್ಯೋಗ ನೀಡ್ತಾರೆ. ಉದ್ಯೋಗಾವಕಾಶಗಳ ಹೆಚ್ಚಳದಿಂದಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಕಡಿಮೆಯಾಗುತ್ತದೆ. ದೇಶದ ಆರ್ಥಿಕ ವ್ಯವಸ್ಥೆಯೂ ಸುಧಾರಿಸುತ್ತದೆ. ಉದ್ಯಮಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ ಉತ್ತೇಜನ ಸಿಗುತ್ತದೆ. ಇದ್ರಿಂದ ಮಹಿಳೆಯರು ಸ್ವಾವಲಂಬಿಗಳಾಗುತ್ತಾರೆ.
International Women's Day: ಜಗತ್ತೇ ಗೌರವಿಸುವ ಭಾರತದ ಮಹಿಳಾ ಸಾಧಕಿಯರಿವರು
ಸ್ಟ್ಯಾಂಡ್-ಅಪ್ ಇಂಡಿಯಾ ಸ್ಕೀಮ್ ಯಾರಿಗೆ ಲಭ್ಯವಿದೆ? : ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಉದ್ಯಮಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿ ಮಹಿಳಾ ಉದ್ಯಮಿಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಈ ಯೋಜನೆಯಡಿಯಲ್ಲಿ ಹಸಿರು ಕ್ಷೇತ್ರ ಯೋಜನೆಗಳಿಗೆ ಮಾತ್ರ ಸಾಲ ನೀಡಲಾಗುವುದು. ಅಭ್ಯರ್ಥಿಗಳು ಯೋಜನೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಯೋಜನೆಗೆ ಅರ್ಜಿ ಸಲ್ಲಿಸುವ ಯಾವುದೇ ಉದ್ಯಮಿ ಯಾವುದೇ ಬ್ಯಾಂಕ್‌ನಿಂದ ಡೀಫಾಲ್ಟರ್ ಆಗಿರಬಾರದು.
ಅಗತ್ಯವಿರುವ ದಾಖಲೆ : ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಅರ್ಜಿದಾರರಿಗೆ ಕೆಲವು ಪ್ರಮುಖ ದಾಖಲೆಗಳ ಅಗತ್ಯವಿರುತ್ತದೆ. ಗುರುತಿನ ಚೀಟಿ ,ಪಾಸ್ಪೋರ್ಟ್ ಗಾತ್ರದ ಫೋಟೋ, ಬ್ಯಾಂಕ್ ಖಾತೆ ವಿವರಗಳು, ಆದಾಯ ತೆರಿಗೆ ರಿಟರ್ನ್ ನಕಲು, ಜಾತಿ ಪ್ರಮಾಣಪತ್ರ, ವ್ಯಾಪಾರ ವಿಳಾಸ ಪ್ರಮಾಣಪತ್ರ, ಪಾನ್ ಕಾರ್ಡ್, ಯೋಜನೆಯ ವರದಿ, ಪಾಲುದಾರಿಕೆ ಪತ್ರದ ಪ್ರತಿ, ಬಾಡಿಗೆ ವರದಿ ನೀಡಬೇಕಾಗುತ್ತದೆ. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ http://www.standupmitra.in ಗೆ ಭೇಟಿ ನೀಡಬೇಕು.
