ದಪ್ಪ ಲೆದರ್ ಸ್ಪೋರ್ಟ್ಸ್ ಜಾಕೆಟ್, ಗ್ಲೌಸ್, ಬೈಕರ್ ಪ್ಯಾಂಟ್ ಹಾಗೂ ಶೂಸ್, ಕತ್ತಿಗೆ ಸುತ್ತಿದ ಸ್ಕಾರ್ಫ್, ಗಾಗಲ್ಸ್, ಮೇಲೊಂದು ಹೆಲ್ಮೆಟ್, ಪ್ರಪಂಚ ಪರ್ಯಟನೆಗೊಂದು ರಾಯಲ್ ಎನ್‌ಫೀಲ್ಡ್- ಯುವಕರಿಗೆಲ್ಲ ತಮ್ಮ ಭವಿಷ್ಯದ ಕನಸು, ಹುಡುಗಿಯರಿಗೆ ತಮ್ಮ ಕನಸಿನ ಹೀರೋ ಕಣ್ಣ ಮುಂದೆ ಬಂದಿರಬೇಕು ಅಲ್ವಾ? ಆದರೆ, ಇದು ಹೀರೋಯಿನ್‌ ಇಂಟ್ರಡಕ್ಷನ್. ಸಾರಿ ಸಾರಿ, ಹೀರೋಯಿನ್‌ಗಳ ಇಂಟ್ರಡಕ್ಷನ್. 

ಅಮ್ಮನ ಪಾಸಿಟಿವ್ ಯೋಚನೆಯಿಂದ ಮಗುವಿನ ಹೃದಯ ಸಮಸ್ಯೆ ದೂರವಾಯ್ತು!

ಹೌದು, ಇಲ್ಲಿ ಇಬ್ಬರಿದ್ದಾರೆ ಬೈಕರ್ ಬೆಡಗಿಯರು. ಟ್ರಾವೆಲಿಂಗ್ ಎಂದರೆ ಹೋಗುವ ದಾರಿಯೇ ಹೊರತು ಗುರಿಯಲ್ಲ ಎಂಬುದನ್ನು ನಂಬಿರುವವರು, ಅನುಭವದಿಂದ ಅದನ್ನೇ ಖಾತ್ರಿಪಡಿಸಿಕೊಂಡಿರುವವರು. ಈ ಹುಡುಗಿಯರು ಜಾಕೆಟ್ ಜಿಪ್ಪೇರಿಸಿ ಬೈಕ್ ಏರಿದರೆಂದರೆ ರಸ್ತೆಗಳು ಹೊಸ ಹೊಸ ಊರಿಗೆ ಹೊತ್ತೊಯ್ದು ಅಲ್ಲಿನ ಮಕ್ಕಳ ಕಣ್ಣುಗಳಿಗೆ ಒಂದಿಷ್ಟು ಬೆರಗನ್ನು ತುಂಬುತ್ತವೆ, ಹೆಣ್ಮಕ್ಕಳಿಗೆ ಸ್ಪೂರ್ತಿ ನೀಡುತ್ತವೆ, ಗಂಡು ಹೈಕಳಿಂದಲೂ ಮೆಚ್ಚುಗೆಯ ನೋಟ ದಕ್ಕುತ್ತದೆ. 

''ನಿಮ್ಮ ಗೆಳೆಯ ಬೈಕ್ ಕಲಿಸಿ, ಜೊತೆಯಾಗಲೆಂದು ಕಾಯುತ್ತಾ ಕೂರಬೇಡಿ, ನೀವೇ ಹೊರ ಹೋಗಿ ಎಕ್ಸ್‌ಪ್ಲೋರ್ ಮಾಡಿ'' ಎಂದು ಹುಡುಗಿಯರಿಗೆ ಸಲಹೆ ನೀಡುತ್ತಾ ಹೆಲ್ಮೆಟ್ ತೆಗೆವ ಆಕೆಯ ಹೆಸರು ಅಮೃತಾ ಕಾಶಿನಾಥ್. ಜೊತೆಯಲ್ಲಿ ನಿಂತಾಕೆ ಶುಭ್ರ ಆಚಾರ್ಯ. ಈ ಇಬ್ಬರು ಗೆಳತಿಯರು ದಕ್ಷಿಣದ ತುದಿಯಿಂದ ಉತ್ತರದ ತುದಿವರೆಗೆ ಬೈಕ್ ಸಂಚಾರ ಕೈಗೊಂಡು, ಲಿಮ್ಕಾ ದಾಖಲೆ ಪುಸ್ತಕ ಸೇರಿದ್ದಾರೆ. ಕನ್ಯಾಕುಮಾರಿಯಿಂದ ಹೊರಟ ಈ ಕನ್ಯಾಕುವರಿಯರು ಕೇವಲ 129 ಗಂಟೆಯಲ್ಲಿ 3851 ಕಿಲೋಮೀಟರ್ ದೂರದಲ್ಲಿ ತಣ್ಣಗೆ ಕುಳಿತಿರುವ ಲೇಹ್ ತಲುಪಿ 'ವಾಹ್' ಗಿಟ್ಟಿಸಿಕೊಂಡಿದ್ದಾರೆ. ಇದು ಮಹಿಳಾ ಬೈಕರ್‌ಗಳ ಅತಿ ವೇಗದ ದಕ್ಷಿಣ-ಉತ್ತರ ಸವಾರಿ ಎಂಬ ದಾಖಲೆಗೆ ಪಾತ್ರವಾಗಿದೆ. 

ಈ ಯಾತ್ರೆಯಲ್ಲಿ ಬಹಳ ಸವಾಲಾಗಿ ಕಾಡಿದ್ದು ನಿದ್ರೆ. ದಿನಕ್ಕೆ ಕೇವಲ 4ರಿಂದ 5 ಗಂಟೆ ನಿದ್ರೆ ಮಾಡಿ ರಸ್ತೆಯನ್ನಾಳುವುದು ಸುಲಭವಲ್ಲ ಎನ್ನುತ್ತಾರೆ ಶುಭ್ರ. ಈ ಟ್ರಿಪ್ ಪೂರ್ತಿ ಸ್ಪಾನ್ಸರ್ಡ್ ಯಾತ್ರೆಯಾಗಿದ್ದು, ಇದಕ್ಕಾಗಿ ಅವರು ಒಂದಿಷ್ಟು ತರಬೇತಿಗಳನ್ನು ಪೂರೈಸಿದ್ದರು. 

ಕನಸಿನ ಕುದುರೆಯೇರಿ ಗುರಿ ಸೇರಿದ ಸಾಧಕಿಯರು!

ಸುತ್ತಿದ್ದು ಬಹಳ, ಸುತ್ತಲಿರೋದು ಅಪರಿಮಿತ

9 ವರ್ಷಗಳಿಂದ ಜೊತೆಯಾಗಿ ಬೈಕ್ ಏರಿ ಸವಾರಿ ಮಾಡುತ್ತಿರುವ ಈ ಸ್ನೇಹಿತೆಯರು ಈಗಾಗಲೇ ದೇಶದಲ್ಲಿ 2 ಲಕ್ಷ ಕಿಲೋಮೀಟರ್‌ಗೂ ಹೆಚ್ಚು ಸುತ್ತಿದ್ದಾರೆ. ಬೈಕ್‌ನಲ್ಲಿಯೇ ಭೂತಾನ್, ಶ್ರೀಲಂಕಾವನ್ನು ತಿರುಗಿ ಬಂದಿದ್ದಾರೆ. ಶೀಘ್ರದಲ್ಲಿ ಮಂಗೋಲಿಯಾಕ್ಕೆ ಪಯಣ ಹೊರಡಲು ಸಜ್ಜಾಗಿದ್ದಾರೆ. 

ತನ್ನ ಬೈಕ್ ಸವಾರಿ ಪ್ರೀತಿ ಬಗ್ಗೆ ಹೇಳಿಕೊಳ್ಳುವ ಅಮೃತಾ, "ಕಾಲೇಜು ದಿನಗಳಲ್ಲಿ ನಾನು ಬೈಕ್ ಓಡಿಸಲಾರಂಭಿಸಿದೆ. ನಿಧಾನವಾಗಿ ಇದೇ ನನ್ನ ಪ್ಯಾಶನ್ ಎಂಬುದು ನನ್ನ ಕುಟುಂಬಕ್ಕೆ ಅರಿವಾಗುತ್ತಿದ್ದಂತೆಯೇ ಅವರಿದಕ್ಕೆ ಪ್ರೋತ್ಸಾಹ ನೀಡಿದರು. ಇದರಿಂದ ನನಗೆ ವಿಭಿನ್ನ ರೀತಿಯ ಕಲಿಕೆ, ಎಕ್ಸ್‌ಪೋಶರ್ ಸಿಕ್ಕಿದೆ. ನನ್ನ ಮೊದಲ ಲಾಂಗ್ ಜರ್ನಿ ಬೆಂಗಳೂರಿನಿಂದ ಗುಜರಾತ್ ಹಾಗೂ ರಾಜಸ್ಥಾನ್. ಈ ಯಾತ್ರೆ ಯಶಸ್ವಿಯಾದ ಬಳಿಕ ನನ್ನ ಆತ್ಮವಿಶ್ವಾಸ ಅಗಾಧವಾಗಿ ಬೆಳೆಯಿತು," ಎನ್ನುತ್ತಾರೆ.

ಧೈರ್ಯವೊಂದೇ ಸಾಕು

ಹೆಣ್ಣೆಂದರೆ ಸುರಕ್ಷತೆ ಹಾಗೂ ಇತರೆ ವಿಷಯಗಳು ಮುನ್ನೆಲೆಗೆ ಬರುತ್ತವೆ. ಆದರೆ ಈ ಇಬ್ಬರು ಯುವತಿಯರು ತಮ್ಮ ಧೈರ್ಯದಿಂದಾಗಿ, ಇಂಥ ಎಲ್ಲ ಹಿಂದೆಳೆಯುವ ಆತಂಕಗಳು ಅನಗತ್ಯ ಎಂದು ಸಾಬೀತು ಮಾಡಿದ್ದಾರೆ. ಈ ಬಗ್ಗೆ ಹೆಣ್ಮಕ್ಕಳಿಗೆ ಸಲಹೆ ನೀಡುವ ಅಮೃತಾ, "ಭಾರತದಲ್ಲಿ ಬಹುತೇಕ ಹುಡುಗಿಯರಿಗೆ ಬೈಕ್ ಓಡಿಸಬೇಕು ಅಥವಾ ಎಲ್ಲಾದರೂ ಹೋಗಬೇಕೆಂದರೆ ಜೊತೆಗೆ ಗಂಡ, ಅಪ್ಪ, ಗೆಳೆಯ, ಅಣ್ಣ ಹೀಗೆ ಯಾರಾದರೂ ಒಬ್ಬ ಗಂಡಸು ಇರಲೇಬೇಕು. ಆದರೆ, ಹೀಗೆ ಬೈಕಿಂಗ್ ಎಕ್ಸ್‌ಪೆಡಿಶನ್ ಹೋಗುವುದಕ್ಕೆ ಖಂಡಿತಾ ಗಂಡೊಬ್ಬ ಜೊತೆಗಿರಬೇಕಿಲ್ಲ. ನಿಮ್ಮ ಜೊತೆಗಿರಬೇಕಾದುದು ಒಂದು ಬೈಕ್ ಅಷ್ಟೇ. ಇದು ಬಹಳ ಸರಳ," ಎನ್ನುತ್ತಾರೆ. 

ಸ್ವಾತಂತ್ರ್ಯದ ವ್ಯಕ್ತಿರೂಪದಂತೆ ಕಾಣುವ ಬೈಕನ್ನು ನಮ್ಮ ಹಿಡಿತದಲ್ಲಿಟ್ಟುಕೊಂಡು ಬೇಕೆಂದಲ್ಲಿ ಬೇಕಾದಾಗ ತಿರುಗುವ, ತಿರುಗಾಟದಲ್ಲಿ ಕಲಿವ, ನಲಿವ ಈ ಸಂಭ್ರಮ ಅದೆಷ್ಟು ಚೆನ್ನಾಗಿರಬಹುದಲ್ಲವೇ?