ತಾಲಿಬಾನ್ ಹಾರಿಸಿದ 8 ಗುಂಡು ಅವಳ ದೇಹ ಹೊಕ್ಕಾಗ ಅವಳು 2 ತಿಂಗಳ ಗರ್ಭಿಣಿ, ಮುಂದೇನಾಯ್ತು?
ಅಪಘಾನಿಸ್ತಾನದ ತಾಲಿಬಾನ್ ಆಡಳಿತ ಮಹಿಳೆಯರನ್ನು ಹೇಗೆ ಟ್ರೀಟ್ ಮಾಡುತ್ತದೆ ಎಂಬುದನ್ನು ತಿಳಿಸುವ ಜೀವನ ಕತೆ ಇದು. ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್ ಬಾಂಬೇ ಪುಟದಲ್ಲಿ ಪ್ರಕಟವಾದ ಈ ಘಟನೆ ಆ ಮಹಿಳೆಯ ಮಾತಿನಲ್ಲಿಯೇ ಇಲ್ಲಿದೆ.

ಇದು ದಿಟ್ಟ ಮಹಿಳೆಯೊಬ್ಬಳ ಕಥೆ. ಈಕೆ ಪ್ರಸ್ತುತ ಬದುಕಿರುವುದು ದಿಲ್ಲಿಯಲ್ಲಿ. ಮೂಲತಃ ಆಕೆ ಅಪಘಾನಿಸ್ತಾನದವಳು. ಮಾತ್ರವಲ್ಲ ಈಕೆ ಪೊಲೀಸ್ ಅಧಿಕಾರಿಯಾಗಿದ್ದಳು ಕೂಡ. ಅಪಘಾನಿಸ್ತಾನದ ತಾಲಿಬಾನ್ ಆಡಳಿತ ಮಹಿಳೆಯರನ್ನು ಹೇಗೆ ಟ್ರೀಟ್ ಮಾಡುತ್ತದೆ ಎಂಬುದನ್ನು ತಿಳಿಸುವ ಜೀವನ ಕತೆ ಇದು. ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್ ಬಾಂಬೇ ಪುಟದಲ್ಲಿ ಪ್ರಕಟವಾದ ಈ ಘಟನೆ ಆ ಮಹಿಳೆಯ ಮಾತಿನಲ್ಲಿಯೇ ಇಲ್ಲಿದೆ.
ಅಫಘಾನಿಸ್ತಾನದಲ್ಲಿ ಒಂದು ಮಾತಿದೆ- ಹೆಣ್ಣು ಹೆಚ್ಚು ಹೆಚ್ಚು ಓದಿದಷ್ಟೂ, ಕುಟುಂಬದ ಹೆಸರನ್ನು ಹೆಚ್ಚು ಹೆಚ್ಚು ಹಾಳು ಮಾಡುತ್ತಾಳೆ. ʼಬಹುತೇಕ ಗಂಡಸರು ಇದನ್ನು ಅನುಮೋದಿಸುತ್ತಾರೆ. ತಾಲಿಬಾನ್‌ಗಳಂತೂ ನಿಮ್ಮನ್ನು ಶಾಲೆಗೆ ಹೋಗುವುದಕ್ಕೇ ಬಿಡುವುದಿಲ್ಲ. ಆದರೂ ನಾನು ಹೆಚ್ಚು ಓದಿ, ಪೊಲೀಸ್ ಅಧಿಕಾರಿ ಆಗುತ್ತೇನೆ ಎಂದು 6ನೇ ವಯಸ್ಸಿನಲ್ಲಿಯೇ ನಿರ್ಧರಿಸಿದೆ.
ಆದರೆ ನನ್ನ ತಂದೆಯೂ ಸಂಪ್ರದಾಯವಾದಿ. ನನ್ನ ಸಂಕಲ್ಪವನ್ನು ಸಂಪೂರ್ಣವಾಗಿ ವಿರೋಧಿಸಿದರು- ʻಲೋಗ್ ಕ್ಯಾ ಕಹೆಂಗೆ?' ಎಂಬುದು ಅವರ ವಾದವಾಗಿತ್ತು. ಅವನು ನನ್ನನ್ನು ಶಾಲೆಯಿಂದ ಬಿಡುವಂತೆ ಮಾಡಿದ. ನನ್ನ ಕನಸುಗಳು ಈಡೇರಲಿಲ್ಲ. ನನ್ನ ಕನಸು ಪುರುಷರಿಗೆ ಬೆದರಿಕೆಯಾಗಿತ್ತು. ಆದರೆ ನಾನು ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. 30ನೇ ವಯಸ್ಸಿನಲ್ಲಿ ನನ್ನ ಮದುವೆ ನಿಶ್ಚಯವಾಯಿತು. ನಬಿಯನ್ನು ಅರೇಂಜ್ಡ್ ಮ್ಯಾರೇಜ್‌ನಲ್ಲಿ ಮದುವೆಯಾದೆ. ಭೇಟಿಯಾದಾಗಲೇ ನನ್ನ ಕನಸನ್ನು ಆತನಿಗೆ ಹೇಳಿದೆ. ʻನಾನು ಪೊಲೀಸ್ ಅಧಿಕಾರಿಯಾಗುತ್ತೇನೆ. ಅದು ನಿನಗೆ ಸರಿಯೆನಿಸಿದರೆ ಮಾತ್ರ ನನ್ನನ್ನು ಮದುವೆಯಾಗುʼ ಎಂದು ಕಂಡಿಷನ್ ಹಾಕಿದೆ. ಅವನು ಮುಗುಳ್ನಕ್ಕು, ʼನಿನಗೆ ಏನು ಬೇಕೋ ಮಾಡು, ನಾನು ನಿನ್ನ ಪಕ್ಕದಲ್ಲಿರುತ್ತೇನೆʼ ಎಂದ.
ಮದುವೆಯ 3 ತಿಂಗಳ ನಂತರ, ನನಗೆ ಅಪಾಯಿಂಟ್ ಆಯಿತು. ಷರತ್ತಿನ ಅಡಿಯಲ್ಲಿ ನನ್ನನ್ನು ಪೊಲೀಸ್ ಅಧಿಕಾರಿಯಾಗಿ ನೇಮಿಸಲಾಯಿತು. ನಾನು 7AMನಿಂದ 2 PMವರೆಗೆ ಕರ್ತವ್ಯದಲ್ಲಿರುತ್ತಿದ್ದೆ ಮತ್ತು ನಂತರ ಅಧ್ಯಯನ ಮಾಡುತ್ತಿದ್ದೆ. ನಾನು ಕ್ರೈಂ ಬ್ರಾಂಚ್‌ನಲ್ಲಿದ್ದೆ. ನನ್ನ ಡೆಸ್ಕ್ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳಿಂದ ತುಂಬಿತ್ತು. ಇದು ನನ್ನ ಸಂಕಲ್ಪವನ್ನು ಬಲಪಡಿಸಿತು. ನಾನು ಇತರ ಸಂತ್ರಸ್ತ ಮಹಿಳೆಯರನ್ನು ಸ್ವತಂತ್ರರಾಗಲು ಪ್ರೇರೇಪಿಸಲು ನಿರ್ಧರಿಸಿದೆ. ಹಾಗೇ ಮಾಡಿದೆ. ಪೊಲೀಸ್ ಪಡೆಗೆ ಸೇರಲು 2 ಹುಡುಗಿಯರ ಮನವೊಲಿಸಿದೆ.
ಆಗಲೇ ನನಗೆ ತಾಲಿಬಾನ್ ಉಗ್ರರ ಫೋನ್ ಕರೆ ಬಂತು. ʼಹೆಣ್ಣು ಪೊಲೀಸ್ ಆಗುವುದು ಸಲ್ಲದು. ನಿನ್ನ ಕೆಲಸ ಬಿಟ್ಟುಬಿಡು. ಇಲ್ಲವಾದರೆ ಸಾಯಿಸುತ್ತೇವೆʼ ಎಂದ ಆ ಕಡೆಯಲ್ಲಿದ್ದವನು. ನಾನು ಬೆದರಿಕೆಗೆ ಸೊಪ್ಪು ಹಾಕಲಿಲ್ಲ. 3 ತಿಂಗಳ ನಂತರ ನಾನು ಬೀದಿಯಲ್ಲಿ ಹೋಗುತ್ತಿದ್ದಾಗ ಅದೇ ಧ್ವನಿ ಹಿಂದಿನಿಂದ ಅಬ್ಬರಿಸಿತು- ʼಬೇಗ, ಯಾರಾದರೂ ಬರುವ ಮೊದಲು ಅವಳನ್ನು ಕೊಲ್ಲುʼ ಎಂದಿತು. ಒಂದರ ನಂತರ ಒಂದರಂತೆ ಎಂಟು ಗುಂಡುಗಳು ನನ್ನ ದೇಹವನ್ನು ಹೊಕ್ಕವು. ನಾನು ನೋವಿನಿಂದ ಚೀರಾಡುತ್ತ ಬೀದಿಯಲ್ಲಿ ಬಿದ್ದೆ.
ಗುಂಡುಗಳ ಬಳಿಕ ನನ್ನನು ಚೂರಿಯಿಂದ ಹತ್ತು ಬಾರಿ ಇರಿಯಲಾಯಿತು. ಕಣ್ಣುಗಳಿಗೇ ಚುಚ್ಚಲಾಯಿತು. ದೃಷ್ಟಿ ಸಂಪೂರ್ಣ ಕಿತ್ತಹೋಯಿತು. ನಾನು ಪೊಲೀಸ್ ಅಧಿಕಾರಿ ಆಗಿದ್ದಕ್ಕಾಗಿ ತಾಲಿಬಾನ್ ನನಗೆ ನೀಡಿದ ಶಿಕ್ಷೆ ಅದಾಗಿತ್ತು. ಸ್ಥಳೀಯರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಶಸ್ತ್ರಚಿಕಿತ್ಸೆಗೆ ಮುನ್ನ, ವೈದ್ಯರು ಹೇಳಿದರು, ʼನಿನ್ನ ಹೊಟ್ಟೆಯಲ್ಲಿರುವ ಮಗುವನ್ನು ನಾವು ಉಳಿಸಲು ಸಾಧ್ಯವಾಗದಿರಬಹುದುʼ. ನನಗೆ ಗೊತ್ತೇ ಇರಲಿಲ್ಲ- ನಾನಾಗ 2 ತಿಂಗಳ ಗರ್ಭಿಣಿಯಾಗಿದ್ದೆ.
ಇವ್ರ ಕಂಡ್ರೆ ಆಗೋಲ್ವಂತೆ ಮುಖೇಶ್ ಅಂಬಾನಿ ಮಗಳಿಗೆ, ಇಶಾ ತಿಂಗಳ ಸ್ಯಾಲರಿ ಎಷ್ಟು?
ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ನಾನು ಮಗು ಉಳಿಯಲೆಂದು ಪ್ರಾರ್ಥಿಸಿದೆ. ಅಲ್ಲಾನ ದಯೆ, ಮಗುವಿನ ಜೀವ ಉಳಿಯಿತು. ಆದರೆ ನಾನು ದೃಷ್ಟಿ ಕಳೆದುಕೊಂಡೆ. ನನ್ನನ್ನು ಭಾರತಕ್ಕೆ ವರ್ಗಾಯಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಒಂದು ತಿಂಗಳ ನಂತರ, ನಬಿ ಮತ್ತು ನಾನು ದೆಹಲಿಗೆ ತೆರಳಿದೆವು. ಇಂದು ನಾನು ಸುರಕ್ಷಿತವಾಗಿದ್ದೇನೆ. ನಬಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಾನೆ. ನನ್ನ ಮಗಳು ಈಗ ಶಾಲೆಗೆ ಹೋಗುತ್ತಾಳೆ. ನಾನು ಕಂಗಳ ದೃಷ್ಟಿಯಿಲ್ಲದ ಜೀವನಕ್ಕೆ ಹೊಂದಿಕೊಂಡಿದ್ದೇನೆ. ಇದು ಬಲು ಕಠಿಣವಾಗಿದೆ. ಆದರೆ ಪ್ರಪಂಚದೊಂದಿಗೆ ಈಗಾಗಲೇ ಸಾಕಷ್ಟು ಹೋರಾಡಿರುವ ನನಗೆ ಇದು ಅಷ್ಟು ಕಷ್ಟವೆನಿಸುವುದಿಲ್ಲ.
ಈಗ ನಾನು ಇತರ ಅಂಧರಿಗೆ ಸಾಮಾನ್ಯ ಜೀವನ ನಡೆಸಲು ತರಬೇತಿ ನೀಡುತ್ತೇನೆ. ನಾನು ನನ್ನ ಮಗಳನ್ನು ಒಂದು ಸಲವಾದರೂ ನೋಡಬೇಕಿತ್ತು, ನಂತರ ಈ ಗುಂಡಿನ ದಾಳಿ ಸಂಭವಿಸಬಹುದಿತ್ತು ಎಂದು ಕೆಲವೊಮ್ಮೆ ಅನಿಸುವುದಿದೆ. ಆದರೆ ಇನ್ನೊಮ್ಮೆ ಅಂತಹ ಘಟನೆ ನನ್ನ ಹಾಗೂ ಮಗಳ ಬಾಳಿನಲ್ಲಿ ಸಂಭವಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಹಾಗೇನಾದರೂ ಆದರೆ ಅವಳನ್ನು ರಕ್ಷಿಸಲು ಅವಳ ಪೊಲೀಸ್ ಅಧಿಕಾರಿ ಅಮ್ಮಿ ಇದ್ದೇ ಇರುತ್ತಾಳಲ್ಲ!
ಮಹಿಳೆಯರು ಹಸ್ತಮೈಥುನ ಮಾಡಿಕೊಂಡ್ರೆ ಮೊಡವೆ ಕಾಡುತ್ತಾ?