Asianet Suvarna News Asianet Suvarna News

ಬಾಡಿಗೆ ತಾಯ್ತನ ಕಾಯ್ದೆಯಲ್ಲಿ ತಿದ್ದುಪಡಿ ತರುವ ಪ್ರಕ್ರಿಯೆ ಚಾಲ್ತಿಯಲ್ಲಿ: ಕೇಂದ್ರ

ಸರ್ಕಾರವು ದಾನಿಗಳಿಂದ ಗ್ಯಾಮೆಟ್‌ಗಳನ್ನು ಸ್ವೀಕರಿಸಲು ಅರ್ಹ ದಂಪತಿಗಳಿಗೆ ಅವಕಾಶ ನೀಡುವತ್ತ ಬಾಡಿಗೆ ತಾಯ್ತನ ಕಾಯ್ಗೆಗೆ ತಿದ್ದುಪಡಿ ತರಲಿದೆ.

Reconsidering ban on donor eggs sperm in surrogacy Govt to SC skr
Author
First Published Jan 11, 2024, 2:42 PM IST

ಹೊಸದಿಲ್ಲಿ: ಕಳೆದ ವರ್ಷ ಬಾಡಿಗೆ ತಾಯ್ತನದ ಕಾನೂನಿನಲ್ಲಿ ದಾನಿಗಳ ಗ್ಯಾಮೆಟ್ಸ್- ಅಂದರೆ ಅಂಡಾಣು ಅಥವಾ ಮೊಟ್ಟೆಯ ಜೀವಕೋಶಗಳು ಮತ್ತು ವೀರ್ಯಾಣುಗಳ ಬಳಕೆಯನ್ನು ನಿಷೇಧಿಸಿದ ತಿದ್ದುಪಡಿಯನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ವಿಚಾರವಾಗಿ ಶೀಘ್ರದಲ್ಲೇ ನಿರ್ಧಾರವನ್ನು ಹೊರತರಲಿದೆ ಎಂದು ವರದಿಗಳು ತಿಳಿಸಿವೆ. 

ಪೀಠದ ಮುಂದೆ ಹಾಜರಾದ ಹೆಚ್ಚುವರಿ ಎಸ್‌ಜಿ ಐಶ್ವರ್ಯ ಭಾಟಿ, ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರವು ದಾನಿಗಳಿಂದ ಗ್ಯಾಮೆಟ್‌ಗಳನ್ನು ಸ್ವೀಕರಿಸಲು ಅರ್ಹ ದಂಪತಿಗಳಿಗೆ ಅವಕಾಶ ನೀಡುವತ್ತ ಕಾಯ್ಗೆಗೆ ತಿದ್ದುಪಡಿ ತರಲಿದೆ ಎಂದು ಹೇಳಿದರು.

ಇದು ವೈದ್ಯಕೀಯ ಕಾರಣದಿಂದ ಅಂಡೋತ್ಪತ್ತಿ ಮಾಡಲು ಸಾಧ್ಯವಾಗದ ದಂಪತಿಗೆ ಬಾಡಿಗೆ ತಾಯ್ತನ ಪ್ರಕ್ರಿಯೆಯನ್ನು ಹೆಚ್ಚು ಸುಲಭಗೊಳಿಸುತ್ತದೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಅನೇಕ ಮಹಿಳೆಯರು ತಮ್ಮ ಕುಂದುಕೊರತೆಗಳೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸಿದರೂ ಮತ್ತು ಅವರ ವೈದ್ಯಕೀಯ ವರದಿಗಳ ಆಧಾರದ ಮೇಲೆ ವಿನಾಯಿತಿ ಪಡೆದರೂ ಕೇಂದ್ರವು ಏಕೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂಬ ನ್ಯಾಯಾಲಯದ ಪ್ರಶ್ನೆಗೆ ಎಎಸ್‌ಜಿ ಪ್ರತಿಕ್ರಿಯಿಸಿದರು. 

ಮಾರ್ಚ್ 14, 2023ರಂದು ಹೊರಡಿಸಲಾದ ಆದೇಶದ ಪ್ರಕಾರ, ಬಾಡಿಗೆ ತಾಯ್ತನ ಕಾಯ್ದೆಯ 7 ನೇ ನಿಯಮವು, ಬಾಡಿಗೆ ತಾಯ್ತನ ಬಯಸುವ ಉದ್ದೇಶಿತ ದಂಪತಿಗಳ ಮೊಟ್ಟೆ ಮತ್ತು ವೀರ್ಯವನ್ನು ಮಾತ್ರ ಮಗುವನ್ನು ಹೊಂದಲು ಬಳಸಬಹುದು ಎನ್ನಲಾಗಿತ್ತು. ಅಲ್ಲದೆ, ಬಾಡಿಗೆ ತಾಯ್ತನಕ್ಕೆ ಒಳಗಾಗುವ ಒಂಟಿ ಮಹಿಳೆಯರು (ವಿಧವೆ/ವಿಚ್ಛೇದಿತರು) ತಮ್ಮ ಸ್ವಂತ ಮೊಟ್ಟೆ ಮತ್ತು ದಾನಿಗಳ ವೀರ್ಯವನ್ನು ಬಳಸಬೇಕು ಎಂದು ಕಳೆದ ವರ್ಷ ಮಾರ್ಚ್‌ನಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದರಿಂದ ವೈದ್ಯಕೀಯ ಕಾರಣಗಳಿಂದ ಅಂಡಾಣು ಅಥವಾ ವೀರ್ಯಾಣುವನ್ನು ಉತ್ಪತ್ತಿ ಮಾಡಲಾಗದ ದಂಪತಿ ಬಾಡಿಗೆ ತಾಯಿಯಿಂದ ಮಗು ಪಡೆಯುವುದು ಅಸಾಧ್ಯವಾಗಿತ್ತು.  ಈ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನದ ಪ್ರಕ್ರಿಯೆಯನ್ನು ನಿರ್ಬಂಧಿಸಿದ ಮತ್ತು ತಮ್ಮ ಪೋಷಕರ ಕನಸುಗಳನ್ನು ಛಿದ್ರಗೊಳಿಸಿದ ತಿದ್ದುಪಡಿಯಿಂದ ನೊಂದ ಹಲವಾರು ಮಹಿಳೆಯರು ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ಗೆ ತೆರಳುತ್ತಿದ್ದಾರೆ. 

ಇದರೊಂದಿಗೆ ಅವಿವಾಹಿತ ಮಹಿಳೆಯರಿಗೆ ಬಾಡಿಗೆ ತಾಯ್ತನವನ್ನು ಸ್ವೀಕರಿಸಲು ಅವಕಾಶ ನೀಡಬಹುದೇ ಎಂದು ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ. ಈ ಸಂಬಂಧ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿರುವ ಮಹಿಳೆ, ಅವಿವಾಹಿತಳಾಗಿಯೇ ತಾಯಿಯಾಗುವ ನನ್ನ ಹಕ್ಕನ್ನು ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ದೂರಿದ್ದಾರೆ. 

ಈಗಿರುವ ಕಾನೂನಿನ ಪ್ರಕಾರ ಮದುವೆಯಾಗಿ ಐದು ವರ್ಷಕ್ಕಿಂತ ಮೇಲ್ಪಟ್ಟ ದಂಪತಿಗಳು ಬಾಡಿಗೆ ತಾಯ್ತನಕ್ಕೆ ಅರ್ಹರು. ಮಹಿಳೆಯು ಗರ್ಭಾಶಯವನ್ನು ಹೊಂದಿರದ ಸಂದರ್ಭಗಳಲ್ಲಿ ಅಥವಾ ಗರ್ಭಾಶಯವು ಪೂರ್ಣಾವಧಿಗೆ ಗರ್ಭಧಾರಣೆಯನ್ನು ಸಾಗಿಸುವಷ್ಟು ಆರೋಗ್ಯಕರವಾಗಿರದ ಸಂದರ್ಭಗಳಲ್ಲಿ ಬಾಡಿಗೆ ತಾಯ್ತನದ ಮೊರೆ ಹೋಗಬಹುದು. 

Follow Us:
Download App:
  • android
  • ios