ಈಗಲೂ ಹೆಣ್ಣುಮಕ್ಕಳು ಎದುರಿಸುತ್ತಿದ್ದಾರೆ ಟಾಯ್ಲೆಟ್ ಪ್ರಾಬ್ಲಂ!

ಹೆಣ್ಣು ಮಗುವನ್ನು ನಾವು ಬೆಳೆಸುವ ರೀತಿ ಸರಿಯಿಲ್ಲವಾ ಅಥವಾ ಪರಿಸ್ಥಿತಿಯೇ ಹಾಗಿದೆಯಾ ಗೊತ್ತಿಲ್ಲ. ಆದರೆ ನಮ್ಮ ಅಜ್ಜಿ, ಅಮ್ಮನ ಕಾಲದ ಸಮಸ್ಯೆಯನ್ನೇ ನಮ್ಮ ಹೆಣ್ಣುಮಕ್ಕಳೂ ಅನುಭವಿಸುತ್ತಿದ್ದಾರೆ ಅಂದರೆ ನಾವೆಲ್ಲಿ ಅಭಿವೃದ್ಧಿ ಹೊಂದಿದ್ದೇವೆ, ಯಾಕೆ ಟಾಯ್ಲೆಟ್‌ನ ಅಭಾವದಿಂದ ಇಂದಿನ ಮಕ್ಕಳೂ ನೋವುಣ್ಣುವಂತಾಗ್ತಿದೆ. 

lack of toilets puts women safety at risk

ಮಿಲಿಯನ್‌ಗಟ್ಟಲೆ ಅಂಶಗಳಿಂದ ದೇವರು ಹೆಣ್ಣು, ಗಂಡುಗಳನ್ನು ಪ್ರತ್ಯೇಕಿಸಿದ್ದರೂ, ತಿನ್ನುವುದು, ನಿದ್ರಿಸುವುದು, ಮಲಮೂತ್ರ ವಿಸರ್ಜನೆ ನಮಗೆಲ್ಲರಿಗೂ ಒಂದೇ. ಆದರೆ ಆಹಾರ ನಿದ್ರೆಗಳ ಬಗ್ಗೆ ಮುಕ್ತವಾಗಿ ಮಾತಾಡಿದಂತೆ ಶೌಚಾಲಯದ ಬಗ್ಗೆ ‘ಒಂದು -ಎರಡು’ ಬರುವ ಜಾಗಗಳನ್ನು ನಾವು ಹೇಳಲು ಬಿಡಲಾರೆವು.

‘ಕುಂ...’ ’ಮು.’ಎಂದು ಬಾಯಿ ತೆರೆದರೆ ಸಾಕು, ಮಕ್ಕಳಿಗೆ -ದೊಡ್ಡವರಿಗೆ ನಗುವಿನ ಜೊತೆಗೆ  ‘ಮುಜುಗರ’ವೂ ಮೊದಲಾಗುತ್ತದೆ. ಇದಕ್ಕೆ ಕಾರಣಗಳು ಬಹುಶಃ ಎರಡು. ಮೊದಲನೆಯದು ಅವು ‘ಕೊಳಕು’ ‘ಮುಟ್ಟಬಾರದ್ದು’ ‘ಹೊರಹೋಗುವ ತ್ಯಾಜ್ಯವಾದ ಮಲ-ಮೂತ್ರಗಳನ್ನು ವಿಸರ್ಜಿಸುವ ಅಂಗಗಳು’ ಎಂಬುದು. ಎರಡನೆಯದು ಲೈಂಗಿಕತೆಗೂ, ಈ ಅಂಗಗಳಿಗೂ ಇರುವ ಅವಿನಾಭಾವ ಸಂಬಂಧ. ಹಾಗಾಗಿಯೇ ‘ಶೌಚಾಲಯ ಶೌಚ’ ಎಂದರೂ ಈ ಸಂಕೋಚ ಮುಂದುವರಿಯುತ್ತದೆ.

ಮನೆ ಒಳಗೂ ಹೊರಗೂ ದುಡಿಯುವ ಹೆಣ್ಣಿನ ವ್ಯಥೆಯಿದು!

ಮೂತ್ರ ಕಟ್ಟಿಕೊಳ್ಳುವ ಮಕ್ಕಳು- ಅಪಾಯಗಳೇನು?:

ಶಾಲೆಯಲ್ಲಿ ಮಕ್ಕಳು ಮಲ ಮೂತ್ರಕ್ಕಾಗಿ ಶೌಚಾಲಯ ಬಳಸಬೇಕು ಎಂದು ಮುಕ್ತವಾಗಿ ಕೇಳುವುದನ್ನೂ ಹೆಚ್ಚಿನವರು ಪೋತ್ಸಾಹಿಸುವುದಿಲ್ಲ. ಹೆಣ್ಣು ಮಕ್ಕಳಂತೂ ಹತ್ತನೆಯ ತರಗತಿಗೆ ಬರುವಾಗಲೇ ಮೂತ್ರ ಕಟ್ಟಿಕೊಂಡು ಸಾಯಂಕಾಲ ಮನೆಗೆ ಬಂದೇ ಶೌಚಾಲಯ ಬಳಸುವುದನ್ನು ಅಭ್ಯಾಸ ಮಾಡುತ್ತಾರೆ.

ಹಾಗೆ ಮೂತ್ರ ತಡೆ ಹಿಡಿದುಕೊಂಡಿರಬೇಕೆಂದರೆ ನೀರು ಕಡಿಮೆ ಕುಡಿಯಬೇಕು. ಹಾಗಾಗಿ ಸಾಕಷ್ಟು ನೀರು ಕುಡಿಯದಿರುವುದು, ಶೌಚಾಲಯವನ್ನು ಆಗಾಗ್ಗೆ ಬಳಸದಿರುವುದು, ಒಂದೊಮ್ಮೆ ಹೋಗಲೇಬೇಕಾಗಿ ಬಂದರೆ, ಗಡಿಬಿಡಿಯಿಂದ ಉಪಯೋಗಿಸಿ, ನೀರು ಹಾಕದೇ ಹೊರಬರುವುದು ಇವೆಲ್ಲವೂ ಬಹುಬೇಗ ಅಭ್ಯಾಸವಾಗಿ ಬಿಡುತ್ತವೆ.

ಇದು ಬಾಲಕಿಯರು, ಮುಂದೆ ಯುವತಿ, ಮಹಿಳೆಯರಾದಾಗಲೂ ಮುಂದುವರಿಯುವ ಸಾಧ್ಯತೆ ಹೆಚ್ಚು. ಮೂತ್ರನಾಳದ ಸೋಂಕು ರೋಗಗಳಿಗೆ ಜೈವಿಕ ಕಾರಣಗಳಿಗಿಂತ, ಸ್ವಚ್ಛತೆಯ ಕೊರತೆ, ಶೌಚಾಲಯ ಉಪಯೋಗಿಸದೇ ಮೂತ್ರವನ್ನು ತಡೆಹಿಡಿದಿರುವುದು ಮುಖ್ಯ ಕಾರಣಗಳು. ಗಂಡು ಮಕ್ಕಳು ಇಡೀ ಜಗತ್ತೇ ತಮ್ಮ ‘ಬಾತ್‌ರೂಂ’ ಎಂದುಕೊಂಡು ಎಲ್ಲೆಂದರಲ್ಲಿ, ತಮ್ಮ ದೇಹದ ಕರೆಗೆ ಸ್ಪಂದಿಸಿ ಮೂತ್ರ ವಿಸರ್ಜನೆ ಮಾಡಿದಂತೆ, ಮಹಿಳೆಯರು ಮಾಡಲಾರರಷ್ಟೆ. ಆದರೆ ಹೆಣ್ಣು ಮಕ್ಕಳು ಬಯಲಲ್ಲಿ, ಶೌಚಾಲಯದ ಹೊರಗೆ ಮೂತ್ರ ವಿಸರ್ಜನೆ ಮಾಡದಿರುವ ಉದ್ದೇಶ ‘ಅನಾರೋಗ್ಯಕರ’ ಎಂಬುದಕ್ಕಿಂತ ನಾಚಿಕೆ, ಸಂಕೋಚ ಎಂಬುದು ಗಮನಾರ್ಹ.

ಚೆಂದವಿಲ್ಲ ಎಂಬ ಕೀಳರಿಮೆಯೇ? ಇದು ಹುಟ್ಟಲು ನೀವೇ ಕಾರಣವಿರಬಹುದು!

ಆದರೆ ಲಿಂಗಭೇದವಿಲ್ಲದೆ ಸ್ವಚ್ಛ ಶೌಚಾಲಯ ಬಳಕೆ ಅಭ್ಯಾಸ ಮಾಡಿದರೆ ಎಲ್ಲರಿಗೂ ಒಳ್ಳೆಯದು. ಶೌಚದ ನಂತರ ನಮ್ಮ ಸ್ವಚ್ಛತೆಯೂ ಆರೋಗ್ಯಕ್ಕೆ ಅತಿ ಅವಶ್ಯ. ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ತೇವವುಳಿಯದಂತೆ ಸ್ವಚ್ಛಪಡಿಸಿಕೊಳ್ಳುವುದು, ಟಿಷ್ಯೂ ಪೇಪರ್ ಉಪಯೋಗಿಸಿ ಅದನ್ನು ಕಸದ ಬುಟ್ಟಿಗೇ ಎಸೆಯುವುದು, ಸೋಪು ಬಳಸಿ ಕೈ ತೊಳೆಯುವುದು ಸೋಂಕು ತಡೆಯುವಲ್ಲಿ ಬಹು ಮುಖ್ಯ.

ಮಂಡಿನೋವಿಗೂ ಟಾಯ್ಲೆಟ್‌ಗೂ ಸಂಬಂಧ

ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಕಂಡು ಬರುವ ಮಂಡಿ ನೋವಿಗೂ, ಶೌಚಾಲಯಕ್ಕೂ ಸಂಬಂಧವಿ ದೆ. ಬಹುಪಾಲು ಮಹಿಳೆಯರಿಗೆ ‘ಕಮೋಡ್’ ಉಪಯೋಗಿಸಿ ಎಂದಾಕ್ಷಣ ‘ಅಯ್ಯೋ ಅದರಲ್ಲಿ ಕುಳಿತರೆ ನನಗೆ ಆಗೋದೇ ಇಲ್ಲ ಡಾಕ್ಟ್ರೇ’ ಎಂದು ಬೇಸರ ಪಡುತ್ತಾರೆ. ಮಂಡಿನೋವಿನಿಂದ ನರಳುವುದನ್ನು ಮುಂದುವರೆಸುತ್ತಾರೆ.

ಇಲ್ಲಿ ನಾವು  ಗಮನಿಸಬೇಕಾದ್ದು ಬೇರೆಲ್ಲಾ ಬೆಳೆಸಿಕೊಳ್ಳಬಹುದಾದ ಬಿಡಬಹುದಾದ ಅಭ್ಯಾಸಗಳಂತೆ ಶೌಚವೂ ಒಂದು ಅಭ್ಯಾಸ. ಅದನ್ನೂ ಬದಲಿಸುವುದು ಸಾಧ್ಯ. ‘ಉರಿಮೂತ್ರ’ ‘ಹೀಟು’ ‘ಬಲು ಉಷ್ಣವಾಗಿ ಬಿಟ್ಟಿದೆ’ ಎಂದು ವೈದ್ಯರಲ್ಲಿ ಮತ್ತೆ ಮತ್ತೆ ಓಡುವ ಮಹಿಳೆಯರಿಗೆ ನಿಜವಾಗಿ ಬೇಕಾದ್ದು ಮಾತ್ರೆಯಲ್ಲ, ಆ್ಯಂಟಿಬಯಾಟಕ್ ಅಲ್ಲ. ಹಾಗೆ ನೋಡಿದರೆ ಬಹುತೇಕ ಮೂತ್ರದ ಸೋಂಕಿ ಬ್ಯಾಕ್ಟೀರಿಯಾಗಳು ‘ಆ್ಯಂಟಿಬಯಾಟಿಕ್ ರೆಸಿಸ್ಟೆಂಟ್’ ಆಗಿಬಿಟ್ಟಿವೆ.

ಅವರಿಗೆ ಬೇಕಾದ್ದು ಸ್ವಚ್ಛ ಕುಡಿಯುವ ನೀರು, ಮೂತ್ರ ವಿಸರ್ಜನೆಯ ಪ್ರಕೃತಿ ಕರೆ ಬಂದಾಗ ಅದನ್ನು ಹಾಗೆಯೇ ತಡೆಹಿಡಿಯದೆ ಮಾಡಲು ಸ್ವಚ್ಛ ಶೌಚಾಲಯ ಮತ್ತು ಅದನ್ನು ಸರಿಯಾಗಿ ಬಳಸುವ ಅವಕಾಶ!

- ಡಾ. ಕೆ ಎಸ್ ಚೈತ್ರಾ 

Latest Videos
Follow Us:
Download App:
  • android
  • ios