Asianet Suvarna News Asianet Suvarna News

ಟ್ವಿಟರ್ ಸ್ಥಳೀಯ ಕಾನೂನು ಪಾಲಿಸಲೇಬೇಕು: ಐಟಿ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ

ಕೇಂದ್ರ ಸರ್ಕಾರ ಹಾಗೂ ಮೈಕ್ರೋಬ್ಲಾಗಿಂಗ್ ದೈತ್ಯ ಕಂಪನಿ ಟ್ವಿಟರ್ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಡಿಜಿಟಲ್ ನಿಯಮಗಳ ಪಾಲನೆ ಸಂಬಂಧ ಈ ಸಂಘರ್ಷ ಉಂಟಾಗಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ ಅವರು ಟ್ವಿಟರ್‌ಗೆ ಎಚ್ಚರಿಕೆ ನೀಡಿದ್ದು, ಸ್ಥಳೀಯ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ.

Twitter has to follow the law of land says Minister Ravishankar Prasad
Author
Bengaluru, First Published Jul 1, 2021, 3:53 PM IST

ಮೈಕ್ರೋಬ್ಲಾಗಿಂಗ್ ದೈತ್ಯ ಟ್ವಿಟರ್ ಮತ್ತು ಕೇಂದ್ರ ಸರ್ಕಾರ ನಡುವಿನ ಸಂಘರ್ಷ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಕಾಪಿರೈಟ್ ನೆಪವೊಡ್ಡಿ ಇತ್ತೀಚೆಗಷ್ಟೇ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆ ಅಕ್ಸೆಸ್ ನಿರಾಕರಿಸಿತ್ತು. ಸಚಿವ ರವಿಶಂಕರ್ ಪ್ರಸಾದ್ ಅವರು ಈಗ ಟ್ವಿಟರ್‌ಗೆ ತಿರುಗೇಟು ನೀಡಿದ್ದು, ಭಾರತದಲ್ಲಿ ಕಾರ್ಯಾಚರಣೆ ಮಾಡುವ ಟ್ವಿಟರ್ ಸ್ಥಳೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಇಂಡಿಯಾ ಗ್ಲೋಬಲ್ ಫೋರಮ್‌ನಲ್ಲಿ ಮಾತನಾಡುತ್ತಿದ್ದ ಭಾರತದ ಐಟಿ ಸಚಿವ ರವಿಶಂಕರ ಪ್ರಸಾದ್ ಅವರು, ಅಮೆರಿಕದ ಕಾಪಿರೈಟ್ ಕಾನೂನು ಮುಂದಿಟ್ಟುಕೊಂಡು ತಾತ್ಕಾಲಿಕವಾಗಿ ನನ್ನ ಖಾತೆಯನ್ನು ಬ್ಲಾಕ್ ಮಾಡುವುದಾದರೆ, ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಅದು ಸ್ಥಳೀಯ ಕಾನೂನನ್ನು ಪಾಲಿಸಲೇಬೇಕಾಗುತ್ತದೆ ಎಂದು ಹೇಳಿದರು.

ಜೆಪಿಜಿ ಫೈಲ್ ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು ಹೇಗೆ?

ನೀವು ಅಮೆರಿಕದ ಡಿಜಿಟಲ್ ಹಕ್ಕುಸ್ವಾಮ್ಯ ಕಾಯ್ದೆಯನ್ನು ಜಾರಿಗೊಳಿಸಲು ಹೊರಟರೆ  ನೀವು ಭಾರತದ ಹಕ್ಕುಸ್ವಾಮ್ಯ ನಿಯಮಗಳ ಬಗ್ಗೆಯೂ ಸಹ ತಿಳಿದಿರಬೇಕು ಎಂದು ರವಿಶಂಕರ್ ಪ್ರಸಾದ್ ಟ್ವಿಟರ್‌ಗೆ ಹೇಳಿದ್ದಾರೆ. ನನ್ನ ಎಲ್ಲ ನಿಲುವು ಅಮೆರಿಕದ ಕಾನೂನು ವ್ಯಾಪ್ತಿಗೆ, ನಿಯಂತ್ರಣಕ್ಕೊಳಪಟ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ದೊಡ್ಡ ಟೆಕ್ ಕಂಪನಿ ಮತ್ತು ಪ್ರಜಾಪ್ರಭುತ್ವದ ಪಾತ್ರವನ್ನು ಸಂತೋಷದಿಂದ ಸಂಯೋಜಿಸಲು ನಾವು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ರವಿಶಂಕರ್ ಹೇಳಿದರು.

ಸೋಷಿಯಲ್ ಮೀಡಿಯಾ ಕಂಪನಿಗಳು ಭಾರತದಲ್ಲಿ ತಮ್ಮ ವ್ಯಾಪಾರ ವಹಿವಾಟು ಮಾಡಲು ಸ್ವತಂತ್ರವಾಗಿವೆ. ಆದರೆ, ಈ ಕಂಪನಿಗಳು ಭಾರತೀಯ ಸಂವಿಧಾನ ಮತ್ತು ಕಾನೂನುಗಳಿಗೆ ಬದ್ಧವಾಗಿರಬೇಕಾಗುತ್ತದೆ.  ಭಾರತದಲ್ಲಿ ಸೋಷಿಯಲ್ ಮೀಡಿಯಾದ ವೇದಿಕೆಗಳಲ್ಲಿ ಸಂತ್ರಸ್ತರ ಹಕ್ಕುಗಳ ದುರುಪಯೋಗವಾದರೆ ಅದಕ್ಕೆ ಕಂಪನಿಗಳ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ಪ್ರಸಾದ್ ಹೇಳಿದ್ದಾರೆ.

ಸರ್ಕಾರಿ ಸಂಸ್ಥೆಗಳು ಬಳಸುವ Wickr ಮೆಸೆಜಿಂಗ್ ಆ್ಯಪ್ ಖರೀದಿಸಿದ ಅಮೆಜಾನ್

ಪ್ರಜಾಪ್ರಭುತ್ವ ಉಳಿಯಬೇಕಾದರೆ ತಪ್ಪು ಮಾಹಿತಿ, ಫೇಕ್ ನ್ಯೂಸ್, ಇತ್ಯಾದಿ ಸಂಗತಿಗಳು ಸವಾಲುಗಳನ್ನು ಒಡ್ಡುತ್ತಿವೆ. ನಾನು ಸೆನ್ಸಾರ್ ಪರವಾಗಿಲ್ಲ. ಆದರೆ, ಈ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ನೆಲೆಯನ್ನು ಪ್ರಜಾಪ್ರಭುತ್ವದಲ್ಲಿ ಕಂಡುಕೊಳ್ಳಬೇಕಾಗುತ್ತದೆ. ದೊಡ್ಡ ಕಂಪನಿಗಳು ಇಲ್ಲಿ ವ್ಯಾಪಾರ ಮಾಡುತ್ತವೆ, ಉತ್ತಮ ಆದಾಯ ಪಡೆದುಕೊಳ್ಳುತ್ತವೆ, ಲಾಭವನ್ನು ಪೇರಿಸುತ್ತವೆ. ಹಾಗೆಯೇ ಹೊಣೆಗಾರಿಕೆಯನ್ನು ಹೊರಬೇಕು. ಸ್ಥಳೀಯ ಕಾನೂನುಗಳನ್ನು ಪಾಲಿಸಿದಾಗಲೇ ಮಾತ್ರವೇ ಇದು ಸಾಧ್ಯವಾಗುತ್ತದೆ ಎಂದು ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟರು.

ಹೊಸ ಡಿಜಿಟಲ್ ನಿಯಮಗಳ ಪಾಲನೆ ಸಂಬಂಧ ಟ್ವಿಟರ್ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿ ಮುಂದುವರಿದಿದೆ. ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಮುಖ್ಯ ಕುಂದುಕೊರತೆ ಅಧಿಕಾರಿಯ ನೇಮಕ ವಿಷಯದಲ್ಲಿ ವಿವಾದ ಉಂಟಾಗಿದೆ. ಟ್ವಿಟರ್ ನೇಮಕ ಮಾಡಿದ್ದ ಅಧಿಕಾರಿಯೊಬ್ಬರು ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದರು. 

ಒಂದೊಮ್ಮೆ ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ನಿಯಮಗಳ ಪಾಲನೆ ಸಾಧ್ಯವಾಗದಿದ್ದರೆ ಕಾನೂನು ರಕ್ಷಣೆಯನ್ನು ನೀಡಲಾಗುವುದಿಲ್ಲ. ಈಗಾಗಲೇ ಟ್ವಿಟರ್‌ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಹಾಗಾಗಿ, ಮೂರನೇ ವ್ಯಕ್ತಿಯ ಯಾವುದೇ ರೀತಿಯ ಕಂಟೆಂಟ್‌ಗೆ ಈಗ ಕಂಪನಿಯು ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ. ಟ್ವಿಟರ್ ಮಾತ್ರವಲ್ಲದೇ ಫೇಸ್‌ಬುಕ್, ಗೂಗಲ್‌ ಸೇರಿದಂತೆ ಎಲ್ಲ ಟೆಕ್‌ ಕಂಪನಿಗಳು, ಸೋಷಿಯಲ್ ಮೀಡಿಯಾ ಕಂಪನಿಗಳು ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ. 

ರಿಯಲ್‌ಮಿ ಸಿ11 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇವಲ 6,999 ರೂ.

ಇತ್ತೀಚೆಗೆ ಟ್ವಿಟರ್ ಕೂಡ ತನ್ನದೇ ಕಮ್ಯುನಿಟಿ ಸ್ಟ್ರ್ಯಾಂಡರ್ಡ್‌ ಕಾರಣ ನೀಡಿ ಹಲವು ಗಣ್ಯರಿಗೆ ನೀಡಿದ್ದ  ಬ್ಲೂಟಿಕ್ ಮಾರ್ಕ್ ತೆಗೆದು ಹಾಕಿತ್ತು. ಅಲ್ಲದೇ, ಕಾಪಿರೈಟ್ ಉಲ್ಲಂಘನೆಯ ಆರೋಪದ ಮೇರೆಗೆ ಐಟಿ ಸಚಿವ ರವಿಶಂಕರ್ ಪ್ರಸಾದ ಅವರ ಖಾತೆಗೆ ತಾತ್ಕಾಲಿಕವಾಗಿ ಅಕ್ಸೆಸ್ ನಿರಾಕರಿಸಲಾಗಿತ್ತು. ಹೀಗೆ, ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಈ ಸಂಘರ್ಷದ ಸಾಲಿಗೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಸೇರ್ಪಡೆಯಾಗಿದೆ. ಟ್ವಿಟರ್ ತನ್ನ ವೇದಿಕೆಯಲ್ಲಿರುವ ಪೋರ್ನೊಗ್ರಫಿಕ್ ಮತ್ತು  ಕಂಟೆಂಟ್ ಅನ್ನು ತೆಗೆದು ಹಾಕಬೇಕೆಂದು ತಾಕೀತು ಮಾಡಿದೆ. 

Follow Us:
Download App:
  • android
  • ios