Asianet Suvarna News Asianet Suvarna News

ನಿತ್ಯ 3 ಜಿಬಿ ಡೇಟಾ; ಜಿಯೋ ನಾಗಾಲೋಟ

ಈಗಂತೂ ಹಲವು ಕಾರಣಗಳಿಗೆ ಡೇಟಾ ಖಾಲಿಯಾಗುತ್ತಿದೆ. ವರ್ಕ್ ಫ್ರಂ ಹೋಂ ಒಂದು ಕಡೆಯಾದರೆ, ಮನೆಯಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ವಾಟ್ಸ್‌ಆ್ಯಪ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಹೊಸ ಹೊಸ ಆ್ಯಪ್‌ಗಳೂ ಹುಟ್ಟಿಕೊಳ್ಳುತ್ತಿವೆ. ಒಮ್ಮೆ ಈ ಆ್ಯಪ್‌ಗಳ ಒಳ ಹೊಕ್ಕರೆ ಸಾಕು ಹೊರ ಬರುವ ಹೊತ್ತಿಗೆ ಬಹುತೇಕ ಡೇಟಾವನ್ನು ಅವುಗಳು ತಿಂದು ತೇಗಿಬಿಟ್ಟಿರುತ್ತವೆ. ಹೀಗಾಗಿ ಯಾವುದಕ್ಕೆ ಎಷ್ಟು ಬಳಸಬೇಕು ಎಂಬುದೇ ಗೊತ್ತಾಗುವುದಿಲ್ಲ. ಇಂತಹ ಸಂದರ್ಭದಲ್ಲಿಯೇ ಇಂತಹ ಆಫರ್‌ಗಳು ಹೆಚ್ಚು ಗಮನಸೆಳೆಯುತ್ತಿವೆ. ಇದನ್ನೇ ಈಗ ಜಿಯೋ ಕ್ಯಾಚ್ ಮಾಡಿಕೊಂಡು ಡೇಟಾ ಎಂಬ ಮ್ಯಾಜ್ ಫಿಕ್ಸ್ ಮಾಡಿಕೊಳ್ಳಲು ಹೊರಟಿದೆ. ಏನಿದು ಪ್ಲ್ಯಾನ್ ನೋಡೋಣ ಬನ್ನಿ…

Jio announces 3GB Data per day new plan
Author
Bangalore, First Published May 18, 2020, 4:35 PM IST

ಈ ಕೊರೋನಾ ಬಂದ ಮೇಲೆ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಲಾಕ್‌ಡೌನ್ ಪರಿಚಯವಾಯಿತು, ಸೀಲ್‌ಡೌನ್ ಕೇಳಿಬಂತು, ಕೆಲವು ಕಡೆ ಕೆಲಸ ನಿಂತಿತು, ಮತ್ತೆ ಕೆಲವು ಕಡೆ ವರ್ಕ್ ಫ್ರಂ ಹೋಂ ಬಂದು ನಿರಂತರವಾಗಿ ಕೆಲಸಗಳೂ ನಡೆದವು. ಆದರೆ, ಹೀಗೆ ಮನೆಯಲ್ಲಿ ಕುಳಿತು ಕೆಲಸ ಮಾಡುವುದಕ್ಕೂ, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಚೇರಿಯಲ್ಲಾದರೆ ಇಂಟರ್ನೆಟ್ ಬಳಕೆ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳಬೇಕಿರಲಿಲ್ಲ. ಆದರೆ, ಮನೆಯಲ್ಲಿ..? ಪ್ರತಿ ಎಂಬಿಗೂ ಲೆಕ್ಕ ಹಾಕಿ ಕೆಲಸ ಮಾಡಬೇಕಾದ ಪರಿಸ್ಥಿತಿ. ಹಾಗಾಗಿ ಜಿಬಿ ಉಳಿದುಕೊಂಡರೆ ಜೇಬು ಉಳಿದಂತೆ ಎಂಬ ಗ್ರಾಹಕರ ಮನದಾಸೆಗೆ ರಿಲಾಯನ್ಸ್ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆ ಸಾಥ್ ನೀಡಿದೆ. ಒಳ್ಳೇ ಆಫರ್ ಅನ್ನೂ ಕೊಟ್ಟಿದೆ.

ಹೌದು. ಈಗ ಮನೆಯೇ ಕಚೇರಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್ ಬಳಕೆ ಅತಿಯಾಗಿ ಬೇಕಾಗುತ್ತದೆ. ಎಷ್ಟಿದ್ದರೂ ಸಾಲದು ಎಂಬ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ ಒಂದಾದ ಮೇಲೊಂದರಂತೆ ವರ್ಕ್ ಫ್ರಂ ಹೋಂ ಆಫರ್‌ಗಳನ್ನು ಜಿಯೋ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. 

ಇದನ್ನು ಓದಿ: ಲಾಕ್‌ಡೌನ್ ಅವಧಿಯಲ್ಲಿ ಗೂಗಲ್ ಸರ್ಚ್ ಟ್ರೆಂಡ್‌ಗಳಿವು!

ದಿನಕ್ಕೆ 3 ಜಿಬಿ ಕೊಡುಗೆ
ತೀರಾ ವಾರದ ಹಿಂದಷ್ಟೇ ವರ್ಕ್ ಫ್ರಂ ಹೋಂನ ವಾರ್ಷಿಕ ಪ್ಲಾನ್ ಅನ್ನು ನೀಡಿ ಭರ್ಜರಿ ಸುದ್ದಿಯಾಗಿತ್ತು. ಇದು ಸಾಕಷ್ಟು ಗ್ರಾಹಕರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿತ್ತು. ಈಗ ಮತ್ತದೇ ಪ್ಲಾನ್‌ಗೆ ಮೊರೆ ಹೋಗಿದೆ. ಅಂದರೆ, 3 ತಿಂಗಳ ಕೊಡುಗೆ ಕೊಟ್ಟಿದ್ದು, ಈ ಪ್ಲಾನ್ ಅನ್ವಯ ದಿನಕ್ಕೆ 3 ಜಿಬಿ ಹೈಸ್ಪೀಡ್ ಡೇಟಾ ಲಭ್ಯವಾಗುತ್ತದೆ. ಇದಕ್ಕೆ 999 ರೂಪಾಯಿಯನ್ನು ಕಟ್ಟಿದರೆ ಸಾಕು 84 ದಿನಗಳವರೆಗೆ ಇದನ್ನು ಬಳಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಏನೇನಿದೆ ಸೌಲಭ್ಯ?
ಹೊಸ ವರ್ಕ್ ಫ್ರಂ ಹೋಂನಲ್ಲಿ ಜಿಯೋದಿಂದ ಜಿಯೋ ಮತ್ತು ಲ್ಯಾಂಡ್‌ಲೈನ್‌ಗೆ ಉಚಿತ ಹಾಗೂ ಅನಿಯಮಿತ ಕರೆ ಮಾಡಬಹುದಾಗಿದೆ. ಆದರೆ, ಇಲ್ಲೊಂದು ಷರತ್ತಿದೆ. ಜಿಯೋದಿಂದ ಉಳಿದ ನೆಟ್‌ವರ್ಕ್‌ಗಳಿಗೆ ಕರೆ ಮಾಡಬೇಕೆಂದಿದ್ದರೆ ಸೀಮಿತ ಅವಧಿಯನ್ನು ಉಚಿತವಾಗಿ ನೀಡಲಾಗಿದೆ. ಅಂದರೆ, ಒಟ್ಟಾರೆ ಈ 84 ದಿನಗಳ ಅವಧಿಯಲ್ಲಿ ಇತರ ನೆಟ್‌ವರ್ಕ್‌ಗೆ ಕರೆ ಮಾಡಬೇಕೆಂದರೆ 3 ಸಾವಿರ ನಿಮಿಷಗಳು ಮಾತ್ರ ಉಚಿತವಾಗಿ ನೀಡಲಾಗಿದೆ. ಆದರೆ, ದಿನಕ್ಕೆ 100 ಎಸ್‌ಎಂ‌ಎಸ್ ಉಚಿತವಾಗಿದೆ. 

ಇದನ್ನು ಓದಿ: ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ

ಹೈಸ್ಪೀಡ್ ಡೇಟಾ
ಇಲ್ಲಿ ದಿನಕ್ಕೆ ನೀಡಲಾಗಿರುವ 3ಜಿಬಿಯನ್ನು ಹೈಸ್ಪೀಡ್ ಡೇಟಾದೊಂದಿಗೆ ಬಳಸಬಹುದಾಗಿದೆ. ಈ ಡೇಟಾ ಖಾಲಿಯಾದರೆ 64 ಕೆಬಿಪಿಎಸ್‌ನಲ್ಲಿ ಅನಿಯಮಿತ ಡೇಟಾ ಲಭ್ಯವಿದೆ. ಅಲ್ಲದೆ, ಜಿಯೋ ಆ್ಯಪ್‌ಗಳನ್ನು ಉಚಿತವಾಗಿ ಬಳಕೆ ಮಾಡಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಹೆಚ್ಚುವರಿ ಬೇಕಿದ್ದರೆ ರಿಚಾರ್ಜ್ ಅವಕಾಶ
ಡಿಜಿಟಲ್ ರಿಚಾರ್ಜ್‌ಗೆ ಅವಕಾಶವಿದ್ದು, ಗ್ರಾಹಕರು ಮೈಜಿಯೊ ಅಪ್ಲಿಕೇಶನ್, ಜಿಯೋ.ಕಾಮ್ ವೆಬ್‌ಸೈಟ್ ಇಲ್ಲವೇ ಇ-ವಾಲೆಟ್‌ಗಳು ಹಾಗೂ ಫೋನ್‌ಪೇ, ಪೇಟಿಎಂ, ಜಿಪೇ, ಅಮೆಜಾನ್ ಪೇ, ಮೊಬಿಕ್ವಿಕ್,  ಫ್ರೀಚಾರ್ಜ್ ಸೇರಿದಂತೆ ಅನೇಕ ಆ್ಯಪ್‌ಗಳ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. 

ಇದನ್ನು ಓದಿ: ಕೊರೋನಾ ಫೇಕ್‌ನ್ಯೂಸ್ ಗೆ ವಾಟ್ಸ್ಆ್ಯಪ್ ಚಾಟ್‌ಬಾಟ್ ಬ್ರೇಕ್!

ವಾರ್ಷಿಕ ಪ್ಲಾನ್ ಏನಿದೆ?
ವಾರದ ಹಿಂದಷ್ಟೇ ಘೋಷಿಸಿದ್ದ ಜಿಯೋ ವರ್ಕ್ ಫ್ರಂ ಹೋಂ ವಾರ್ಷಿಕ್ ಪ್ಲಾನ್‌ನಲ್ಲಿ 2399ಕ್ಕೆ ನಿತ್ಯ 2 ಜಿಬಿ ಹೈಸ್ಪೀಡ್ ಡೇಟಾ ಇರುವುದಲ್ಲದೆ, 365 ದಿನಗಳವರೆಗೆ ಬಳಸಬಹುದಾಗಿದೆ. ತಿಂಗಳ ಲೆಕ್ಕವನ್ನು ಹಾಕುವುದಾದರೆ ಇದು ಅತಿ ಅಗ್ಗ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಗ್ರಾಹಕರು ಸರಾಸರಿ ಇದಕ್ಕೋಸ್ಕರ ಪ್ರತಿ ತಿಂಗಳು 200 ರೂಪಾಯಿಯನ್ನು ಮಾತ್ರ ನೀಡಿದಂತಾಗುತ್ತದೆ. ಇನ್ನೊಂದು ಪ್ಲಾನ್‌ನಲ್ಲಿ 336 ದಿನಗಳ ವ್ಯಾಲಿಡಿಟಿ ನೀಡಿರುವ ಜಿಯೋ ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾವನ್ನು 2,121 ರೂಪಾಯಿಗೆ ನೀಡಿತ್ತು. 

Follow Us:
Download App:
  • android
  • ios