ರೈತ ಪ್ರತಿಭಟನೆಯಲ್ಲಿ ಜಿಯೋ ಸಿಮ್ ಸದ್ದು ಮಾಡುತ್ತಿದೆ. ಕೃಷಿ ಕಾಯ್ದೆ ಬದಲು ಇದೀಗ ರೈತರು ಬಾಯ್ಕಾಟ್ ಜಿಯೋ, ಪೋರ್ಟ್ ಜಿಯೋ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಎಲ್ಲರೂ ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು(ಡಿ.15): ಟೆಲಿಕಾಂ ಆಪರೇಟರ್ ಗಳಾದ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ನಿಂದ (VIL) ರಿಲಯನ್ಸ್ ಜಿಯೋ ವಿರುದ್ಧ "ಕೆಟ್ಟ ಹಾಗೂ ವಿಭಜಕ ಪ್ರಚಾರ" ನಡೆಯುತ್ತಿದೆ. ಜಿಯೋದಿಂದ ಏರ್ ಟೆಲ್ ಅಥವಾ ವೊಡಾಫೋನ್ ಐಡಿಯಾ ನೆಟ್ ವರ್ಕ್ ಗೆ ಬದಲಾದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಜಿಯೋ ಆರೋಪ ಮಾಡಿದೆ.
ಪ್ರತಿಭಟನಾ ರೈತರಿಂದ ಜಿಯೋ ಸಿಮ್, ರಿಲಾಯನ್ಸ್,ಅದಾನಿ ಉತ್ಪನ್ನ ಬಹಿಷ್ಕಾರ!
ಭಾರತದಲ್ಲಿನ ದೂರಸಂಪರ್ಕ ನಿಯಂತ್ರಕ ಸಂಸ್ಥೆ 'ಟ್ರಾಯ್'ಗೆ ಈ ಬಗ್ಗೆ ಪತ್ರ ಬರೆದಿದ್ದು, ಈ ಎರಡೂ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಲಾಗಿದೆ. ಇಂಥ ನಡವಳಿಕೆಯಿಂದ ಜಿಯೋ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯೇ ಆತಂಕಕ್ಕೆ ಸಿಲುಕಿದಂತೆ ಆಗುತ್ತದೆ ಎಂದು ತಿಳಿಸಲಾಗಿದೆ.
ಇನ್ನು ಜಿಯೋದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ, ದೂರು "ಆಧಾರರಹಿತ" ಎಂದು ಆರೋಪವನ್ನು ನಿರಾಕರಿಸಿವೆ.
ರೈತರಿಗೆ ಅಂಬಾನಿ-ಜಿಯೋ ಮೇಲೆ ಸಿಟ್ಯಾಕೆ? ಕೃಷಿ ಕಾಯ್ದೆಗಿಂತ ಬಾಯ್ಕಾಟ್ ಅಭಿಯಾನ ಬಲು ಜೋರು!
ಈ ಹಿಂದೆ ಕೂಡ, ರೈತರ ಪ್ರತಿಭಟನೆಯನ್ನು ಅನುಕೂಲಕ್ಕೆ ಬಳಸಿಕೊಳ್ಳುವ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾದ "ಅನೈತಿಕ ಮತ್ತು ಸ್ಪರ್ಧಾ ವಿರೋಧಿ ಮೊಬೈಲ್ ಪೋರ್ಟಬಿಲಿಟಿ ಅಭಿಯಾನ"ದ ಬಗ್ಗೆ ಟ್ರಾಯ್ ಗೆ ಲಿಖಿತ ದೂರನ್ನು ನೀಡಿದ್ದಾಗಿ ರಿಲಯನ್ಸ್ ಜಿಯೋ ತಿಳಿಸಿದೆ.
ಏರ್ ಟೆಲ್ ಮತ್ತು ವಿಐಎಲ್ ತನ್ನ ಸಿಬ್ಬಂದಿ, ಏಜೆಂಟರು ಮತ್ತು ರೀಟೇಲರ್ ಗಳ ಮೂಲಕ ದುಷ್ಟತನದ ಹಾಗೂ ವಿಭಜಕ ಅಭಿಯಾನ ನಡೆಸುತ್ತಿವೆ. ಜಿಯೋದಿಂದ ತಮ್ಮ ಮೊಬೈಲ್ ನೆಟ್ ವರ್ಕ್ ಗೆ ಪೋರ್ಟಬಿಲಿಟಿ ಮಾಡಿಸಿಕೊಂಡರೆ ರೈತರ ಪ್ರತಿಭಟನೆಯನ್ನು ಬೆಂಬಲಿಸಿದಂತಾಗುತ್ತದೆ ಎಂಬ ಪ್ರಚಾರ ನಡೆಸುತ್ತಿವೆ ಎಂದು ಜಿಯೋದ ಈಚಿನ ಪತ್ರದಲ್ಲಿ ತಿಳಿಸಲಾಗಿದೆ.
ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾದ ಹೊಸ ಕೃಷಿ ಕಾನೂನಿನ ವಿರುದ್ಧ ದೆಹಲಿ ಗಡಿಯಲ್ಲಿ ಪಂಜಾಬ್, ಹರ್ಯಾಣ, ಉತ್ತರಪ್ರದೇಶದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರ್ತಿ ಏರ್ ಟೆಲ್ ನಿಂದ ಬರೆದಿರುವ ಪತ್ರದಲ್ಲಿ, ಈ ಆಧಾರರಹಿತವಾದ ಆರೋಪವನ್ನು ನಿರ್ದಿಷ್ಟವಾಗಿ ನಿರಾಕರಿಸುವುದಕ್ಕೆ ಬಯಸುತ್ತೇವೆ. ಕೆಲವು ಪ್ರತಿಸ್ಪರ್ಧಿಗಳು ತಮ್ಮ ಆಧಾರ ರಹಿತವಾದ ಆರೋಪಕ್ಕೆ, ಬೆದರಿಕೆ ತಂತ್ರಕ್ಕೆ, ಯಾವುದೇ ಹಂತಕ್ಕೆ ಹೋಗಲು ಸಿದ್ಧ ಎಂಬುದು ನಮಗೆ ಗೊತ್ತಿದೆ. ನಮ್ಮ ಉದ್ಯಮವನ್ನು ಯಾವಾಗಲೂ ಸನ್ನಡತೆ ಹಾಗೂ ಪಾರದರ್ಶಕವಾಗಿಯೇ ನಡೆಸುತ್ತೇವೆ. ನಾವು ಅದಕ್ಕಾಗಿಯೇ ಹೆಸರಾಗಿದ್ದೇವೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದೆ.
ವಿಐಎಲ್ ವಕ್ತಾರ ಮಾತನಾಡಿ, "ನಮ್ಮ ಗೌರವಕ್ಕೆ ಚ್ಯುತಿ ತರುವುದಕ್ಕೆ ಇಂಥ ಆಧಾರರಹಿತ ಆರೋಪ ಮಾಡಲಾಗುತ್ತಿದೆ. ನಮ್ಮ ಬಗ್ಗೆ ಆಡುತ್ತಿರುವ ಇಂಥ ಬೇಜವಾಬ್ದಾರಿ ಮಾತುಗಳನ್ನು ಪ್ರಬಲವಾಗಿ ನಿರಾಕರಿಸುತ್ತೇವೆ," ಎಂದಿದ್ದಾರೆ.
ಇನ್ನು ಜಿಯೋ ವಿರುದ್ಧದ ಅಭಿಯಾನ ಕೇವಲ ಉತ್ತರದ ರಾಜ್ಯಗಳಿಗೆ ಸೀಮಿತವಾಗಿಲ್ಲ. ಎಂಎನ್ ಪಿ ಮೂಲಕ ಗ್ರಾಹಕರನ್ನು ಪಡೆಯಲು ದೇಶದಾದ್ಯಂತ ಇಂಥ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಜಿಯೋ ಆರೋಪಿಸಿದೆ.
ಏರ್ ಟೆಲ್ ಮತ್ತು ವಿಐಎಲ್ ಅಭಿಯಾನದ ಬಗ್ಗೆ ಸಂದೇಶಗಳನ್ನು ನೋಡಿ, ಜಿಯೋದಿಂದ ದೊಡ್ದ ಸಂಖ್ಯೆಯಲ್ಲಿ ಹೊರ ಹೋಗುವುದಕ್ಕೆ ಗ್ರಾಹಕರು ಮನವಿ ಸಲ್ಲಿಸುತ್ತಲೇ ಇದ್ದಾರೆ ಎಂದು ಜಿಯೋ ಹೇಳಿದೆ.
1999ರ ಟೆಲಿಕಾಂ ದರ ಆದೇಶದ ಅಗತ್ಯಗಳನ್ನು ಏರ್ ಟೆಲ್ ಮತ್ತು ವಿಐಎಲ್ ಉಲ್ಲಂಘಿಸಿವೆ ಎಂದು ಜಿಯೋ ಹೇಳಿದೆ.
"ತಮ್ಮ ಮಾರಾಟ ತಂಡ ಮತ್ತು ಇತರ ಚಾನೆಲ್ ಸಹಭಾಗಿಗಳ ಮೂಲಕ ರಿಲಯನ್ಸ್ ಜಿಯೋ ವಿರುದ್ಧ ಪ್ರಚೋದಿಸುವಂತೆ ಮಾಡಿದಲ್ಲಿ ಅಂಥ ಕಾನೂನುಬಾಹಿರ ಕ್ರಮಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಏಕೆಂದರೆ ನಮ್ಮ ಸಿಬ್ಬಂದಿ ಹಾಗೂ ಪ್ರಮುಖ ನೆಟ್ ವರ್ಕ್ ಹಾಗೂ ಉದ್ಯಮದ ಆಸ್ತಿಗಳು ಅಪಾಯಕ್ಕೆ ಸಿಲುಕಿಕೊಂಡಂತೆ ಅಗುತ್ತದೆ," ಎಂದು ಜಿಯೋ ಹೇಳಿದೆ.
ನಾಲ್ಕು ವರ್ಷಗಳ ನಂತರ ಭಾರ್ತಿ ಏರ್ ಟೆಲ್ ನ ಹೊಸ ಗ್ರಾಹಕರ ಸಂಖ್ಯೆಯು ಸೆಪ್ಟೆಂಬರ್ ನಲ್ಲಿ ಹೆಚ್ಚಳವಾಗಿದೆ. ಆದರೂ 2016ರ ಸೆಪ್ಟೆಂಬರ್ ನಲ್ಲಿ ಆರಂಭವಾದಾಗಿನಿಂದ ಇಲ್ಲಿಯ ತನಕ ಪ್ರತಿ ತಿಂಗಳ ಗ್ರಾಹಕರ ಸೇರ್ಪಡೆಯಲ್ಲಿ ಜಿಯೋ ಮುಂಚೂಣಿಯಲ್ಲಿದೆ. ವಾಣಿಜ್ಯವಾಗಿ ಕಾರ್ಯ ನಿರ್ವಹಣೆ ಆರಂಭಿಸಿದ ಮೇಲೆ ಜಿಯೋ 15.97 ಮಿಲಿಯನ್ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ.
ಭಾರ್ತಿ ಏರ್ ಟೆಲ್ ಗ್ರಾಹಕರ ಸಂಖ್ಯೆ ಬೆಳವಣಿಗೆ ಸೆಪ್ಟೆಂಬರ್ 2020ರಲ್ಲಿ ನಿವ್ವಳವಾಗಿ 3.77 ಮಿಲಿಯನ್ ಆಗಿದೆ. ಆ ನಂತರ ರಿಲಯನ್ಸ್ ಜಿಯೋ 1.46 ಮಿಲಿಯನ್ ಮತ್ತು BSNLಗೆ 78,454 ಹೊಸ ಗ್ರಾಹಕರು ಸೇರ್ಪಡೆ ಆಗಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 15, 2020, 9:23 PM IST