ಪ್ರತಿಭಟನಾ ರೈತರಿಂದ ಜಿಯೋ ಸಿಮ್, ರಿಲಾಯನ್ಸ್,ಅದಾನಿ ಉತ್ಪನ್ನ ಬಹಿಷ್ಕಾರ!
ಭಾರತ್ ಬಂದ್ ಬಳಿಕ ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಮತ್ತೊಂದು ಸುತ್ತಿನ ಮಾತುಕತೆಗೂ ರೈತರು ಹಿಂದೇಟು ಹಾಕಿದ್ದಾರೆ. ಇತ್ತ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ MSP ಕುರಿತಿ ಲಿಖಿತ ಭರವಸೆ ಮೂಲಕ ಕಳುಹಿಸಿದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದಾರೆ. ಇದರ ಜೊತೆ ರಿಲಾಯನ್ಸ್ ಹಾಗೂ ಅದಾನಿ ಉತ್ಪನ್ನಕ್ಕೆ ಬಹಿಷ್ಕಾರ ಹಾಕಿದ್ದಾರೆ,
ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತಣ್ಣಗಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಡಿಸೆಂಬರ್ 8ರ ಭಾರತ್ ಬಂದ್ ಬಳಿಕ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ರೈತ ಮುಖಂಡರ ಜೊತೆ ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕಳುಹಿಸಿದ ಕನಿಷ್ಠ ಬೆಂಬಲ ಬೆಲೆ(MSP) ಕುರಿತು ಲಿಖಿತ ಭರವಸೆಯನ್ನು ರೈತರು ತಿರಸ್ಕರಿಸಿದ್ದಾರೆ.
ಪ್ರಸ್ತಾವನೆ ತಿರಸ್ಕರಿಸಿ ಸುಮ್ಮನಾಗದ ರೈತರು ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರಿಲಾಯನ್ಸ್ ಹಾಗೂ ಅದಾನಿ ಉತ್ಪನ್ನಗಳಿಗೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಇನ್ನು ಜಿಯೋ ಸಿಮ್ ಕೂಡ ಬಳಸುವುದಿಲ್ಲ ಎಂದಿದ್ದಾರೆ.
ಪ್ರತಿಭಟನಾ ನಿರತ ರೈತರು ತಾವು ಯಾವುದೇ ಕಾರಣಕ್ಕೂ ಜಿಯೋ ಸಿಮ್ ಬಳಸುವುದಿಲ್ಲ.. ರಿಲಾಯನ್ಸ್ ಹಾಗೂ ಅದಾನಿಗೆ ನೆರವಾಗೋ ಕಾಯ್ದೆಯಿಂದ ರೈತರಿಗೇನು ಪ್ರಯೋಜನವಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಲಾಯನ್ಸ್ ಹಾಗೂ ಅದಾನಿ ಉತ್ಪನ್ನಗಳನ್ನು ದೇಶದ ಜನ ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ದೆಹಲಿ ಹೊರವಲಯದ ಸಿಂಗು ಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 6 ಸುತ್ತಿನ ಮಾತುಕತೆಗಳಲ್ಲಿ ನಮ್ಮ ಬೇಡಿಕೆಯನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ಮಸೂದೆ ಹಿಂಪಡೆಯಲು ಕೇಂದ್ರ ಮುಂದಾಗಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ನಾವು ಪ್ರತಿಭಟನೆಯನ್ನು ಮತ್ತಷ್ಟು ಹೆಚ್ಚಿಸಿದ್ದೇವೆ. ಡಿಸೆಂಬರ್ 12 ರಂದು ಡೆಹಲಿ ಹಾಗೂ ಆಗ್ರ ಹೆದ್ದಾರಿಗಳನ್ನು ನಿರ್ಭಂಧಿಸಲು ಪ್ರತಿಭಟನಾ ನಿರತ ರೈತರು ನಿರ್ಧರಿಸಿದ್ದಾರೆ.
ಟೋಲ್ ಪ್ಲಾಜಾಗಳಲ್ಲಿ ಯಾವುದೇ ಶುಲ್ಕ ಪಾವತಿಸುವುದಿಲ್ಲ ಎಂದಿದೆ. ಕೇಂದ್ರ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಯಲ್ಲಿ ಬೇಡಿಕೆಗಳನ್ನು ಪರಿಹರಿಸುವುದಾಗಿ ಹೇಳಿದೆ. ಆದರೆ ಕೃಷಿ ಮಸೂದೆ ರದ್ದತಿ ಕುರಿತು ಯಾವುದೇ ಲಿಖಿತ ಭರವಸೆ ನೀಡಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.
ಕೇಂದ್ರ 3 ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ನವೆಂಬರ್ 26ರಂದು ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಇದುವರೆಗೆ ಸತತ ಪ್ರತಿಭಟನೆಯಲ್ಲಿ ತೊಡಗಿರುವ ರೈತರು ಡಿಸೆಂಬರ್ 8 ರಂದು ಭಾರತ್ ಬಂದ್ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು.