ಇದು ಕೊರೋನಾ ಕಾಲ, ಸಾಮಾಜಿಕ ಅಂತರದಿಂದ ಹಿಡಿದು, ಮಾಸ್ಕ್ ಧರಿಸುವುದು, ಕೈಯನ್ನು ಆಗಾಗ ಸಾಬೂನಿನಿಂದ ಸ್ವಚ್ಛಗೊಳಿಸಿಕೊಳ್ಳುತ್ತಲೂ ಇರಬೇಕು. ಅದಾಗದಿದ್ದರೆ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಇಷ್ಟೆಲ್ಲ ಮಾಡಿಯೂ ಸಹ ಜೀವನ ನಿರ್ವಹಣೆಗೆ ಉದ್ಯೋಗಕ್ಕಾಗಿ ಹೊರಗೆ ಹೋಗಲೇಬೇಕು, ಇಲ್ಲವೇ ಅಂಗಡಿಗಳಿಗೆ ಮನೆಗೆ ಬೇಕಾದ ವಸ್ತುಗಳನ್ನು ತರಲಾದರೂ ಹೋಗಬೇಕು. ಹೀಗಾಗಿ ಸಣ್ಣ ಸೀನು, ಕೆಮ್ಮು, ಜ್ವರ ಬಂದರೆ ಭಯ ಹೆಚ್ಚಾಗುತ್ತದೆ. ಆದರೆ, ಎಲ್ಲಿ ಪರೀಕ್ಷೆ ಮಾಡಿಸಿಕೊಳ್ಳೋದು..? ಕೊರೋನಾ ಪರೀಕ್ಷಾ ಕೇಂದ್ರ ಎಲ್ಲಿದೆ..? ಎಂಬ ಗೊಂದಲ ಮೂಡುವುದು ಸಹಜ, ಹೊರಗಡೆ ವಿಚಾರಿಸಲೂ ಅಂಜಿಕೆ, ಒಂದು ವೇಳೆ ಈ ಲಕ್ಷಣಗಳು ಕೊರೋನಾ ಅಲ್ಲದಿದ್ದರೂ ನಮ್ಮನ್ನು ಹೊರಗಿಟ್ಟರೆ ಎಂಬ ಅಂಜಿಕೆ. ಇದಕ್ಕಾಗಿಯೇ ಈಗ ಗೂಗಲ್ ಪರಿಹಾರವನ್ನು ಸೂಚಿಸಿದೆ.

ಹೌದು. ನಿಮ್ಮ ಮನೆಯ ಸಮೀಪದಲ್ಲಿ ಕೊರೋನಾ ಸೋಂಕು ಪತ್ತೆ ಕೇಂದ್ರ ಎಲ್ಲಿದೆ ಎಂಬ ಬಗ್ಗೆ ಗೂಗಲ್ ನಿಮಗೆ ತಿಳಿಸುತ್ತದೆ. ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಹಾಗೂ ಗೂಗಲ್ ಮ್ಯಾಪ್ ನಿಮಗೆ ಕೊರೋನಾ ಟೆಸ್ಟಿಂಗ್ ಸೆಂಟರ್‌ನ ದಾರಿ ತೋರಿಸುತ್ತದೆ. ಈ ಬಗ್ಗೆ ಸ್ವತಃ ಗೂಗಲ್ ತನ್ನ ಟ್ವಿಟ್ಟರ್ ಅಕೌಂಟ್ ಮೂಲಕ ಹೇಳಿಕೊಂಡಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹಾಗೂ ಮೈ ಗೌವರ್ನಮೆಂಟ್ (MyGov) ಸಹಯೋಗದೊಂದಿಗೆ ಈ ನೂತನ ಸೇವೆಯನ್ನು ನೀಡುತ್ತಿರುವುದಾಗಿ ಪ್ರಕಟಿಸಿದೆ. 

ಇದನ್ನು ಓದಿ: ಈ 36 ಕ್ಯಾಮೆರಾ ಆ್ಯಪ್ ಅನ್ನು ಗೂಗಲ್ ಡಿಲೀಟ್ ಮಾಡಿಯಾಯ್ತು.., ನೀವು ಡಿಲೀಟ್ ಮಾಡಿಬಿಡಿ…...

300 ನಗರ 700 ಪರೀಕ್ಷಾ ಕೇಂದ್ರ
ಈ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಗೂಗಲ್, ಸುಮಾರು 300ಕ್ಕೂ ಹೆಚ್ಚು ನಗರಗಳಲ್ಲಿನ 700ಕ್ಕೂ ಹೆಚ್ಚು ಕೊರೋನಾ ಪರೀಕ್ಷಾ ಕೇಂದ್ರಗಳ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಲ್ಲದೆ, ಅವುಗಳ ವಿವರವನ್ನು ನೀಡುತ್ತಿದೆ. ಬಳಕೆದಾರರು ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಹಾಗೂ ಗೂಗಲ್ ಮ್ಯಾಪ್ ಗಳ ಮೂಲಕ ಸಮೀಪದ ಕೊರೋನಾ ಟೆಸ್ಟಿಂಗ್ ಸೆಂಟರ್‌ನ ಮಾಹಿತಿಯನ್ನು ಪಡೆಯಬಹುದಾಗಿದೆ. 

9 ಭಾಷೆಗಳಲ್ಲಿ ಸೇವೆ ಲಭ್ಯ
ಟೆಕ್ ಲೋಕದ ದೈತ್ಯ ಗೂಗಲ್ ಈಗ ಎಲ್ಲ ಭಾಷೆಗಳಿಗೂ ಪ್ರಾಧಾನ್ಯತೆ ನೀಡುತ್ತಿದ್ದು, ಸದ್ಯಕ್ಕೆ ಇಂಗ್ಲಿಷ್ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಕೊರೋನಾ ಟೆಸ್ಟಿಂಗ್ ಕೇಂದ್ರಗಳ ಮಾಹಿತಿಯನ್ನು ನೀಡುತ್ತಿದೆ. ಉಳಿದ ಪ್ರಾದೇಶಿಕ ಭಾಷೆಗಳಾದ ಹಿಂದಿ, ಕನ್ನಡ, ಬೆಂಗಾಳಿ, ತೆಲುಗು, ತಮಿಳು, ಮಲೆಯಾಳಿ, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲಿ ಬಳಕೆದಾರರು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

ಇದನ್ನು ಓದಿ: ಗೂಗಲ್ ಸರ್ಚ್‌‌‌ನಲ್ಲಿ ಕಾಣತ್ತೆ ನಿಮ್ಮ ವಾಟ್ಸ್ಆ್ಯಪ್ ನಂಬರ್!

ಕೊರೋನಾ ಎಂದು ಟೈಪ್ ಮಾಡಿದರೆ ಮಾಹಿತಿ
ಇಲ್ಲಿ ಹುಡುಕಾಡಲು ಹೆಚ್ಚಾಗಿ ತೊಂದರೆ ಪಟ್ಟುಕೊಳ್ಳುವುದೇನೂ ಬೇಡ. ಗೂಗಲ್ ಸರ್ಚ್ ನಲ್ಲಿ ಕೊರೋನಾ ಎಂದು ಟೈಪ್ ಮಾಡಿದರೆ ಸಾಕು ಅದಕ್ಕೆ ಸಂಬಂಧಿಸಿ ಎಲ್ಲ ವಿಷಯಗಳನ್ನು ತೋರಿಸಿಬಿಡುತ್ತದೆ. ಅದರ ಜೊತೆಗೇ ಟ್ಯಾಬ್ ಲೇಬಲ್ ಅಡಿ ಟೆಸ್ಟಿಂಗ್ ಪೇಜ್ ಕಾಣಿಸುತ್ತದೆ. ಈ ವಿಭಾಗಕ್ಕೆ ಭೇಟಿ ಕೊಟ್ಟರೆ ಹತ್ತಿರ ಇರುವ ಪರೀಕ್ಷಾ ಕೇಂದ್ರ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿ ಹಾಗೂ ಸಲಹೆಗಳನ್ನು ಪಡೆಯಬಹುದಾಗಿದೆ. 

ಇದನ್ನು ಓದಿ: ಟ್ವಿಟ್ಟರ್‌‌‌‌‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!

ಸದ್ಯ ಗೂಗಲ್ ಈಗ ಸರ್ಕಾರದ ಸಹಯೋಗದೊಂದಿಗೆ ಪಡೆದು ಲಿಂಕ್ ಮಾಡಿಕೊಂಡಿರುವ ಹತ್ತಿರದ ಟೆಸ್ಟಿಂಗ್ ಸೆಂಟರ್ ಮಾಹಿತಿಯನ್ನುಮಾತ್ರ ನೀಡುತ್ತದೆ. ಆದರೆ, ಈ ಬಗ್ಗೆ ಬರೆದುಕೊಂಡಿರುವ ಗೂಗಲ್, ಈ ಕೇಂದ್ರಗಳಿಗೆ ಭೇಟಿ ಕೊಡುವ ಮುಂಚೆ ಬಳಕೆದಾರರಿಗೆ ಪರೀಕ್ಷಿಸಿಕೊಳ್ಳಲು ರೋಗದ ಪ್ರಾಥಮಿಕ ಲಕ್ಷಣಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಅಲ್ಲಿರುವ ಲರ್ನ್ ಮೋರ್ ((Learn more) ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಭಾರತ ಸರ್ಕಾರದ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ (MoHFW) ಕೊಡಲಾಗಿರುವ ಅಧಿಕೃತ ಮಾಹಿತಿಯನ್ನು ನೀಡಲಿದೆ ಎಂದು ಹೇಳಿಕೊಂಡಿದೆ. 

ಹೀಗಾಗಿ ಕರ್ನಾಟಕದಲ್ಲೂ ಈ ಬಗ್ಗೆ ಮಾಹಿತಿ ದೊರೆಯಲಿದ್ದು, ಆಯಾ ರಾಜ್ಯಗಳ ಸಹಯೋಗವನ್ನೂ ಗೂಗಲ್ ಪಡೆದುಕೊಂಡು ಮಾಹಿತಿಯನ್ನು ನೀಡತೊಡಗಿದೆ.