Twitter India ಭಾರತದ ಮೇಲೇ ಮಸ್ಕ್ ಕಣ್ಣು, ಬೆಂಗಳೂರು ಬಿಟ್ಟು ಇನ್ನುಳಿದ ಕಚೇರಿಗೆ ಬೀಗ!
ಉದ್ಯೋಗ ಕಡಿತ, ಕಚೇರಿ ವಸ್ತುಗಳ ಹರಾಜು ಸೇರಿದಂತೆ ಹಲವು ಕ್ರಮಗಳ ಬಳಿಕವೂ ಟ್ವಿಟರ್ ನಷ್ಟ ಸರಿದೂಗಿದಂತೆ ಕಾಣುತ್ತಿಲ್ಲ. ಇದೀಗ ಎಲಾನ್ ಮಸ್ಕ್ ಕಣ್ಣು ಭಾರತದ ಮೇಲೆ ಬಿದ್ದಿದೆ. ಭಾರತದಲ್ಲಿರುವ ಟ್ವಿಟರ್ ಕಚೇರಿಗಳ ಪೈಕಿ ಬೆಂಗಳೂರು ಹೊರತು ಪಡಿಸಿ ಇನ್ನುಳಿದ ಕಚೇರಿಯನ್ನು ಮುಚ್ಚಲಾಗಿದೆ.
ನವದೆಹಲಿ(ಫೆ.18): ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಪ್ರತಿ ದಿನ ಮಹತ್ವದ ಬೆಳವಣಿಗೆ ನಡೆಯುತ್ತಲೇ ಇದೆ. ಈಗಾಗಲೇ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ ಭಾರತದ ಮೇಲೆ ಮಸ್ಕ್ ಕಣ್ಣು ಬಿದ್ದಿದೆ. ಟ್ವಿಟರ್ ಭಾರತದಲ್ಲಿ ಮೂರು ನಗರದಲ್ಲಿ ಕಚೇರಿ ಹೊಂದಿದೆ. ಆದರೆ ಎಲಾನ್ ಮಸ್ಕ್ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ದೆಹಲಿ ಹಾಗೂ ಮುಂಬೈನಲ್ಲಿರುವ ಟ್ವಿಟರ್ ಕಚೇರಿಯನ್ನು ಮುಚ್ಚಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿರುವ ಟ್ವಿಟರ್ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಟ್ವಿಟರ್ ವೆಚ್ಚ ಕಡಿತ ಮಾಡಲು ಮುಂದಾಗಿದೆ. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಕಚೇರಿಯ ಬಾಡಿಗೆಯನ್ನು ಎಲಾನ್ ಮಸ್ಕ್ ಇನ್ನೂ ಪಾವತಿಸಿಲ್ಲ. ಇದಕ್ಕಾಗಿ ಇದೀಗ ಭಾರಿ ವೆಚ್ಚ ಕಡಿತಕ್ಕೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಟ್ವಿಟರ್ ಹೊಸ ನೀತಿ, ಹೊಸ ನಿಯಮಗಳಿಂದ ಭಾರಿ ಹೊಡೆತ ತಿಂದಿದೆ. ಇದರ ಪರಿಣಾಮ ವೆಚ್ಚ ಕಡಿತಗೊಳಿಸಲು ಈಗಾಗಲೇ ಒಂದು ಸುತ್ತಿನ ಉದ್ಯೋಗ ಕಡಿತ ಮಾಡಿದೆ. ಇದೀಗ ಭಾರತದಲ್ಲಿನ ಎರಡು ಕಚೇರಿಗಳನ್ನು ಮುಚ್ಚಿದೆ. ಇದೀಗ ದೆಹಲಿ ಹಾಗೂ ಮುಂಬೈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗಿದೆ. ವೆಚ್ಚ ಕಡಿತದ ಹೆಸರಿನಲ್ಲಿ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇಷ್ಟೇ ಅಲ್ಲ ಕೆಲ ಉದ್ಯೋಗಿಗಳನ್ನು ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡಲು ಸೂಚಿಸುವ ಸಾಧ್ಯತೆ ಇದೆ.
ಟ್ವಿಟರ್‌ಗೆ ಹೊಸ CEO ನೇಮಿಸಿದ ಎಲಾನ್ ಮಸ್ಕ್, ತಲೆಕೆಟ್ಟು ಎಡವಟ್ಟಾಯ್ತಾ ಎಂದ ನೆಟಿಜೆನ್ಸ್!
ಬೆಂಗಳೂರಿನ ಕಚೇರಿಯಲ್ಲಿ ಬಹುತೇಕ ತಾಂತ್ರಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಅದು ಎಂದಿನಂತೆ ತನ್ನ ಕಾರ್ಯನಿರ್ವಹಣೆಯನ್ನು ಮುಂದುವರೆಸಿದೆ. ಆದರೆ ಮೂರೂ ನಗರಗಳಲ್ಲಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಷ್ಟುಸಿಬ್ಬಂದಿಯನ್ನು ತೆಗೆದು ಹಾಕಲಾಗಿದೆ ಎಂಬುದರ ಕುರಿತು ಕಂಪನಿ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.
ಎಲಾನ್ ಮಸ್ಕ್ ಕಳೆದ ವರ್ಷ 3.50 ಲಕ್ಷ ಕೋಟಿ ರು.ಗೆ ಟ್ವೀಟರ್ ಅನ್ನು ಖರೀದಿಸಿದ ಬಳಿಕ ಅದರ ಸಿಇಒ ಪರಾಗ್ ಅಗರ್‌ವಾಲ್ ಸೇರಿದಂತೆ ಹಲವು ಹಿರಿಯ ಸಿಬ್ಬಂದಿಗಳನ್ನು ತೆಗೆದು ಹಾಕಿದ್ದರು. ಜೊತೆಗೆ ಜಾಗತಿಕ ಮಟ್ಟದಲ್ಲಿ ಕಂಪನಿಯ 7000 ಸಿಬ್ಬಂದಿ ಪೈಕಿ 2300 ಜನರನ್ನು ಮಾತ್ರ ಉಳಿಸಿಕೊಂಡು ಬಾಕಿ 4700ಕ್ಕೂ ಹೆಚ್ಚು ಜನರನ್ನು ತೆಗೆದು ಹಾಕಿದ್ದರು. ಈ ಪೈಕಿ ಭಾರತದಲ್ಲಿದ್ದ ಕಂಪನಿಯ 200ರ ಆಸುಪಾಸಿನ ಸಿಬ್ಬಂದಿ ಪೈಕಿ ಬಹಳಷ್ಟುಜನ ಉದ್ಯೋಗ ಕಳೆದುಕೊಂಡಿದ್ದರು.
ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಲಾಂಚ್, ಇನ್ಮುಂದೆ ಬಳಕೆದಾರರು ತಿಂಗಳಿಗೆ ಪಾವತಿಸಬೇಕು ಇಂತಿಷ್ಟು!
ಇತ್ತೀಚೆಗೆ ಟ್ವಿಟರ್ ಕಂಪನಿಯ ಕೆಲ ವಸ್ತುಗಳನ್ನು ಹರಾಜಿಗೆ ಇಡಲಾಗಿತ್ತು. ಕಿಚನ್‌ವೇರ್, ಆಫೀಸ್‌ಗಳಲ್ಲಿ ಬಳಸುವ ವೈಟ್‌ಬೋರ್ಡ್, ಡೆಸ್ಕ್, ಡಿಸೈನರ್ ಚೇರ್, ಕಾಫಿ ಮಷಿನ್, ಐಮ್ಯಾಕ್ ಕಂಪ್ಯೂಟರ್, 100 ಬಾಕ್ಸ್ ಎನ್ 95 ಮಾಸ್ಕ್, ಸ್ಟೇಷನರಿ ಬೈಕ್ ಸ್ಟೇಷನ್, ಟ್ವಿಟರ್ ಹಕ್ಕಿಯ ಪ್ರತಿಮೆ ಸೇರಿದಂತೆ ಕಚೇರಿಯ ಬಹುತೇಕ ವಸ್ತುಗಳನ್ನು ಹಾರಾಜಿಗೆ ಇಡಲಾಗಿತ್ತು. ಈ ಹರಾಜಿಗೂ ಕಂಪನಿಯ ಆರ್ಥಿಕತೆಗೂ ಸಂಬಂಧವಿಲ್ಲ ಎಂದು ಟ್ವಿಟರ್ ಹೇಳಿಕೊಂಡಿತ್ತು. ಆದರೆ ಭಾರಿ ಮೊತ್ತಕ್ಕೆ ಟ್ವಿಟರ್ ಖರೀದಿಸಿದ ಮಸ್ಕ್ ಷೇರುಮಾರುಕಟ್ಟೆಯಲ್ಲೂ ಹಿನ್ನಡೆ ಅನುಭವಿಸಿದ್ದರು. ಮಸ್ಕ್ ಷೇರುಗಳು ಕುಸಿತದ ಕಾರಣ ನಷ್ಟ ಅನುಭವಿಸಿದ್ದರು. ಇದರ ಬೆನ್ನಲ್ಲೇ ಕಂಪನಿ ವಸ್ತುಗಳನ್ನು ಹರಾಜಿಗಿಟ್ಟಿದ್ದರು. ಇದೀಗ ಭಾರತದ ಎರಡು ಕಚೇರಿಗಳನ್ನು ಮುಚ್ಚಿರವುದು ಟ್ವಿಟರ್ ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿರುವ ಸೂಚನೆ ನೀಡಿದೆ.