ಭಾರತದಲ್ಲಿ WhatsAppಗೆ ಹಿನ್ನಡೆ, ಗೌಪ್ಯ ನೀತಿ ವಿರುದ್ಧದ ತನಿಖೆ ಪ್ರಶ್ನಿಸಿ ಕೋರಿದ್ದ ಅರ್ಜಿ ವಜಾ!
2021ರ ಆರಂಭದಲ್ಲಿ ಭಾರತದಲ್ಲಿ ವ್ಯಾಟ್ಸ್ಆ್ಯಪ್ ಖಾಸಗಿ ನೀತಿಯನ್ನು ಜಾರಿಗೊಳಿಸಿದೆ. ಈ ಮೂಲಕ ಬಳಕೆದಾರರ ಗೌಪ್ಯ ಮಾಹಿತಿಗಳನ್ನು ಪೇರೆಂಟ್ ಕಂಪನಿ ಮೆಟಾಗೆ ನೀಡುತ್ತಿದೆ. ಬಳಕೆದಾರನ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ನಿಯಮ ಉಲ್ಲಂಘಿಸಿದೆ ಎಂದು ಸಿಸಿಐ ತನಿಖೆ ನಡೆಸುತ್ತಿದೆ. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ವ್ಯಾಟ್ಸ್ಆ್ಯಪ್‌ಗೆ ಹಿನ್ನಡೆಯಾಗಿದೆ.
ನವದೆಹಲಿ(ಆ.26): ಭಾರತದಲ್ಲಿ ವ್ಯಾಟ್ಸ್ಆ್ಯಪ್ 2021ರ ಪ್ರೈವೈಸಿ ಪಾಲಿಸಿ ಅಡಿಯಲ್ಲಿ ಬಳಕೆದಾರನ ಮಾಹಿತಿಯನ್ನು ಮೂಲ ಕಂಪನಿ ಮೆಟಾ(ಫೇಸ್‌ಬುಕ್)ಗೆ ನೀಡುತ್ತಿದೆ. ಇದು ಬಳಕೆದಾರ ವೈಯುಕ್ತಿಕ ಮಾಹಿತಿಯನ್ನು ಪೇರೆಂಟ್ ಕಂಪನಿಗೆ ನೀಡುವ ಮೂಲಕ ಮಾಹಿತಿಗಳ ಸೋರಿಕೆ ಮಾಡುತ್ತಿದೆ. ಇದು ನಿಯಮದ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ(CCI) ತನಿಖೆ ನಡೆಸುತ್ತಿದೆ. ಇದು ಮೆಟಾ ಕಂಪನಿಯ ಖಾಸಗಿ ನೀತಿಯಾಗಿದೆ. ಹೀಗಾಗಿ ಸಿಸಿಐ ಕೈಗೊಂಡಿರುವ ವ್ಯಾಟ್ಸ್ಆ್ಯಪ್ ವಿರುದ್ಧ ತನಿಖೆಯನ್ನು ಕೈಬಿಡಬೇಕು ಎಂದು ವ್ಯಾಟ್ಸ್ಆ್ಯಪಪ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ವ್ಯಾಟ್ಸ್ಆ್ಯಪ್ ಖಾಸಗಿ ನೀತಿ ಬಳಕೆದಾರನ ಗೌಪ್ಯ ಮಾಹಿತಿ ಸೋರಿಕೆ ವಿಚಾರಕ್ಕೆ ಸಂಬಂಧಿಸಿದೆ. ಹೀಗಾಗಿ ತನಿಖೆಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ವ್ಯಾಟ್ಸ್ಆ್ಯಪ್ ಅರ್ಜಿಯನ್ನು ತರಿಸ್ಕರಿಸಿದೆ.
ದೆಹಲಿ ಮುಖ್ಯನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಜಸ್ಟೀಸ್ ಸುಬ್ರಮನಿಯಮ್ ಪ್ರಸಾದ್ ಅವರಿದ್ದ ಪೀಠ ಈ ಕುರಿತು ವಿಚಾರಣ ನಡೆಸಿ, ಈ ಅರ್ಜಿ ಮೇಲ್ಮನವಿಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ತಿರಸ್ಕೃತಗೊಂಡಿದೆ ಎಂದಿದೆ. ಈ ಮೇಲ್ಮನವಿ ಕುರಿತು ಆಗಸ್ಟ್ ತಿಂಗಳ ಆರಂಭದಲ್ಲಿ ನಡೆದ ವಿಚಾರಣೆಲ್ಲಿ ಸಿಸಿಐ ವಿಚಾರಣೆಗೆ ಅವಕಾಶ ನೀಡಬೇಕು ಎಂದು ವಾದಿಸಿತ್ತು. ವಿವಾದಿತ ವ್ಯಾಟ್ಸ್ಆ್ಯಪ್ ಖಾಸಗಿ ನೀತಿಯಿಂದ ಬಳಕೆದಾರ ಮಾಹಿತಿ ಸೋರಿಕೆಯಾಗುತ್ತಿದೆ. ಇದು ನಿಯಮ ಉಲ್ಲಂಘನೆಯಾಗಿದೆ. ಇಷ್ಟೇ ಅಲ್ಲ ಖಾಸಗಿ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರರ ವ್ಯಾಟ್ಸ್ಆ್ಯಪ್ ಖಾತೆಗಳು ನಿಷ್ಕ್ರೀಯಗೊಳ್ಳುತ್ತದೆ. ಹೀಗಾಗಿ ಭಾರತದಲ್ಲಿ ಮಾಹಿತಿ ಸೋರಿಕೆ ಹಾಗೂ ಮಾಹಿತಿಯನ್ನು ಬಹಿರಂಗಪಡಿಸುವುದು ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ತನಿಖೆಗೆ ಅವಕಾಶ ನೀಡಬೇಕು ಎಂದು ವಾದಿಸಿತ್ತು.
WhatsApp Communities: ಏಕಕಾಲದಲ್ಲಿ 512 ಜೊತೆ ಸಂಪರ್ಕ, ವಾಟ್ಸಾಪ್ ಹೊಸ ವೈಶಿಷ್ಟ್ಯ!
2021ರ ಜನವರಿಯಲ್ಲಿ ವ್ಯಾಟ್ಸ್ಆ್ಯಪ್ ಹೊಸ ಪ್ರವೈಸಿ ಪಾಲಿಸಿ ಜಾರಿಗೆ ತಂದಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಳಕೆಗಾರರ ಟ್ರಾನ್ಸಾಕ್ಷನ್ ಡೇಟಾ, ಐಪಿ ಅಡ್ರೆಸ್, ಮೊಬೈಲ್ ಡಿವೈಸ್ ಮಾಹಿತಿ, ಬಳಕೆದಾರನ ಮೊಬೈಲ್ ಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ಮೆಟಾ ಕಂಪನಿಗೆ ನೀಡುತ್ತಿದೆ. ಮೆಟಾ ಅಂದರೆ ಈ ಹಿಂದಿನ ಫೇಸ್‌ಬುಕ್ ಕಂಪನಿ ಜೊತೆಗೆ ಹಂಚಿಕೊಳ್ಳುತ್ತಿದೆ. ಮೆಟಾ ಕಂಪನಿಯ ಅಂಗಸಂಸ್ಥೆ ವ್ಯಾಟ್ಸ್ಆ್ಯಪ್ ಆಗಿದೆ. ಹೀಗಾಗಿ ಇಲ್ಲಿ ಮಾಹಿತಿ ಸೋರಿಕೆ ವಿಚಾರವಿಲ್ಲ ಎಂದು ವ್ಯಾಟ್ಸ್ಆ್ಯಪ್ ವಾದಿಸಿತ್ತು.
ಸಂಸತ್ತಿನಲ್ಲಿ ಡೇಟಾ ಪ್ರೋಟೆಕ್ಷನ್ ಬಿಲ್‌ಗೆ ಅನುಮೋದನೆ ಸಿಗುವ ವರೆಗೆ ವ್ಯಾಟ್ಸ್ಆ್ಯಪ್ ಪ್ರೈವೈಸಿ ಪಾಲಿಸಿ ಚಾಲ್ತಿಯಲ್ಲಿರುತ್ತದೆ. ಬಳಿಕ ಕಾನೂನಿನ ಪ್ರಕಾರ ಬದಲಿಸಲಾಗುವುದು ಎಂದು ಕೋರ್ಟ್ ಮುಂದೆ ಹೇಳಿತ್ತು. ಕೇಂದ್ರ ಎಲೆಕ್ಟ್ರಾನಿಕ್ಸ್ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಕುರಿತು ಮಹತ್ವದ ಹೇಳಿಕೆ ನೀಡಿತ್ತು. 2021ರ ಐಟಿ ನಿಯಮಕ್ಕೆ ವಿರುದ್ಧವಾಗಿರುವ ವ್ಯಾಟ್ಸ್ಆ್ಯಪ್ ಪ್ರವೈಸಿ ಪಾಲಿಸಿಯನ್ನು ಹಿಂಪಡೆಯಬೇಕು ಎಂದು ಸೂಚಿಸಿತ್ತು.
ವ್ಯಾಟ್ಸ್ಆ್ಯಪ್‌ನಲ್ಲಿ ಮಹತ್ವದ ಬದಲಾವಣೆ, ಸುರಕ್ಷತೆಗಾಗಿ ಸ್ಕ್ರೀನ್‌ಶಾಟ್ ನಿರ್ಬಂಧ ಫೀಚರ್!