ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿಯಲು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಆದರೆ ಇದೀಗ ಉಸೇನ್ ಬೋಲ್ಟ್ ದಾಖಲೆಯನ್ನು ಮೂರು ತಿಂಗಳಲ್ಲಿ ಅಭಿವೃದ್ಧಿಪಡಿಸಿದ ಚೀನಾ ರೋಬೋಟ್ ಮುರಿದಿದೆ.

ಬೀಜಿಂಗ್(ಆ.20) ವಿಶ್ವದ ಅತೀ ವೇಗದ ಓಟಾಗರ ಎಂದೇ ಖ್ಯಾತಿಗೊಂಡಿರುವ ಉಸೇನ್ ಬೋಲ್ಟ್ ನಿವೃತ್ತಿಯಾಗಿ ವರ್ಷಗಳೇ ಉರುಳಿದಿದೆ. ಆದರೆ ಉಸೇನ್ ಬೋಲ್ಟ್ ವೇಗ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ. 8 ಬಾರಿ ಒಲಿಂಪಿಕ್ ಚಿನ್ನದ ಪದಕ ಸಾಧನೆ ಮಾಡಿರುವ ಉಸೇನ್ ಬೋಲ್ಟ್ ದಾಖಲೆಯನ್ನು ಚೀನಾದ ಸೂಪರ್ ಮ್ಯಾನ್ ರೋಬೋಟ್ ಮುರಿದಿದೆ. ಕೇವಲ 3 ತಿಂಗಳಲ್ಲಿ ಅಭಿವೃದ್ಧಿ ಮಾಡಿದ ಈ ರೋಬೋಟೋ ಸೆಕೆಂಡ್‌ಗೆ 12.66 ಮೀಟರ್ ವೇಗದಲ್ಲಿ ಓಡಿ ದಾಖಲೆ ಬರೆದಿದೆ.

ಉಸೇನ್ ಬೋಲ್ಡ್ ದಾಖಲೆ ಉಡೀಸ್

2009ರಲ್ಲಿ 100 ಮೀಟರ್ ಓಟದಲ್ಲಿ ಉಸೇನ್ ಬೋಲ್ಡ್ ಹೊಸ ದಾಖಲೆ ನಿರ್ಮಿಸಿದ್ದರು. ಉಸೇನ್ ಬೋಲ್ಡ್ ಪ್ರತಿ ಸೆಕೆಂಡ್‌‍ಗೆ 12.42 ಮೀಟರ್ ವೇಗದಲ್ಲಿ ಓಡಿದ್ದರು. ಇದೀಗ ಸೂಪರ್‌ಮ್ಯಾನ್ ರೋಬೋಟ್ 12.66 ಮೀಟರ್ ವೇಗದಲ್ಲಿ ಓಡಿ ಹೊಸ ದಾಖಲೆ ಬರೆದಿದೆ. ಈ ಮೂಲಕ ರೋಬೋಟ್ ಇದೀಗ ಕ್ರೀಡಾ ಸಾಧಕರಿಗೆ ಸವಾಲು ಹಾಕಿದೆ.

ರೋಬೋಟೋ ಸಂಸ್ಥೆಯ ಮಾಹಿತಿ ಪ್ರಕಾರ ರೋಬೋಟ್ ಗರಿಷ್ಠ ವೇಗ 100 ಕಿಲೋಮೀಟರ್ ಪ್ರತಿ ಗಂಟೆಗೆ ಓಡುವ ಸಾಮರ್ಥ್ಯ ಹೊಂದಿದೆ. ಪರೀಕ್ಷಾರ್ಥವಾಗಿ ಓಡಿಸಿದಾಗಲೇ ಉಸೇನ್ ಬೋಲ್ಟ್ ದಾಖಲೆನ್ನು ಮುರಿಯಲಾಗಿದೆ. ಉಸೇನ್ ಬೋಲ್ಟ್ ಪ್ರತಿ ಗಂಟೆಗೆ 44.74 ಕಿಲೋಮೀಟರ್ ವೇಗದಲ್ಲಿ ಓಡಬಲ್ಲರು. ವಿಶೇಷ ಅಂದರೆ ಅದೆಷ್ಟ ವೇಗವಾಗಿ ಓಡಿದರೂ ರೋಬೋಟ್ ಲಯ, ಸಮತೋಲನ ತಪ್ಪದಂತೆ ರೋಬೋಟ್ ವಿನ್ಯಾಸ ಮಾಡಲಾಗಿದೆ. ಹಗರು ಹಾಗೂ ಬಲಿಷ್ಠ ಕಾರ್ಬನ್ ಫೈಬರ್ ಬಾಡಿಯನ್ನು ಎಲೆಕ್ಟ್ರಿಕ್ ಮೋಟಾರ್ ಜೊತೆ ಜೋಡಿಸಲಾಗಿದೆ. ರೋಬೋ ಚಿಪ್‌ಗಳು ಬಾಡಿ ಸಮತೋಲನ ಮಾಡಿಕೊಂಡು ಮೋಟಾರ್‌ಗೆ ಶಕ್ತಿ ನೀಡುತ್ತದೆ. ಈ ಮೂಲಕ ವೇಗದ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ರೋಬೋಟ್ ಕಂಪನಿ ಹೇಳಿದೆ. ಇದು 3 ತಿಂಗಳಲ್ಲಿ ಪ್ರಾಯೋಗಿಕವಾಗಿ ತಯಾರಿಸಿದ ರೋಬೋಟ್. ಈ ರೋಬೋಟ್ ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಮೂಲಕ ಸ್ಮಾರ್ಟ್ ಬ್ಯಾಲೆನ್ಸಿಂಗ್ ಮಾಡಲಾಗಿದೆ. ಎಐ ಆಲ್ಗಾರಿದಂಗಳನ್ನು ಬಳಸಲಾಗಿದೆ. ಇನ್ನೂ ಭೂಮಿಯ ಮೇಲ್ಮೈ ಯಾವುದೇ ರೀತಿ ಇದ್ದರೂ ಬ್ಯಾಲೆನ್ಸ್ ತಪ್ಪದಂತೆ ಕಾಲಿನ ಚಲನೆ ಹೊಂದಿಸಿಕೊಳ್ಳುವ ಎಐ ತಂತ್ರಜ್ಞಾನ ಹೊಂದಿದೆ. ಈ ರೋಬೋಟ್ ದಾಖಲೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮಾನವನ ಮೀರಿಸಿದ ತಂತ್ರಜ್ಞಾನಗಳು ಅಪಾಯಕ್ಕೆ ಆಹ್ವಾನ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮನುಷ್ಯನ ಗಡಿ ಮೀರಿ ತಂತ್ರಜ್ಞಾನಗಳು ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಅಪಾಯದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಹಲವರು ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.

ಚೀನಾದಲ್ಲಿ ಎಐ ಹಾಗೂ ರೋಬೋಟಿಕ್ ಕ್ರಾಂತಿಯಾಗುತ್ತಿದೆ. ಅಮೆರಿಕ ಟೆಸ್ಲಾ, ಬೋಸ್ಟನ್ ಡೈನಾಮಿಕ್ ಸಂಸ್ಥೆಗಳಿಗೆ ಚೀನಾ ಪೈಪೋಟಿ ನೀಡುತ್ತಿದೆ. ಚೀನಾದಲ್ಲಿನ ರೋಬೋಟಿಕ್ ತಂತ್ರಜ್ಞಾನ ವಿಶ್ವಕ್ಕೆ ಸವಾಲು ಹಾಕುತ್ತಿದೆ. ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಚೀನಾ ಬಳಸಿಕೊಳ್ಳುತ್ತಿದೆ.