ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫೇಲ್ ಆದ ChatGPT: ನೆಟ್ಟಿಗರಿಂದ ಸಖತ್ ಟ್ರೋಲ್
ಯುಪಿಎಸ್‌ಸಿ ಪರೀಕ್ಷೆ ಜೋಕ್ ಅಲ್ಲ ಎನ್ನುವುದು ಸಾಬೀತಾಗಿದೆ ಎಂದು ಸಹ ಅನೇಕರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಚಾಟ್‌ಜಿಪಿಟಿ ಸಾಮಾನ್ಯ ವರ್ಗದ ಕಟ್ ಆಫ್‌ನಲ್ಲಿ ಫೇಲ್ ಆಗಿದೆ. ಆದರೆ, ಕೋಟಾ ಹೊಂದಿದ್ದರೆ ಪಾಸಾಗುತ್ತಿತ್ತು ಎಂದೂ ಅನೇಕರು ವ್ಯಂಗ್ಯವಾಡಿದ್ದಾರೆ.
ಹೊಸದೆಹಲಿ (ಮಾರ್ಚ್ 4, 2023): ಕೃತಕ ಬುದ್ಧಿಮತ್ತೆ (ಎಐ) ಚಾಟ್‌ಬಾಟ್ ಆದ ಚಾಟ್‌ಜಿಪಿಟಿ ಆರಂಭವಾದಾಗಿನಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮಾಧ್ಯಮಗಳಲ್ಲೂ ಸಾಕಷ್ಟು ಸುದ್ದಿಯಾಗುತ್ತಿದೆ. ಕೆಲವರಂತೂ ತಮ್ಮ ವರ್ಕ್ ಇಮೇಲ್‌ಗಳನ್ನು ಬರೆಯುವಂತಹ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಲು ಇದನ್ನು ಬಳಸುತ್ತಿದ್ದಾರೆ. ಅನೇಕ ಜನರು ಇದಕ್ಕೆ ವ್ಯಸನಿಯಾಗುವುದನ್ನು ಒಪ್ಪಿಕೊಂಡಿದ್ದು, ಚಾಟ್‌ಜಿಪಿಟಿ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇನ್ನು, ಅನೇಕ ಪರೀಕ್ಷೆಗಳನ್ನು ಸಹ ಪಾಸ್ ಮಾಡಿದ ಈ ಚಾಟ್‌ಬಾಟ್ ಭಾರತದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲವಾಗಿದೆ.ಯುಪಿಎಸ್‌ಸಿಯಲ್ಲಿ ಚಾಟ್‌ಬಾಟ್‌ನ ಕಾರ್ಯಕ್ಷಮತೆಯನ್ನು ಇತ್ತೀಚೆಗೆ ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ ಪರೀಕ್ಷಿಸಿದ್ದು, ಚಾಟ್‌ಬಾಟ್ ಯುಪಿಎಸ್‌ಸಿ ಪ್ರಿಲಿಮ್ಸ್ 2022 ರ ಪ್ರಶ್ನೆ ಪತ್ರಿಕೆ 1, ಸೆಟ್ ಎನಲ್ಲಿ 100 ರಲ್ಲಿ 54 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಾಗಿದ್ದು, ಪರೀಕ್ಷೆಯ ಕಟ್ ಆಫ್‌ಗಿಂತ ಸುಮಾರು 30 ಕ್ಕೂ ಹೆಚ್ಚು ಅಂಕ ಕಡಿಮೆ ತೆಗೆದುಕೊಂಡಿದೆ.
ಸಾಮಾನ್ಯ ವರ್ಗದ (General Merit) ಅಭ್ಯರ್ಥಿಗಳಿಗೆ ಈ ಪರೀಕ್ಷೆಯ ಕಟ್‌ಆಫ್ (CutOff) ಶೇಕಡಾ 87.54 ಇತ್ತು. ಆದರೆ, ಎಐ ಚಾಟ್‌ಬಾಟ್ (AI Chat Bot) ಶೇ. 54 ರಷ್ಟು ಮಾತ್ರ ಸರಿಯಾಗಿ ಉತ್ತರಿಸಿದ್ದು ಪ್ರಿಲಿಮ್ಸ್ ಪರೀಕ್ಷೆಯಲ್ಲಿ (Prelims Exam) ಫೇಲ್ ಆಗಿದೆ. ಯುಪಿಎಸ್‌ಸಿ (UPSC) ಪ್ರಿಲಿಮ್ಸ್ ಅಂದ್ರೆ ನಿಮಗೆ ಗೊತ್ತಿರುವಂತೆ ಭೌಗೋಳಿಕತೆ, ಅರ್ಥಶಾಸ್ತ್ರ, ಇತಿಹಾಸ, ಪರಿಸರ ವಿಜ್ಞಾನ, ವಿಜ್ಞಾನದಂತಹ ವಿಷಯಗಳಿಂದ ಹಿಡಿದು ಕರೆಂಟ್ ಅಫೇರ್ಸ್, ಸಾಮಾಜಿಕ ಅಭಿವೃದ್ಧಿ ಮತ್ತು ರಾಜಕೀಯದವರೆಗೆ ಪ್ರಶ್ನೆಗಳು ಇರುತ್ತವೆ.
ಇದನ್ನು ಓದಿ: ಕಮೆಂಟ್ ಮಾಡಿದರೂ ಸಾಕು ನಿಮ್ಮ ಡೇಟಾ ಕದಿಯುತ್ತೆ ChatGPT, 300 ಬಿಲಿಯನ್ ಮಾಹಿತಿಗೆ ಕನ್ನ!
ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಮರ್ಥ್ಯವಿದೆಯೇ ಎಂದು ChatGPT ಯನ್ನು ಕೇಳಿದಾಗ, ಅದು "ನಿರ್ದಿಷ್ಟ ಉತ್ತರ" ನೀಡಲು ವಿಫಲವಾಗಿದೆ. ಅದರ ಉತ್ತರ ಹೀಗಿದೆ ನೋಡಿ.. ‘’ಎಐ ಲ್ಯಾಂಗ್ವೇಜ್ ಮಾಡೆಲ್ ಆಗಿ, ನಾನು ಯುಪಿಎಸ್‌ಸಿ ಪರೀಕ್ಷೆ ಮತ್ತು ಸಂಬಂಧಿತ ವಿಷಯಗಳು ಸೇರಿದಂತೆ ಅಪಾರ ಪ್ರಮಾಣದ ಜ್ಞಾನ ಮತ್ತು ಮಾಹಿತಿಯನ್ನು ಹೊಂದಿದ್ದೇನೆ. ಆದಾದರೂ, ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಜ್ಞಾನ ಮಾತ್ರವಲ್ಲದೆ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳು, ಅಪ್ಲಿಕೇಶನ್ ಸಾಮರ್ಥ್ಯಗಳು ಮತ್ತು ಸಮಯ ನಿರ್ವಹಣೆಯ ಕೌಶಲ್ಯಗಳು ಅಗತ್ಯವಿರುತ್ತದೆ. ಆದ್ದರಿಂದ, ನಾನು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ನಾನು ಖಚಿತವಾದ ಉತ್ತರವನ್ನು ನೀಡಲು ಸಾಧ್ಯವಿಲ್ಲ’’ ಎಂದು ಹೇಳಿದೆ.
ಇನ್ನು ಚಾಟ್‌ಜಿಪಿಟಿ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫೇಲಾಗಿರೋದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಚಾಟ್‌ಜಿಪಿಟಿ ಅನೇಕ ಅಂತಾರಾಷ್ಟ್ರೀಯ ಪರೀಕ್ಷೆಗಳನ್ನು ಪಾಸಾಗಿದೆ. ಅಮೆರಿಕದ ಮೆಡಿಕಲ್ ಪರೀಕ್ಷೆ ಹಾಗೂ ವಾರ್ಟನ್ ಎಂಬಿಎ ಪರೀಕ್ಷೆಯನ್ನು ಪಾಸಾಗಿತ್ತು. ಆದರೆ, ಯುಪಿಎಸ್‌ಸಿ ಪರೀಕ್ಷೆ ಫೇಲಾಗುವ ಮೂಲಕ ಇದು ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎನ್ನುವುದನ್ನು ಸಾಬೀತಾಗಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಚಾಟ್ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ
ಯುಪಿಎಸ್‌ಸಿ ಪರೀಕ್ಷೆ ಜೋಕ್ ಅಲ್ಲ ಎನ್ನುವುದು ಸಾಬೀತಾಗಿದೆ ಎಂದು ಸಹ ಅನೇಕರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಚಾಟ್‌ಜಿಪಿಟಿ ಸಾಮಾನ್ಯ ವರ್ಗದ ಕಟ್ ಆಫ್‌ನಲ್ಲಿ ಫೇಲ್ ಆಗಿದೆ. ಆದರೆ, ಎಸ್‌ಸಿ / ಎಸ್‌ಟಿ ಅಥವಾ ಇತರೆ ಕೋಟಾ ಹೊಂದಿದ್ದರೆ ಪಾಸಾಗುತ್ತಿತ್ತು ಎಂದೂ ಅನೇಕರು ವ್ಯಂಗ್ಯವಾಡಿದ್ದಾರೆ.
ಅಲ್ಲದೆ, ಚಾಟ್‌ಜಿಪಿಟಿ ಮೊದಲ ಬಾರಿ ಫೇಲಾಗಿದೆ. ಇನ್ನೂ ಅನೇಕ ಬಾರಿ ಎದುರಿಸಿ ಪಾಸಾಗಬಹುದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಯುಪಿಎಸ್‌ಸಿ ಪಾಸಾಗಲು ಒಂದೇ ಪ್ರಯತ್ನ ಸಾಕಾಗಲ್ಲ ಎನ್ನುವುದು ಸಹ ಸಾಬೀತಾಗಿದೆ ಎಂದೂ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿರಿಯಾನಿ ವಿಚಾರವಾಗಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಗೆ ಕ್ಷಮೆ ಕೋರಿದ ಚಾಟ್‌ಬಾಟ್..!