Asianet Suvarna News Asianet Suvarna News

ನೋವಿನ ಕಡಲಲಿ ತೇಲುವ ಮಂದಿಗೆ ಆಸರೆಯಾದ ಭಗವಾನ್‌ ಮಹಾವೀರ

ತಮ್ಮ ನೋವಿನ ದನಿಗೆ, ಬದುಕಿನ ಪಯಣಕ್ಕೆ ಧನಾತ್ಮಕ ಚಿಂತನೆಗಳ ಮೂಲಕ ಪರಿಹಾರ ಪಡೆಯುತ್ತಿದ್ದ ಹಾಗೂ ಪಡೆಯುತ್ತಿರುವ ಸಮುದಾಯವೇ ನಮ್ಮಲ್ಲಿದೆ. ಅಂತಹ ಮಹಾನ್‌ ಚೇತನಗಳಲ್ಲಿ ಜೈನಧರ್ಮದ ಪ್ರವರ್ತಕ ಭಗವಾನ್‌ ಮಹಾವೀರರು ಒಬ್ಬರು. ಇಂದು ಮಹಾವೀರ ಜಯಂತಿ. ಅವರ ಪ್ರಮುಖ ವಿಚಾರಧಾರೆಗಳು ಇಲ್ಲಿವೆ. 

Significance of Mahaveera Jayanti
Author
Bengaluru, First Published Apr 17, 2019, 12:31 PM IST

ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ನಮಗೆ ಸುಖದ, ಸಂತಸದ ಸಮಾಜವೇನೂ ಗೋಚರಿಸುವುದಿಲ್ಲ. ಎಲ್ಲಾ ಕಾಲಕ್ಕೂ ಮಾನವ ತನ್ನ ಕಾಲಘಟ್ಟದಲ್ಲಿ ಸಂಭವಿಸುವ ಅನೇಕ ಘಟನೆಗಳಿಗೆ ಮುಖಾಮುಖಿಯಾಗುವುದನ್ನು ಕಾಣುತ್ತಲೇ ಬಂದಿದ್ದೇವೆ.

ಇಂತಹ ಸಂಕಷ್ಟಕಾಲಗಳು ಎದುರಾಗುವುದು, ಅದನ್ನು ಎದುರಿಸಲು ಸಮಾಜ ಸನ್ನದ್ದವಾಗುವುದು, ಅವರ ನೋವಿಗೆ ದನಿಯಾಗುವ ಮರುಗುವ, ಸಾಂತ್ವನ ನೀಡುವ ಯಾರಾದರೂ ಸಿಗುತ್ತಾರೇನೋ ಎಂದು ನಿರೀಕ್ಷಿಸುವ ಕಾಲಘಟ್ಟಗಳಲೆಲ್ಲಾ ಮುಳುಗುವವರಿಗೆ ಆಸರೆಯಾಗಿ ನಿಲ್ಲುವ, ಅವರ ಕಷ್ಟಗಳಿಗೆ ಸ್ಪಂದಿಸುವ ಮಹಾನ್‌ ಚೇತನಗಳು ಈ ನಾಡಿನಲ್ಲಿ ಹುಟ್ಟಿದ್ದಾರೆ.

ಅವರ ಮೂಲಕ ತಮ್ಮ ನೋವಿನ ದನಿಗೆ, ಬದುಕಿನ ಪಯಣಕ್ಕೆ ಮತ್ತಷ್ಟುಧನಾತ್ಮಕ ಚಿಂತನೆಗಳ ಮೂಲಕ ಪರಿಹಾರ ಪಡೆಯುತ್ತಿದ್ದ ಹಾಗೂ ಪಡೆಯುತ್ತಿರುವ ಸಮುದಾಯವೇ ನಮ್ಮಲ್ಲಿದೆ. ಅಂತಹ ಮಹಾನ್‌ ಚೇತನಗಳಲ್ಲಿ ಜೈನಧರ್ಮದ ಪ್ರವರ್ತಕ ಭಗವಾನ್‌ ಮಹಾವೀರರು ಒಬ್ಬರು.

ಭಗವಾನ್‌ ಮಹಾವೀರರು ಹುಟ್ಟಿದ್ದು 5-6ನೇ ಶತಮಾನದಲ್ಲಾದರೂ ಇಂದಿಗೂ ಅವರನ್ನು ನೆನಪಿಸುಕೊಳ್ಳುವುದಕ್ಕೆ ಕಾರಣವಾದರೂ ಏನು- ಮಹಾವೀರರು ಕೇವಲ ಜೈನಧರ್ಮಕ್ಕೆ ನೀಡಿದ ಸಾಂತ್ವನಗಳಿಂದಲ್ಲ. ಅವು ಇಡೀ ವಿಶ್ವದ ನೊಂದ ಜೀವಿಗಳಿಗೆ, ಅಜ್ಞಾನ, ಮೂಢತ್ವದಿಂದ ಬೇಯುತ್ತಿದ್ದ ಜೀವಿಗಳನ್ನು ಅವರಿದ್ದ ನೆಲೆಯಿಂದ ತಿಳಿಹೇಳುವ ಮೂಲಕ ಅವರಲ್ಲಿದ್ದ ಅಜ್ಞಾನವನ್ನು ಕಳೆಯುವ ಮೂಲಕ ಎಲ್ಲಾ ಸಮುದಾಯದ ಒಳಿತನ್ನು ಬಯಸಿದವರು ಮಹಾವೀರರು.

ಕ್ಷತ್ರಿಯ ರಾಜಕುಮಾರ, ಶ್ರೀಮಂತ ಬದುಕಿನಲ್ಲಿ ತನ್ನ ಸುಖವನ್ನಷ್ಟೇ ನೋಡಿಕೊಂಡು ಬದುಕಬಹುದಿತ್ತೇನೋ- ಆದರೆ ಸುತ್ತಲಿನ ಸಮುದಾಯದಲ್ಲಿ ಆಗುತ್ತಿದ್ದ ನೋವು-ಹಿಂಸೆ, ಮೋಸ-ವಂಚನೆಗಳನ್ನು ನೋಡಿ ತನ್ನ ಸುಖದ ಬದುಕನ್ನು ಬಿಟ್ಟು ತನ್ನ ಪೂರ್ವ ತೀರ್ಥಂಕರರನ್ನು ಅನುಸರಿಸಿ ಮತ್ತೆ ಸಮಾಜದ ಒಳಿತನ್ನು ಬಯಸಿ ಹಗಲಿರುಳು ಶ್ರಮಿಸಿದವರು ಮಹಾವೀರರು.

ಬಾಲ್ಯದ ವರ್ಧಮಾನ ಪ್ರವರ್ಧಮಾನನಾಗಿದ್ದೇ ಈ ಕಾರಣದಿಂದ. ಅವು ಅಂದಿನ ಸತ್ಯಗಳು ಮಾತ್ರವಾಗಿರದೇ ಇಂದಿನ ಬೆಳಕಾಗಿವೆ. ಜಾಗತೀಕರಣದ ನೆಲೆಯಲ್ಲಿ, ಸಮಾಜದ ಪಲ್ಲಟದ ಪಯಣದಲ್ಲಿ ಮಹಾವೀರರ ಬೋಧೆಗಳು ದಾರಿದೀಪಗಳಾಗುವುದರಲ್ಲಿ ಸಂದೇಹವಿಲ್ಲ.

ಅವರ ಪ್ರಮುಖ ವಿಚಾರಗಳನ್ನು ಗಮನಿಸಿದರೆ,

-    ನೀನು ಬದುಕುತ್ತಲೇ ಇತರರನ್ನು ಬದುಕಲು ಬಿಡು. ಯಾರನ್ನೂ ನೋಯಿಸಬೇಡ. ಈ ಜೀವನವಿರುವುದೇ ಪ್ರತಿಯೊಂದು ಜೀವಿಯೂ ಸಂತಸದಿಂದ ಬದುಕು ಸಾಗಿಸುವುದಕ್ಕೆ.

-    ಈ ಜಗತ್ತಿನಲ್ಲಿ ನೀನೊಬ್ಬನೇ ಇಲ್ಲ. ನಿನ್ನ ಪರಿಸರವನ್ನು ಗಮನಿಸು. ಅಲ್ಲಿನ ಪ್ರತಿಜೀವಿಗಳನ್ನೂ ಗೌರವಿಸು.

-    ನಾವು ತಪ್ಪುಗಳನ್ನು ಬೇರೆಯವರಲ್ಲಿ ಹುಡುಕಿ, ಸರಿಪಡಿಸಲು ಪ್ರಯತ್ನಿಸುತ್ತೇವೆ. ಆದರೆ ನಮ್ಮನ್ನು ನಾವು ತಿದ್ದುಕೊಳ್ಳುವ ಮೂಲಕ ಸಮಾಜವನ್ನು ಸರಿಪಡಿಸಿಕೊಳ್ಳಬೇಕಿದೆ.

-    ನಿನ್ನಲ್ಲಿನ ದುರ್ಗಣಗಳೊಂದಿಗೆ ನೀನು ಹೋರಾಡು. ಹೊರಗಿನವರೊಂದಿಗಲ್ಲ. ಯಾರಿಗೆ ತಮ್ಮ ತಪ್ಪುಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವೋ ಅವರು ಸಂತೋಷದಿಂದ ಇರುತ್ತಾರೆ.

-    ಪ್ರತಿಯೊಂದು ಜೀವವಿರುವ ವಸ್ತುವನ್ನು ಗೌರವಿಸುವುದು ಅಹಿಂಸೆಯಾಗಿದೆ.

-    ಯಾವ ಜೀವಿಯನ್ನೂ ಗಾಯಗೊಳಿಸಬೇಡ, ಅಗೌರವಿಸಬೇಡ, ಹಿಂಸಿಸಬೇಡ, ಬೈಯಬೇಡ, ನಿಂದಿಸಬೇಡ ಹಾಗೂ ಕೊಲ್ಲಬೇಡ.

-    ಪ್ರತಿಯೊಂದು ಜೀವಿಯೂ ತಪ್ಪು ಮಾಡುತ್ತಾನೆ. ಅವುಗಳನ್ನು ತಿದ್ದಿಕೊಳ್ಳುವ ಮೂಲಕ ಆನಂದ ಹೊಂದಬೇಕು.

-    ದೇವರು ಬೇರಲ್ಲೂ ಇಲ್ಲ. ಪ್ರತಿಯೊಬ್ಬರೂ ತಮ್ಮ ಸಾಧನೆಯಿಂದಲೇ ದೇವರಾಗಲು ಸಾಧ್ಯವಿದೆ.

-    ಮನುಷ್ಯನ ಆಸೆಗೆ ಮಿತಿಯಿಲ್ಲ. ತನ್ನ ಆಸೆಗಳಿಗೆ ಬೇಲಿ ಹಾಕಿಕೊಂಡಾಗ ಮಾತ್ರ ಬದುಕು ಸಹ್ಯವಾಗಲು ಸಾಧ್ಯ.

-    ಸತ್ಯ ಕಟುವಾದದ್ದು. ಹಾಗೆಂದು ಸುಳ್ಳಿನಲ್ಲಿ ಬದುಕಬೇಡ.

-    ನಮ್ಮ ಸುತ್ತಲೂ ಅನೇಕ ಬಂಧಗಳಿವೆ. ಅವುಗಳಿಂದಲೇ ಕರ್ಮಬಂಧಗಳಾಗುತ್ತವೆ. ಅವೇ ಹುಟ್ಟು ಸಾವಿಗೆ ಕಾರಣ. ಅಂತಹ ಬಂಧಗಳನ್ನು ಕಳಚಿಕೊಳ್ಳುವ ಉಪಾಯವೂ ನಮ್ಮಲ್ಲಿಯೇ ಇದೆ. ಯಾರೊಬ್ಬರೂ ತಮ್ಮ ಹಿಂದಿನ ಕರ್ಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

-    ಸಮಸ್ಯೆಯ ಒಂದು ಮುಖವನ್ನು ನೋಡಿ ನಿರ್ಣಯಕ್ಕೆ ಬರಬಾರದು. ಅದರಿಂದ ಪರಿಹಾರ ಸಾಧ್ಯವಿಲ್ಲ. ಸಮಸ್ಯೆಗೆ ಅನೇಕ ಮುಖಗಳಿರುತ್ತವೆ. ನಮಗೆ ಕಾಣುತ್ತಿರುವ ಮುಖವೇ ಸತ್ಯವೆಂದು ತಿಳಿಯದೆ ಅನೇಕ ಹಂತದಲ್ಲಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬೇಕು.

ಇಂತಹ ಚಿಂತನಶೀಲ ಮಾತುಗಳು ಆ ಶತಮಾನಕ್ಕೆ ಮಾತ್ರ ಮೀಸಲೇ? ಇಂತಹ ಬೋಧೆಗಳನ್ನು ನೀಡಿದ ಮಹಾವೀರರನ್ನು ಕೇವಲ ಜೈನಧರ್ಮಕ್ಕೆ ಮಾತ್ರ ಜೋಡಿಸಬೇಕೆ? ಜಗದ ಒಳಿತನ್ನು, ಮಾನವನ ಉದ್ಧಾರವನ್ನು ಬಯಸಿ, ಮನುಕುಲದ ಅಜ್ಞಾನದ ಬಾಗಿಲು ತೆರೆಯಬಲ್ಲ ಮಹಾನ ಚೇತನಗಳಲ್ಲಿ ಒಬ್ಬರು ಮಹಾವೀರರು.

- ಡಾ. ಪದ್ಮಿನಿ ನಾಗರಾಜು, ಬೆಂಗಳೂರು 

Follow Us:
Download App:
  • android
  • ios