ಸಾಹಿತ್ಯ ಪ್ರೇಮಿಗಳೇ ಗಮನಿಸಿ; ಎಲ್ಲಾ ಪುಸ್ತಕಗಳ ಮಾಹಿತಿ ‘ಬುಕ್‌ಬ್ರಹ್ಮ’ದಲ್ಲಿ

ಕನ್ನಡ ಪುಸ್ತಕ ಲೋಕಕ್ಕೆ ಅಗತ್ಯವಾದ ಭರವಸೆಯ ಹಕ್ಕಿಯೊಂದು ಹಾರಲಿದೆ. ಅದು ಬುಕ್‌ ಬ್ರಹ್ಮ. ಕನ್ನಡ ಪುಸ್ತಕಗಳ ಮಾಹಿತಿಯನ್ನಾಧರಿಸಿದ ವೆಬ್‌ ತಾಣ. ಬೆಂಗಳೂರಿನ ವೆರ್ಬಿಂಡನ್‌ ಕಮ್ಯುನಿಕೇಷನ್‌ ಇದನ್ನು ಸಿದ್ಧ ಮಾಡಿದ್ದು ಪತ್ರಕರ್ತ ದೇವು ಪತ್ತಾರ್‌ ಸಾರಥ್ಯದಲ್ಲಿ ಲಾಂಚ್‌ ಆಗುತ್ತಿದೆ.

new portal called Book Brahma new portal for Kannada books something on the lines of Goodreads

ಬೆಂಗಳೂರು (ಆ. 14): ಕನ್ನಡ ಪುಸ್ತಕ ಲೋಕ ಸವಿಸ್ತಾರವಾಗಿ ಬೆಳೆಯುತ್ತಾ ಸಾಗಿದೆ. ವರ್ಷಕ್ಕೆ ಸಾವಿರಾರು ಪುಸ್ತಕಗಳು ಪ್ರಕಟಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಓದುಗರಿಗೆ ಯಾವ ಪುಸ್ತಕ ಕೊಳ್ಳುವುದು, ಯಾವುದನ್ನು ಓದುವುದು ಎನ್ನುವ ಗೊಂದಲ ಹುಟ್ಟುವುದು ಸಹಜ.

ಇದೇ ಹೊತ್ತಿನಲ್ಲಿ ತಾನು ಬರೆದ ಹೊಸ ಪುಸ್ತಕವನ್ನು ಓದುಗ ದೊರೆಗೆ ಪರಿಚಯಿಸುವುದು ಹೇಗೆ ಎನ್ನುವ ಗೊಂದಲ ಲೇಖಕನಿಗೂ ಮತ್ತು ಪ್ರಕಟಿಸಿದ ಪ್ರಕಾಶಕನಿಗೂ ಸಹಜ. ಪುಸ್ತಕ ಲೋಕದ ಈ ಮೂರೂ ಕೊಂಡಿಗಳನ್ನು ಬೆಸೆದು ಕನ್ನಡ ಪುಸ್ತಕೋದ್ಯಮಕ್ಕೆ ಹೊಸ ದಿಕ್ಕು ತೋರಲು ಬರುತ್ತಿದೆ ‘ಬುಕ್‌ ಬ್ರಹ್ಮ’.

ಬೆಂಗಳೂರು ಮೂಲದ ವೆರ್ಬಿಂಡನ್‌ ಕಮ್ಯುನಿಕೇಷನ್‌ ಸಂಸ್ಥೆಯ ಸಾರಥ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಪೂರ್ವ ತಯಾರಿಯಲ್ಲಿ ತೊಡಗಿದ್ದ ಬುಕ್‌ ಬ್ರಹ್ಮ ಸ್ವಾತಂತ್ರ್ಯ ದಿನವಾದ ನಾಳೆ (ಆ. 15) ಅಧಿಕೃತವಾಗಿ ರೆಕ್ಕೆ ಬಿಚ್ಚಿ ಹಾರಲಿದೆ. ಈಗಾಗಲೇ ಫೇಸ್‌ಬುಕ್‌ನಲ್ಲಿ ಚೆಂದದ ವಿಡಿಯೋ ತುಣುಕುಗಳು, ಮಾಸದ ಲೇಖಕ, ಬುಕ್‌ ಬ್ರಹ್ಮ ಕ್ವಿಜ್‌ ಸೇರಿ ಭಿನ್ನ ಭಿನ್ನ ಮಾಹಿತಿಗಳನ್ನು ಹಂಚಿಕೊಳ್ಳಲು ಆರಂಭಿಸಿದೆ ಬುಕ್‌ ಬ್ರಹ್ಮ.

ದ್ವೀಪಗಳನ್ನು ಬೆಸೆಯುವ ಕೆಲಸವಿದು

‘ಕನ್ನಡದಲ್ಲಿ ಇಂದು ದಾಖಲೆ ಪ್ರಮಾಣದ ಪುಸ್ತಕಗಳು ಬರುತ್ತಿವೆ. ಈ ರೀತಿಯ ಒಂದು ಪುಸ್ತಕ ಮಾರುಕಟ್ಟೆಗೆ ಬಂದಿದೆ, ಅದನ್ನು ಇಂತವರು ಬರೆದಿದ್ದಾರೆ, ಅದರ ಕಂಟೆಂಟ್‌ ಹೀಗೆದೆ ಎನ್ನುವ ಪ್ರಾಥಮಿಕ ಮಾಹಿತಿಗಳೂ ಓದುಗನಿಗೆ ಸರಿಯಾಗಿ ದೊರೆಯುತ್ತಿಲ್ಲ. ಈ ಸಮಸ್ಯೆ ನಿವಾರಿಸಿ, ಕನ್ನಡ ಪುಸ್ತಕಗಳ ಬಗೆಗಿನ ಸರ್ವಾಂಗೀಣ ಮಾಹಿತಿ ಕೊಡುವುದು ನಮ್ಮ ಬುಕ್‌ ಬ್ರಹ್ಮದ ಉದ್ದೇಶ.

ಒಂದು ರೀತಿಯಲ್ಲಿ ಓದುಗ, ಬರಹಗಾರ ಮತ್ತು ಪ್ರಕಾಶಕರ ನಡುವಿನ ಕೊಂಡಿ ಇದು. ಕನ್ನಡ ಪುಸ್ತಕಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಬಿಡುಗಡೆಯಾದರೂ ಅದರ ಬಗ್ಗೆ ನಮ್ಮ ವೆಬ್‌ ಸೈಟ್‌ ಮೂಲಕ ತಿಳಿದುಕೊಳ್ಳಬಹುದು.

ಓದುಗರು, ಲೇಖಕಕರು ತಮ್ಮ ಪುಸ್ತಕದ ಬಗ್ಗೆ ಇಲ್ಲಿ ಮಾಹಿತಿ ಹಂಚಿಕೊಳ್ಳುವ ಅವಕಾಶ ಇದೆ. ಹಾಗಾಗಿ ಇದೊಂದು ದ್ವೀಪಗಳನ್ನು ಬೆಸೆಯುವ ಕೊಂಡಿ ಎನ್ನಬಹುದು’ ಎಂದು ಬುಕ್‌ ಬ್ರಹ್ಮ ಬಗ್ಗೆ ಹೇಳುತ್ತಾರೆ ವೆಬ್‌ಸೈಟ್‌ ಸಂಪಾದಕ ದೇವು ಪತ್ತಾರ್‌.

ಓದುಗರಿಗೆ ಏನು ಅನುಕೂಲ

ವರ್ಷಕ್ಕೆ ಸಾವಿರಾರು ಪುಸ್ತಕಗಳು ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಓದುಗರಿಗೆ ಎಲ್ಲಾ ಪುಸ್ತಕಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ತಮ್ಮ ಇಷ್ಟದ ಲೇಖಕರು ಹೊಸದಾಗಿ ಏನು ಬರೆದರು, ಯಾರೆಲ್ಲಾ ಹೊಸ ಬರಹಗಾರರು ಬಂದಿದ್ದಾರೆ, ಬೇರೆ ಬೇರೆ ಸಾಹಿತ್ಯ ಪ್ರಕಾರದಲ್ಲಿ ಏನೆಲ್ಲಾ ಕೃಷಿ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಓದುಗ ಬುಕ್‌ ಬ್ರಹ್ಮದ ಮೂಲಕ ತಿಳಿದುಕೊಳ್ಳಬಹುದು.

ಸದ್ಯ ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳ, ಎರಡು ಸಾವಿರಕ್ಕೂ ಹೆಚ್ಚು ಲೇಖಕರ ಪರಿಚಯವನ್ನು ಬುಕ್‌ ಬ್ರಹ್ಮ ಅಪ್‌ಲೋಡ್‌ ಮಾಡಿದ್ದು, ಸೃಜನಶೀಲ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಸಂಪಾದನೆ, ವಿಮರ್ಶೆ, ವಿಜ್ಞಾನ, ಮಕ್ಕಳ ಸಾಹಿತ್ಯ, ಸಿನಿಮಾ, ಜನಪದ, ದೃಶ್ಯಕಲೆ, ಕೃಷಿ, ಧರ್ಮ, ಹಾಸ್ಯ ಸೇರಿದಂತೆ ಹಲವಾರು ವಿಭಾಗಗಳಿವೆ.

ಜೊತೆಗೆ ಪುಸ್ತಕದ ಬಗ್ಗೆ, ಲೇಖಕರು, ಪ್ರಕಾಶಕರು, ಪುಸ್ತಕ ದೊರೆಯುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಗಿದೆ. ಇವೆಲ್ಲವನ್ನೂ ಜಾಲಾಡಿ ತಮಗೆ ಬೇಕಾದ ಪುಸ್ತಕವನ್ನು ಆಯ್ಕೆ ಮಾಡಿಕೊಂಡು ಕೊಳ್ಳುವ ಅವಕಾಶ ಓದುಗನಿಗೆ ಇದೆ.

ಲೇಖಕರಿಗೇನು ಲಾಭ?

ಪ್ರತಿಯೊಬ್ಬ ಲೇಖಕನಿಗೂ ತನ್ನ ಪುಸ್ತಕವನ್ನು ಓದುಗರಿಗೆ ತಲುಪಿಸಬೇಕು ಎನ್ನುವ ಆಸೆ ಇರುತ್ತದೆ. ಅದಕ್ಕೆ ತಕ್ಕುದಾದ ವೇದಿಕೆ ಬುಕ್‌ ಬ್ರಹ್ಮ. ಇಲ್ಲಿ ನೇರವಾಗಿ ಪ್ರಕಾಶಕರು, ಲೇಖಕರು ಓದುಗರೇ ಪುಸ್ತಕದ ಬಗೆಗಿನ ಮಾಹಿತಿ, ಅದಕ್ಕೆ ಸಂಬಂಧಿಸಿದಂತೆ ಬಂದ ವರದಿಗಳು, ವಿಡಿಯೋ ತುಣುಕುಗಳನ್ನು ಕಳಿಸಿಕೊಟ್ಟರೆ ಅದನ್ನು ಫೈನ್‌ ಟ್ಯೂನ್‌ ಮಾಡಿ ಪ್ರಕಟಿಸುವ ಕಾರ್ಯವನ್ನು ಬುಕ್‌ ಬ್ರಹ್ಮ ಮಾಡುತ್ತದೆ. ಇದರಿಂದ ಸುಲಭಕ್ಕೆ ಓದುಗರನ್ನು ತಲುಪುವುದು ಲೇಖಕರಿಗೆ ಸಾಧ್ಯವಾಗುತ್ತದೆ.

ಹೇಗೆ ಕಾರ್ಯ ನಿರ್ವಹಿಸುತ್ತೆ ಗೊತ್ತಾ?

ಡಿಡಿಡಿ.ಚಿಟಟkಚ್ಟಿahಞa.್ಚಟಞ ವೆಬ್‌ಸೈಟ್‌ಗೆ ನೀವು ಭೇಟಿ ಕೊಟ್ಟಿರಾದರೆ ಅಲ್ಲಿ ವಿವಿಧ ವಿಭಾಗಗಳು ತೆರೆದುಕೊಳ್ಳುತ್ತವೆ. ನಿಮಗೆ ಇಷ್ಟವಿರುವ ವಿಭಾಗಕ್ಕೆ ಹೋಗಿ ಪುಸ್ತಕಗಳನ್ನು ಜಾಲಾಡಬಹುದು. ಅದರ ಪಕ್ಕದಲ್ಲಿಯೇ ಪುಸ್ತಕಕ್ಕೆ ಸಂಬಂಧಿಸಿದಂತೆ ಬಂದಿರುವ ವಿಮರ್ಶೆಗಳು, ವರದಿಗಳು, ವಿಡಿಯೋ ತುಣುಕುಗಳ ಲಿಂಕ್‌ಗಳೂ ಇರುತ್ತವೆ.

‘ನಾವು ವೆಬ್‌ಸೈಟ್‌ ಮೂಲಕವೇ ಸೇವೆ ಒದಗಿಸುತ್ತೇವೆ. ಇದು ಮೊಬೈಲ್‌ ಫ್ರೆಂಡ್ಲಿ ಆಗಿರಲಿದೆ. ಪುಸ್ತಕದ ಕುರಿತ ಆಡಿಯೋ, ವಿಡಿಯೋಗಳ ಲಿಂಕ್‌, ಆನ್‌ಲೈನ್‌ ಮಾರಾಟದ ಲಿಂಕ್‌ಗಳನ್ನೂ ನಾವು ಹಾಕುವುದರಿಂದ ಪುಸ್ತಕದ ಸರ್ವಾಂಗೀಣ ಚಿತ್ರಣ ಸಿಗಲಿದೆ’ ಎಂದು ಹೇಳುತ್ತಾರೆ ದೇವು ಪತ್ತಾರ್‌.

ಒಂದೂವರೆ ವರ್ಷದ ಶ್ರಮ

ನಾಳೆ ತನ್ನನ್ನು ತಾನು ಕನ್ನಡ ಲೋಕಕ್ಕೆ ಅರ್ಪಿಸಿಕೊಳ್ಳುತ್ತಿರುವ ಬುಕ್‌ ಬ್ರಹ್ಮ ಸತತ ಒಂದೂವರೆ ವರ್ಷಗಳಿಂದ ಪೂರ್ವ ತಯಾರಿ ಕಾರ್ಯಗಳನ್ನು ಮಾಡಿಕೊಂಡು ವ್ಯವಸ್ಥಿತವಾಗಿ ಬರುತ್ತಿದೆ. ಇದಕ್ಕಾಗಿ ಎಂಟು ಜನರ ಎಡಿಟೋರಿಯಲ್‌ ತಂಡ, ಡಿಸೈನಿಂಗ್‌ ಟೀಮ್‌, ಟೆಕ್‌ ಟೀಮ್‌ಗಳು ನಿರಂತರ ಶ್ರಮ ಹಾಕಿವೆ. ಹಳೆಯ ಗ್ರಂಥಾಲಯಗಳನ್ನು ಹೊಕ್ಕು, ವಿಶೇಷ ಮಾಹಿತಿಗಳನ್ನು ಉಳ್ಳವರಿಂದ ಕಲೆ ಹಾಕಿ ಇದನ್ನೊಂದು ಅಪರೂಪದ ಮಾಹಿತಿಯ ಕಣಜವನ್ನಾಗಿ ರೂಪಿಸಲಾಗಿದೆ.

ಮುಂದಿವೆ ಮತ್ತಷ್ಟು ಸೇವೆಗಳು

ಶುರುವಾದಾಗ ಕೇವಲ ಪುಸ್ತಕಗಳ ಮಾಹಿತಿಯನ್ನಷ್ಟೇ ನೀಡುವ ಉದ್ದೇಶ ಹೊಂದಿದ್ದ ಬುಕ್‌ ಬ್ರಹ್ಮ ನಂತರದಲ್ಲಿ ಪುಸ್ತಕಗಳಿಗೆ ಸಂಬಂಧಿಸಿದ ವಿಡಿಯೋ, ಆಡಿಯೋ ಸೇರಿ ಸಮಗ್ರ ಮಾಹಿತಿ ನೀಡಲು ಮುಂದಾಗಿತ್ತು. ಮುಂದಿನ ದಿನಗಳಲ್ಲಿ ಇ ಪಬ್ಲಿಷಿಂಗ್‌, ಇ ಪುಸ್ತಕಗಳ ಪ್ರಕಟಣೆ ಮಾಡುವುದರ ಜೊತೆಗೆ ಕನ್ನಡಕ್ಕೆ ಸಂಬಂಧಿಸಿದಂತೆ ಇದನ್ನೊಂದು ಸಾಂಸ್ಕೃತಿಕ ವೇದಿಕೆಯನ್ನಾಗಿ ಮಾಡುವ ಇರಾದೆ ಹೊಂದಿದೆ. ನೀವು ಒಮ್ಮೆ ಬುಕ್‌ ಬ್ರಹ್ಮ ವೆಬ್‌ ಸೈಟ್‌ https://bookbrahma.com ಭೇಟಿ ನೀಡಿ ಬನ್ನಿ.

Latest Videos
Follow Us:
Download App:
  • android
  • ios