ಸೋಲು!

ಒಂದು ಬಾರಿಯಲ್ಲ,ಅದೆಷ್ಟು ಬಾರಿ ಅಂತ ಲೆಕ್ಕ ಇಟ್ಟಿಲ್ಲ ಅವನು.

ಡಿಗ್ರಿ ಮುಗಿದಿದ್ದೇ ಕೆಲಸಕ್ಕೆ ಟ್ರೈ ಮಾಡಿದ. ಇಂಟರ್‌ವ್ಯೆ ಅಟೆಂಡ್ ಮಾಡಿದ್ದೇ ಬಂತು. ಎಲ್ಲೂ ಕೆಲಸ ಸಿಗಲಿಲ್ಲ. ಬರೀ ನಿರಾಸೆ. ಕೊನೆಗೆ ತನ್ನದಲ್ಲದ ಫೀಲ್ಡ್‌ಗಳನ್ನು ಟ್ರೈ ಮಾಡಲಾರಂಭಿಸಿದ. ಒಂದು ಶಾಲೆಯಲ್ಲಿ ಮೇಷ್ಟ್ರ ಕೆಲಸ ಸಿಕ್ಕಿತು. ಮಕ್ಕಳ ಜೊತೆಗೆ ಒಡನಾಡಿಯೇ ಗೊತ್ತಿಲ್ಲದ ಆತ ನಿತ್ಯ ಒದ್ದಾಡಲಾರಂಭಿಸಿದ. ಈ ಒದ್ದಾಟದ ನಡುವೆಯೇ ಮದುವೆಯಾದ. ಅವನ ಗೆಳತಿಯೇ ಅವಳು. ಬದುಕಲ್ಲಿ ಸಿಕ್ಕ ಏಕೈಕ ಗೆಲುವಿನ ಹಾಗಿದ್ದಳು. ಮಕ್ಕಳೊಂದಿಗೆ ಒದ್ದಾಡಿ ಬರುವವನ್ನು ಸಮಾಧಾನ ಮಾಡುತ್ತಿದ್ದಳು.

ಅವಳ ಒಡನಾಟದಲ್ಲಿ ಶಾಲೆಯ ಕೆಲಸದಲ್ಲಿ ಸ್ವಲ್ಪ ಚೇತರಿಕೆ ಬಂತು ಅನ್ನುವಷ್ಟರಲ್ಲಿ ಮತ್ತೆ ಅವನನ್ನು ಕೆಲಸದಿಂದ ಕಿತ್ತು ಹಾಕಿದರು. ಪತ್ನಿ ಎಂದಿನಂತೆ ಸಮಾಧಾನ ಮಾಡಿದಳು. ಅವಳ ಸಂಬಳದಲ್ಲೇ ಮನೆ ಕಷ್ಟದಲ್ಲಿ ನಡೆಯುತ್ತಿತ್ತು. ಅವನು ಬೇರೆ ಬೇರೆ ಕೆಲಸ ಹುಡುಕುತ್ತಲೇ ಇದ್ದ. ಅದೊಂದು ದಿನ ಇನ್ನು ಲೈಫೇ ಇಲ್ಲ ಅಂತ ಬಸ್‌ಸ್ಟಾಂಡ್ನಲ್ಲಿ ತಲೆಬಗ್ಗಿಸಿ ಕೂತಿದ್ದ, ಹಾಗೇ ಮಂಪರು. ಸಣ್ಣ ಪೆಟ್ಟು ಬಿದ್ದ ಹಾಗಾಗಿ ಎಚ್ಚರವಾಯ್ತು. ನೋಡಿದರೆ ಚಿಕ್ಕ ಮಗು ರಪ ರಪನೆ ಹೊಡೆಯುತ್ತಿದೆ! ಸಿಟ್ಟು ಬಂತು, ಬೈಯಲೆಂದು ಹೊರಟವನಿಗೆ ಅದು ಬುದ್ದಿಮಾಂದ್ಯ ಮಗು ಅಂತ ಗೊತ್ತಾಯ್ತು. ಅಷ್ಟರಲ್ಲಿ ತಾಯಿ ಓಡಿ ಬಂದು ಮಗುವನ್ನು ಹಿಡಿದುಕೊಂಡಳು.

ಕ್ಷಮೆ ಯಾಚಿಸುವ ಮುಖಭಾವದಲ್ಲಿ ಇವನನ್ನು ನೋಡಿದಳು. ಕರುಳು ಚುರುಕ್ ಅಂದ ಹಾಗಾಯ್ತು. ಮಗುವನ್ನು ಎತ್ತಿಕೊಂಡ. ಅದು ಅಬೋಧವಾಗಿ ಎತ್ತಲೋ ನೋಡುತ್ತಿತ್ತು. ಒಂದಿಷ್ಟು ಹೊತ್ತು ಮಗುವಿನ ಜೊತೆಗೆ ಕಳೆದ. ಭಾರವಾದ ಮನಸ್ಸು ಹಗುರವಾಯ್ತು. ಆ ಮಗು ಮತ್ತು ತಾಯಿ ಪಕ್ಕದ ಮನೆಯಲ್ಲೇ ಇರುವುದು ಗೊತ್ತಾಯ್ತು. ಮನೆಗೆ ಬಂದು ಪತ್ನಿಯಲ್ಲಿ ತಾನು ಕಂಡ ಮಗುವಿನ ವಿಷಯ ಹೇಳಿದ.

‘ಹೇಗಾದರೂ ಮನೆಯಲ್ಲಿ ಇರುತ್ತೀಯಲ್ಲಾ, ನಿನಗೆ ಖುಷಿ ಕೊಡೋದಾದ್ರೆ ಯಾಕೆ ಆ ಮಗುವಿನ ಜೊತೆಗೆ ಒಂದಿಷ್ಟು ಹೊತ್ತು ಇರಬಾರದು?’ ಪತ್ನಿ ಕೇಳಿದಳು. ಇವನಿಗೂ ಹೌದೆನಿಸಿತು. ಪಕ್ಕದಲ್ಲೇ ಆ ಮಗುವಿನ ಮನೆ. ಇವನು ಸ್ವಲ್ಪ ಹೊತ್ತು ಮಗುವನ್ನು ನೋಡಿಕೊಳ್ಳುತ್ತಾನೆ ಅನ್ನೋದು ಆ ತಾಯಿಗೂ ಸಮಾಧಾನ. ಆದರೆ ಆ ತಾಯಿ ಒಂದು ಹೊಸ ಆಫರ್ ಕೊಟ್ಟಳು. ‘ಮಾನಸಿಕ ಸಮಸ್ಯೆ ಇರುವ ಕೆಲವೊಂದು ಮಕ್ಕಳು ಈ ಸ್ಟ್ರೀಟ್‌ನಲ್ಲಿದ್ದಾರೆ, ನೀವ್ಯಾಕೆ ಈ ಎಲ್ಲ ಮಕ್ಕಳನ್ನು ಸೇರಿಸಿ ಒಂದು ಶಾಲೆ ತೆರೆಯಬಾರದು?’ ಅಂತ. ಹಿಂಜರಿದರೂ, ಸಣ್ಣ ಭಯ
ದಲ್ಲೇ ಒಪ್ಪಿಕೊಂಡ. ಇಂತಿಷ್ಟು ಫೀಸ್ ನಿಗದಿಯಾಯ್ತು.

ಕೆಲವು ದಿನಕ್ಕೇ ಸಹಾಯಕರು ಬಂದರು. ಆತ ಇಂಥಾ ಮಕ್ಕಳ ಕಲಿಕೆಗೆ ಪೂರಕವಾಗುವಂಥಾ ಹೊಸ ಹೊಸ ಪ್ರಯೋಗ ಮಾಡತೊಡಗಿದ. ಹೊಸ ಹೊಸ ಆಟಗಳನ್ನು ಪರಿಚಯಿಸಿದ, ಆಟಿಕೆಗಳನ್ನು ತಾನೇ ರೂಪಿಸಿದ. ಈತನ ಚಟುವಟಿಕೆಯಿಂದ ಹತ್ತಿರದಿಂದ ಕಂಡ ಪೋಷಕರಿಂದ ಸುದ್ದಿ ಬೇರೆ ಕಡೆಯೂ ಹಬ್ಬಿ. ಈತ ಜನಪ್ರಿಯನಾಗುತ್ತಾ ಹೋದ. ವನ್ ಫೈನ್ ಡೇ ಈ ಮಕ್ಕಳಿಗಾಗಿ ಶಾಲೆಯನ್ನೂ ತೆರೆದ. ಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಯ್ತು. ಈತ ಈ ಮಕ್ಕಳ ಪೋಷಕರಿಗೆ ಕೌನ್ಸಿಲಿಂಗ್ ಮಾಡಲಾರಂಭಿಸಿದ. ಅವನ ಮಾತುಗಳಿಗೆ, ಈತ ತಯಾರಿಸಿದ ಆಟಿಕೆಗಳಿಗೆ ಆನ್‌ಲೈನ್ ಮಾರ್ಕೆಟ್ ಹೆಚ್ಚುತ್ತಾ ಹೋಯ್ತು.

ಒಂದು ಕಾಲದ ದುರಾದೃಷ್ಟವಂತ ಈಗ ಜಗತ್ತಿನಾದ್ಯಂತ ಪ್ರಸಿದ್ಧನಾದ. ಇಷ್ಟಲ್ಲ ಆದರೂ ನಿತ್ಯಮಕ್ಕಳ ಜೊತೆಗಿನ ಒಡನಾಟ ತಪ್ಪಿಸುತ್ತಿರಲಿಲ್ಲ.

ಯಾವುದೋ ಒಂದು ಹೊತ್ತಲ್ಲಿ ಏನೋ ನೆನಪಾದಂತಾಗಿ ಪತ್ನಿಯನ್ನು ಕರೆದು ಕೇಳಿದ, ‘ನಾನಷ್ಟು ಸಲ ಬಿದ್ದಾಗಲೂ ಸಮಾಧಾನ ಮಾಡಿದೆಲ್ಲ, ನಾನೂ ಒಂದು ದಿನ ಗೆಲ್ಲಬಲ್ಲೆ ಅಂತ ನಿನಗೆ ನಿಜಕ್ಕೂ ಗೊತ್ತಿತ್ತಾ?’ ಅವಳಂದಳು, ‘ನೋಡು, ನಾನು ರೈತ ಕುಟುಂಬದಿಂದ ಬಂದವಳು. ನಾವು ಹೊಲದಲ್ಲಿ ಟೊಮ್ಯಾಟೋ ಹಾಕ್ತೀವಿ ಅಂತಿಟ್ಕೋ. ನಾವೆಷ್ಟು ಪ್ರಯತ್ನ ಪಟ್ಟರೂ ಬೆಳೇನೇ ಮೇಲೋಳೋದಿಲ್ಲ. ಆಗ ನಾವು ಬೀನ್ಸ್ ಟ್ರೈ ಮಾಡ್ತೀವಿ, ಅದೂ ಆಗ್ಲಿಲ್ಲ ಅಂದ್ರೆ ಮತ್ಯಾವುದೋ ಬೆಳೆ. ಒಂದಲ್ಲ ಒಂದು ಬೆಳೆ ನಮ್ಮ ಕೈ ಹಿಡೀತದೆ. ಅದ್ಯಾವ ಬೆಳೆ ಅನ್ನೋದು ಗೊತ್ತಾಗೋದಕ್ಕೆ ಒಂದಿಷ್ಟು ಟೈಮ್ ಬೇಕಷ್ಟೇ. ನಮ್ಮ ಬದುಕಿನಲ್ಲೂ ಹೀಗೇ ಅಂದ್ಕೊಂಡೆ ನಾನು. ನಿನ್ನ ಕ್ಷೇತ್ರ ಯಾವ್ದ ಅಂತ ಕೊನೆಗೂ ಗೊತ್ತಾಯ್ತು.’ ಅವನು ಅವಳ ಕಾಲ ಮೇಲೆ ತಲೆಯಿಟ್ಟು ಸಣ್ಣಗೆ ಅಳುತ್ತಿದ್ದ!