ಕಳ್ಳೆತ್ತಾ? ಜೋಡೆತ್ತಾ? ಉಸಾಬರಿಯೇ ಬೇಡ; ನಕ್ಕು ಹಗುರಾಗಿ!
ಜೋಡೆತ್ತುಗಳ ಹವಾ ಕರ್ನಾಟಕದಲ್ಲಿ ಜೋರಾಗಿದೆ. ಎತ್ತುಗಳೆಂದರೆ ರೈತನ ಮಿತ್ರ. ಭೂಮಿಯ ಬಂಧು. ಎತ್ತುಗಳಿಲ್ಲದೇ ಯಾರನ್ನೂ ಮೇಲೆ ಎತ್ತುವುದಕ್ಕೇ ಸಾಧ್ಯವಿಲ್ಲ ಎಂದು ಕೆಳಗಿದ್ದವರು ಮಾತಾಡಿಕೊಳ್ಳುತ್ತಿದ್ದಾರೆ. ಇಂಥ ಹೊತ್ತಲ್ಲಿ ಜೋಡೆತ್ತುಗಳ ವಿಶೇಷ ಸಂದರ್ಶನ ಪಲ್ಟಿಪ್ಲೆಕ್ಸ್ ಗೆ ಸಿಕ್ಕಿದೆ. ಆ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

ನಿಮ್ಮನ್ನು ಜೋಡೆತ್ತು ಅಂತ ಕರೀತಾರಲ್ಲ!
ಒಂಟೆತ್ತು. ಒಟ್ಟಿನಲ್ಲಿ ಎತ್ತು ಅಂತ ಗುರುತಿಸುತ್ತಾರಲ್ಲ, ಅಷ್ಟು ಸಾಕು.
ಎತ್ತು ಅಂದ್ರೆ ನೊಗ ಹೊರಲೇಬೇಕು. ಎಷ್ಟು ಕಾಲ ಹೀಗೆ ಬೇರೆಯವರ ನೊಗ ಹೊತ್ತುಕೊಂಡಿರುತ್ತೀರಿ?
ಯಾಕ್ ಹೊರಬಾರದು. ಯಾರ್ಯಾರೋ ಏನೇನೋ ಹೊತ್ಕೋತಾರೆ. ಕೆಲವರು ತೆನೆ ಹೊರ್ತಾರೆ, ಕೆಲವರು ಗೊನೆ ಹೊರ್ತಾರೆ. ಕೆಲವರು ಸಿಂಹಾಸನ ಹೊರುತ್ತಾರೆ. ನಾವು ನೇಗಿಲು ಹೊರ್ತೀವಿ. ಒಂದ್ ಮಾತ್ ಹೇಳ್ತೀನಿ,
ಕರೆಕ್ಟಾಗಿ ಕೇಳ್ಕಳಿ. ನಾವು ನೇಗಿಲು ಹೊತ್ರೇನೇ ರೈತ ತೆನೆ ಹೊರೋದಕ್ಕಾಗೋದು
ಆದ್ರೆ ಕೆಲವರು ನಿಮ್ಮನ್ನು ಕಳ್ಳೆತ್ತುಗಳು ಅಂತಾರಲ್ಲ!
ಕಳ್ಳನ ಮನಸ್ಸು ಹುಳ್ಳಗೆ ಅಂತ ಗಾದೇನೇ ಇದೆಯಲ್ರೀ. ತಾನು ಕಳ್ಳ ಪರರ ನಂಬ ಅಂತ ಇನ್ನೊಂದು ಗಾದೇನೂ ಇದೆ. ಅದಕ್ಕೆಲ್ಲ ನಾವು ಕೇರ್ ಮಾಡೋಲ್ಲ. ಯಾರು ಏನು ಬೇಕಿದ್ರೂ ಕರೀಬಹುದು. ನಾವೇನು ಅಂತ ನಮಗೆ
ಗೊತ್ತು.
ನೀವು ಬೇರೆಯವರ ಹೊಲಕ್ಕೆ ನುಗ್ತೀರಿ ಅನ್ನೋರಿಗೆ ನಿಮ್ಮ ಉತ್ತರ ಏನು?
ಬೇರೆಯವರ ಹೊಲ, ಬೇರೆಯವರ ನೆಲ ಅಂತ ಯಾರು ಹೋಗ್ತಾರೆ ಅಂತ ರೈತರಿಗೆ ಗೊತ್ತಿದೆ. ನಾವೇನಿದ್ರೂ ಉಳುಮೆ ಮಾಡ್ತೀವಿ. ಕುವೆಂಪು ಏನು ಹೇಳಿದ್ದಾರೆ ಗೊತ್ತೇನು?
ಏನು ಹೇಳಿದ್ದಾರೆ?
ಕುವೆಂಪು ಅವರ ಪುಸ್ತಕ ತಗೊಂಡು ಓದಿ. ನಮ್ಮನ್ನೇನು ಕೇಳ್ತೀರಿ. ಎಲ್ಲಾ ನಾವೇ ಹೇಳಬೇಕೇನು?
ಹೋಗ್ಲಿ ಬಿಡಿ! ಬೇಜಾರು ಮಾಡ್ಕೋಬೇಡ್ರೀ. ಈ ದೇಶದ ರೈತರಿಗೆ ನಿಮ್ಮ ಸಂದೇಶ ಏನು?
ಎತ್ತು ಎತ್ತು ಎತ್ತು ಅಂತ ಹೇಳಿ ನಾವು ಎತ್ತುತ್ತೀವಿ. ಆಮೇಲೆ ನೀವು ಬೇಕಾದ್ದು ಉತ್ತು ಬಿತ್ತಿಕೊಳ್ಳಿ. ಒಟ್ಟಿನಲ್ಲಿ ದೇಶ ಚೆನ್ನಾಗಿರಬೇಕು, ರೈತ ಚೆನ್ನಾಗಿರಬೇಕು.