1970-71ರ ಕಾಲ. ಯುವಕರಾದ ನಮಗೆ ಇಂದಿರಾಗಾಂಧಿ ಎಂದರೆ ದೇವಿ, ದೇವತೆ, ನಾಯಕಿ, ಮಹಿಷಾಸುರ ಮರ್ಧಿನಿ ಎಲ್ಲವೂ. ಜೊತೆಗೆ ನಮ್ಮ ಮತ ಕ್ಷೇತ್ರವೂ ಕಾಂಗ್ರೆಸ್‌ - ನೆಹರೂ ಮನೆತನದ ಜಾಗೀರುದಾರಿಯೇ! ವಿದ್ಯಾವಂತ ತರುಣರೊಬ್ಬರು ಸಮಾಜವಾದಿ ಪಕ್ಷದ ಟಿಕೆಟ್‌ ಪಡೆದು ಆದರೆ ಎಲ್ಲ ಕಾಂಗೆಸ್ಸೇತರ ಪಕ್ಷಗಳ ಬೆಂಬಲ ಪಡೆದು ಒಂದೇ ಒಂದು ಚುನಾವಣೆಯಲ್ಲಿ ಸಂಸತ್‌ಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ಒಡೆಯಿತು. ಬ್ಯಾಂಕ್‌ ರಾಷ್ಟ್ರೀಕರಣ, ರಾಜಧನ ರದ್ದತಿ ಆಯಿತು. ಹಳೆಯ ಗೊಡ್ಡು ತಲೆಗಳನ್ನು ಮೂಲೆಗೆ ಸರಿಸಿ ತರುಣರು ಅಧಿಕಾರಕ್ಕೆ ಬರಬೇಕು, ಹೊಸದಾಗಿ ಯೋಚಿಸಬೇಕು, ಬಡವರ ಪರವಾಗಿ ಚಿಂತಿಸಬೇಕು ಎಂದು ಇಂದಿರಾ ಕರೆ ಕೊಟ್ಟರು. ಆಕಾಶವಾಣಿ, ಪತ್ರಿಕೆಗಳು, ಗ್ರಾಮ ಪಂಚಾಯಿತಿಯ ಚಾವಡಿ ಎಲ್ಲ ಕಡೆಯೂ ಇದೇ ಮಾತು.

ಬೀಸುತ್ತಿದ್ದ ರಾಜಕೀಯ ಗಾಳಿಗೆ ಅನುಗುಣವಾಗಿ ಗೆಲ್ಲುವ ಕುದುರೆಯನ್ನು ಏರುವ ಆಸೆಯಿಂದ ಕಾಂಗ್ರೆಸ್ಸನ್ನು ವಿರೋಧಿಸಿ ಆಯ್ಕೆಯಾಗಿದ್ದ ನಮ್ಮ ಸಂಸದರು ಕಾಂಗ್ರೆಸ್‌ ಸೇರಿದರು. ಅಂದರೆ ಇಂದಿರಮ್ಮನ ಸೆರಗಿನ ಚುಂಗನ್ನು ಹಿಡಿದರು. ಇದಕ್ಕೆಲ್ಲ ಮತದಾರರನ್ನು ಒಲಿಸಬೇಕಲ್ಲ. ಅದಕ್ಕಾಗಿ ಅವರು ನಿರೂಪಿಸುತ್ತಿದ್ದ ಪ್ರಸಂಗಗಳ ವರಸೆಯದೇ ಒಂದು ಸೊಗಸು.

ಒಂದು ಸಂಜೆ ಜಿಲ್ಲಾ ಕೇಂದ್ರಕ್ಕೆ ಬಂದರು. ಆಗ ಕರ್ನಾಟಕಲ್ಲಿ ಇನ್ನೂ ನಿಜಲಿಂಗಪ್ಪನವರ ಆಡಳಿತವೇ. ಇಂದಿರಾ ಕಾಂಗ್ರೆಸ್‌ ಬೇರು ಬಿಡಲು ಪ್ರಯತ್ನಿಸುತ್ತಿತ್ತು. ಎಲ್ಲ ಕಡೆಯೂ ಬೆರಳೆಣಿಕೆಯ ಮಂದಿ ಮಾತ್ರ ಗುರುತಿಸಿಕೊಳ್ಳುತ್ತಿದ್ದರು. ಇಂತವರಲ್ಲಿ ನಮ್ಮಂತಹ ಪಡ್ಡೆ ಕಾಲೇಜು ಹುಡುಗರೂ ಇದ್ದರು. ನಮಗೆಲ್ಲ ಜಿಲ್ಲಾ ಕಾಂಗ್ರೆಸ್‌ನ ಕಛೇರಿಯಿಂದ ಆಹ್ವಾನ ಬಂತು. ಅಂದರೆ ಇಂದಿರಾಗಾಂಧಿಯೇ ನಮ್ಮನ್ನು ಖುದ್ದು ಆಹ್ವಾನಿಸಿದ ಹಾಗೆ. ನಾವು ಒಂದು ಹತ್ತು-ಹದಿನೈದು ಜನ ಸಭೆಗೆ ಹೋದೆವು. ಅಲ್ಲಿ ಸೇರಿದವರು ನಾವಷ್ಟೇ ಮಂದಿ.

ಸಂಸದರು ಬಂದರು. ದೆಲ್ಲಿಯಲ್ಲಿ ಆಗುತ್ತಿದ್ದ ಬೆಳವಣಿಗೆಗಳನ್ನೆಲ್ಲ ಗಂಭೀರವಾದ ಧ್ವನಿಯಲ್ಲಿ ನಾಟಕೀಯ ಬಾಗು-ಬಳಕುಗಳೊಂದಿಗೆ ವಿವರಿಸಿದರು. ಇಂದಿರಾಗಾಂಧಿಯನ್ನು ಒಬ್ಬಂಟಿ ಮಾಡುವ, ಮೂಲೆಗುಂಪು ಮಾಡುವ ಮುದಿಗೊಡ್ಡುಗಳ ಪ್ರಯತ್ನವನ್ನು ಕಟುವಾದ ಭಾಷೆಯಲ್ಲಿ ಹೀಯಾಳಿಸಿದರು. ಹಾಗೆ ಹೀಯಾಳಿಸುತ್ತಾ ಹೀಯಾಳಿಸುತ್ತಾ ಅವರೇ ಭಾವೋದ್ವೇಗಕ್ಕೆ ಒಳಗಾದರು. ಇನ್ನೇನು ಕಣ್ಣಲ್ಲಿ ನೀರು ಬಂದೇಬಿಡಬೇಕು ಅನ್ನುವ ಹೊತ್ತಿಗೆ ಚೀಲದಿಂದ ಒಂದು ಪತ್ರಿಕೆ ತೆಗೆದು, ದಯವಿಟ್ಟು ನೀವೆಲ್ಲ ಒಬ್ಬೊಬ್ಬರಾಗಿ ಈ ಫೋಟೋ ನೋಡಿ ಎಂದು ನಮಗೆ ಕೊಟ್ಟರು.

ಇಂದಿರಾರನ್ನು ಉಗ್ರವಾಗಿ ಟೀಕಿಸುತ್ತಿದ್ದ ಎಸ್‌.ಕೆ. ಪಾಟೀಲರು ನೆಹರೂ ಬೂಟಿನ ಲೇಸನ್ನು ಕಟ್ಟುತ್ತಿದ್ದ ಫೋಟೋ ಅದು.

ನೋಡಿ, ಈ ವ್ಯಕ್ತಿ ನೆಹರೂ ಮನೆಯಲ್ಲಿ ಊಳಿಗ ಮಾಡಿಕೊಂಡು ಇದ್ದೋನು. ಅವರ ದಯೆಯಿಂದ ಬೆಳೆದು ಪಕ್ಷದಲ್ಲಿ ಒಂದು ಮಟ್ಟಕ್ಕೆ ಬಂದವನು. ಈಗ ಕೃತಜ್ಞತೆಯೇ ಇಲ್ಲದ ಕುನ್ನಿಯಂತೆ ಇಂದಿರಾರನ್ನು ವಿರೋಧಿಸುವುದು ಮಾತ್ರವಲ್ಲ, ಅವರ ಬಗ್ಗೆ ಏಕವಚನದಲ್ಲೇ ಮಾತಾಡ್ತಾನೆ. ಇಲ್ಲ ಸಲ್ಲದ ಅಪಪ್ರಚಾರ ಮಾಡ್ತಾನೆ. ಇಂತಹ ಸನ್ನಿವೇಶದಲ್ಲಿ ವಿದ್ಯಾವಂತರು, ತರುಣರೂ ಆದ ನಿಮ್ಮಂತವರ ಬೆಂಬಲ ಯಾರಿಗಿರಬೇಕು?

ನಮ್ಮೆಲ್ಲರ ಒಕ್ಕೊರಲಿನ ಉತ್ತರ ಏನೆಂದು ಹೇಳುವ ಅಗತ್ಯವಾದರೂ ಏನಿದೆ

ಆ ಕ್ಷಣದಿಂದ ಇಂದಿರಾ ಬಗ್ಗೆ ನಮ್ಮ ನಿಷ್ಠೆ ಇನ್ನೂ ಉಗ್ರವಾಯಿತು.

******

ರಾತ್ರಿ ಇನ್ನೊಂದು ಬಹಿರಂಗ ಸಭೆ. ಇದೇ ಸಂಸದರ ಸಭೆಯಲ್ಲಿ ಎಲ್ಲ ಹಿನ್ನೆಲೆಯವರೂ ಇದ್ದಾರೆ. ಪ್ರಸಂಗದ ಬೇರೆ ವರಸೆ. ನೋಡಿ, ನಾನು ನಿಮ್ಮೆಲ್ಲರ ಬೆಂಬಲದಿಂದ, ಆಶೀರ್ವಾದದಿಂದ ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದ ಪಕ್ಷದಿಂದ ಆಯ್ಕೆಯಾದೆ. ದೆಹಲಿಗೆ ಹೋದೆ.

ಒಂದು ರಾತ್ರಿ ತಡವಾಗಿ ಫೋನ್‌ ಬಂತು. ಪ್ರಧಾನಿ ನಿಮ್ಮ ಮನೆಗೆ ನಾಳೆ ಬೆಳಿಗ್ಗೆ ತಿಂಡಿಗೆ ಬರಬೇಕೆಂದಿದ್ದಾರೆ, ನಿಮಗೆ ಒಪ್ಪಿಗೆಯೇ?

ನೀವೇ ಒಂದು ನಿಮಿಷ ಯೋಚಿಸಿ. ನೆಹರೂ ಅಷ್ಟುದೊಡ್ಡ ನಾಯಕರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ದೊಡ್ಡವರು. ನನ್ನಂತವನ ಮನೆಗೆ ಅವರ ಮಗಳು ಬರುತ್ತೇನೆಂದು ತಾನೇ ತಾನಾಗಿ ಹೇಳಿ ಕಳಿಸಿದಾಗ ನಾನು ಏನು ಮಾಡಬೇಕು? ನೀವೇ ಹೇಳಿ.

ಸಭೆ ಒಕ್ಕೊರಲಿನಿಂದ ಈಗಾಗಲೇ ಸಂಸದರು ಇಂದಿರಾಗೆ ಮನೆಯಲ್ಲಿ ನೀಡಿದ್ದ ಆಹ್ವಾನವನ್ನು ಅನುಮೋದಿಸಿ ಕರತಾಡನ ಮಾಡಿತು.

ಬೆಳಿಗ್ಗೆ ಮನೆಗೆ ಬಂದರು. ಆತುರಾತರವಾಗಿ ಹೊಂದಿಸಿದ್ದ ತಿಂಡಿಯನ್ನೇ ತುಂಬಾ ಇಷ್ಟಪಟ್ಟು ತಿಂದರು. ನೀನು ಇನ್ನೂ ಯುವಕ. ಒಳ್ಳೆಯ ವಿದ್ಯಾವಂತ. ನಿನಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ಮುದಿಗೊಡ್ಡುಗಳ ಜೊತೆ ಸೇರಬೇಡ ಎಂದರು.

ಇಂತಹ ಬುದ್ಧಿ ಮಾತನ್ನು ಇಷ್ಟುದೊಡ್ಡವರು ಹೇಳಿದಾಗ ನಾನೇನು ಮಾಡಬೇಕು. ನೀವಾದರೂ ಏನು ಮಾಡುತ್ತೀರಾ?

ಪಂಥಾಹ್ವಾನಕ್ಕೆ ಸಭೆ ಸೂಕ್ತವಾಗಿ ಉತ್ತರಿಸಿತು.

ಇಲ್ಲ, ಇಲ್ಲ. ನಿಮ್ಮ ಆಯ್ಕೆ ಸರಿಯಾಗಿದೆ. ಭಾಷಣ ಮುಂದುವರೆಯಿತು.

ಐಸಿಂಗ್‌ ದಿ ಕೇಕ್‌ ಆಗಬೇಕಲ್ಲ. ಇಂದಿರಾ ಬಗ್ಗೆ ಆವಾಗ ಇದ್ದ ಒಂದು ವಿರೋಧವೆಂದರೆ ಆಕೆ ವಿಧವೆಯೆಂಬುದು. ವಿಧವೆಯು ರಾಜ್ಯವಾಳಿದರೆ ದೇಶದ ಗತಿ ಏನಾಗಬೇಕು ಎಂಬುದೇ ದೊಡ್ಡ ಚರ್ಚೆ. ನಮ್ಮ ಸಂಸದರು ಈ ಚರ್ಚೆಯನ್ನು ಮತ್ತಷ್ಟುವಿಸ್ತರಿಸಿದರು. ಈಗ ಅವರು ಹೆಚ್ಚೂ ಕಡಿಮೆ ಅಳುತ್ತಲೇ ಮಾತನಾಡುತ್ತಿದ್ದರು.

ಇಂದಿರಾರನ್ನು ವಿಧವೆ ಎನ್ನುತ್ತಾರೆ. ನಾವಾಗಲೀ, ನೀವಾಗಲೀ ಯಾರಾದರೂ, ಯಾರಿಗಾದರೂ ವಿಧವಾ ಪಟ್ಟವನ್ನು ಬಯಸುತ್ತೇವೆಯೇ?

ಈಗಾಗಲೇ ನಮ್ಮ ಮನೆಗಳಲ್ಲಿರುವ ವಿಧವಾ ತಾಯಂದಿರನ್ನು, ಅಕ್ಕ-ತಂಗಿಯರನ್ನು ಕಡೆಗಣಿಸುತ್ತೇವೆಯೇÐ ದೇವರ ಕೃಪೆ ಕಡಿಮೆಯಾದರೆ ಯಾರು ಬೇಕಾದರೂ ವಿಧವೆ ಆಗಬಹುದು. ನಾಳೆ ಶ್ರೀಮತಿ ಮುರಿಗೆಮ್ಮನವರು ಕೂಡ (ನಿಜಲಿಂಗಪ್ಪನವರ ಪತ್ನಿಯ ಹೆಸರು) ಇದೇ ಸ್ಥಾನಕ್ಕೆ ಬರಬಹುದು. ಆದರೆ ನಾನು ಅವರನ್ನು ವಿಧವೆ ಎಂದು ಹೀಗಳೆಯುವುದಿಲ್ಲ.

ಸಂಸದರ ಧ್ವನಿ ಉತ್ಕಂಟಿತವಾಗಿತ್ತು.

ಸಭೆ ಮುಗಿಯುವ ಹೊತ್ತಿಗೆ ನೆರದಿದ್ದವರೆಲ್ಲರನ್ನೂ ಸಂಸದರು ಮೀಟಿದ್ದರು.

******

ಪ್ರಸಂಗ ಇನ್ನೊಂದು ಸ್ತರದಲ್ಲಿ ಕೂಡ ಮುಂದುವರೆಯಿತೆಂದು ಹೇಳಬೇಕು.

ಇದೇ ಸಂದರ್ಭದಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಭಾರತ ಕಂಡ ಶ್ರೇಷ್ಠ ಪತ್ರಕರ್ತರೂ, WITNESS TO AN ERA ಎಂಬ ಶ್ರೇಷ್ಠ ಆತ್ಮ ಚರಿತ್ರೆಯ ಲೇಖಕರೂ ಆದ ಫ್ರಾಂಕ್‌ ಮೊರೇಸ್‌ ಇಂದಿರಾರನ್ನು ಉಗ್ರವಾಗಿ ಟೀಕಿಸಿ ಪ್ರತಿದಿನವೂ MYTH AND REALITY ಅಂಕಣವನ್ನು ಮುಖಪುಟದಲ್ಲೇ ಬರೆಯುತ್ತಿದ್ದರು. ನಮ್ಮ ಕಾಲೇಜಿನ ಮೇಷ್ಟು್ರಗಳು ಈ ಅಂಕಣವನ್ನು ತಪ್ಪದೇ ಓದಬೇಕೆಂದು ಒತ್ತಾಯಿಸುತ್ತಿದ್ದರು. ಇಂದಿರಾ ಬಗ್ಗೆ ಇರುವ ಉತ್ಪ್ರೇಕ್ಷಿತ ಮಿಥ್ಯೆಗಳು, ಕಲ್ಪನೆಗಳು ಯಾವುವು, ನಿಜವಾದ ವಾಸ್ತವ ಏನು ಎಂದು ಅಂಕಿ-ಅಂಶಗಳ ಸಮೇತ ಬರೆಯುತ್ತಿದ್ದರು. ಓದುವುದಕ್ಕೆ ಚೆನ್ನಾಗಿರುತ್ತಿತ್ತು. ಒಳಗೆ ಇಷ್ಟವೂ ಆಗುತ್ತಿತ್ತು. ಆದರೆ ಭಾವನಾತ್ಮಕ ನಿಷ್ಠೆ, ಒಲವು ಇಂದಿರಾ ಕಡೆಗಿತ್ತು. ಕೊನೆಗೂ ಇಂದಿರಾ ಗೆದ್ದು, ವಿರೋಧಿಗಳೆಲ್ಲ ನೆಲ ಕಚ್ಚಿದಾಗ ಇದೇ ಫ್ರಾಂಕ್‌ ಮೊರೇಸ್‌ ಕೊನೆಯ ಅಂಕಣವಾಗಿ PEOPLES VERDICT ಎಂದು ಬರೆದು ಇಂದಿರಾರನ್ನು ಅಭಿನಂದಿಸಿದರು.