Viral News: ಜಪಾನಿನ ಮಹಿಳೆಯೊಬ್ಬರು, ತಮ್ಮ ಒತ್ತಡವನ್ನು ನಿವಾರಿಸಲು ಬರೋಬ್ಬರಿ ₹258 ಕೋಟಿ ಆನ್ ಲೈನ್ ಶಾಪಿಂಗ್ ಮಾಡಿ, ಅದು ಮನೆ ಬಾಗಿಲಿಗೆ ಬರುತ್ತಿದ್ದಂತೆ ಕ್ಯಾನ್ಸರ್ ಮಾಡುತ್ತಿದ್ದು, ಮೂರು ವರ್ಷಗಳಿಂದ ಇದನ್ನೆ ಮಾಡಿಕೊಂಡು ಬಂದಿದ್ದ ಮಹಿಳೆ, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಸ್ಟ್ರೆಸ್ ರಿಲೀಫ್‌ಗಾಗಿ ₹258 ಕೋಟಿ ಶಾಪಿಂಗ್
ಜಪಾನ್‌ನ ಒಂದು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯೋಶಿದಾ ಎಂಬ ಮಹಿಳೆಯೊಬ್ಬರು ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬರೋಬ್ಬರಿ 258 ಕೋಟಿ ರೂಪಾಯಿ ಮೌಲ್ಯದ ಆನ್‌ಲೈನ್ ಶಾಪಿಂಗ್ ಮಾಡಿದ್ದಾರೆ. ಆದರೆ ಅವರು ಆರ್ಡರ್ ಮಾಡಿದ್ದ ಯಾವುದೇ ಉತ್ಪನ್ನವೂ ಅವರ ಕೈ ಸೇರಲಿಲ್ಲ. ಡೆಲಿವರಿ ಬಾಯ್ ಆರ್ಡರ್‌ಗಳನ್ನು ತಂದು ನೀಡುತ್ತಿದ್ದುದು ಮಾತ್ರ ಬೇರೆ ಬೇರೆ ಮನೆಗಳಿಗೆ. ಇದಕ್ಕೆ ಕಾರಣ, ಮಹಿಳೆ ತನ್ನ ನಿಜವಾದ ವಿಳಾಸ ನೀಡುವ ಬದಲು ನಕಲಿ ವಿಳಾಸ ನೀಡುತ್ತಿದ್ದರು. ಹೀಗಾಗಿ ಆರ್ಡರ್ ಆಟೋಮ್ಯಾಟಿಕ್ ಆಗಿ ರದ್ದಾಗುತ್ತಿತ್ತು. ಇದರಿಂದಾಗಿ ಇದೀಗ ಮಹಿಳೆ ಜೈಲು ಸೇರಿದ್ದಾರೆ.
ಡೆಲಿವರಿಗಾಗಿ 45 ಲಕ್ಷ ರೂಪಾಯಿ ವೆಚ್ಚ
ಯೋಶಿದಾ ಸುಮಾರು ಎರಡು ವರ್ಷಗಳ ಕಾಲ ಆನ್ ಲೈನ್ ಶಾಪಿಂಗ್ ಮಾಡಿ, ಕ್ಯಾನ್ಸಲ್ ಮಾಡುತ್ತಿದ್ದರು. ಈ ಅವಧಿಯಲ್ಲಿ ಮಹಿಳೆ 2000ಕ್ಕೂ ಹೆಚ್ಚು ಆರ್ಡರ್‌ಗಳನ್ನು ವಿವಿಧ ರೀತಿಯಲ್ಲಿ ಕ್ಯಾನ್ಸಲ್ ಮಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಆನ್‌ಲೈನ್ ಪಾರ್ಸೆಲ್ ಪಾವತಿಗಾಗಿ ಕನ್ವೀನಿಯನ್ಸ್ ಸ್ಟೋರ್ ಆಯ್ಕೆಯನ್ನು ಆರಿಸಿಕೊಂಡರೂ, ನಿಗದಿತ ಸಮಯದೊಳಗೆ ಹಣ ಪಾವತಿಸಿರಲಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ಕ್ಯಾಶ್ ಆನ್ ಡೆಲಿವರಿ ವೇಳೆ ಪಾರ್ಸೆಲ್ ನೇರವಾಗಿ ಸ್ವೀಕರಿಸಲು ನಿರಾಕರಿಸುತ್ತಿದ್ದರು. ಜಪಾನಿನ ಪ್ರಸಾರ ಸಂಸ್ಥೆ FNN ಪ್ರೈಮ್ ಆನ್‌ಲೈನ್ ಪ್ರಕಾರ, ಪದೇಪದೇ ಆರ್ಡರ್‌ಗಳು ರದ್ದಾಗಿದ್ದರಿಂದ ಶುಯೇಷಾ ಸಂಸ್ಥೆಯ ಜಂಪ್ ಕ್ಯಾರೆಕ್ಟರ್ಸ್ ಸ್ಟೋರ್‌ಗೆ ಡೆಲಿವರಿ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳಲ್ಲಿ ಸುಮಾರು 75 ಲಕ್ಷ ಯೆನ್, ಅಂದರೆ ಸುಮಾರು 45 ಲಕ್ಷ ರೂಪಾಯಿ ನಷ್ಟವಾಗಿದೆ.
‘ನನಗೆ ತುಂಬಾ ನೆಮ್ಮದಿ ಸಿಗುತ್ತಿತ್ತು ಎಂದ ಮಹಿಳೆ
ವರದಿಯ ಪ್ರಕಾರ, 32 ವರ್ಷದ ಯೋಶಿದಾ ತನಿಖಾ ಸಂಸ್ಥೆಗೆ, ‘ಆನ್‌ಲೈನ್ ಶಾಪ್‌ನಲ್ಲಿ ಅನಿಮೆ ಪಾತ್ರಗಳ ವಸ್ತುಗಳನ್ನು ನೋಡುವುದು ನನಗೆ ತುಂಬಾ ಇಷ್ಟವಾಗುತ್ತಿತ್ತು. ದೈನಂದಿನ ಜೀವನದಲ್ಲಿ ಸಾಕಷ್ಟು ಒತ್ತಡವಿತ್ತು. ಯಾವುದೇ ವಸ್ತು ಲಭ್ಯವಾಗುವ ಮುನ್ನವೇ ಅದನ್ನು ಆರ್ಡರ್ ಮಾಡಿದಾಗ ನನಗೆ ವಿಚಿತ್ರವಾದ ತೃಪ್ತಿ ಸಿಗುತ್ತಿತ್ತು ಮತ್ತು ನನ್ನ ಎಲ್ಲಾ ಒತ್ತಡವೂ ದೂರವಾಗುತ್ತಿತ್ತು. ಆ ಕಂಪನಿಯ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಾನು ಇದನ್ನೆಲ್ಲ ನನಗಾಗಿ ಮಾಡುತ್ತಿದ್ದೆ’ ಎಂದು ತಿಳಿಸಿದ್ದಾರೆ.
238 ನಕಲಿ ಖಾತೆಗಳನ್ನು ಬಳಸಿದ್ದ ಮಹಿಳೆ
FNN ವರದಿ ಪ್ರಕಾರ, ಯೋಶಿದಾ ಸುಮಾರು ಆರು ವರ್ಷಗಳ ಹಿಂದೆ ಈ ಆನ್‌ಲೈನ್ ಸ್ಟೋರ್‌ನಲ್ಲಿ ಶಾಪಿಂಗ್ ಆರಂಭಿಸಿದ್ದರು. ಆರಂಭದಲ್ಲಿ ಅವರು ಆರ್ಡರ್ ಮಾಡುತ್ತಿದ್ದ ವಸ್ತುಗಳನ್ನು ನಿಜವಾಗಿಯೂ ಪಡೆದುಕೊಳ್ಳುತ್ತಿದ್ದರು. ಆದರೆ ವಸ್ತುಗಳನ್ನು ಆರ್ಡರ್ ಮಾಡಿ ತಕ್ಷಣವೇ ಕ್ಯಾನ್ಸಲ್ ಮಾಡುವ ಸೀರೀಸ್ ಮಾತ್ರ 2023ರ ಅಕ್ಟೋಬರ್ ವೇಳೆಗೆ ಆರಂಭವಾಗಿ ಸುಮಾರು ಎರಡು ವರ್ಷಗಳ ಕಾಲ ಮುಂದುವರಿಯಿತು. ಈ ಅವಧಿಯಲ್ಲಿ ಶಾಪಿಂಗ್ ಮಾಡಲು ಅವರು 238 ವಿವಿಧ ಖಾತೆಗಳನ್ನು ಬಳಸಿದ್ದರು.
ಕಠಿಣ ಕ್ರಮಕ್ಕೆ ಕಂಪನಿ ಆಗ್ರಹ
ಮಹಿಳೆಯ ಈ ಕೃತ್ಯದಿಂದ ನಿಜವಾಗಿಯೂ ಉತ್ಪನ್ನಗಳನ್ನು ಖರೀದಿಸಲು ಬಯಸಿದ್ದ ಗ್ರಾಹಕರಿಗೆ ದೀರ್ಘಕಾಲದವರೆಗೆ ತೊಂದರೆಯಾಗಿದೆ ಮತ್ತು ಅವರಿಗೆ ವಸ್ತುಗಳ ಖರೀದಿಗೆ ಅವಕಾಶ ಸಿಗಲಿಲ್ಲ ಎಂದು ಶುಯೇಷಾ ಕಂಪನಿ ಹೇಳಿದೆ. ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕಂಪನಿ ಪೊಲೀಸರಿಗೆ ಮನವಿ ಮಾಡಿದೆ. ವರದಿಗಳ ಪ್ರಕಾರ, ಯೋಶಿದಾ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಜಪಾನ್ ಕಾನೂನಿನ ಪ್ರಕಾರ, ವಂಚನೆಯ ಮೂಲಕ ವ್ಯವಹಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರ ವಿರುದ್ಧ ಇದೀಗ ಕ್ರಮ ಕೈಗೊಳ್ಳಲಾಗುತ್ತಿದೆ.


