ಜಗತ್ತಿನಲ್ಲಿ ಬುದ್ಧಿ ಒಂದಿದ್ರೆ ಹೇಗೆ ಬೇಕಾದ್ರೂ ಹಣ ಸಂಪಾದಿಸ್ಬಹುದು. ಸುಮ್ನೆ ಟೈಮ್‌ ಹಾಳು ಮಾಡ್ತಾ ಗಾಸಿಫ್‌ ಮಾಡುವ ಜನರಿಗೆ ಒಂದು ಐಡಿಯಾ ಇಲ್ಲಿದೆ. ಗಾಸಿಫ್‌ ಮಾಡೂ ನೀವು ಹಣ ಸಂಪಾದನೆ ಮಾಡ್ಬಹುದು ಗೊತ್ತಾ?

ಗಾಸಿಪ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ನಮ್ಮ ಮನೆ ಕೊಳೆತು ನಾರ್ತಿದ್ರೂ ಬೇರೆಯವರ ಮನೆಯಲ್ಲಿ ಇರುವೆ ಸತ್ತಿದ್ದನ್ನು ಜನ ಆಸಕ್ತಿಯಿಂದ ಕೇಳ್ತಾರೆ. ಸೆಲೆಬ್ರಿಟಿಗಳು ಮಾತ್ರವಲ್ಲ ಅಕ್ಕಪಕ್ಕದ ಮನೆಯವರ ಸುದ್ಧಿ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ನಾವೆಲ್ಲ ಗಾಸಿಫ್‌ ಮಾಡಿ ಬಿಡ್ತೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಇದನ್ನೇ ಬಡಂವಾಳ ಮಾಡ್ಕೊಂಡಿದ್ದಾಳೆ.

ಗಾಸಿಫ್‌ ಮಾಡಿಯೇ ಹಣಗಳಿಸಿದ ಮಹಿಳೆ !

ಗಾಸಿಫ್‌ ಒಂದು ಬ್ಯುಸಿನೆಸ್‌ ಮಾಡ್ಕೊಳ್ಬಹುದು ಅಂತ ತೋರಿಸಿಕೊಟ್ಟ ಮಹಿಳೆಗೆ 67 ವರ್ಷ ವಯಸ್ಸು. ಆಕೆ ಕೊಲಂಬಿಯಾದ ನಿವಾಸಿ. ಹೆಸರು ಮಿರಿಯಮ್. ಮಿರಿಯಮ್ಗೆ ಚಿಕ್ಕಂದಿನಿಂದಲೂ ಸುತ್ತಮುತ್ತ ನಡೆಯುವ ವಿಚಾರಗಳನ್ನು ತಿಳಿದುಕೊಳ್ಳುವುದೆಂದರೆ ತುಂಬಾ ಆಸೆ. ನೆರೆಹೊರೆಯವರ ಮಾತು, ಅವರ ಕುಟುಂಬದ ವಿಚಾರ, ಯಾರ ನಡುವೆ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಅವರಿಗೆ ವಿಶೇಷ ಆಸಕ್ತಿ. ಇದೇ ಆಸಕ್ತಿಯನ್ನು ಅವರು ಈಗ ಹಣ ಸಂಪಾದಿಸುವ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ.

ಮನೆಯ ಹೊರಗೆ ಕುಳಿತುಕೊಂಡರೆ ಸಾಕು, ಸುತ್ತಮುತ್ತಲಿನವರ ಮಾತುಗಳು ಅವರ ಕಿವಿಗೆ ಬೀಳುತ್ತವೆ. ಯಾರಾದರೂ ಮಾತನಾಡುತ್ತಿದ್ದರೆ ಮಿರಿಯಮ್ ಅವರ ಗಮನ ಅತ್ತಲೇ ಇರುತ್ತದೆ. ತಮ್ಮ ಬಳಿ ಯಾವಾಗಲೂ ಒಂದು ನೋಟ್ಬುಕ್ ಇಟ್ಟುಕೊಂಡಿರುತ್ತಾರೆ. ಕೇಳಿದ ವಿಚಾರಗಳನ್ನು ಅದರಲ್ಲಿ ಬರೆದುಕೊಳ್ಳುತ್ತಾರೆ.

ಸಣ್ಣಪುಟ್ಟ ಮಾಹಿತಿಗೆ ಅವರು 5 ಸಾವಿರದಿಂದ 10 ಸಾವಿರ ಕೊಲಂಬಿಯನ್ ಪೆಸೊವರೆಗೆ ಹಣ ಪಡೆಯುತ್ತಾರಂತೆ. ಆದರೆ ಗಂಭೀರವಾದ ರಹಸ್ಯಗಳ ವಿಷಯ ಬಂದರೆ ಹಣದ ಮೊತ್ತವೂ ಹೆಚ್ಚಾಗುತ್ತದೆ. ಒಮ್ಮೆ ಪತ್ನಿ ಹೊರಗೆ ಹೋದಾಗ ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿದೆ ಎಂಬ ವಿಷಯವನ್ನು ಮಿರಿಯಮ್ ತಿಳಿದುಕೊಂಡಿದ್ದರಂತೆ. ಆ ವಿಚಾರವನ್ನು ಬಹಿರಂಗಪಡಿಸದೇ ಇರಲು ಬರೋಬ್ಬರಿ 7 ಲಕ್ಷ ಕೊಲಂಬಿಯನ್ ಪೆಸೊ ಹಣ ಪಡೆದಿದ್ದಾಗಿ ಅವರು ಹೇಳಿದ್ದಾರೆ.

ಮಿರಿಯಮ್ ಬಳಿ ತಮ್ಮ ಗಾಸಿಪ್ಗಳಿಗೆ ಸಾಕ್ಷಿಯಾಗಿ ಫೋಟೋಗಳು ಮತ್ತು ಇತರ ಮಾಹಿತಿಗಳಿರುವ ಬೋರ್ಡ್ ಕೂಡ ಇದೆ. ಸಾಕ್ಷಿ ಇಲ್ಲದೆ ನಾನು ಯಾರ ಬಗ್ಗೆಯೂ ಏನನ್ನೂ ಹೇಳುವುದಿಲ್ಲ ಎಂದು ಅವರು ಹೇಳುತ್ತಾರೆ.

ತಮ್ಮ ಈ ವಿಚಿತ್ರ ಉದ್ಯಮದಿಂದ ಬಂದ ಹಣದಿಂದ ಎರಡು ಮನೆಗಳನ್ನು ಖರೀದಿಸಿದ್ದೇನೆ ಎಂದು ಮಿರಿಯಮ್ ಹೇಳಿಕೊಂಡಿದ್ದಾರೆ. ವಾರದ ಆದಾಯವನ್ನು ಕೂಡ ಅವರು ದೊಡ್ಡ ಹುಂಡಿಯಲ್ಲಿ ಸಂಗ್ರಹಿಸುತ್ತಾರಂತೆ. ಅಷ್ಟೇ ಅಲ್ಲ, ತಮ್ಮ ಎರಡನೇ ಮನೆಯಲ್ಲಿರುವ ಸ್ನೇಹಿತರ ಜೊತೆ ಪಾರ್ಚಿಸಿ ಆಟ ಆಡುತ್ತಾ ಹೊಸ ಹೊಸ ಸುದ್ದಿಗಳನ್ನೂ ತಿಳಿದುಕೊಳ್ಳುತ್ತಾರೆ. ಮಿರಿಯಮ್ ತಮ್ಮನ್ನು ತಮಾಷೆಯಾಗಿ ಗಾಸಿಪ್ಗಳ ರಾಣಿ ಎಂದು ಕರೆದುಕೊಳ್ಳುತ್ತಾರೆ.

ಗಾಸಿಪ್ ನನ್ನ ಜೀವನ. ಅದು ನನ್ನ ರಕ್ತದಲ್ಲೇ ಇದೆ. ನೀವು ಎಲ್ಲಿಗೆ ಹೋದರೂ ಗಾಸಿಪ್ ಇದ್ದೇ ಇರುತ್ತದೆ. ಹಾಗಾಗಿ ಈ ಉದ್ಯಮ ಎಂದಿಗೂ ಮುಗಿಯುವುದಿಲ್ಲ ಎನ್ನುತ್ತಾರೆ ಅವರು.