ಬೇರೆಯವರ ಮನೆಮಂದೆ ತಮ್ಮ ಜಾತಿ ನಾಯಿಗಳನ್ನು ನಿಲ್ಲಿಸಿ ಮಲ-ಮೂತ್ರ ಮಾಡಿಸುವ 'ಅನಾಗರಿಕರಿಗೆ' ಹೀಗೊಂದು ಬುದ್ಧಿ ಹೇಳುವ ಬೋರ್ಡ್​ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಕಮೆಂಟ್ಸ್​ ನೋಡಿದ್ರೆ ಸುಸ್ತಾಗೋದು ಗ್ಯಾರೆಂಟಿ! 

ಇದೀಗ ಮನೆಯಲ್ಲಿ ನಾಯಿಗಳನ್ನು ಸಾಕುವುದು ಹಲವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮನೆಯ ಮಕ್ಕಳಿಗಿಂತಲೂ ಹೆಚ್ಚಾಗಿ ನಾಯಿಗಳಿಗೆ ಖರ್ಚು ಮಾಡುವ ದೊಡ್ಡ ವರ್ಗವೇ ಇದೆ. ಅಷ್ಟಕ್ಕೂ ಸಾಕು ಪ್ರಾಣಿಗಳಿಗೂ ಮನುಷ್ಯರಿಗೂ ಅವಿನಾಭಾವ ಸಂಬಂಧ ತಲೆತರಾಂತರಗಳಿಂದ ಇದದ್ದೇ. ಮನೆಯಲ್ಲಿ ನಾಯಿ, ಬೆಕ್ಕು ಇತ್ಯಾದಿ ಪ್ರಾಣಿಗಳು ಇದ್ದರೆ, ಆ ಮನೆಯೇ ಚೆಂದ. ಅದರಲ್ಲಿಯೂ ಅವುಗಳ ತುಂಟಾಟ ಅವುಗಳ ಜೊತೆಗಿನ ಒಡನಾಟ ಎಲ್ಲವೂ ಖುಷಿ ಕೊಡುವುದು ನಿಜವೇ. ಹಾಗೆಂದು ನಮ್ಮ ಈ ಖುಷಿ ಬೇರೆಯವರ ಮನೆಯ ನೆಮ್ಮದಿಯನ್ನು ಹಾಳು ಮಾಡಿದರೆ? ಈಗ ಆಗುತ್ತಿರುವುದೂ ಅದೇ.

ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಜಾತಿ ನಾಯಿಗಳನ್ನು ಸಾಕುವ ಹಲವರಿಗೆ ದೊಡ್ಡ ರೋಗವಿದೆ. ಅದೇನೆಂದರೆ ಬೇರೆಯವರ ಮನೆಯ ಮುಂದೆ ನಾಯಿಯನ್ನು ನಿಲ್ಲಿಸಿ ಮಲ ಮಾಡಿಸುವುದು. ಕೆಲವರು ಮಲವನ್ನು ತೆಗೆದುಕೊಂಡು ಹೋಗಲು ಮಷಿನ್​ ತರುವಂಥ ಒಳ್ಳೆಯತನ ತೋರಿದರೂ ಇನ್ನು ಹಲವರಿಗೆ ಅದು ಹೇಸಿಗೆಯ ಕೆಲಸ. ತಮ್ಮ ಮನೆಯ ನಾಯಿಯ ಮಲ ಬೇರೆಯವರ ಮನೆಯ ಮುಂದೆ ಮಾಡಿಸಿ ಖುಷಿಯಿಂದ ಹೋಗುತ್ತಾರೆ. ಬೆಳಿಗ್ಗೆ- ಸಂಜೆ ವಾಕಿಂಗ್​ಗೆಂದು ನಾಯಿಗಳನ್ನು ಕರೆದುಕೊಂಡು ಬರುವ ಈ ಮಹಾತ್ಮರು, ಬೇರೆಯವರ ಮನೆಯ ಮುಂದೆ ಬೇಡದ್ದನ್ನು ಮಾಡಿಸಿ ಹೋದರೆ ಅದನ್ನು ತೆಗೆಯುವ ಕೆಲಸ ಮನೆಯವರದ್ದಾಗಿರುತ್ತದೆ. ದಿನವೂ ಶಾಪವನ್ನು ಹಾಕುವ ಸ್ಥಿತಿ ಆ ಮನೆಯವರದ್ದಾಗಿರುತ್ತದೆ ಅಷ್ಟೇ.

ಹಲವು ಕಡೆಗಳಲ್ಲಿ ಬೋರ್ಡ್​ ಹಾಕಿದರೂ ಇಂಥವರಿಗೆ ಅದು ತಿಳಿಯುವುದೇ ಇಲ್ಲ. ಕೇಳಿದರೆ ನಮ್ಮ ನಾಯಿಯನ್ನು ತುಂಬಾ ಹೈಜೀನ್​ ಆಗಿ ಸಾಕಿರುವ ಕಾರಣ ರಸ್ತೆ ಬದಿಯಲ್ಲಿ ಅದು ಹೋಗಲು ಒಪ್ಪುವುದೇ ಇಲ್ಲ ಎನ್ನುವ ಅಹಂಕಾರದ ಮಾತು ಬೇರೆ. ಹೆಚ್ಚು ಮಾತನಾಡಲು ಹೋದರೆ ಈ ಸುಸಂಸ್ಕೃತರ ಬಾಯಿಯಿಂದ ಅಷ್ಟೇ ಕೆಟ್ಟದ್ದಾಗಿರುವ ಪದಗಳು ಉದುರುವುದು ಬೇರೆ. ಲಕ್ಷ ಲಕ್ಷ ಕೊಟ್ಟು ಜಾತಿ ನಾಯಿಗಳನ್ನು ಖರೀದಿಸಿ ಅವುಗಳನ್ನು ಮನುಷ್ಯರಿಂತಲೂ ಹೆಚ್ಚಾಗಿ ಖರ್ಚು ಮಾಡಿ ಬೆಳೆಸುವವರಿಗೆ ಕನಿಷ್ಠ ಕಾಮನ್​ ಸೆನ್ಸ್​ ಎನ್ನುವುದೂ ಇಲ್ಲದೇ ಇರುವುದು ಮಾತ್ರ ಹಲವರಿಗೆ ಅಚ್ಚರಿಯೇ ಆಗುತ್ತದೆ. ಹಾಗಂತ ಈ ಶ್ರೀಮಂತರು ತಮ್ಮ ಮನೆಯ ಮುಂದೆ ಅವುಗಳಿಗೆ ಮಲ-ಮೂತ್ರ ಮಾಡಿಸಿ ಬರುವುದಿಲ್ಲ, ಅವರಿಗೆ ಬೇರೆಯವರ ಮನೆಯೇ ಬೇಕು!

ಇದರಿಂದ ಹಲವರು ಅದೆಷ್ಟು ರೊಚ್ಚಿಗೇಳುತ್ತಿದ್ದಾರೆ ಎಂದರೆ ಇಲ್ಲಿ ನೇತು ಹಾಕಿರುವ ಬೋರ್ಡೇ ಸಾಕ್ಷಿಯಾಗಿದೆ. ಇಲ್ಲಿ, ನಾಯಿ ಬೆಕ್ಕು ತಂದು ಬಿಡುವವರು ನಿಮ್ಮ ಹೆಂಡತಿಯನ್ನೂ ಬಿಟ್ಟು ಹೋಗಿ ಎಂದು ಬರೆದಿದ್ದಾರೆ. ಬೋರ್ಡ್​ ಏನೇ ಹಾಕಿದರೂ ಇಂಥ ಅನಾಗರಿಕರಿಗೆ ಅದೆಲ್ಲ ಅರ್ಥ ಆಗುವುದಿಲ್ಲ ಎನ್ನುವುದೂ ಸತ್ಯವೇ ಬಿಡಿ. ಆದರೆ ಈ ಬೋರ್ಡ್​ ಮಾತ್ರ ಜಾಲತಾಣದಲ್ಲಿ ಭಾರಿ ಹಾಸ್ಯದ ವಿಷಯವಾಗಿ ವೈರಲ್​ ಆಗ್ತಿದೆ. ಹಲವರು ತಾವೂ ಇದೇ ರೀತಿ ಬೋರ್ಡ್​ ಹಾಕಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಹಲವರು ಹೆಂಡತಿ ಬಿಟ್ಟು ಹೋದರೆ ಆ ಬೋರ್ಡ್​ ಹಾಕಿದವ, ನಿಮ್ಮ ಹೆಂಡ್ತಿ ಕರೆದುಕೊಂಡು ಹೋಗಿ, ನಾಯಿಯನ್ನೇ ತಂದುಬಿಡಿ ಎಂದು ಹೇಳಿಯಾನು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇದು ತಮಾಷೆಯ ವಿಷಯವಂತೂ ಅಲ್ಲವೇ ಅಲ್ಲ. ಇನ್ನಾದರೂ ನಾಯಿ ಮಾಲೀಕರಿಗೆ ಬುದ್ಧಿ ಬರಲಿ ಎನ್ನುತ್ತಿದ್ದಾರೆ ಹಲವರು.