ಕೃತಕ ಬುದ್ಧಿಮತ್ತೆ ಈಗಲೇ ಹೇಗೆಲ್ಲಾ ಕೆಲಸ ಮಾಡುತ್ತಿದೆ ಎನ್ನುವುದನ್ನು ನೋಡುತ್ತಲೇ 2100ರ ಕಾಲ್ಪನಿಕ ವಿಡಿಯೋ ಒಂದನ್ನು ಸೃಷ್ಟಿಸಲಾಗಿದೆ. ಆ ಸಮಯದಲ್ಲಿ ಜಗತ್ತು ಹೇಗಿರತ್ತೆ ಎಂದು ಈ ವಿಡಿಯೋ ನೋಡಿದರೆ ಮೈ ಝುಂ ಎನ್ನುತ್ತದೆ.
ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಆಗಿ ಸದ್ಯ ಕಲಿಯುಗದಲ್ಲಿದ್ದೇವೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಎಐ ಯುಗ ಅರ್ಥಾತ್ ಕೃತಕ ಬುದ್ಧಿಮತ್ತೆ ಯುಗ ಬರಲಿದೆ ಎನ್ನುವ ನಿರೀಕ್ಷೆ ಇದೆ. ಇದಾಗಲೇ ಕೃತಕ ಬುದ್ಧಿಮತ್ತೆ ನಿಧಾನವಾಗಿ ಜನಜೀವನವನ್ನು ಆವರಿಸುತ್ತಿದೆ. ಇದು ಆರಂಭವಷ್ಟೇ. ಈ ಹೊಸ ತಂತ್ರಜ್ಞಾನ ಬಳಸಿಕೊಂಡು ಫನ್ನಿ ವಿಡಿಯೋ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ತಮ್ಮ ಅಥವಾ ಯಾರದ್ದಾದರೂ ಫೋಟೋ, ವಿಡಿಯೋ ಬದಲಿಸಿ ಖುಷಿ ಪಡುವುದಕ್ಕೆ ಸಾಮಾನ್ಯ ಜನರು ಸೀಮಿತವಾಗಿದ್ದರೆ, ಇದಾಗಲೇ ಹಲವು ಉದ್ಯೋಗ ಕ್ಷೇತ್ರದಲ್ಲಿ ಎಐ ನುಗ್ಗಿ ಸಹಸ್ರಾರು ಉದ್ಯೋಗಿಗಳ ಕೆಲಸವನ್ನೂ ಬಲಿಪಡೆದುಕೊಂಡದ್ದು ಆಗಿ ಹೋಗಿದೆ.
ಇದು ಮುಂದುವರೆಯುವಲ್ಲಿ ಅಚ್ಚರಿ ಏನಿಲ್ಲ. ಇದೇ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ಅರ್ಥಾತ್ 2100ರಷ್ಟರ ಹೊತ್ತಿಗೆ ನಮ್ಮ ಜೀವನ ಹೇಗಿರುತ್ತೆ ಎನ್ನುವ ಕಾಲ್ಪನಿಕ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ವಿಡಿಯೋ ನೋಡಿದರೆ ನೀವು ಅಬ್ಬಾ ಎಂದು ಅರೆಕ್ಷಣ ದೇವರಿಗೆ ಥ್ಯಾಂಕ್ಸ್ ಹೇಳ್ತೀರಾ. ಇದಕ್ಕೆ ಕಾರಣ, ಇನ್ನು 75 ವರ್ಷಗಳಲ್ಲಿ ಬಹುತೇಕ ಮಂದಿ ಬದುಕಿರುವುದಿಲ್ಲ ಎನ್ನುವ ಕಾರಣಕ್ಕೆ! ಇಂಥ ಒಂದು ಜೀವನವನ್ನು ನಮಗೆ ಕೊಟ್ಟಿಲ್ಲ ಎಂದು ಧನ್ಯವಾದ ಸಲ್ಲಿಸಿದರೂ ಅಚ್ಚರಿಯೇನಿಲ್ಲ. ಆದರೆ ಮಕ್ಕಳು, ಮೊಮ್ಮಕ್ಕಳ ಸ್ಥಿತಿಯನ್ನು ನೆನೆಸಿಕೊಂಡರೆ ಮಾತ್ರ ಪರಿಸ್ಥಿತಿ ಭಯಾನಕ ಎನ್ನಿಸದೇ ಇರಲಾರದು.
ಏಕೆಂದರೆ 2100ರ ಹೊತ್ತಿಗೆ ಉದ್ಯೋಗ ಕ್ಷೇತ್ರವಷ್ಟೇ ಅಲ್ಲದೇ, ಇದೇ ರೀತಿ ಮುಂದುವರೆದರೆ ಇಡೀ ವಿಶ್ವ ಎಐಗೆ ಸಿಲುಕಿ ನಲುಗುತ್ತಿರುತ್ತದೆ. ಇದೀಗ ಮನುಷ್ಯ ಕೃತಕ ಬುದ್ಧಿಮತ್ತೆಯನ್ನು ಆಳುತ್ತಿದ್ದರೆ, ಇನ್ನು ಕೆಲವೇ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಮನುಷ್ಯರನ್ನು ಆಳಲು ಶುರು ಮಾಡುತ್ತದೆ ಎನ್ನುವುದು ಈ ಭಯಾನಕ ವಿಡಿಯೋದಲ್ಲಿ ತೋರಿಸಲಾಗಿದೆ. ಹೇಗೆ ಮನುಷ್ಯನ ಪ್ರತಿಯೊಂದು ಉಸಿರು ಎಐ ಮೇಲೆ ಅವಲಂಬಿತವಾಗಿರುತ್ತದೆ, ಗಾಳಿ, ಬೆಳಕು ಮಾತ್ರವಲ್ಲದೇ ತಿನ್ನುವ ಆಹಾರಕ್ಕೂ ಹೇಗೆ ಎಐ ನಮ್ಮನ್ನು ಆಳುತ್ತದೆ ಎನ್ನುವುದನ್ನು ಇದರಲ್ಲಿ ನೋಡಬಹುದು.
ಈ ವಿಡಿಯೋ ನೋಡಿದರೆ ಕೆಲವರು ಅತಿಶಯೋಕ್ತಿ ಎಂದುಕೊಳ್ಳಬಹುದು. ಆದರೆ ಇದಾಗಲೇ ಇದು ಕೆಲವು ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ, ಬೃಹತ್ ಕಂಪೆನಿಗಳಲ್ಲಿ, ಹಲವು ಹೋಟೆಲ್ಗಳಲ್ಲಿ ಹೇಗೆ ಆಳುತ್ತಿದೆ ಎನ್ನುವ ಈಗಿನ ಚಿತ್ರಣವನ್ನೇ ತೆಗೆದುಕೊಂಡು ಅದರ ಮುಂದುವರೆದ ಭಾಗವಾಗಿ ನೋಡುವುದಾದರೆ ವಿಡಿಯೋದಲ್ಲಿ ಅತಿಶಯೋಕ್ತಿ ಏನೂ ಇಲ್ಲ ಎನ್ನಿದೇ ಇರಲಾರದು. 2100 ಅಂತಲೇ ಏನಿಲ್ಲ, ಸ್ವಲ್ಪ ಆಚೀಚೆಯಾದರೂ ಇಂಥದ್ದೊಂದು ಜಮಾನಾ ಬಂದರೂ ಅಚ್ಚರಿಯಿಲ್ಲ. ಕೃತಕ ಬುದ್ಧಿಮತ್ತೆ ಇದೇ ರೀತಿ ಮುಂದುವರೆದರೆ ಮನುಷ್ಯನ ನಿರ್ನಾಮ ಕಟ್ಟಿಟ್ಟದ್ದೇ ಎನ್ನುವುದು ಇದರಿಂದ ತಿಳಿದು ಬರುತ್ತದೆ.
ಇಲ್ಲಿದೆ ನೋಡಿ ವಿಡಿಯೋ ಲಿಂಕ್
https://www.instagram.com/reel/DLckPl9N79C/?utm_source=ig_web_copy_link&igsh=MzRlODBiNWFlZA==
