ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ವಿದ್ಯುತ್ ಕಂಬವೇರಿದ ಕಪ್ಪು ಕರಡಿಯೊಂದು ವಿದ್ಯುತ್ ಸ್ಪರ್ಶಿಸಿ ಧಾರುಣವಾಗಿ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸ್ಥಳದಲ್ಲಿ ಜಮಾಯಿಸಿದ ಜನರ ಗದ್ದಲದಿಂದಾಗಿ ಭಯಭೀತಗೊಂಡ ಕರಡಿ, ಕೆಳಗೆ ಇಳಿಯಲಾಗದೆ ಪ್ರಾಣ ಕಳೆದುಕೊಂಡಿದ್ದು, ಈ ಘಟನೆ ಮಾನವ-ವನ್ಯಜೀವಿ ಸಂಘರ್ಷದ ಕರಾಳ ಮುಖವನ್ನು ತೆರೆದಿಟ್ಟಿದೆ.

ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕಬೇಕಾದ ವನ್ಯಜೀವಿಗಳು, ಮಾನವನ ನಗರೀಕರಣ ಮತ್ತು ಬೇಜವಾಬ್ದಾರಿತನದಿಂದಾಗಿ ಹೇಗೆ ಪ್ರಾಣ ಕಳೆದುಕೊಳ್ಳುತ್ತಿವೆ ಎಂಬುದಕ್ಕೆ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಜುಲೈ 20 ರಂದು ನ್ಯೂ ಮೆಕ್ಸಿಕೋದ ಗ್ರಾಮೀಣ ಪ್ರದೇಶದ ಹೆದ್ದಾರಿಯೊಂದರಲ್ಲಿ ವಿದ್ಯುತ್ ಕಂಬದ ಮೇಲೆ ಸಿಲುಕಿಕೊಂಡ ಕಪ್ಪು ಕರಡಿಯೊಂದು, ಕೊನೆಗೆ ವಿದ್ಯುತ್ ಸ್ಪರ್ಶಿಸಿ ಅತ್ಯಂತ ಧಾರುಣವಾಗಿ ಸಾವನ್ನಪ್ಪಿದೆ. ಕರಡಿಯು ಸಾವಿನ ದವಡೆಯಲ್ಲಿ ಒದ್ದಾಡುತ್ತಿರುವ ವೀಡಿಯೊ ದೃಶ್ಯಾವಳಿಗಳು ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವನ್ಯಜೀವಿ ಪ್ರೇಮಿಗಳ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

22 ಅಡಿ ಎತ್ತರದಲ್ಲಿ ಸಾವಿನೊಂದಿಗೆ ಹೋರಾಟ

ವರದಿಗಳ ಪ್ರಕಾರ, ಈ ಕಪ್ಪು ಕರಡಿಯು ನೆಲದಿಂದ ಸುಮಾರು 22 ಅಡಿ ಎತ್ತರದ ವಿದ್ಯುತ್ ಕಂಬದ ತುತ್ತತುದಿಗೆ ಏರಿ ಸಿಲುಕಿಕೊಂಡಿತ್ತು. ಆ ಕಂಬದಲ್ಲಿ ಬರೋಬ್ಬರಿ 7,200 ವೋಲ್ಟ್‌ಗಳ ಹೈ-ವೋಲ್ಟೇಜ್ ವಿದ್ಯುತ್ ಹರಿಯುವ ತಂತಿಗಳಿದ್ದವು. ಆ ನಿರ್ಜನ ಹೆದ್ದಾರಿಯಲ್ಲಿ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದ ಶಾನನ್ ಮುಲ್ಲೆನ್ಸ್ ಎಂಬುವವರು ಈ ಕರಡಿಯನ್ನು ಮೊದಲು ಗಮನಿಸಿದರು. ತಕ್ಷಣವೇ ತುರ್ತು ಸೇವೆಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಅದೇ ರಸ್ತೆಯಲ್ಲಿ ಸಾಗುತ್ತಿದ್ದ ರಾಬಿನ್ ಡಾಸನ್ ಎಂಬ ಮತ್ತೊಬ್ಬ ದಾರಿಹೋಕರು ಕೂಡ ಈ ದೃಶ್ಯವನ್ನು ಕಂಡು ತಲ್ಲಣಗೊಂಡರು. ಘಟನೆಯ ತೀವ್ರತೆಯನ್ನು ವಿವರಿಸಿದ ಡಾಸನ್, "ಕರಡಿಯು ಹೈ-ವೋಲ್ಟೇಜ್ ವಿದ್ಯುತ್ ಕಂಬದ ಮೇಲ್ಭಾಗದಲ್ಲಿ ತೀವ್ರ ಸಂಕಷ್ಟದಲ್ಲಿತ್ತು. ಅದು ಬದುಕಲು ನಡೆಸುತ್ತಿದ್ದ ಹೋರಾಟ ಮತ್ತು ಉಸಿರುಗಟ್ಟಿಸುತ್ತಿದ್ದ ಭೀಕರ ಶಬ್ದ ರಸ್ತೆಯ ಆಚೆಗಿದ್ದ ನಮಗೂ ಸ್ಪಷ್ಟವಾಗಿ ಕೇಳಿಸುತ್ತಿತ್ತು ಎಂದು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಾರ್ವಜನಿಕರ ಆಕ್ರೋಶ

ದುರಂತವೆಂದರೆ, ಅಧಿಕಾರಿಗಳ ಬೇಜವಾಬ್ದಾರಿತನ ಈ ಮೂಕಪ್ರಾಣಿಯ ಸಾವಿಗೆ ನೇರ ಕಾರಣವಾಯಿತು. ಡಾಸನ್ ಅವರು ಮೊದಲ ಬಾರಿ ಕರೆ ಮಾಡಿದ ನಂತರ ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸ್ಥಳದಲ್ಲೇ ಕಾಯ್ದರೂ ಯಾವುದೇ ರಕ್ಷಣಾ ಸಿಬ್ಬಂದಿ ಬರಲಿಲ್ಲ. ಅವರು ಮತ್ತೊಮ್ಮೆ ತುರ್ತು ಸಂಖ್ಯೆ 911 ಗೆ ಕರೆ ಮಾಡಿದಾಗ, ಅಲ್ಲಿನ ಸಿಬ್ಬಂದಿ "ಯಾರೂ ಬರುವುದಿಲ್ಲ, ಕರಡಿಗೆ ಸಿದ್ಧವಾದಾಗ ಅದೇ ಕೆಳಗೆ ಇಳಿಯುತ್ತದೆ" ಎಂದು ಉಡಾಫೆಯ ಉತ್ತರ ನೀಡಿದರು.

ಇನ್ನೊಂದೆಡೆ, ವನ್ಯಜೀವಿ ಇಲಾಖೆಯು ಸ್ಥಳೀಯ ರವಾನೆದಾರರ ಮೂಲಕ ಸಾರ್ವಜನಿಕರಿಗೆ ಕರಡಿಯನ್ನು ಒಂಟಿಯಾಗಿ ಬಿಡುವಂತೆ ಸೂಚಿಸಿತ್ತು. ಕರಡಿಯು ಭಯಮುಕ್ತವಾದರೆ ತಾನಾಗಿಯೇ ಕೆಳಗೆ ಇಳಿಯುತ್ತದೆ ಎಂಬುದು ಇಲಾಖೆಯ ಆಲೋಚನೆಯಾಗಿತ್ತು. ಆದರೆ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನರು ವಾಹನಗಳನ್ನು ನಿಲ್ಲಿಸಿ, ಮೊಬೈಲ್‌ಗಳಲ್ಲಿ ಕರಡಿಯ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ಚಿತ್ರೀಕರಣ ಮಾಡಲು ವಿದ್ಯುತ್ ಕಂಬದ ಸುತ್ತಲೂ ಜಮಾಯಿಸಿದರು. ಸಾರ್ವಜನಿಕರ ಈ ಗದ್ದಲದಿಂದಾಗಿ ತೀವ್ರ ಭಯಭೀತಗೊಂಡ ಕರಡಿ, ಕೆಳಗೆ ಇಳಿಯಲಾಗದೆ ಕಂಬದ ಮೇಲೆಯೇ ಉಳಿಯುವಂತಾಯಿತು.

ಕೊನೆಗೂ ಸಂಭವಿಸಿದ ದುರಂತ

ಕೊನೆಗೆ ಜಿಲ್ಲಾಧಿಕಾರಿ ಮತ್ತು ವಿದ್ಯುತ್ ಸರಬರಾಜು ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಹೊತ್ತಿಗೆ ತಡವಾಗಿತ್ತು. ಜನಸಂದಣಿಯ ಭಯದಿಂದ ಕಂಬದ ತುದಿಯಲ್ಲೇ ಕದಲದೆ ಕುಳಿತಿದ್ದ ಕರಡಿಗೆ ಹೈ-ವೋಲ್ಟೇಜ್ ತಂತಿ ತಗುಲಿ, ವಿದ್ಯುತ್ ಸ್ಪರ್ಶಿಸಿತ್ತು. ಯೂನಿಯನ್ ಕೌಂಟಿಯ ಶೆರಿಫ್ ಕರ್ಟಿಸ್ ಸ್ಕಾಗ್ಸ್ ಅವರು ಕರಡಿಯು ವಿದ್ಯುತ್ ಆಘಾತದಿಂದ ಮೃತಪಟ್ಟು ನೆಲಕ್ಕೆ ಬಿದ್ದಿರುವುದನ್ನು ದೃಢಪಡಿಸಿದರು.

ವಾಸಸ್ಥಾನ ಕಳೆದುಕೊಳ್ಳುತ್ತಿರುವ ಕಪ್ಪು ಕರಡಿಗಳು

ನ್ಯೂ ಮೆಕ್ಸಿಕೋದ ದಟ್ಟವಾದ ಅರಣ್ಯ ಮತ್ತು ಪರ್ವತ ಪ್ರದೇಶಗಳಲ್ಲಿ ವಾಸಿಸುವ ಈ ಕಪ್ಪು ಕರಡಿಗಳು ಕಪ್ಪು, ಕಂದು ಬಣ್ಣದಿಂದ ಹಿಡಿದು ಕೆಂಪು ಮತ್ತು ಹೊಂಬಣ್ಣದವರೆಗೂ ವಿಭಿನ್ನ ಬಣ್ಣಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ದಾಲ್ಚಿನ್ನಿ (Cinnamon) ಬಣ್ಣದ ಕರಡಿಗಳು ಹೆಚ್ಚು ಸಾಮಾನ್ಯ.

ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ಹೊಸ ಪ್ರದೇಶಗಳ ಹುಡುಕಾಟದಲ್ಲಿರುವ ಕಿರಿಯ ವಯಸ್ಸಿನ ಕರಡಿಗಳು ತಮ್ಮ ಸಾಂಪ್ರದಾಯಿಕ ಪರ್ವತ ಆವಾಸಸ್ಥಾನಗಳಿಂದ ದಾರಿ ತಪ್ಪಿ ಮಾನವ ವಸತಿ ಪ್ರದೇಶಗಳು ಹಾಗೂ ಹೆದ್ದಾರಿಗಳ ಕಡೆಗೆ ಅಲೆಯುತ್ತಿವೆ. ಈ ಸ್ಥಳಾಂತರವೇ ಕೊನೆಗೆ ಅವುಗಳ ಜೀವಕ್ಕೆ ಸಂಚಕಾರ ತರುತ್ತಿದೆ. ಕಡಬದ ಘಟನೆಯಂತೆ ಸಾರ್ವಜನಿಕರ ಅತಿಯಾದ ಕುತೂಹಲ ಮತ್ತು ಅಧಿಕಾರಿಗಳ ವಿಳಂಬ ಧೋರಣೆ ಸೇರಿ ನ್ಯೂ ಮೆಕ್ಸಿಕೋದಲ್ಲಿ ಒಂದು ಸುಂದರ ವನ್ಯಜೀವಿಯನ್ನು ಬಲಿಪಡೆದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ.