ಎಕ್ಸ್ (ಟ್ವಿಟ್ಟರ್) ನಲ್ಲಿ ಯುವತಿಯೊಬ್ಬಳು ತನ್ನ ಭಾವಿ ಪತಿಗೆ ಇರಬೇಕಾದ 11 ಕಠಿಣ ಅರ್ಹತೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ವೈರಲ್ ಆಗಿದ್ದು, ಆಧುನಿಕ ಸಂಬಂಧಗಳಲ್ಲಿನ ನಿರೀಕ್ಷೆಗಳು ಮತ್ತು ವಾಸ್ತವದ ಬಗ್ಗೆ ನೆಟ್ಟಿಗರಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಇಂದಿನ ಕಾಲದಲ್ಲಿ ವಿವಾಹ ಎಂಬುದು ಕೇವಲ ಎರಡು ಮನಸ್ಸುಗಳ ಮಿಲನ ಮಾತ್ರವಲ್ಲದೆ, ನಿರೀಕ್ಷೆಗಳ ಪಟ್ಟಿಯೂ ಆಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ಬೇಡಿಕೆಗಳಿರುವ ಮದುವೆ ಜಾಹೀರಾತುಗಳು ಅಥವಾ ಪೋಸ್ಟ್‌ಗಳು ವೈರಲ್ ಆಗುತ್ತಿರುತ್ತವೆ. ಇದೀಗ ಎಕ್ಸ್ (ಟ್ವಿಟ್ಟರ್) ನಲ್ಲಿ ವೇದಿಕಾ (@Crushtology) ಎಂಬ ಬಳಕೆದಾರಳು ಹಂಚಿಕೊಂಡಿರುವ ತನ್ನ ಭಾವಿ ಪತಿಯ 'ಅರ್ಹತೆಗಳ' ಪಟ್ಟಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಏನಿದೆ ಆ ಚೆಕ್‌ಲಿಸ್ಟ್‌ನಲ್ಲಿ?
ವೇದಿಕಾ ತನ್ನ ಪೋಸ್ಟ್‌ನಲ್ಲಿ ತಾನು ಮದುವೆಯಾಗುವ ಹುಡುಗನಿಗೆ ಇರಬೇಕಾದ 11 ಪ್ರಮುಖ ಗುಣಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳೆಂದರೆ:
- ಆತ ಕನ್ಯಾ ಪುರುಷನಾಗಿರಬೇಕು (Virgin).
- ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ಸಂಪಾದನೆ ಮಾಡಬೇಕು.
- ನೈಸರ್ಗಿಕವಾಗಿ ಸುಂದರವಾಗಿರಬೇಕು.
- 6 ಅಡಿ ಎತ್ತರವಿರಬೇಕು.
- ಅಡುಗೆ ಮಾಡಲು ತಿಳಿದಿರಬೇಕು.
- ಸ್ತ್ರೀ ದ್ವೇಷಿಯಾಗಿರಬಾರದು.
- ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು.
- ಯಾವುದೇ ಹೆಣ್ಣು ಸ್ನೇಹಿತರನ್ನು ಹೊಂದಿರಬಾರದು.
- ಎಲ್ಲಿಗೆ ಹೋಗಬೇಕಾದರೂ ಅನುಮತಿ ಕೇಳಬೇಕು.
- 24x7 ಲೈವ್ ಲೊಕೇಶನ್ ಹಂಚಿಕೊಳ್ಳಬೇಕು.
- ನನ್ನನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು.
ಈ ಪಟ್ಟಿಯನ್ನು ಹಂಚಿಕೊಂಡ ಅವರು, ‘ಇಂತಹ ಗುಣಗಳಿರುವ ವ್ಯಕ್ತಿ ನನಗೆ ಎಲ್ಲಿ ಸಿಗಬಹುದು?’ ಎಂದು ಪ್ರಶ್ನಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ: 'ನೀವು ಹುಡುಕುತ್ತಿರುವುದು ಮನುಷ್ಯನನ್ನೋ ಅಥವಾ ಏಲಿಯನ್ ಅನ್ನೋ?'
ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ಹೆಚ್ಚಿನವರು ಯುವತಿಯ ಈ ವಿಪರೀತ ನಿರೀಕ್ಷೆಗಳನ್ನು ವ್ಯಂಗ್ಯವಾಡಿದ್ದಾರೆ. ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, ‘ನೀವು ಕೇಳುತ್ತಿರುವುದು ಪತಿಯನ್ನಲ್ಲ, ಒಬ್ಬ ಗುಲಾಮನನ್ನು. ಇಷ್ಟು ಬೇಡಿಕೆಗಳನ್ನು ಇಡುವ ಮೊದಲು ನಿಮ್ಮ ಅರ್ಹತೆ ಏನು ಎಂದು ತಿಳಿಸಿ’ ಎಂದಿದ್ದಾರೆ.
ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸಿ, ‘ಇಷ್ಟು ದೊಡ್ಡ ಲಿಸ್ಟ್ ಇದೆ ಎಂದರೆ ನೀವು ಗಂಡನನ್ನಲ್ಲ, ಕಸ್ಟಮ್-ಮೇಡ್ ಎಐ (AI) ರೋಬೋಟ್ ಅನ್ನು ಆರ್ಡರ್ ಮಾಡಬೇಕು’ ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ, ‘ಇವರು ಏಲಿಯನ್ ಅನ್ನು ಹುಡುಕುತ್ತಿದ್ದಾರೆ, ಮಂಗಳ ಗ್ರಹದಲ್ಲಿ ಯಾರಾದರೂ ಸಿಗುತ್ತಾರೆಯೇ ನೋಡಿ’ ಎಂದು ತಮಾಷೆ ಮಾಡಿದ್ದಾರೆ.
ಆದರೆ, ಕೆಲವು ಬಳಕೆದಾರರು ಈಕೆಯ ಪರವಾಗಿಯೂ ಮಾತನಾಡಿದ್ದಾರೆ. "ಪುರುಷರು ಹೆಣ್ಣುಮಕ್ಕಳ ಬಗ್ಗೆ ಇಂತಹದ್ದೇ ನಿರೀಕ್ಷೆಗಳನ್ನು ಇಟ್ಟುಕೊಂಡಾಗ ಯಾರೂ ಪ್ರಶ್ನಿಸುವುದಿಲ್ಲ, ಆದರೆ ಮಹಿಳೆಯೊಬ್ಬಳು ತನ್ನ ನಿರೀಕ್ಷೆಯನ್ನು ಹೇಳಿಕೊಂಡಾಗ ಮಾತ್ರ ಯಾಕೆ ಇಷ್ಟೊಂದು ಟೀಕೆ?" ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ, ಈ ಪೋಸ್ಟ್ ಆಧುನಿಕ ಸಂಬಂಧಗಳಲ್ಲಿನ ನಿರೀಕ್ಷೆಗಳು ಮತ್ತು ವಾಸ್ತವದ ನಡುವಿನ ಅಂತರದ ಬಗ್ಗೆ ದೊಡ್ಡ ಮಟ್ಟದ ಡಿಜಿಟಲ್ ಚರ್ಚೆಯನ್ನು ಹುಟ್ಟುಹಾಕಿದೆ.


