Child Rescue Video: ಈ ಘಟನೆ ನಡೆದ ಸಮಯದಲ್ಲಿ ಕೆಲವರು ಹತ್ತಿರದಲ್ಲೇ ಇದ್ದರು. ಹಾಗಾದ್ರೆ ಆ ಬಾಲಕ ಸುರಕ್ಷಿತವಾಗಿ ಹೊರಗೆ ಬಂದನಾ?, ಮುಂದೇನಾಯ್ತು...?
ಮಕ್ಕಳ ಕಿತಾಪತಿ ಅವರನ್ನು ಅರಿವಿಲ್ಲದೆಯೇ ಅಪಾಯಕ್ಕೆ ತಳ್ಳುತ್ತದೆ. ಅದು ಮನೆಯಾಗಿರಬಹುದು ಅಥವಾ ಸಾರ್ವಜನಿಕ ಸ್ಥಳವಾಗಿರಬಹುದು ಅವರ ಮೋಜು ಕೆಲವೊಮ್ಮೆ ಭಯಾನಕ ಅಪಾಯಕ್ಕೆ ತಳ್ಳುತ್ತದೆ. ಇದೀಗ ಚೀನಾದ ಚಾಂಗ್ಕಿಂಗ್ ನಗರದಿಂದಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಒಂದು ಚಿಕ್ಕ ಬಾಲಕನ ಹುಡುಗಾಟ ಅವನ ಜೀವಕ್ಕೆ ಅಪಾಯ ಉಂಟು ಮಾಡಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಟವಾಡುವಾಗ ಓರ್ವ ಚಿಕ್ಕ ಬಾಲಕ ಎಸ್ಕಲೇಟರ್ ಹತ್ತಿದಾಗ ಉತ್ಸಾಹದಿಂದ ಗೋಡೆ ಮತ್ತು ಎಸ್ಕಲೇಟರ್ ನಡುವೆ ತನ್ನ ತಲೆಯನ್ನು ಇಡುವುದನ್ನು ಕಾಣಬಹುದು. ಪರಿಣಾಮವಾಗಿ ಅವನ ತಲೆ ಅಲ್ಲಿ ಸಿಲುಕಿಕೊಳ್ಳುತ್ತದೆ. ಆ ನಂತರ ಅವನಿಗೆ ಹೊರಬರಲು ಸಾಧ್ಯವಾಗುವುದೇ ಇಲ್ಲ. ಹಾಗಾದ್ರೆ ಅಮೇಲೆ ಏನಾಯ್ತು?, ಆ ಬಾಲಕ ಸುರಕ್ಷಿತವಾಗಿ ಹೊರಗೆ ಬಂದನಾ..?ಮುಂದೆ ಓದಿ...
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯ್ತು ಈ ಘಟನೆ
ಈ ಘಟನೆ ನಡೆದ ಸಮಯದಲ್ಲಿ ಕೆಲವರು ಹತ್ತಿರದಲ್ಲೇ ಇದ್ದರು. ಅವರು ತಕ್ಷಣ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡರು. ಓರ್ವ ವ್ಯಕ್ತಿ ತಡಮಾಡದೆ ಎಸ್ಕಲೇಟರ್ ಅನ್ನು ನಿಲ್ಲಿಸಿದನು. ಇದರಿಂದಾಗಿ ದೊಡ್ಡ ಅಪಘಾತವೇ ತಪ್ಪಿದೆ. ಇದರ ನಂತರ ಕೆಲವರು ಬಾಲಕನನ್ನು ಹೊರಗೆಳೆಯಲು ಪ್ರಯತ್ನಿಸಲು ಪ್ರಾರಂಭಿಸಿದರು. ಬಾಲಕನ ತಲೆ ಹೊರಬರುವಂತೆ ಜನರು ಎಸ್ಕಲೇಟರ್ ಅನ್ನು ಹಿಡಿದು ಸ್ವಲ್ಪ ಅಲ್ಲಾಡಿಸಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸಾಕಷ್ಟು ಪ್ರಯತ್ನಗಳ ನಂತರ ಬಾಲಕನನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತು. ಅದೃಷ್ಟವಶಾತ್ ಅವನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದರೆ ಮುನ್ನೆಚ್ಚರಿಕೆಯಾಗಿ ಅವನನ್ನು ಪರೀಕ್ಷಿಸಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಈ ಸಂಪೂರ್ಣ ಘಟನೆಯನ್ನು ಅಲ್ಲಿದ್ದ ಯಾರೋ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು @livingchina ಎಂಬ ಹೆಸರಿನ ಖಾತೆಯಿಂದ Instagramನಲ್ಲಿ ಶೇರ್ ಮಾಡಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ
ನೆಟ್ಟಿಗರು ಹೇಳಿದ್ದೇನು?
ವಿಡಿಯೋಗೆ "ಈ ಮಗು ಭವಿಷ್ಯದಲ್ಲಿ ಸ್ವಲ್ಪವಾದರೂ ಬುದ್ಧಿ ತೋರಿಸುತ್ತಾನೆ ಎಂದು ಭಾವಿಸುತ್ತೇನೆ" ಎಂದು ಶೀರ್ಷಿಕೆ ಕೊಡಲಾಗಿದೆ. ಈ ವಿಡಿಯೋ ಕ್ಲಿಪ್ ಅನ್ನು ಇಲ್ಲಿಯವರೆಗೆ 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವಿಡಿಯೋ ನೋಡಿದವರು "ಆ ವ್ಯಕ್ತಿ ಸರಿಯಾದ ಸಮಯದಲ್ಲಿ ಕ್ರಮ ತೆಗೆದುಕೊಳ್ಳುವ ಮೂಲಕ ಮಗುವಿನ ಜೀವವನ್ನು ಉಳಿಸಿದನು", "ಅದಕ್ಕಾಗಿಯೇ ತಲೆ ಸಿಲುಕಿಕೊಳ್ಳುವಂತಹ ಕ್ರಮಗಳನ್ನು ತಪ್ಪಿಸಬೇಕು", "ಈಗ ಮಗು ಇನ್ಮೇಲೆ ಎಸ್ಕಲೇಟರ್ ಬಳಿ ಹೋಗುವ ಮೊದಲು ಹತ್ತು ಬಾರಿ ಯೋಚಿಸುತ್ತದೆ" ಎಂದೆಲ್ಲಾ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಒಂದು ಕ್ಷಣ ನಿರ್ಲಕ್ಷ್ಯ ವಹಿಸುವುದು ಸಹ ಅವರನ್ನು ಅಪಾಯಕ್ಕೆ ತಳ್ಳುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸುತ್ತಮುತ್ತಲಿನ ಜನರು ಜಾಗರೂಕರಾಗಿದ್ದರೆ ಮತ್ತು ಜವಾಬ್ದಾರಿಯುತರಾಗಿದ್ದರೆ ಒಂದು ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ಇದು ತೋರಿಸುತ್ತದೆ.
ಕಬ್ಬಿಣದ ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯ ತಲೆ
ಇಂತಹುದೇ ಘಟನೆಗಳು ಆಗಾಗ್ಗೆ ಅಲ್ಲಲ್ಲಿ ನಡೆಯುತ್ತಿರುತ್ತವೆ. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ಹಾಸ್ಯಮಯ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಡ್ರಿಂಕ್ಸ್ ಮಾಡಿದ ವ್ಯಕ್ತಿಯೊಬ್ಬ ಮದ್ಯದ ಬಾಟಲಿಯನ್ನು ಕದಿಯುವ ಪ್ರಯತ್ನದಲ್ಲಿ ಮದ್ಯದ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿಯೇ ಸಿಲುಕಿಕೊಂಡಿರುವುದನ್ನು ತೋರಿಸಲಾಗಿತ್ತು. ಅಂಗಡಿಯಲ್ಲಿದ್ದ ಇತರ ಗ್ರಾಹಕರು ಸುದೀರ್ಘ ಪ್ರಯತ್ನದ ನಂತರ ಆತನನ್ನು ರಕ್ಷಿಸಿದರು. ಹೌದು, ಮದ್ಯದ ಅಂಗಡಿಯನ್ನು ಕ್ಲೋಸ್ ಮಾಡಲಾಗಿತ್ತು. ಈ ಸಮಯದಲ್ಲಿ ಬಾಟಲಿಯನ್ನು ಕದಿಯಲು ಟ್ರೈ ಮಾಡುವಾಗ ಆ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ ಎಂದು ವರದಿಗಳು ಹೇಳುತ್ತವೆ.