ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮುದ್ರಾ ಗ್ರಾಮದ ಯುವಕರಿಗೆ ಯಾಕೆ ಹೆಣ್ಣು ಸಿಗುತ್ತಿಲ್ಲ? ಇಡೀ ಊರನ್ನೇ ಬೆಚ್ಚಿಬೀಳಿಸಿರುವ ಈ ದುಸ್ಥಿತಿಯ ಹಿಂದೆ ಯಾವುದೇ ಶಾಪ ಅಥವಾ ಸಂಪ್ರದಾಯವಿಲ್ಲ. ಬದಲಿಗೆ, ಇದು ಕೇವಲ ಕುಡಿಯುವ ನೀರಿನ ಸಮಸ್ಯೆ ಎಂದರೆ ನೀವು ನಂಬುತ್ತೀರಾ?
'ನಮಾಮಿ ಗಂಗೆ' ಯೋಜನೆಯಡಿ ಮುದ್ರಾ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಿ, ಒಂದು ದೊಡ್ಡ ನೀರಿನ ಟ್ಯಾಂಕ್ ಕೂಡ ಕಟ್ಟಲಾಗಿದೆ. ಈ ವ್ಯವಸ್ಥೆ ಮಾಡಿ ಎರಡು ವರ್ಷಗಳೇ ಕಳೆದಿದ್ದರೂ, ಅಧಿಕಾರಿಗಳು ಪರೀಕ್ಷೆ ಮಾಡುವಾಗ ಬಿಟ್ಟ ನೀರು ಬಿಟ್ಟರೆ, ಮತ್ತೆ ಪೈಪ್‌ಗಳಲ್ಲಿ ನೀರು ಬಂದೇ ಇಲ್ಲ ಅಂತ ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಾರೆ. ಸುಮಾರು 2,000 ಜನಸಂಖ್ಯೆ ಇರುವ ಈ ಹಳ್ಳಿ, ಇವತ್ತಿಗೂ ಕೆಲವೇ ಕೆಲವು ಕೈ ಪಂಪ್‌ಗಳನ್ನೇ ಅವಲಂಬಿಸಿದೆ. ಈ ನೀರಿನ ಕೊರತೆ ಕೇವಲ ಬಾಯಾರಿಕೆ ನೀಗಿಸುವ ಸಮಸ್ಯೆಯಾಗಿ ಉಳಿದಿಲ್ಲ; ಇದು ಒಂದು ಸಾಮಾಜಿಕ ಸಮಸ್ಯೆಯಾಗಿ ಬೆಳೆದಿದೆ.
ಈ ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದ ಸುಮಾರು 40 ಯುವಕರಿದ್ದಾರೆ. ಆದರೆ, ನೀರಿಲ್ಲದ ಹಳ್ಳಿ ಎಂಬ ಕಾರಣಕ್ಕೆ, ಯಾರೂ ತಮ್ಮ ಹೆಣ್ಣುಮಕ್ಕಳನ್ನು ಇಲ್ಲಿಗೆ ಮದುವೆ ಮಾಡಿಕೊಡಲು ಮುಂದೆ ಬರುತ್ತಿಲ್ಲ. "ನಮ್ಮ ಹಳ್ಳಿಗೆ ಬಂದರೆ, ನಮ್ಮ ಮಗಳು ದಿನಾ ಎಷ್ಟು ದೂರ ನೀರು ಹೊತ್ತು ತರಬೇಕು?" ಎನ್ನುವ ಪ್ರಶ್ನೆಯೇ ಸಂಬಂಧ ಮಾತನಾಡಲು ಬರುವವರ ಮೊದಲ ಪ್ರಶ್ನೆಯಾಗಿರುತ್ತದೆ. ಇದರಿಂದಾಗಿ, ಅನೇಕ ಯುವಕರ ಮದುವೆ ಮುಂದಕ್ಕೆ ಹೋಗುತ್ತಲೇ ಇದೆ.
ಗ್ರಾಮದಲ್ಲಿರುವ ಮೂರು ಕೈ ಪಂಪ್‌ಗಳಲ್ಲಿ ಎರಡರಲ್ಲಿ ಉಪ್ಪು ನೀರು ಬರುತ್ತದೆ. ಹೀಗಾಗಿ, ಗ್ರಾಮದ ಹೊರಗಿರುವ ಒಂದೇ ಒಂದು ಕೈ ಪಂಪ್ ಅನ್ನು ಎಲ್ಲರೂ ಅವಲಂಬಿಸಿದ್ದಾರೆ. ಇಲ್ಲಿನ ಜನರ ದಿನ ಶುರುವಾಗುವುದೇ ನೀರಿಗಾಗಿ ಹೋರಾಟದಿಂದ. ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ನೀರು ಹಿಡಿಯುವ ಪರಿಸ್ಥಿತಿ ಇದೆ. ಮದುವೆಯಂತಹ ವಿಶೇಷ ಸಮಾರಂಭಗಳು ನಡೆದರೆ, ಅತಿಥಿಗಳಿಗಾಗಿ ದುಡ್ಡು ಕೊಟ್ಟು ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ.
ಹನಿ ನೀರು ಮಾತ್ರ ಕೇಳುತ್ತಿದ್ದೇವೆ
ಚುನಾವಣೆ ಸಮಯದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸುವ ಜನಪ್ರತಿನಿಧಿಗಳು, ಗೆದ್ದ ನಂತರ ಗ್ರಾಮದ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಜನರು ಆರೋಪಿಸುತ್ತಾರೆ. ಕಾಗದದ ಮೇಲೆ ಮುದ್ರಾ ಗ್ರಾಮವು ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಹಳ್ಳಿಯಾಗಿರಬಹುದು, ಆದರೆ ವಾಸ್ತವದಲ್ಲಿ ಜನರು ಇಂದಿಗೂ ಬಿಸಿಲಿನಲ್ಲಿ ಬಳಲುತ್ತಾ, ನೀರಿನ ಕೊಡಗಳೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. "ನಾವು ದೊಡ್ಡ ಸೌಲಭ್ಯಗಳನ್ನು ಕೇಳುತ್ತಿಲ್ಲ, ಕುಡಿಯಲು ಒಂದು ಹನಿ ನೀರು ಮಾತ್ರ ಕೇಳುತ್ತಿದ್ದೇವೆ," ಎಂದು ಆ ಗ್ರಾಮದ ಜನರು ಅಳಲು ತೋಡಿಕೊಳ್ಳುತ್ತಾರೆ. ಈ ದುಸ್ಥಿತಿ ಬದಲಾಗಲು, ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.


