ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಅವರ ಶೋನಲ್ಲಿ, ಮಹಿಳಾ ವೈದ್ಯೆ ಸೆಜಾಲ್ ಪವಾರ್ ಅವರು ಪುರುಷರ ಶವಗಳ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರ ಟೀಕೆಗೆ ಗುರಿಯಾದ ನಂತರ, ವೈದ್ಯೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಮುಂಬೈ (ಜೂ.11): ಪ್ರಸಿದ್ಧ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪ್ರಣೀತ್ ಮೋರೆ (Pranit More) ಅವರ ಶೋಗೆ ಸಂಬಂಧಿಸಿದ '370 ರೂಪಾಯಿಯ ಬಿರಿಯಾನಿ' ವಿವಾದ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಅವರದ್ದೇ ಮತ್ತೊಂದು ಹಳೆಯ ಶೋನಲ್ಲಿ ಮಹಿಳಾ ವೈದ್ಯೆಯೊಬ್ಬರು ನೀಡಿದ್ದ ಆಘಾತಕಾರಿ ಹೇಳಿಕೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ವೈರಲ್‌ ಆಗಿದ್ದು, ಭಾರಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರಿಂದ ತೀವ್ರ ಟೀಕೆಗಳು ಮತ್ತು ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಹಿಳಾ ವೈದ್ಯೆ, ಕೊನೆಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 'ವಿಷಯ ತುಂಬಾ ಸೂಕ್ಷ್ಮವಾದುದು ಮತ್ತು ನನ್ನ ಕಾಮೆಂಟ್‌ಗಳು ಬರಬಾರದಿದ್ದ ರೀತಿಯಲ್ಲಿ ಮೂಡಿಬಂದಿದೆ' ಎಂದು ಆಕೆ ತನ್ನ ಕ್ಷಮೆಯ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿವಾದಕ್ಕೆ ಕಾರಣವಾದ ಆ ಒಂದು ಹೇಳಿಕೆ ಏನು?

ಕಾಮಿಡಿ ಶೋಗೆ ಬಂದಿದ್ದ ವ್ಯಕ್ತಿಗಳ ಜೊತೆ ಸಂವಹನ ನಡೆಸುವ (Crowdwork) ಸಂದರ್ಭದಲ್ಲಿ ಸೆಜಾಲ್ ಪವಾರ್ (Sejal Pawar) ಎಂಬ ಮಹಿಳಾ ವೈದ್ಯೆ ಭಾಗವಹಿಸಿದ್ದರು. ಆ ವೇಳೆ ಆಕೆ, ತಾನು ಮತ್ತು ಆಸ್ಪತ್ರೆಯಲ್ಲಿದ್ದ ತನ್ನ ಸಹೋದ್ಯೋಗಿಗಳು ವೈದ್ಯಕೀಯ ವಿಭಾಗದಲ್ಲಿ ಅಧ್ಯಯನಕ್ಕಾಗಿ ಬಳಸುವ 'ಪುರುಷರ ಶವಗಳ (Cadavers) ಖಾಸಗಿ ಅಂಗಗಳ ಗಾತ್ರ'ವನ್ನು ಹೇಗೆ ಹೋಲಿಕೆ ಮಾಡುತ್ತಿದ್ದರು ಮತ್ತು ಅದರ ಬಗ್ಗೆ ಹೇಗೆ ಚರ್ಚಿಸುತ್ತಿದ್ದರು ಎಂಬುದನ್ನು ಹಾಸ್ಯದ ರೂಪದಲ್ಲಿ ಹಂಚಿಕೊಂಡಿದ್ದರು. ವೈದ್ಯಕೀಯ ವೃತ್ತಿಗೆ ಮತ್ತು ಮೃತದೇಹಗಳಿಗೆ ಅಪಚಾರ ಎಸಗುವ ರೀತಿಯಲ್ಲಿದ್ದ ಈ ಹೇಳಿಕೆಯ ಹಳೆಯ ಕ್ಲಿಪ್ ಈಗ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶದ ಅಲೆ ಎಬ್ಬಿಸಿದೆ.

ಆಕ್ರೋಶಕ್ಕೆ ಹೆದರಿ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಬದಲಿಸಿದ ವೈದ್ಯೆ!

ನೆಟ್ಟಿಗರ ತೀವ್ರ ಆಕ್ರೋಶದ ನಂತರ, ಸೆಜಾಲ್ ಪವಾರ್ ತನ್ನ ಸೋಶೀಯಲ್‌ ಮೀಡಿಯಾ ಖಾತೆಗಳಿಂದ ಹಳೆಯ ಪೋಸ್ಟ್‌ಗಳನ್ನು ತರಾತುರಿಯಲ್ಲಿ ಡಿಲೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕೆಲಕಾಲ ತನ್ನ ಪ್ರೊಫೈಲ್ ಅನ್ನು ಪ್ರೈವೇಟ್ (ಖಾಸಗಿ) ಮಾಡಿಕೊಂಡಿದ್ದ ಆಕೆ, ನಂತರ ಅದನ್ನು ಮತ್ತೆ ಪಬ್ಲಿಕ್ ಮಾಡಿ, ತನ್ನ ಇನ್‌ಸ್ಟಾಗ್ರಾಮ್ ಬಯೋವನ್ನು (Bio) ಸಂಪೂರ್ಣವಾಗಿ ಅಳಿಸಿಹಾಕಿ, ಅಲ್ಲಿ ಒಂದು ದೀರ್ಘವಾದ ಕ್ಷಮಾಪಣಾ ಪತ್ರವನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಆಕೆ ತನ್ನ ಇನ್‌ಸ್ಟಾಗ್ರಾಮ್ ಬಯೋದಲ್ಲಿ ತಾನು ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ (KEM Hospital) ಕಾರ್ಯನಿರ್ವಹಿಸುತ್ತಿರುವ ಎಂಬಿಬಿಎಸ್ (MBBS) ವೈದ್ಯೆ ಎಂದು ಬರೆದುಕೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ.

ವೈದ್ಯೆ ಸೆಜಾಲ್ ಪವಾರ್ ಅವರ ಕ್ಷಮಾಪಣಾ ಪತ್ರದಲ್ಲಿ ಏನಿದೆ?

ವಿವಾದಕ್ಕೆ ಸಾರ್ವಜನಿಕ ಹೇಳಿಕೆಯ ಮೂಲಕ ಪ್ರತಿಕ್ರಿಯಿಸಿರುವ ಸೆಜಾಲ್, "ಇತ್ತೀಚೆಗೆ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ ಬಗ್ಗೆ ನಾನು ಪ್ರಾಮಾಣಿಕವಾಗಿ ಮಾತನಾಡಲು ಬಯಸುತ್ತೇನೆ. ಆ ವಿಡಿಯೋವನ್ನು ನಾನೇ ಮತ್ತೊಮ್ಮೆ ನೋಡಿದಾಗ, ನಾನು ಹೇಳಿದ ಮಾತುಗಳಿಂದ ಜನರಿಗೆ ಯಾಕೆ ಇಷ್ಟೊಂದು ಬೇಸರವಾಗಿದೆ ಎಂಬುದು ನನಗೆ ಸಂಪೂರ್ಣವಾಗಿ ಅರ್ಥವಾಯಿತು. ವಿಷಯವು ಅತ್ಯಂತ ಸೂಕ್ಷ್ಮವಾಗಿದ್ದು, ನನ್ನ ಕಾಮೆಂಟ್‌ಗಳು ಈ ರೀತಿ ಬರಬಾರದಿತ್ತು. ಯಾರಿಗಾದರೂ ಅಗೌರವ ತೋರಬೇಕು ಎಂಬ ಉದ್ದೇಶ ನನಗಿರಲಿಲ್ಲ ನಿಜ, ಆದರೆ ಉದ್ದೇಶಕ್ಕಿಂತ ಹೆಚ್ಚಾಗಿ ಅದರ ಪರಿಣಾಮ ಮುಖ್ಯವಾಗುತ್ತದೆ ಎಂಬುದನ್ನು ನಾನು ಈಗ ಅರಿತುಕೊಂಡಿದ್ದೇನೆ" ಎಂದು ಬರೆದಿದ್ದಾರೆ.

ಮುಂದುವರಿದು, "ನಾನು ಆಡದ ಮಾತುಗಳನ್ನು ಸಮರ್ಥಿಸಿಕೊಳ್ಳಲು ಅಥವಾ ಅದಕ್ಕೆ ಸಾಬೀತುಗಳನ್ನು ನೀಡಲು ಇಲ್ಲಿ ಬಂದಿಲ್ಲ. ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರತ್ತೇನೆ. ತಿರುಗಿ ನೋಡಿದಾಗ, ನಾನು ಅಂದುಕೊಂಡಿದ್ದಕ್ಕಿಂತ ನನ್ನ ಮಾತುಗಳನ್ನು ಜನರು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲು ನಾನೇ ಅವಕಾಶ ಕೊಟ್ಟಿದ್ದೇನೆ ಎಂಬುದು ತಿಳಿಯಿತು" ಎಂದಿದ್ದಾರೆ.

ತನ್ನ ಪೋಸ್ಟ್‌ನ ಕೊನೆಯಲ್ಲಿ ಆಕೆ, 'ಒಬ್ಬ ವಿದ್ಯಾರ್ಥಿನಿಯಾಗಿ, ಇದು ನನಗೆ ಒಂದು ದೊಡ್ಡ ಅನುಭವ. ವಿಶೇಷವಾಗಿ ಹೆಚ್ಚಿನ ಚಿಂತನೆ ಮತ್ತು ಸೂಕ್ಷ್ಮತೆಯನ್ನು ಬಯಸುವ ವಿಷಯಗಳ ಬಗ್ಗೆ ಮಾತನಾಡುವಾಗ ನಾನು ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಈ ವಿಡಿಯೋ ಕ್ಲಿಪ್‌ನಿಂದ ನಿರಾಶೆಗೊಂಡ ಅಥವಾ ನೊಂದ ಪ್ರತಿಯೊಬ್ಬರಿಗೂ ನಾನು ಹೇಳಬಯಸುವುದೇನೆಂದರೆ, ಎಲ್ಲಿ ತಪ್ಪು ನಡೆದಿದೆ ಎಂದು ನನಗೆ ಅರ್ಥವಾಗಿದೆ ಮತ್ತು ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇಂತಹ ತಪ್ಪು ನನ್ನಿಂದ ಮತ್ತೆಂದೂ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ!" ಎಂದು ಮುಕ್ತಾಯಗೊಳಿಸಿದ್ದಾರೆ.

ಏನಿದು ಭಾರಿ ಸದ್ದು ಮಾಡ್ತಿರೋ '₹370 ರ ಚಿಕನ್ ಬಿರಿಯಾನಿ' ವಿವಾದ?

ಕಾಮಿಡಿಯನ್ ಪ್ರಣೀತ್ ಮೋರೆ ಅವರ ಶೋನ ಮತ್ತೊಂದು ವಿಡಿಯೋ ವೈರಲ್ ಆಗಿ ದೊಡ್ಡ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈ ಮಹಿಳಾ ವೈದ್ಯೆಯ ವಿಡಿಯೋ ಕೂಡ ಮುನ್ನೆಲೆಗೆ ಬಂದಿದೆ. ಪ್ರಸ್ತುತ ಡಿಲೀಟ್ ಮಾಡಲಾಗಿರುವ ಆ ವಿಡಿಯೋದಲ್ಲಿ, ಶೋ ವೀಕ್ಷಿಸಲು ಬಂದಿದ್ದ ಯುವಕನೊಬ್ಬ ತನ್ನ ಡೇಟಿಂಗ್ ಅನುಭವವನ್ನು ಹಂಚಿಕೊಳ್ಳುತ್ತಿದ್ದ.

ಡೇಟಿಂಗ್‌ಗೆ ಹೋದಾಗ ತಾನು ಹುಡುಗಿಗೆ ಚಿಕನ್ ಬಿರಿಯಾನಿ ಕೊಡಿಸಲು ಸುಮಾರು 370 ರೂಪಾಯಿ ಖರ್ಚು ಮಾಡಿದ್ದೆ, ಆದ್ದರಿಂದ ಅದಕ್ಕೆ ಪ್ರತಿಯಾಗಿ ಆಕೆಯಿಂದ ತನಗೇನೋ ಸಿಗಬೇಕು ಎಂಬ ಅರ್ಥದಲ್ಲಿ ಆತ ಮಾತನಾಡಿದ್ದ. ವಿಡಿಯೋದಲ್ಲಿದ್ದ ಆ ವ್ಯಕ್ತಿಯನ್ನು ಹರಿಯಾಣದ ಗುರುಗ್ರಾಮದ 22 ವರ್ಷದ ಹಿಮಾಂಶು ಜಾಂಗ್ರಾ (Himanshu Jangra) ಎಂದು ಗುರುತಿಸಲಾಗಿದೆ. ಆ ಕ್ಲಿಪ್‌ನಲ್ಲಿ ಜಾಂಗ್ರಾ, "ಊಟದ ಬಿಲ್ ಪಾವತಿಸಿದ ನಂತರ ಆ ಹುಡುಗಿ ತನ್ನನ್ನು ಮನೆಗೆ ಬಿಡುವಂತೆ ಕೇಳಿದಾಗ ನನಗೆ ಆಶ್ಚರ್ಯವಾಯಿತು. ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ ಅಂದಮೇಲೆ, ದೈಹಿಕ ಸಾಮೀಪ್ಯದ ರೂಪದಲ್ಲಿ ಆ ಹಣವನ್ನು ವಸೂಲಿ ಮಾಡಿಯೇ ತೀರುತ್ತೇನೆ ಎಂದುಕೊಂಡೆ" (Maine kaha ki Rs 370 lage hain to use to wasool to karunga hi) ಎಂದು ಹೇಳಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ.

ಕಣ್ಮರೆಯಾದ ಕಾಮಿಡಿಯನ್ ಇನ್‌ಸ್ಟಾಗ್ರಾಮ್ ಖಾತೆ!

ಈ ಸಾಲು ಸಾಲು ವಿವಾದಗಳ ಬೆನ್ನಲ್ಲೇ, ಕಾಮಿಡಿಯನ್ ಪ್ರಣೀತ್ ಮೋರೆ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ಈಗ ನಿಷ್ಕ್ರಿಯಗೊಂಡಿರುವುದು (Deactivated) ಕಂಡುಬಂದಿದ್ದು, ವೇದಿಕೆಯಲ್ಲಿ ಸದ್ಯ ಅವರ ಯಾವುದೇ ಚಟುವಟಿಕೆಗಳು ಲಭ್ಯವಿಲ್ಲ.

View post on Instagram