ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವೃದ್ಧೆಯನ್ನು ಮೊಮ್ಮಗ ಕಸದ ರಾಶಿಗೆ ಎಸೆದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. ಪೊಲೀಸರು ಮೊಮ್ಮಗ ಸೇರಿದಂತೆ ಕುಟುಂಬದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. 

ಮುಂಬೈ: ಕ್ಯಾನ್ಸರ್‌ ಪೀಡಿತ ವೃದ್ಧೆಯನ್ನು ಆಕೆಯ ಮೊಮ್ಮಗನೇ ಕಸದ ರಾಶಿಗೆ ಎಸೆದ ಘಟನೆ ಮುಂಬೈನಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು ವೃದ್ಧೆಯ ಮನೆಯವರನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರಂಭದಲ್ಲಿ ಆ ಅಜ್ಜಿಯೇ ಮನೆಬಿಟ್ಟು ಹೋದರೂ ಎಂದು ಹೇಳಿದ ಮೊಮ್ಮಗ ಪೊಲೀಸರು ವಿಚಾರಣೆ ತೀವ್ರಗೊಳಿಸಿದ ನಂತರ ತಾನೇ ಈ ಕೃತ್ಯ ಎಸಗಿದ್ದಾಗಿ ಹೇಳಿಕೊಂಡಿದ್ದಾನೆ. ಮಹಾರಾಷ್ಟ್ರದ ಮುಂಬೈನ ಆರೆ ಕಲೋನಿ ಬಳಿ ಈ ಘಟನೆ ನಡೆದಿತ್ತು.

ಮಹಿಳೆಯ ಕುಟುಂಬದ ಮೂವರ ವಿರುದ್ಧ ಎಫ್‌ಐಆರ್

ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 60 ವರ್ಷದ ಯಶೋದಾ ಗಾಯಕ್‌ವಾಡ್ ಎಂಬುವವರನ್ನು ಅವರು ಮುದ್ದಾಗಿ ಸಾಕಿದ್ದ ಮೊಮ್ಮಗನೇ ಕಸದ ರಾಶಿಯಲ್ಲಿ ಎಸೆದು ಹೋಗಿದ್ದ. ಈ ಘಟನೆ ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣವೂ ಸೇರಿದಂತೆ ದೇಶದೆಲ್ಲೆಡೆ ಈ ಅಮಾನವೀಯ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು ಮಹಿಳೆಯ ಮೊಮ್ಮಗನೂ ಸೇರಿದಂತೆ ಕುಟುಂಬದ 3 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಚರ್ಮದ ಕ್ಯಾನ್ಸರ್ ಜೊತೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ

ಮಹಿಳೆ ಯಶೋದಾ ಗಾಯಕ್‌ವಾಡ್ ಅವರು ಚರ್ಮದ ಕ್ಯಾನ್ಸರ್‌ನ ಜೊತೆಗೆ ಮಾನಸಿಕ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಅವರನ್ನು ಬಹಳ ಕಸದ ರಾಶಿಯಲ್ಲಿ ನೋಡಿದ ಪೊಲೀಸರು ಬಳಿಕ ಬಹಳ ದಯನೀಯ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ವಿಷಮವಾಗಿದ್ದ ಹಿನ್ನೆಲೆಯಲ್ಲಿ ನಗರದ ಬಹುತೇಕ ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದವು. ಕಡೆಗೂ ಆಕೆ ಮುಂಜಾನೆ ಸಿಕ್ಕಿದ್ದರೆ ಸಂಜೆಯ ವೇಳೆ ಕೂಪರ್ ಹೆಸರಿನ ಆಸ್ಪತ್ರೆಯೊಂದು ಆಕೆಯನ್ನು ದಾಖಲಿಸಿಕೊಳ್ಳಲು ಒಪ್ಪಿಗೆ ನೀಡಿತ್ತು.

ಸ್ವಂತ ಮೊಮ್ಮಗನಿಂದಲೇ ಕೃತ್ಯ

ಪೊಲೀಸರು ಆಕೆಯ ಬಳಿ ಕುಟುಂಬದವರ ವಿಚಾರಿಸಿದ ವೇಳೆ ಅವರು ತನ್ನ ಸ್ವಂತ ಮೊಮ್ಮಗನೇ ತನ್ನನ್ನು ಇಲ್ಲಿ ಕರೆತಂದು ಎಸೆದು ಹೋಗಿದ್ದಾಗಿ ಯಶೋಧ ಗಾಯಕ್ವಾಡ್‌ ಹೇಳಿದ್ದರು. ಜೊತೆಗೆ ಅವರು ತಮ್ಮ ಮನೆಯವರು ಇರುವ ಎರಡು ವಿಳಾಸಗಳನ್ನು ಪೊಲೀಸರಿಗೆ ನೀಡಿದ್ದರು. ಇದಾದ ನಂತರ ಪೊಲೀಸರು ಅವರ ಫೋಟೋಗಳನ್ನು ವಿವಿಧ ಪೊಲೀಸ್ ಠಾಣೆಗೆ ಹಂಚಿದ್ದಲ್ಲದೇ, ಅವರ ಕುಟುಂಬದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಅದರಂತೆ ಕೊನೆಗೂ ಈಗ ಯಶೋದ ಗಾಯಕ್‌ವಾಡ್ ಅವರ ಮೊಮ್ಮಗ ಪೊಲೀಸರಿಗೆ ಸಿಕ್ಕಿದ್ದು, ಅವರೂ ಸೇರಿದಂತೆ ಕುಟುಂಬದ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪೊಲೀಸರ ವಿಚಾರಣೆ ಬಳಿಕ ಸತ್ಯ ಬಾಯ್ಬಿಟ್ಟ ಮೊಮ್ಮಗ

ಇನ್ನು ಅವರ ಮೊಮ್ಮಗ ಅವರಾಗಿಯೇ ಮನೆ ಬಿಟ್ಟು ಬಂದಿದ್ದಾಗಿ ಹೇಳಿಕೊಂಡಿದ್ದ ಆದರೆ ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಆತನೇ ಅವರನ್ನು ಎಳೆದುಕೊಂಡು ಬಂದಿರುವುದು ರೆಕಾರ್ಡ್ ಆಗಿದೆ.

ಶುಕ್ರವಾರ ರಾತ್ರಿ ಯಶೋಧ ಅವರು ತಮ್ಮ ಆಕ್ರಮಣಕಾರಿಯಾಗಿ ವರ್ತಿಸಿ ತನ್ನನ್ನು ಕತ್ತು ಹಿಸುಕಿ ಕೊಂದುಕೊಳ್ಳಲು ಹಾಗೂ ಮೊಮ್ಮಗನ ಮೇಲೂ ಹಲ್ಲೆ ನಡೆಸಲು ಪ್ರಯತ್ನಿಸಿದ್ದರು. ಈ ವೇಳೆ ಯಶೋಧ ಅವರ ಮೊಮ್ಮಗ ಸಾಗರ್ ಶೆವಾಲೆ ಹಾಗೂ ಚಿಕ್ಕಪ್ಪ ಬಾಬಾಸಾಹೇಬ್ ಗಾಯಕವಾಡ್ (Babasaheb Gaikwad) ಯಶೋಧ ಅವರನ್ನು ಆಸ್ಪತ್ರೆಗೆ ಸೇರಿಸಲು ಆಂಬ್ಯುಲೆನ್ಸ್‌ನಲ್ಲಿ ಕರೆತಂದರು. ಆದರೆ ಅಲ್ಲಿ ಸೇವೆ ಲಭ್ಯವಿಲ್ಲ ಎಂದು ಹೇಳಿ ವೈದ್ಯರು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದರು.

ಮಹಿಳೆಯ ಮೊಮ್ಮಗ ಹಾಗೂ ಆತನ ಚಿಕ್ಕಪ್ಪ ವೃದ್ಧ ಮಹಿಳೆ ಯಶೋಧ ಜೊತೆ ಆಸ್ಪತ್ರೆಗೆ ಹೋಗುವುದು ಹಾಗೂ ಅಲ್ಲಿ ಹೊರಬರುತ್ತಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆದರೆ ಅವರ ಮಾತುಗಳಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮೊಮ್ಮಗ ಸುಳ್ಳು ಹೇಳುತ್ತಿರುವುದು ಗೊತ್ತಾಗಿದೆ.

ಆಸ್ಪತ್ರೆಗೆ ಸೇರಿಸಲು ಹೋಗಿ ಅಲ್ಲಿ ದಾಖಲಿಸಿಕೊಳ್ಳಲು ನಿಕಾರಿಸಿದ ನಂತರ ಮಧ್ಯರಾತ್ರಿ 3.30ರ ಸುಮಾರಿಗೆ ಮನೆಗೆ ಬಂದ ಅವರು ಆಕೆಯನ್ನು ವಾಪಸ್ ಮನೆಯಿಂದ ಕರೆದುಕೊಂಡು ಹೋಗಿ ದರ್ಗಾ ರಸ್ತೆಯಲ್ಲಿರುವ ಕಸದ ರಾಶಿಗೆ ಹಾಕಿ ಬಂದಿದ್ದಾರೆ. ಇದಕ್ಕೆ ರಿಕ್ಷಾ ಚಾಲಕ ಸಂಜಯ್ ಕುದ್ಸಿಮ್ ಎಂಬುವವರ ನೆರವು ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಾಗಿದೆ.