ಜಪಾನ್‌ನಲ್ಲಿ ಆತ್ಮಹತ್ಯೆ ಅಥವಾ ಕೊಲೆ ನಡೆದ 'ಜಿಕೊ ಬುಕ್ಕೆನ್' ಮನೆಗಳನ್ನು ಮಾರಾಟ ಮಾಡಲು ರಿಯಲ್ ಎಸ್ಟೇಟ್ ಕಂಪನಿಗಳು ಹೊಸ ಹಾರರ್ ಟ್ರಿಕ್ ಬಳಸ್ತಿವೆ. ಇಂತಹ ಮನೆಗಳಲ್ಲಿ ದೆವ್ವಗಳಿಲ್ಲ ಎಂದು ಸಾಬೀತುಪಡಿಸಲು ಹೈಟೆಕ್ ಸಾಧನಗಳೊಂದಿಗೆ ರಾತ್ರಿ ಕಳೆಯುವ ವಿಶೇಷ ತನಿಖಾಧಿಕಾರಿಗಳಿಗೆ ಸುಮಾರು ₹31,000 ನೀಡಲಾಗುತ್ತಿದೆ. ಈ ರಾತ್ರಿ ತಪಾಸಣೆಯ ವರದಿಯು ಗ್ರಾಹಕರಲ್ಲಿ ಧೈರ್ಯ ತುಂಬಲು ನೆರವಾಗುತ್ತಿದೆ.

ಟೋಕಿಯೋ: ಜಪಾನ್‌ನಲ್ಲಿ ಆತ್ಮಹತ್ಯೆ, ಕೊಲೆ ಅಥವಾ ಒಂಟಿ ಸಾವುಗಳಂತಹ ದುರಂತ ಘಟನೆಗಳು ನಡೆದ ಮನೆಗಳನ್ನು "ಜಿಕೊ ಬುಕ್ಕೆನ್" (ಕಳಂಕಿತ ಆಸ್ತಿಗಳು) ಎಂದು ಕರೆಯಲಾಗುತ್ತದೆ. ಇಂತಹ ಮನೆಗಳು ದುರದೃಷ್ಟ ತರುತ್ತವೆ ಅಥವಾ ಆಧ್ಯಾತ್ಮಿಕವಾಗಿ ಅಪವಿತ್ರವಾಗಿರುತ್ತವೆ ಎಂಬ ಬಲವಾದ ನಂಬಿಕೆ ಜಪಾನಿಯರಲ್ಲಿದೆ. ಹೀಗಾಗಿ, ಸಾವಿರಾರು ಸುಸಜ್ಜಿತ ಮನೆಗಳು ವರ್ಷಗಟ್ಟಲೆ ಖಾಲಿ ಬಿದ್ದಿವೆ. ಈ ಸಮಸ್ಯೆಗೆ ಪರಿಹಾರವಾಗಿ ಜಪಾನ್‌ನ ರಿಯಲ್ ಎಸ್ಟೇಟ್ ಕಂಪನಿಯೊಂದು ಅತ್ಯಂತ ವಿಚಿತ್ರ ಹಾಗೂ ಅಸಾಮಾನ್ಯ ಮಾರ್ಗವನ್ನು ಕಂಡುಕೊಂಡಿದೆ.

ಪ್ಯಾರಾನಾರ್ಮಲ್ ತನಿಖಾ ಸಿಬ್ಬಂದಿ ನೇಮಕ..!

ಪ್ರಾಪರ್ಟಿ ಮ್ಯಾನೇಜ್ಮೆಂಟ್ ಕಂಪನಿಯಾದ 'ಕಚಿಮೋಡೆ' ಇಂತಹ ಮನೆಗಳಲ್ಲಿ ಯಾವುದೇ ಅಲೌಕಿಕ ಅಥವಾ ದೆವ್ವದ ಚಟುವಟಿಕೆಗಳು ಇಲ್ಲ ಎಂಬುದನ್ನು ಸಾಬೀತುಪಡಿಸಲು ವಿಶೇಷ "ನೈಟ್ ಡಿಟೆಕ್ಟಿವ್ಸ್ ಗಳನ್ನು" ನೇಮಿಸಿಕೊಳ್ಳುತ್ತಿದೆ. ಈ ಡಿಟೆಕ್ಟಿವ್ಸ್ ಗಳು ಹಾರರ್ ಸಿನಿಮಾಗಳಂತೆ ಪ್ರಾಣ ಕೈಯಲ್ಲಿ ಹಿಡಿದು ಇಡೀ ರಾತ್ರಿ ಆ ಮನೆಯಲ್ಲೇ ಕಳೆಯಬೇಕಾಗುತ್ತದೆ. ಈ ವಿಶೇಷ ಸೇವೆಗೆ ಕಂಪನಿಯು ಪ್ರತಿ ಆಸ್ತಿಗೆ 88,000 ಯೆನ್ (ಸುಮಾರು ₹31,000) ಶುಲ್ಕ ವಿಧಿಸುತ್ತದೆ.

ಹೈಟೆಕ್ ಗ್ಯಾಜೆಟ್‌ಗಳೊಂದಿಗೆ ತಪಾಸಣೆ:

ಈ ಕಾರ್ಯಾಚರಣೆಯು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುತ್ತದೆ. ತನಿಖಾಧಿಕಾರಿಗಳು ಕೇವಲ ಮಲಗುವುದಿಲ್ಲ; ಬದಲಿಗೆ ವೀಡಿಯೊ ಕ್ಯಾಮೆರಾಗಳು, ಆಡಿಯೊ ರೆಕಾರ್ಡರ್‌ಗಳು, ಥರ್ಮಲ್ ಇಮೇಜಿಂಗ್ ಸಾಧನಗಳು ಮತ್ತು ವಿದ್ಯುತ್ಕಾಂತೀಯ ಕ್ಷೇತ್ರ ಪತ್ತೆಕಾರಕಗಳ (EMF) ಸಹಾಯದಿಂದ ಮನೆಯ ತಾಪಮಾನ, ಆರ್ದ್ರತೆ, ವಾಯು ಒತ್ತಡ ಹಾಗೂ ವಿಚಿತ್ರ ಶಬ್ದಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ರಾತ್ರಿಯ ವಾಸ್ತವ್ಯದ ಬಳಿಕ ಯಾವುದೇ ಅಸಹಜ ಘಟನೆ ನಡೆಯದಿದ್ದರೆ, ಕಂಪನಿಯು ಒಂದು ವಿವರವಾದ ವರದಿಯನ್ನು ಸಿದ್ಧಪಡಿಸಿ ಮಾಲೀಕರಿಗೆ ನೀಡುತ್ತದೆ. ಇದು ಖರೀದಿದಾರರಿಗೆ ಧೈರ್ಯ ತುಂಬಲು ನೆರವಾಗುತ್ತದೆ.

ನಿಜವಾಗಿಯೂ ದೆವ್ವಗಳಿವೆಯೇ?

ಕಂಪನಿಯ ಅಧ್ಯಕ್ಷ ಕಜುತೋಶಿ ಕೊಡಮಾ ಅವರ ಪ್ರಕಾರ, ಕೆಲವು ತಪಾಸಣೆಗಳ ಸಂದರ್ಭದಲ್ಲಿ ಕ್ಯಾಮೆರಾಗಳು ತಂತಾನೇ ಆಫ್ ಆಗುವುದು ಅಥವಾ ಮೈಕ್ರೊಫೋನ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸುವಂತಹ ವಿಚಿತ್ರ ಘಟನೆಗಳು ನಡೆದಿವೆ. ಆದರೆ ಇವು ಅತ್ಯಂತ ಅಪರೂಪ. ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಅಧಿಸಾಮಾನ್ಯ ಚಟುವಟಿಕೆಗಳು ಕಂಡು ಬರುವುದಿಲ್ಲ. ಜಪಾನ್ ಕಾನೂನಿನ ಪ್ರಕಾರ ಆಸ್ತಿಯ ಇತಿಹಾಸವನ್ನು ಗ್ರಾಹಕರಿಗೆ ತಿಳಿಸುವುದು ಕಡ್ಡಾಯವಾಗಿರುವುದರಿಂದ, ಇಂತಹ ಮನೆಗಳ ಬೆಲೆಯನ್ನು ದೊಡ್ಡ ನಗರಗಳಲ್ಲಿ ಶೇ. 30 ರಷ್ಟು ಮತ್ತು ಸಣ್ಣ ಪಟ್ಟಣಗಳಲ್ಲಿ ಶೇ. 50 ರಷ್ಟು ಕಡಿತಗೊಳಿಸಿ ಮಾರಾಟ ಮಾಡಲಾಗುತ್ತದೆ.