ಶ್ರೀಮಂತಿಕೆಯನ್ನು ಪ್ರದರ್ಶಿಸುವುದರಿಂದ ದೈನಂದಿನ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ ಎಂದು ನಂಬಿ, ಉದ್ದೇಶಪೂರ್ವಕವಾಗಿ ಲೋ-ಪ್ರೊಫೈಲ್ ಕಾಯ್ದುಕೊಳ್ಳುತ್ತಿರುವ ಬೆಂಗಳೂರಿನ ಮೀನಾಂಕ್ ಮಿನ್ನು ಅವರ ಲಿಂಕ್ಡ್‌ಇನ್ ಪೋಸ್ಟ್ ವೈರಲ್ ಆಗಿದೆ. ಐಫೋನ್ ಮಾರಿ ದುಬಾರಿ ಪರ್ಯಾಯ ಬಳಸುವ ಮತ್ತು ಹಳೇ ಕಾರ್ ಓಡಿಸುವ ಮೂಲಕ ಇವರು 'ಶ್ರೀಮಂತಿಕೆಯ ಗುಪ್ತ ತೆರಿಗೆ'ಯಿಂದ ಬಚಾವಾಗುವ ತಂತ್ರ ಹಂಚಿಕೊಂಡಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತೋರ್ಪಡಿಕೆಯ ಐಷಾರಾಮಿ ಜೀವನವೇ ಮೇಲುಗೈ ಸಾಧಿಸುತ್ತಿರುವ ಇಂದಿನ ದಿನಗಳಲ್ಲಿ, ಬೆಂಗಳೂರಿನ ವೃತ್ತಿಪರರೊಬ್ಬರು ತಮ್ಮ ವಿಭಿನ್ನ ಆರ್ಥಿಕ ತಂತ್ರದ ಮೂಲಕ ಇಂಟರ್ನೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೀನಾಂಕ್ ಮಿನ್ನು ಅವರು, ತಾವು ಶ್ರೀಮಂತರೆಂದು ಬಿಂಬಿಸಿಕೊಳ್ಳುವುದನ್ನು ಪ್ರಜ್ಞಾಪೂರ್ವಕವಾಗಿ ಹೇಗೆ ನಿಲ್ಲಿಸಿದರು ಮತ್ತು ಅದರಿಂದ ತಮಗೆ ದೈನಂದಿನ ವೆಚ್ಚಗಳಲ್ಲಿ ಎಷ್ಟು ಲಾಭವಾಗುತ್ತಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.

ಬಡವನಂತೆ ಕಾಣುವುದರ ಹಿಂದಿನ ಕಾರಣ:

ಮೀನಾಂಕ್ ಅವರ ಪ್ರಕಾರ, ಭಾರತದಲ್ಲಿ ನಾವು ಆಡಂಬರ ಪ್ರದರ್ಶಿಸಿದ ತಕ್ಷಣ ನಮ್ಮ ಸುತ್ತಲಿನ ಸಮಾಜ ನಮಗೆ ಗೊತ್ತಿಲ್ಲದಂತೆ 'ಶ್ರೀಮಂತಿಕೆಯ ತೆರಿಗೆ' ವಿಧಿಸಲು ಆರಂಭಿಸುತ್ತದೆ. "ನಾನು ಯಾವಾಗಲೂ ಬಡವನಾಗಿ ಕಾಣಲು ಪ್ರಯತ್ನಿಸುತ್ತೇನೆ. ಇದು ಮಾರುಕಟ್ಟೆಯಲ್ಲಿ ಕಠಿಣವಾಗಿ ಮಾತುಕತೆ ನಡೆಸಿ ಬೆಲೆ ಇಳಿಸಲು ನನಗೆ ಸಹಾಯ ಮಾಡುತ್ತದೆ" ಎಂದು ಅವರು ಬರೆದಿದ್ದಾರೆ. ಜನರು ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದರ ಆಧಾರದ ಮೇಲೆ ಬೆಲೆ ನಿಗದಿಪಡಿಸುತ್ತಾರೆ ಎಂಬುದು ಅವರ ಬಲವಾದ ವಾದ. ಉದಾಹರಣೆಗೆ, ನಿಮ್ಮ ಕೈಯಲ್ಲಿ ಐಫೋನ್ ಇದ್ದರೆ ₹200ರ ಬ್ಯಾಕ್ ಕವರ್ ಬೆಲೆ ₹700 ಆಗುತ್ತದೆ, ₹20ರ ಆಲೂಗಡ್ಡೆ ₹28ಕ್ಕೆ ಏರುತ್ತದೆ ಮತ್ತು ಟ್ರಾಫಿಕ್ ಪೊಲೀಸರು ವಿಧಿಸುವ ದಂಡವೂ ತಂತಾನೇ ಹೆಚ್ಚಾಗುತ್ತದೆ ಎಂದು ಅವರು ಉದಾಹರಣೆ ನೀಡಿದ್ದಾರೆ.

ಆ್ಯಪಲ್ ಫೋನ್, ಮ್ಯಾಕ್‌ಬುಕ್ ಗೆ ಗುಡ್‌ಬೈ... ಇದರ ಹಿಂದಿದೆ ಅಸಲಿ ಟ್ವಿಸ್ಟ್!

ಈ ತಂತ್ರಕ್ಕಾಗಿ ಮಿನ್ನು ಅವರು ತಮ್ಮ ದುಬಾರಿ ಐಫೋನ್ ಮತ್ತು ಮ್ಯಾಕ್‌ಬುಕ್ ಸಾಧನಗಳನ್ನು ಮಾರಿ, ಅವುಗಳ ಬದಲಿಗೆ ವಿವೋ ಮತ್ತು ಆಸಸ್ (ASUS) ಬ್ರ್ಯಾಂಡ್‌ಗಳ ಗ್ಯಾಜೆಟ್‌ಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಹೊಸ ಕಾರು ಖರೀದಿಸುವ ಆರ್ಥಿಕ ಶಕ್ತಿ ಇದ್ದರೂ ಅವರು ಇಂದಿಗೂ 10 ವರ್ಷ ಹಳೆಯ ಹ್ಯಾಚ್‌ಬ್ಯಾಕ್ ಕಾರನ್ನೇ ಬಳಸುತ್ತಿದ್ದಾರೆ. ಇಲ್ಲಿರುವ ತಮಾಷೆಯ ವಿಷಯವೆಂದರೆ, ಅವರು ಖರೀದಿಸಿದ ಹೊಸ ವಿವೋ ಮತ್ತು ಆಸಸ್ ಸಾಧನಗಳು ಅವರು ಮಾರಾಟ ಮಾಡಿದ ಆಪಲ್ ಉತ್ಪನ್ನಗಳಿಗಿಂತಲೂ ಹೆಚ್ಚು ದುಬಾರಿಯಾಗಿದ್ದವು! ಅಂದರೆ, ಬಜೆಟ್ ಕಡಿತ ಮಾಡುವುದು ಅವರ ಗುರಿಯಾಗಿರಲಿಲ್ಲ, ಬದಲಿಗೆ ಆಪಲ್ ಸಾಧನಗಳನ್ನು ಹಿಡಿದು ಓಡಾಡುವಾಗ ಸಮಾಜ ವಿಧಿಸುವ 'ಗಮನದ ತೆರಿಗೆ'ಯಿಂದ ಪಾರಾಗುವುದು ಅವರ ಆಶಯವಾಗಿತ್ತು.

ಹೆಸರಿಗಿಂತ ನೆಮ್ಮದಿ ಮುಖ್ಯ... ಅನಾಮಧೇಯ ಜೀವನದ ಮಂತ್ರ!

ಭಾರತದಲ್ಲಿ ನಿಜವಾದ ಬಿಲಿಯನ್ ಡಾಲರ್ ಉದ್ಯಮಗಳು ಸ್ಟಾರ್‌ಬಕ್ಸ್‌ನಂತಹ ಹೈ-ಫೈ ಕೆಫೆಗಳಲ್ಲಿ ನಡೆಯುವುದಿಲ್ಲ, ಬದಲಿಗೆ ಹಳೆಯ ಶಾಲಾ ಕೆಫೆಗಳಲ್ಲಿ ಅತ್ಯಂತ ಸರಳವಾಗಿ ಮಾತುಕತೆ ನಡೆಸುವ ನೈಜ ಶ್ರೀಮಂತರಿಂದ ನಡೆಯುತ್ತವೆ ಎಂದು ಮಿನ್ನು ಅಭಿಪ್ರಾಯಪಟ್ಟಿದ್ದಾರೆ. "ಕಡಿಮೆ ಫ್ಲ್ಯಾಶ್ ಮಾಡಿ, ಶಾಂತಿಯುತವಾಗಿ ಬದುಕಿ. ಬೇರೆಯವರು ಗಮನ ಸೆಳೆಯುವ ತೆರಿಗೆಯನ್ನು ಪಾವತಿಸಲಿ" ಎಂದು ಅವರು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಕೆಲವರು ಈ ಸರಳತೆಯ ತತ್ವವನ್ನು ಒಪ್ಪಿಕೊಂಡರೆ, ಇನ್ನು ಕೆಲವರು ಗ್ಯಾಜೆಟ್‌ಗಳ ದಕ್ಷತೆ ಮತ್ತು ಮೌಲ್ಯದ ಆಧಾರದ ಮೇಲೆ ವಸ್ತುಗಳನ್ನು ಕೊಳ್ಳಬೇಕೇ ಹೊರತು ಕೇವಲ ಲೋ-ಪ್ರೊಫೈಲ್ ಕಾಯ್ದುಕೊಳ್ಳಲು ಅಲ್ಲ ಎಂದು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.