ಪೊಲೀಸರು ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಭಿಕ್ಷುಕರಿಗೆ ಬಿರಿಯಾನಿ ಮತ್ತು ಹಣದ ಆಮಿಷವೊಡ್ಡಿ ವೀರ್ಯ ಸಂಗ್ರಹಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಅಕ್ರಮವು ಬಾಡಿಗೆ ತಾಯ್ತನ ಮತ್ತು ಮಕ್ಕಳ ಕಳ್ಳಸಾಗಾಣಿಕೆಯ ದೊಡ್ಡ ದಂಧೆಯ ಭಾಗವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿನ ಅನೈತಿಕ ಶೋಷಣೆಯನ್ನು ಇದು ಎತ್ತಿ ತೋರಿಸುತ್ತದೆ.
ಸಿಕಂದರಾಬಾದ್: ಬಾಡಿಗೆ ತಾಯ್ತತನದ ಮೂಲಕ ಮಕ್ಕಳನ್ನು ಪಡೆಯುವವರು ಸಂಖ್ಯೆ ದೊಡ್ಡದಾಗುತ್ತಿದೆ. ಇದಕ್ಕೆ ವೀರ್ಯದ ಅವಶ್ಯಕತೆ ಇದೆ. ಅದೇ ಇನ್ನೊಂದೆಡೆ, ಮಕ್ಕಳ ಕಳ್ಳ ಸಾಗಾಣಿಕೆಯಂತೂ ಅವ್ಯಾಹತವಾಗಿ ನಡೆಯುತ್ತಿದ್ದು, ಇದು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಬಿಜ್ನೆಸ್ ಆಗಿಬಿಟ್ಟಿದೆ. ಇವೆಲ್ಲಕ್ಕೂ ಬೇಕಾಗಿದ್ದು ವೀರ್ಯದಾನಿಗಳು. ವೀರ್ಯ ಸಂಗ್ರಹ ಮಾಡಿ ಮಕ್ಕಳನ್ನು ಹುಟ್ಟಿಸಿ ಅಕ್ರಮ ಕಳ್ಳಸಾಗಾಣಿಕೆ ಮಾಡುವುದು ಜೊತೆಗೆ ಬಾಡಿಗೆ ತಾಯಿಯಾಗಬಯಸುವವರಿಂದ ಕೋಟಿ ಕೋಟಿ ಹಣ ಪಡೆದು ಮಕ್ಕಳನ್ನು ನೀಡುವ ದೊಡ್ಡ ಜಾಲ ಇದಾಗಿದ್ದು, ಆಘಾತಕಾರಿ ಜಾಲವೊಂದನ್ನು ಇದೀಗ ಪೊಲೀಸರು ಬೇಧಿಸಿದ್ದಾರೆ!
ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಅನೈತಿಕ ಪದ್ಧತಿಗಳ ಆಘಾತಕಾರಿ ಪ್ರಕರಣ ಇದಾಗಿದ್ದು, ಜನರು ಆಘಾತಕ್ಕೊಳಗಾಗಿದ್ದಾರೆ. ಟಾಸ್ಕ್ ಫೋರ್ಸ್ ಪೊಲೀಸರು ಸಿಕಂದರಾಬಾದ್‌ನ ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಒಂದು ದೊಡ್ಡ ಹಗರಣವನ್ನು ಬಯಲು ಮಾಡಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಭಿಕ್ಷುಕರು ಮತ್ತು ಪಾದಚಾರಿಗಳಿಗೆ ಬಿರಿಯಾನಿ ಆಮಿಷ ಒಡ್ಡಿ ವೀರ್ಯ ದಾನ ಮಾಡಿಸಿಕೊಳ್ಳುತ್ತಿರುವ ಹಗರಣ ಇದಾಗಿದೆ. ಪೊಲೀಸರ ಪ್ರಕಾರ, ಆಸ್ಪತ್ರೆಯ ಹೊರಗೆ ಕುಳಿತಿರುವ ಭಿಕ್ಷುಕರೇ ಈ ಕ್ಷಿನಿಕ್ ಸಿಬ್ಬಂದಿ ಟಾರ್ಗೆಟ್. ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಗೆ ಕರೆಸಲಾಗುತ್ತದೆ. ಬಿರಿಯಾನಿ ಕೊಡಲಾಗುತ್ತದೆ, ಜೊತೆಗೆ 4,000 ರಿಂದ 6,000 ರೂಪಾಯಿ ಹಣವನ್ನೂ ನೀಡಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಅವರಿಂದ ವೀರ್ಯದ ಸಹಾಯ ಕೇಳಲಾಗುತ್ತದೆ. ವೀರ್ಯ ಮಾದರಿಗಳಿಗಾಗಿ ಸ್ನಾನಗೃಹ ಅಥವಾ ಪ್ರತ್ಯೇಕ ಕೋಣೆಗೆ ಕರೆದೊಯ್ದು, ಅದನ್ನು ಸಂಗ್ರಹಿಸಿ, ನಂತರ ಈ ಮಾದರಿಗಳನ್ನು ಅಹಮದಾಬಾದ್‌ನಲ್ಲಿರುವ ಫಲವತ್ತತೆ ಕೇಂದ್ರಗಳಿಗೆ ಕಳುಹಿಸುವ ಜಾಲ ಪತ್ತೆಯಾಗಿದೆ.
ಸರೊಗಸಿ ಮತ್ತು ಮಕ್ಕಳ ಕಳ್ಳಸಾಗಣೆಯೊಂದಿಗೆ ಸಂಪರ್ಕಗಳು
ಈ ಕ್ಲಿನಿಕ್ ಅಕ್ರಮ ಸರೊಗಸಿ ಮತ್ತು ಮಕ್ಕಳ ಕಳ್ಳಸಾಗಣೆಯ ದೊಡ್ಡ ದಂಧೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ. ಬಡವರು ಮತ್ತು ಭಿಕ್ಷುಕರನ್ನು ಶೋಷಿಸುವ ಮೂಲಕ ವೀರ್ಯವನ್ನು ಅಗ್ಗವಾಗಿ ಸಂಗ್ರಹಿಸಲಾಗಿದ್ದು, ಪೊಲೀಸರು 16 ಮಾದರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಮತ್ತು ನಿರ್ವಾಹಕರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಯಿತು. ಆದಾಗ್ಯೂ, ಎಲ್ಲಾ ಮಾದರಿಗಳು ಭಿಕ್ಷುಕರಿಂದ ಬಂದವು ಎಂದು ದೃಢೀಕರಿಸಲು ಸಾಧ್ಯವಾಗಲಿಲ್ಲ.
ಆರೋಗ್ಯ ವಲಯದಲ್ಲಿ ಗುಣಮಟ್ಟ ಕುಸಿಯುತ್ತಿದೆ
ಈ ಪ್ರಕರಣವು ಫಲವತ್ತತೆ ಚಿಕಿತ್ಸಾಲಯಗಳಲ್ಲಿ ನಡೆಯುತ್ತಿರುವ ಅನೈತಿಕ ಪದ್ಧತಿಗಳನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ವೀರ್ಯ ದಾನ ಕಾನೂನುಬದ್ಧವಾಗಿದೆ, ಆದರೆ ಇದಕ್ಕೆ ಕಟ್ಟುನಿಟ್ಟಾದ ನಿಯಮಗಳು ಮತ್ತು ಒಪ್ಪಿಗೆಯ ಅಗತ್ಯವಿದೆ. ಬಡವರನ್ನು ಆಕರ್ಷಿಸುವ ಮೂಲಕ ಅವರ ಲಾಭ ಪಡೆಯುವುದು ಸಂಪೂರ್ಣವಾಗಿ ಕಾನೂನುಬಾಹಿರ. ದಾಳಿಯ ಸಮಯದಲ್ಲಿ ಕಾರ್ಯಪಡೆ ಹಲವಾರು ದಾಖಲೆಗಳು ಮತ್ತು ಮಾದರಿಗಳನ್ನು ವಶಪಡಿಸಿಕೊಂಡಿದೆ. ಕ್ಲಿನಿಕ್ ಅಹಮದಾಬಾದ್‌ನಲ್ಲಿರುವ ಫಲವತ್ತತೆ ಕೇಂದ್ರಕ್ಕೆ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ. ಈ ಸುದ್ದಿ ಕೋಲಾಹಲಕ್ಕೆ ಕಾರಣವಾಯಿತು. ಭಾರತೀಯ ಕಾನೂನಿನ ಪ್ರಕಾರ, ವೀರ್ಯ ದಾನ ಸ್ವಯಂಪ್ರೇರಿತವಾಗಿರಬೇಕು. ಆರ್ಥಿಕ ಪ್ರೇರಣೆ ಅಥವಾ ವಂಚನೆಯ ಮೂಲಕ ದೇಣಿಗೆ ನೀಡುವುದು ಕಾನೂನುಬಾಹಿರ. ಸರೊಗಸಿ ನಿಯಂತ್ರಣ ಕಾಯ್ದೆ ಕೂಡ ಕಠಿಣವಾಗಿದೆ. ಅಂತಹ ದಂಧೆಗಳನ್ನು ಹತ್ತಿಕ್ಕುವುದು ಮುಖ್ಯವಾಗಿದೆ.


