ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Parvati Siddaramaiah) ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿ ಎಂದಿಗೂ ಕಾಣಿಸಿಕೊಳ್ಳದ ಅವರ ಪತಿಯೊಂದಿಗಿನ ಅವರ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅದರಲ್ಲಿನ ಲಘು ಕ್ಷಣಗಳು ಎಲ್ಲರ ಗಮನ ಸೆಳೆದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ ಪಾರ್ವತಿ ಅವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಪಾರ್ವತಿ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿ ನೋಡಿಕೊಳ್ಳಲಾಗುತ್ತಿದೆ. ಅವರ ಆರೋಗ್ಯಕ್ಕಾಗಿ ಸಿದ್ದರಾಮಯ್ಯನವರ ಹಾಗೂ ಪಾರ್ವತಿಯವರ ಅಭಿಮಾನಿಗಳು, ಬಂಧುಗಳು ಪ್ರಾರ್ಥಿಸುತ್ತಿದ್ದಾರೆ. ಇದೇ ಗಳಿಗೆಯಲ್ಲಿ, ಅವರ ಒಂದು ವಿಡಿಯೋ ವೈರಲ್ ಆಗಿದೆ.

ಪಾರ್ವತಿ ಅವರ ವಿಶೇಷವೇ ಇದು. ಅವರು ಎಲ್ಲಿಯೂ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಪತಿ ಸಿದ್ದರಾಮಯ್ಯ ಅವರು ಹೈ ಪ್ರೊಫೈಲ್‌ ವ್ಯಕ್ತಿ ಆಗಿದ್ದರೂ ಒಂದು ದಿನವೂ ಅವರು ಗಂಡನ ಜೊತೆ ವೇದಿಕೆ ಏರಿದ್ದಾಗಲೀ, ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಗಲೀ ಇಲ್ಲ. ತನ್ನ ಪತಿ ಸಿದ್ಧರಾಮಯ್ಯನವರು ಸುಮಾರು ಐವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಇದ್ದರೂ, ಯಾವುದೇ ಉನ್ನತ ಹುದ್ದೆಗೆ ಒಳಗಾಗದೆ, ಪತಿಯ ಜೊತೆಯಲ್ಲೂ ಸಾರ್ವಜನಿಕ ವೇದಿಕೆಯಲ್ಲೂ ಎಂದೂ ಕಾಣಿಸಿಕೊಳ್ಳದೆ, ಅತ್ಯಂತ ಸಾಧಾರಣ ಮತ್ತು ಸರಳ ಜೀವನ ನಡೆಸುತ್ತಾ ಬಂದವರು. ಹೀಗಾಗಿ, ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದಾಗಲೂ ಪ್ರಕಟಿಸಲು ಅವರ ಒಂದೇ ಒಂದೇ ಸರಿಯಾದ ಫೋಟೋ ಸಿಗದೆ ಮಾಧ್ಯಮದವರು ಪರದಾಡಬೇಕಾಯಿತು.

ಸದ್ಯ ವೈರಲ್‌ ಆಗುತ್ತಿರುವ ವಿಡಿಯೋ, ಯಾವುದೋ ಒಂದು ಮದುವೆಯ ದೃಶ್ಯ ಎಂಬುದು ಕಂಡುಬಂದಿದೆ. ಮದುವೆಯಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಹಾಗೂ ಅವರ ಪತ್ನಿ, ವರನಿಗೆ ಆಶೀರ್ವಾದ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತುಸು ತುಂಟತನದಿಂದ, ವಧುವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿದ ಬಳಿಕ, ಕೈಗೆ ಹತ್ತಿದ ಕುಂಕುಮವನ್ನು ವರನ ಅಂಗಿಗೇ ಒರೆಸುತ್ತಿದ್ದಾರೆ. ಇದನ್ನು ನೋಡಿ ಪಾರ್ವತಿ ಮೇಡಂ ಸೇರಿದಂತೆ ಎಲ್ಲರೂ ಜೋರಾಗಿ ನಗುತ್ತಿರುವುದು ಕಂಡುಬಂದಿದೆ. ಮದುವೆಯ ಈ ಲಘು ಸಂಭ್ರಮದ ಕ್ಷಣಗಳು ಇದೀಗ ವೈರಲ್‌ ಆಗಿವೆ.

ಕಳಂಕ ಸಹಿಸದ ವ್ಯಕ್ತಿತ್ವ

ಪಾರ್ವತಿ ಅವರು ಸಾರ್ವಜನಿಕವಾಗಿ ಪತಿಯ ಜೊತೆಗೆ ಬಂದವರಲ್ಲ ಮಾತ್ರವಲ್ಲ, ಪತಿಗೆ ತಮ್ಮಿಂದಾಗಿ ಏನಾದರೂ ಇರಿಸುಮುರಿಸು ಆಗುವಂತಿದೆ ಎಂದು ಗೊತ್ತಾದರೆ ಅಂಥದ್ದನ್ನು ಆ ಕ್ಷಣದಲ್ಲಿಯೇ ಕೈಬಿಡುವವರು ಸಹ. ಮೈಸೂರಿನಲ್ಲಿ ಮುಡಾ ಸೈಟ್‌ಗಳ ಹಗರಣ ನಡೆದಾಗ, ಪಾರ್ವತಿಯವರು ತಮ್ಮ ಹೆಸರಿನಲ್ಲಿ ತುಂಬ ಹಿಂದೆಯೇ ಅಲಾಟ್‌ ಆಗಿದ್ದ ಸೈಟುಗಳನ್ನು ಮುಡಾಗೆ ವಾಪಸ್‌ ಮಾಡಿದರು. ಇದನ್ನು ಘೋಷಿಸಲು ಕೂಡ ಪಾರ್ವತಿಯವರು ಬರಲಿಲ್ಲ. ಅದನ್ನೂ ಸಿದ್ದರಾಮಯ್ಯನವರೇ ಮಾಡಿದರು.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪಾರ್ವತಿ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಎಡಿಮಾ ಇರುವುದು ಪತ್ತೆಯಾದ ನಂತರ ಐಸಿಯುಗೆ ವರ್ಗಾಯಿಸಲಾಯಿತು. ಹಿರಿಯ ಸಲಹೆಗಾರ ಡಾ. ಬಿ.ಸಿ. ಶ್ರೀನಿವಾಸ್ ಅವರ ತಂಡ ಪಾರ್ವತಿ ಅವರಿಗೆ ಚಿಕಿತ್ಸೆ ನೀಡಿದ್ದರು. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ವಾರ್ಟ್‌ಗೆ ಶಿಫ್ಟ್ ಮಾಡಲಾಗಿದ್ದು. ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಪಾರ್ವತಿ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಅವರ ಮಗ ಯತೀಂದ್ರ ಕೂಡ ತಿಳಿಸಿದ್ದಾರೆ.‌

ವೈರಲ್‌ ವಿಡಿಯೋ ಇಲ್ಲಿದೆ

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ʼʼಸದಾ ಪತಿಯ ನೆರಳಲ್ಲಿ ವಿನಮ್ರವಾಗಿ, ಸರಳವಾಗಿ ಬದುಕಿದ ಸಿದ್ಧರಾಮಯ್ಯ ಅವರ ಪತ್ನಿ ನಿಜಕ್ಕೂ ಅದ್ಭುತ ಮಹಿಳೆ. ಇನ್ನೂ ಹಲವು ಕಾಲ ಇರಬೇಕು, ಭಗವಂತನಲ್ಲಿ ಪೂಜೆ, ಪ್ರಾರ್ಥನೆ ಮಾಡುವೆ" ಎಂದು ಒಬ್ಬರು ಬರೆದಿದ್ದರೆ, "ಪಾರ್ವತಮ್ಮ ಅವರು ಸೀತಾಮಾತೆ. ಸಿದ್ದರಾಮಯ್ಯ ಅವರು ಅವರನ್ನ ಎಲ್ಲೂ ಜೊತೆಯಲ್ಲಿ ಕರ್ಕೊಂಡ್ ಹೋಗ್ತಾ ಇರಲಿಲ್ಲ ಯಾಕೆ ಅಂಥ ಗೊತ್ತಿಲ್ಲ. ಅವರು ಬೇಗ ಗುಣಮುಖರಾಗಲಿ" ಎಂದು ಮತ್ತೊಬ್ಬರು ಬರೆದಿದ್ದಾರೆ.