ಮುಂಬೈ ಸ್ಟಾರ್ಟ್ಅಪ್ ಸಂಸ್ಥಾಪಕರೊಬ್ಬರು ಕಳಪೆ ಗುಣ ಮಟ್ಟದ ಕೆಲಸ ಮಾಡಿದ ಉದ್ಯೋಗಿಯ ಸಂಬಳ ಕಡಿತ ಮಾಡುವ ಬದಲು, ಪೂರ್ಣ ಸಂಬಳದೊಂದಿಗೆ ಮೂರು ದಿನಗಳ ಫ್ರೀ ಟ್ರಿಪ್ ಕಳಿಸಿ ಹೊಸ ಉತ್ಸಾಹದಿಂದ ಕೆಲಸಕ್ಕೆ ಮರಳಲು ಅವಕಾಶ ನೀಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಉದ್ಯೋಗಿಯ ಕೆಲಸ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದಾಕ್ಷಣ ಬಹುತೇಕ ಕಂಪನಿಗಳಲ್ಲಿ ಎಚ್ಚರಿಕೆ, ಸಂಬಳ ಕಡಿತ ಅಥವಾ ಕೆಲಸದಿಂದ ವಜಾಗೊಳಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಮುಂಬೈನ ಸ್ಟಾರ್ಟ್ಅಪ್ ಸಂಸ್ಥಾಪಕರೊಬ್ಬರು ಇದಕ್ಕೆ ಸಂಪೂರ್ಣ ವಿಭಿನ್ನವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉದ್ಯೋಗಿಯ ಕಳಪೆ ಮಟ್ಟದ ಕೆಲಸಕ್ಕೆ ಸಂಬಳ ಕಡಿತ ಮಾಡುವ ಬದಲು, ಆಕೆಗೆ ಪೂರ್ಣ ಸಂಬಳದೊಂದಿಗೆ ಮೂರು ದಿನಗಳ ಟ್ರಿಪ್ ವ್ಯವಸ್ಥೆ ಮಾಡಿದ್ದಾರೆ.
ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಉದ್ಯೋಗಿಯ ಮೇಲೆ ಒತ್ತಡ ಹೇರುವ ಬದಲು, ಆಕೆ ಎದುರಿಸುತ್ತಿರುವ ವೈಯಕ್ತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸ್ವಲ್ಪ ವಿರಾಮ ನೀಡಿದರೆ ಮತ್ತೆ ಉತ್ಸಾಹದಿಂದ ಕೆಲಸಕ್ಕೆ ಮರಳಬಹುದು ಎಂಬುದು ಸಂಸ್ಥಾಪಕರ ನಿಲುವಾಗಿದೆ.
ಕೆಲಸದಲ್ಲಿ ಸಮಸ್ಯೆಗಳು ಶುರುವಾಗಿದ್ದವು
ಬ್ಲೂ ಲಾಬ್‌ಸ್ಟರ್ ಮೀಡಿಯಾ ಸಂಸ್ಥಾಪಕ ಧ್ರುವ್ ಮುಖರ್ಜಿ ಅವರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಕಂಪನಿಯ ಕಂಟೆಂಟ್ ಆಪರೇಷನ್ಸ್ ವಿಭಾಗದ ಮುಖ್ಯಸ್ಥೆ ಆರ್ಯಾ ಸುಮಾರು ಒಂದು ತಿಂಗಳಿನಿಂದ ಕೆಲಸದಲ್ಲಿ ಕಷ್ಟಪಡುತ್ತಿದ್ದರು. ತಂಡದ ಕೆಲಸದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು. ಸಾಮಾನ್ಯವಾಗಿ ಒಂದು ಗಂಟೆಯಲ್ಲಿ ಮುಗಿಯುತ್ತಿದ್ದ ಎಡಿಟಿಂಗ್ ಕೆಲಸಗಳು ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದವು. ಕೆಲಸದ ಒಟ್ಟಾರೆ ಗುಣಮಟ್ಟವೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.
ಈ ಬಗ್ಗೆ ಆರ್ಯಾ ಜೊತೆ ಹಲವು ಬಾರಿ ಚರ್ಚಿಸಿದ ಮುಖರ್ಜಿ, ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆಯೂ ಮಾತನಾಡಿದ್ದರು. ಆದರೆ ಚರ್ಚೆಗಳ ನಂತರವೂ ಅದೇ ಸಮಸ್ಯೆಗಳು ಮುಂದುವರಿದಿದ್ದವು.
‘ನನ್ನ ಸಂಬಳ ಕಡಿತ ಮಾಡಿ’ ಎಂದ ಉದ್ಯೋಗಿ
ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಮುಖರ್ಜಿ ಅವರು, ‘ಬಹುಶಃ ನೀವು ಈ ಆಪರೇಷನಲ್ ಪಾತ್ರಕ್ಕೆ ಸಿದ್ಧರಾಗಿಲ್ಲದಿರಬಹುದು’ ಎಂದು ಹೇಳಿದ್ದಾರೆ. ಇದರಿಂದ ನಿರಾಶೆಗೊಂಡ ಆರ್ಯಾ, ತನಗೆ ಮತ್ತೊಂದು ಅವಕಾಶ ನೀಡುವಂತೆ ಮನವಿ ಮಾಡಿದರು. ಅಗತ್ಯವಿದ್ದರೆ ತನ್ನ ಸಂಬಳವನ್ನು ಕಡಿತಗೊಳಿಸುವುದಕ್ಕೂ ಸಿದ್ಧ ಎಂದು ಹೇಳಿದರು. ಆದರೆ ಮತ್ತೊಮ್ಮೆ ಮಾತನಾಡಿದಾಗ, ಆರ್ಯಾ ತನ್ನ ವೈಯಕ್ತಿಕ ಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿರುವುದು ಮತ್ತು ಅದರಿಂದಾಗಿ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟಪಡುತ್ತಿರುವುದು ಮುಖರ್ಜಿಗೆ ಅರ್ಥವಾಯಿತು.
ಸಂಬಳ ಕಡಿತದ ಬದಲು ಸಿಕ್ಕಿದ್ದು ಫ್ರೀ ಟ್ರಿಪ್
ಆರ್ಯಾಳ ಸಂಬಳ ಕಡಿತ ಮಾಡುವ ಬದಲು, ಮುಖರ್ಜಿ ಸಂಪೂರ್ಣ ವಿಭಿನ್ನ ನಿರ್ಧಾರ ಕೈಗೊಂಡರು. ಆಕೆಗೆ ಮೂರು ದಿನಗಳ ಏರ್‌ಬಿಎನ್‌ಬಿ ವಾಸ್ತವ್ಯವನ್ನು ವ್ಯವಸ್ಥೆ ಮಾಡಿದರು. ಇದರ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸಿತು. ಹೊಸ ವಾತಾವರಣದಲ್ಲಿ ಎರಡು ದಿನ ಯಾವುದೇ ಗೊಂದಲವಿಲ್ಲದೆ ಕೆಲಸ ಮಾಡಲು ಮತ್ತು ಮೂರನೇ ದಿನ ಸಂಪೂರ್ಣ ವಿಶ್ರಾಂತಿ ಪಡೆದು ಮತ್ತೆ ಕೆಲಸಕ್ಕೆ ಮರಳಲು ಅವಕಾಶ ನೀಡಲಾಯಿತು. ಇದರ ಜೊತೆಗೆ, ಮನೆಯಿಂದ ಸಮೀಪದಲ್ಲೇ ಶಾಂತವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಸಹ-ಕೆಲಸದ ಸ್ಥಳದಲ್ಲೊಂದು ಡೆಸ್ಕ್ ಕೂಡ ಬುಕ್ ಮಾಡಲಾಯಿತು. ಮುಖರ್ಜಿ ಅವರ ಪ್ರಕಾರ, ಈ ನಿರ್ಧಾರದ ನಂತರ ಆರ್ಯಾ ಪ್ರತಿದಿನ ಕೆಲಸಕ್ಕೆ ಬರಲು ಉತ್ಸುಕಳಾಗಿದ್ದಾರೆ. ತಮ್ಮ ಕೆಲಸದ ಬಗ್ಗೆ ಸಂತೋಷದಿಂದಿರುವುದು ಅವರ ಕಾರ್ಯಕ್ಷಮತೆಯಲ್ಲೂ ಕಾಣಿಸುತ್ತಿದೆ.
‘ಉದ್ಯೋಗಿಗಳು ಮೊದಲು ಮನುಷ್ಯರು, ನಂತರ ವೃತ್ತಿಪರರು’
ಈ ಅನುಭವವನ್ನು ಹಂಚಿಕೊಂಡ ಮುಖರ್ಜಿ, ಉದ್ಯೋಗದಾತರು ಕೆಲವೊಮ್ಮೆ ಉದ್ಯೋಗಿಗಳು ಮೊದಲು ಮನುಷ್ಯರು ಎಂಬುದನ್ನು ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ. ಕಾರ್ಯಕ್ಷಮತೆ ಕುಸಿದಾಗ ತಕ್ಷಣ ಶಿಕ್ಷಿಸುವ ಬದಲು, ಅದರ ಹಿಂದಿರುವ ಕಾರಣವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಉದ್ಯೋಗಿಯ ವೃತ್ತಿಜೀವನ ಮತ್ತು ಸಂಸ್ಥೆಯ ಬಲಿಷ್ಠ ತಂಡವನ್ನು ನಿರ್ಮಿಸುವಲ್ಲಿ ಸ್ವಲ್ಪ ಸಹಾನುಭೂತಿಯೂ ದೊಡ್ಡ ಬದಲಾವಣೆ ತರಬಹುದು ಎಂಬುದು ಅವರ ಅಭಿಪ್ರಾಯ.
