ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಹುಚ್ಚಿಗೆ ಬಿದ್ದ ಕೆಲ ಯುವಕರು ಭಾರತೀಯ ರೈಲ್ವೆ ಕೋಚ್‌ವೊಂದನ್ನು ಹಾಳುಗೆಡವಿದ್ದಾರೆ. ಒಬ್ಬ ಯುವಕ ಟ್ರೇನ್ ಸೀಟ್ ಕವರ್ ಹರಿಯುತ್ತಿರುವ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಇದು ವೈರಲ್ ಆಗುತ್ತಿದ್ದಂತೆ  ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹ 

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು ಅಂತ ಕೆಲ ಯುವಕರು ರೈಲ್ವೆ ಕೋಚ್‌ವೊಂದನ್ನು ಹಾಳುಗೆಡವಿದ ವಿಡಿಯೋ ಒಂದು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೆಂಕಿ ಉಗುಳಿದ್ದಾರೆ, ಈ ರೀತಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಅಂತಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ.. ಈ ವೈರಲ್ ವಿಡಿಯೋದಲ್ಲಿ, ಭಾರತೀಯ ರೈಲ್ವೆಯ ಜನರಲ್ ಕೋಚ್‌ನಲ್ಲಿರುವ ಯುವಕನೊಬ್ಬ ನೀಲಿ ಬಣ್ಣದ ಸೀಟನ್ನು ಹರಿದು ಹಾಕುತ್ತಿರುವುದನ್ನು ನೋಡಬಹುದು. ನೀಲಿ ಜೀನ್ಸ್ ಮತ್ತು ಗುಲಾಬಿ ಶರ್ಟ್ ಧರಿಸಿರುವ ಈ ಯುವಕ, ಕ್ಯಾಮೆರಾಕ್ಕಾಗಿಯೇ ಪೋಸ್ ಕೊಟ್ಟವರಂತೆ ಸೀಟ್ ಕವರ್ ಹರಿಯುತ್ತಾನೆ. ಹಿನ್ನೆಲೆಯಲ್ಲಿ ಅವನ ಸ್ನೇಹಿತ ನಗುತ್ತಾ ಇದನ್ನು ವಿಡಿಯೋ ಮಾಡುತ್ತಿರುವುದು ಕೇಳಿಸುತ್ತದೆ.

ವಿಡಿಯೋ ವೈರಲ್ ಆಗ್ತಿದ್ದಂತೆ, ಹಲವು ಎಕ್ಸ್ (X) ಬಳಕೆದಾರರು ಕಮೆಂಟ್ ವಿಭಾಗದಲ್ಲಿ ಆತನ ಇನ್‌ಸ್ಟಾಗ್ರಾಮ್ ಯೂಸರ್‌ನೇಮ್ ಹಾಕಿ, ಅವನ ಹೆಸರು ಅಂಕಿತ್ ಟೊಪ್ಪೊ ಎಂದು ಗುರುತಿಸಿದ್ದಾರೆ. ವೈರಲ್ ಆಗಬೇಕು ಅನ್ನೋ ಕಾರಣಕ್ಕೆ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ್ದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವೈರಲ್ ವಿಡಿಯೋ ನೋಡಿ

Scroll to load tweet…

ವಿಡಿಯೋದ ಕೊನೆಯ ಭಾಗದಲ್ಲಿ, ಇನ್ನೂ ಇಬ್ಬರು ಯುವಕರು ಚಲಿಸುತ್ತಿರುವ ರೈಲಿನಲ್ಲೇ ಕೋಚ್‌ನ ಫಿಟ್ಟಿಂಗ್‌ಗಳಿಗೆ ನೇತಾಡಿಕೊಂಡು, ಅತ್ತಿತ್ತ ಓಡಾಡುತ್ತಿರುವುದು ಕಾಣಿಸುತ್ತದೆ. ಇದು ಸುರಕ್ಷತೆಯ ಬಗ್ಗೆ ಮತ್ತಷ್ಟು ಆತಂಕ ಮೂಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ. 'ಈ ಮೂರ್ಖರು ಇದರಲ್ಲಿ ಖುಷಿ ಪಡುತ್ತಿದ್ದಾರೆ. ಟ್ರೇನ್ ಸೀಟ್ ಹರಿಯುತ್ತಾ ವಿಡಿಯೋ ಮಾಡುತ್ತಿದ್ದಾರೆ. ಇಂತಹ ಪುಂಡರಿಗೆ ಸರಿಯಾದ ಶಿಕ್ಷೆಯಾಗಬೇಕು' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು, 'ಇವರದೆಂಥ ಮನಸ್ಥಿತಿ? ಹೀಗೆ ಮಾಡಿದರೆ ಹೀರೋ ಆಗಿ ಕಾಣುತ್ತೇವೆ ಎಂದುಕೊಂಡಿದ್ದಾರೆ, ಆದರೆ ದೊಡ್ಡ ಮೂರ್ಖರಂತೆ ಕಾಣುತ್ತಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಇವರು ಗೆದ್ದಲು ಹುಳಗಳಿದ್ದಂತೆ. ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ನಲ್ಲಿ ಗಮನ ಸೆಳೆಯಲು ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಈ ಘಟನೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಇದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಮಾತ್ರವಲ್ಲದೆ, ಪ್ರಯಾಣಿಕರ ಸುರಕ್ಷತೆಗೂ ಅಪಾಯ ತರುತ್ತದೆ. ಹಾಗಾಗಿ, ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅನೇಕ ಬಳಕೆದಾರರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.