ಭಾರತಕ್ಕೆ ಹೊಸ ರಾಷ್ಟ್ರಪತಿಯನ್ನು ನೇಮಕ ಮಾಡಿದ್ದಾಳೆ ಈ ಯುವತಿ. ಅವರ ಹೆಸರು ಲೈಲಾ ಬುಲ್ಬುಲ್ ಅಂತೆ. ತನ್ನ ಉತ್ತರ ಖುಷಿಯಾಗಿದೆ ಎಂದು ಹೇಗೆ ನಗುತ್ತಿದ್ದಾಳೆ ಎಂದು ಈ ವಿಡಿಯೋ ಒಮ್ಮೆ ನೋಡಿ...
ಇಂದಿನ ಯುವಕ- ಯುವತಿಯರಿಗೆ ಮೊಬೈಲೇ ಪ್ರಪಂಚ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಯುವಪೀಳಿಗೆಗೆ ಮಾತ್ರವಲ್ಲದೇ, ಬಹುತೇಕ ಎಲ್ಲರಿಗೂ ಮೊಬೈಲ್ ಗೀಳು ಇದ್ದದ್ದೇ ಬಿಡಿ. ಆದರೆ ಈಗಿನ ಹೆಚ್ಚಿನ ಯುವಕ- ಯುವತಿಯರಿಗೆ ಅದರಾಚೆ ಇನ್ನೊಂದು ಪ್ರಪಂಚ ಇದೆ ಎನ್ನುವುದೂ ತಿಳಿದಿಲ್ಲ. ಮಾಡರ್ನ್ ಡ್ರೆಸ್ ಹಾಕಿಕೊಂಡು, ಹರಿದ ಜೀನ್ಸ್ ಹಾಕಿಕೊಂಡು ಓಡಾಡಿ ಬಿಟ್ಟರೆ ಅದೇ ಪ್ರಪಂಚ ಎಂದುಕೊಳ್ಳುವ ಯುವತಿಯರು, ಯುವತಿಯರನ್ನು ಇಂಪ್ರೆಸ್ ಮಾಡಲು ದುಬಾರಿ ವಾಹನಗಳಲ್ಲಿ ಓಡಾಡಿಕೊಂಡು ಸುತ್ತುವ ಯುವಕರು ಇದೇ ಬಹುತೇಕ ಕಡೆಗಳಲ್ಲಿ ನೋಡಲು ಸಿಗುತ್ತಿದೆ. ಇನ್ನು ಸಾಮಾನ್ಯ ಜ್ಞಾನ ಎನ್ನುವುದಂತೂ ಬಿಡಿ, ಹಾಗೆಂದರೆ ಏನು ಎನ್ನುವುದೇ ತಿಳಿದಿಲ್ಲ. ಕೆಲವರು ಪುಸ್ತಕದಲ್ಲಿ ಇರುವ ವಿಷಯಗಳನ್ನು ಬಾಯಿಪಾಠ ಮಾಡಿಕೊಂಡು ಉತ್ತಮ ಅಂಕ ಗಳಿಸುವಷ್ಟರ ಮಟ್ಟಿಗೆ ಇದ್ದರೆ, ಮತ್ತೆ ಕೆಲವರಿಗೆ ಅದೂ ಬೇಡ, ಶೋಕಿ ಮಾಡಿಕೊಂಡು ಓಡಾಡಿದರೆ ಮುಗಿಯಿತು.
ಇದೇ ಕಾರಣಕ್ಕೆ ಸ್ವಲ್ಪವೂ ಜ್ಞಾನ ಎನ್ನುವುದು ಇಲ್ಲವೇ ಇಲ್ಲ. ಎಲ್ಲಾ ಪ್ರಶ್ನೆಗಳಿಗೂ ಗೂಗಲ್ನಲ್ಲಿ ಉತ್ತರ ಸಿಗತ್ತಲ್ಲ, ಮತ್ಯಾಕೆ ತಲೆ ಒಳಗೆ ಹಾಕಿಕೊಳ್ಳಬೇಕು ಎನ್ನುವುದು ಇಂದಿನವರ ಅದರಲ್ಲಿಯೂ ಜೆನ್ ಝೀ ಮಕ್ಕಳ ಮಾತು. ಒಂದಿಷ್ಟು ಹೊತ್ತು ಇಂಟರ್ನೆಟ್ ಇಲ್ಲದೇ ಹೋದರೆ ಹುಚ್ಚು ಹಿಡಿದವರ ಸ್ಥಿತಿ ಅವರದ್ದಾಗುತ್ತದೆ. ಪಕ್ಕದ ಬೀದಿಯಲ್ಲಿ ಹೋಗುವಾಗಲೂ ಗೂಗಲ್ ಮ್ಯಾಪ್ ಹಾಕಿಕೊಂಡು ಹೋಗುವಷ್ಟರ ಮಟ್ಟಿಗೆ ಅವರ ಸ್ಥಿತಿ ಆಗಿದೆ. ಇನ್ನು ಸಾಮಾನ್ಯ ಜ್ಞಾನದ ಬಗ್ಗೆ ತಿಳಿದುಕೊಳ್ಳುವುದಾದರೂ ಹೇಗೆ?
ಕೆಲವು ಯುಟ್ಯೂಬರ್ಗಳು ಮಕ್ಕಳ ಬಳಿ ಹೋಗಿ ಮೈಕ್ ಹಿಡಿದಾಗ, ಅವರ ಬಂಡವಾಳ ಬಯಲಾಗುವುದು ಇದ್ದೇ ಇದೆ. ಅಂಥ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಕನಿಷ್ಠ ಜ್ಞಾನವೂ ಇಲ್ಲದ ಇಂಥ ಯುವಕ- ಯುವತಿಯರನ್ನು ನೋಡಿದಾಗ ಮಾತ್ರ ಅಯ್ಯೋ ಎನ್ನಿಸದೇ ಇರಲಾರದು. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಯುಟ್ಯೂಬರ್ ಒಬ್ಬರು ಭಾರತದ ರಾಷ್ಟ್ರಪತಿಯ ಹೆಸರು ಕೇಳಿದ್ದಾನೆ. ಅದಕ್ಕೆ ಈ ಯುವತಿ, ಅವರು ಒಬ್ಬರು ಲೇಡಿ ಇರಬೇಕು, ಹಾಗೆ ನನಗೆ ಅನ್ನಿಸುತ್ತಿದೆ. ಸರಿಯಾಗಿ ಗೊತ್ತಿಲ್ಲ. ಅದೇನೋ ಬುಲ್ಬುಲ್ ಎಂದು ಇದೆ ಎನ್ನುತ್ತಲೇ ಹಾಂ ಗೊತ್ತಾಯ್ತು ಲೈಲಾ ಬುಲ್ಬುಲ್ ಎಂದು ಹೇಳಿದ್ದಾಳೆ. ಅದಕ್ಕೆ ಯುಟ್ಯೂಬರ್ ಸರಿಯಾಗಿ ಹೇಳಿದ್ರಿ ಎಂದಾಗ ಅದು ತಮಾಷೆ ಎನ್ನುವುದೂ ತಿಳಿಯದೇ ತಾನು ಸರಿ ಉತ್ತರ ಕೊಟ್ಟಿರುವುದಾಗಿ ತಿಳಿದುಕೊಂಡ ಯುವತಿಗೆ ಸಕತ್ ಖುಷಿಯಾಗಿದೆ!
ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ದೇವರೇ ಇಂದಿನ ಮಕ್ಕಳ ಸ್ಥಿತಿ ಕಂಡರೆ ಭಯವಾಗುತ್ತದೆ. ಯಾವ ಸ್ಟಾರ್ ಹೋಟೆಲ್ನಲ್ಲಿ ಏನು ಸಿಗುತ್ತದೆ ಎಂದು ಅವರಿಗೆ ಗೊತ್ತಿರುತ್ತೆ, ಯಾವ ಹುಡುಗನ ಬಳಿ ಎಷ್ಟು ದುಡ್ಡಿದೆ, ಅವನ ಬಳಿ ಯಾವ ಕಾರು, ಬೈಕು ಇದೆ, ಯಾವ ಮಾಲ್ನಲ್ಲಿ ಏನು ಸಿಗುತ್ತದೆ- ಯಾವ ನೆಟ್ಫ್ಲಿಕ್ಸ್ನಲ್ಲಿ ಯಾವ ಫಿಲ್ಮ್ ಬರುತ್ತಿದೆ ಎಲ್ಲವೂ ಅವರ ಬಾಯಲ್ಲಿಯೇ ಇರುತ್ತದೆ. ಇನ್ನು ಬಾಲಿವುಡ್ ನಟ-ನಟಿಯರ ಬಗ್ಗೆ ಕೇಳಿದ್ರೆ ಅವರ ಜಾತಕವನ್ನೇ ಬೇಕಿದ್ರೆ ಹೇಳಿಬಿಡ್ತಾರೆ. ಆದರೆ ಉತ್ತರವೂ ಗೊತ್ತಿಲ್ಲದೇ, ಈ ಯುವತಿ ನಗುವುದು ನೋಡಿದರೆ, ಅವಳಿಗೆ ತನಗೆ ಇದರ ಉತ್ತರ ಗೊತ್ತಿಲ್ಲ ಎನ್ನುವ ನಾಚಿಕೆಯೂ ಇಲ್ಲ ಎನ್ನುವುದೇ ವಿಚಿತ್ರ ಎನ್ನುತ್ತಿದ್ದಾರೆ.
