ರೈಲಿನಲ್ಲಿ ಪ್ರಯಾಣಿಕನೊಬ್ಬ ತನ್ನ ಖಾಸಗಿ ಫ್ಯಾನ್ ಬಳಸಿ ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ಘಟನೆ ಭಾರತೀಯರ ಜುಗಾಡ್‌ಗೆ ಹೊಸ ಉದಾಹರಣೆಯಾಗಿದೆ.
ನವದೆಹಲಿ (ಜೂ. 25): ಕೆಲವೊಮ್ಮೆ ಭಾರತೀಯರ ತಮಾಷೆ ಮಾಡುವ ಕಲೆ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಒಂದು ಟ್ರೆನ್ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದ್ದು, ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿದೆ. ಒಬ್ಬ ಪ್ರಯಾಣಿಕ ತನ್ನ ಖಾಸಗಿ ಟೇಬಲ್ ಫ್ಯಾನ್ ಅನ್ನು ರೈಲಿನೊಳಗೆ ತಂದಿದ್ದು, ಪ್ಲಗ್ ಪಾಯಿಂಟ್‌ನಲ್ಲಿ ಜೋಡಿಸಿ, ಫ್ಯಾನ್‌ನಿಂದ ಗಾಳಿ ಪಡೆಯುತ್ತಾ ಎಂಜಾಯ್ ಮಾಡುತ್ತಿರುವ ದೃಶ್ಯ ಎಲ್ಲರನ್ನೂ ಅಚ್ಚರಿಗೀಡಾಗಿಸಿದೆ.
ಈ ಅಪರೂಪದ ದೃಶ್ಯವನ್ನು ಇನ್‌ಸ್ಟಾಗ್ರಾಂ ಬಳಕೆದಾರ @abhishek_hindu_.5 ಅವರು ಜೂನ್ 9ರಂದು ಅಪ್ಲೋಡ್ ಮಾಡಿದ್ದು, ಈಗಾಗಲೇ 17 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 34 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಸಂಪಾದಿಸಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುವಂತೆ ಟ್ರೆನ್‌ನ ಚೇರ್ ಕಾರ್ ಕೋಚ್‌ನಲ್ಲಿರುವ ಪ್ರಯಾಣಿಕನು ತನ್ನ ಜೊತೆ ತೆಗೆದುಕೊಂಡು ಬಂದಿರುವ ಫ್ಯಾನ್ ಅನ್ನು ಪ್ಲಗ್‌ನಲ್ಲಿ ಜೋಡಿಸಿ ಗಾಳಿ ಪಡೆಯುತ್ತಾ ಎಂಜಾಯ್ ಮಾಡುತ್ತಿದ್ದಾನೆ. ಅಚ್ಚರಿಯ ಸಂಗತಿಯೆಂದರೆ ಇತರ ಪ್ರಯಾಣಿಕರು ಇದರಿಂದ ಅಸಹನೆಗೊಳಗಾಗದೆ, ಸ್ವಲ್ಪ ನಗಾಡಿ ಸುಮ್ಮನಾಗಿದ್ದಾರೆ.
'ಟೆಕ್ನೋಲಾಜಿಯಾ' ಎಂಬ ಹಾಸ್ಯ ಆಡಿಯೋ ಜೋಡಣೆ:
ವೀಡಿಯೋದಲ್ಲಿ ಇನ್ನೊಂದು ಕುತೂಹಲಕಾರಿ ದೃಶ್ಯವೆಂದರೆ, ಟ್ರೆನ್‌ನ ಲಗೇಜ್ ಹೋಲ್ಡರ್‌ನ ಜಾಗದಲ್ಲಿ ಕೆಲವೊಂದು ಪ್ರಯಾಣಿಕರು ನೆಲದ ಆಸರೆಯಿಲ್ಲದೆ ಅಲ್ಲಿಯೇ ಕುಳಿತುಕೊಂಡಿದ್ದಾರೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು 'ಟೆಕ್ನೋಲಾಜಿಯಾ' ಎಂಬ ಆಡಿಯೋವನ್ನು ಜೋಡಣೆ ಮಾಡಿ ನಗಾಡಿದ್ದಾರೆ. ಭಾರತೀಯರ ವಿಭಿನ್ನ ತಂತ್ರಕ್ಕೆ ಯಾರೂ ಸರಿಸಾರಿ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ದೃಶ್ಯವನ್ನು ನೋಡಿದ ಮೇಲೆ IRCTC ಲಗೇಜ್ ಕೊಂಡೊಯ್ಯಲು ಹೊಸ ನಿಯಮ ತರುತ್ತದೆ. ಇನ್ನುಮುಂದೆ ಫ್ಯಾನ್ ತೆಗೆದುಕೊಂಡು ಹೋಗೋದಕ್ಕೆ ಅವಕಾಶವೇ ಇರುವುದಿಲ್ಲ' ಎಂದು ಹಾಸ್ಯವನ್ನೂ ಮಾಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ: ಇದು ನಿಜವಾಗಿಯೂ ಇಂಡಿಯನ್ ಜುಗಾಡ್ ಟೆಕ್ನಾಲಜಿ! ನಾನು ಈ ಮಟ್ಟದ ಕ್ರಿಯೇಟಿವಿಟಿ ಮೊದಲು ಕಾಣಲಿಲ್ಲ! ಈ ವಿಡಿಯೋ ನೋಡಿದ ಮೇಲೆ ಎಸಿ ಕೋಚ್‌ಗೂ ಫ್ಯಾನ್ ತೆಗೆದುಕೊಂಡು ಹೋಗೋಣ ಅನ್ಸುತ್ತೆ! ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಭಾರತೀಯರ ಸ್ವಾಭಾವಿಕ ಬುದ್ಧಿಮತ್ತೆ, ಪ್ರಾಕೃತಿಕ ಗಾಳಿಯ ಅವಶ್ಯಕತೆ ಮತ್ತು ಇತ್ತೀಚಿನ ತಾಪಮಾನದಲ್ಲಿ ಪ್ರಯಾಣದ ಸಮಯದ ಜಟಿಲತೆಯ ಜೊತೆಗೆ ಈ ಪ್ರಯಾಣಿಕನ ವಿಭಿನ್ನ ಪ್ರಯತ್ನ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಸ್ವಲ್ಪ ಹಾಸ್ಯ, ಸ್ವಲ್ಪ ಶ್ರೇಷ್ಠತೆ ಮತ್ತು ಟಿಪಿಕಲ್ ಇಂಡಿಯನ್ ಇನೋವೇಶನ್ ಅನ್ನು ಕಾಣಬಹುದು. ಜೊತೆಗೆ, ಭಾರತೀಯ ರೈಲುಗಳಲ್ಲಿ ಪ್ರಯಾಣಿಕರು ಹೇಗೆಲ್ಲಾ ಸಂಚಾರ ಮಾಡುತ್ತಾರೆ ಎಂಬ ದೃಶ್ಯಗಳು ಕೂಡ ಕಂಡುಬರುತ್ತವೆ.
