Hyderabad vs Bangalore: ಐಟಿ ಹಬ್‌ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ಜೀವನಶೈಲಿ ಹಾಗೂ ಮೂಲಸೌಕರ್ಯಗಳ ಕುರಿತು ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ವಲಸೆ ಹೋದ ವ್ಯಕ್ತಿಯೊಬ್ಬರು, ಕೇವಲ ಐದು ತಿಂಗಳ ತಮ್ಮ ಅನುಭವದ ಆಧಾರದ ಮೇಲೆ ಎರಡೂ ನಗರಗಳ ಸಾಧಕ-ಬಾಧಕಗಳನ್ನು ಹೋಲಿಸಿ ರೆಡ್ಡಿಟ್‌ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 

ಬೆಂಗಳೂರಿನಿಂದ ಹೈದರಾಬಾದ್‌ಗೆ ವಲಸೆ ಹೋಗಿ ಕೇವಲ ಐದು ತಿಂಗಳು ಕಳೆದ ವ್ಯಕ್ತಿಯೊಬ್ಬರು, ಎರಡೂ ನಗರಗಳ ನಡುವಿನ ವಿದ್ಯುತ್, ರಸ್ತೆ, ಹವಾಮಾನ, ಆಹಾರ, ಸಂಚಾರ (ಟ್ರಾಫಿಕ್), ಜನರು ಮತ್ತು ಉದ್ಯೋಗಾವಕಾಶಗಳ ಕುರಿತು ರೆಡ್ಡಿಟ್ (Reddit) ಜಾಲತಾಣದಲ್ಲಿ ಸುದೀರ್ಘವಾದ ಹೋಲಿಕೆಯನ್ನು ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯುತ್ ಮತ್ತು ರಸ್ತೆ ಹೋಲಿಕೆ

ಆ ವ್ಯಕ್ತಿಯ ಪ್ರಕಾರ, ಹೈದರಾಬಾದ್‌ನ ಜೀವನವು ವಿದ್ಯುತ್ ಇಲ್ಲದೆ ಎಷ್ಟು ಕಷ್ಟಕರ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ಬೇಸಿಗೆಯ ಸಮಯದಲ್ಲಿ ಇಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದುದರಿಂದ, ತಮಗೆ ಸೆಖೆಯ ತಾಪಕ್ಕೆ ಕೋಣೆಯಲ್ಲೇ ಪ್ರಾಣ ಹೋಗುವಷ್ಟು ತೊಂದರೆಯಾಗುತ್ತಿತ್ತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇನ್ನು ರಸ್ತೆಗಳ ವಿಷಯಕ್ಕೆ ಬಂದರೆ, ಹೈದರಾಬಾದ್‌ನ ರಸ್ತೆಗಳಲ್ಲಿ ಗುಂಡಿಗಳಿಲ್ಲದಿದ್ದರೂ, ಸರಿಯಾಗಿ ಮುಚ್ಚದ ಅಪಾಯಕಾರಿ ಮ್ಯಾನ್‌ಹೋಲ್‌ಗಳು (ಮಲದ ಚರಂಡಿ ಮುಚ್ಚಳಗಳು) ಇವೆ. ರಸ್ತೆಯ ಕಡೆ ಸರಿಯಾಗಿ ಗಮನ ಹರಿಸದಿದ್ದರೆ ಇವುಗಳಿಂದಾಗಿ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಬರಬಹುದು. ಇದಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿದ್ದರೂ ಅವು ಯಾರನ್ನೂ ಆಸ್ಪತ್ರೆಗೆ ಕಳುಹಿಸುವಷ್ಟು ತೀವ್ರವಾದ ಅಪಾಯವನ್ನು ತಂದೊಡ್ಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಮತ್ತು ಆಹಾರ

ಹೈದರಾಬಾದ್‌ನ ಹವಾಮಾನವು ಹೊಸಬರಿಗೆ ಹೊಂದಿಕೊಳ್ಳಲು ತುಂಬಾ ಕಷ್ಟಕರವಾಗಿದ್ದು, ಬೇಸಿಗೆಯ ಬಿಸಿಲು ವಿಪರೀತವಾಗಿರುತ್ತದೆ. ಏರ್ ಕಂಡೀಷನರ್ (AC) ಇಲ್ಲದೆ ಕೊಠಡಿಗಳಲ್ಲಿ ಇರಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಇರುತ್ತದೆ. ಆದರೆ, ಬೆಂಗಳೂರಿನ ಬೇಸಿಗೆ ಕಾಲವು ಹೈದರಾಬಾದ್‌ಗೆ ಹೋಲಿಸಿದರೆ ಹೆಚ್ಚು ಶಾಂತಿಯುತ, ತಂಪಾದ ಮತ್ತು ಆಹ್ಲಾದಕರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಆಹಾರದ ವಿಷಯಕ್ಕೆ ಬಂದರೆ ಹೈದರಾಬಾದ್‌ಗೆ ಸಾಟಿಯಿಲ್ಲ ಮತ್ತು ಬೆಂಗಳೂರಿಗಿಂತ ಇದು ಎಷ್ಟೋ ಪಟ್ಟು ಉತ್ತಮವಾಗಿದೆ ಎಂದು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ ಇಲ್ಲಿನ ಆಹಾರ ಕೊಂಚ ಅತಿಯಾದ ಖಾರದಿಂದ ಕೂಡಿರುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಟ್ರಾಫಿಕ್ ಮತ್ತು ಜನರ ನಡವಳಿಕೆ

ಹೈದರಾಬಾದ್‌ನ ಜನರು ಅತ್ಯಂತ ಸ್ನೇಹಪರರಾಗಿದ್ದು, ಇಲ್ಲಿ ಹಿಂದಿ ಭಾಷೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಬೆಂಗಳೂರಿಗೆ ಹೋಲಿಸಿದರೆ ಇಲ್ಲಿ ಇಂಗ್ಲಿಷ್ ಬಳಕೆ ಕೊಂಚ ಕಡಿಮೆ. ಬೆಂಗಳೂರಿಗಿಂತ ಹೈದರಾಬಾದ್‌ನಲ್ಲಿ ಟ್ರಾಫಿಕ್ ನಿರ್ವಹಣೆ ಉತ್ತಮವಾಗಿದೆ, ಆದರೂ ಪೀಕ್ ಅವರ್‌ಗಳಲ್ಲಿ ಸಂಚಾರಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಹೈದರಾಬಾದ್‌ನಲ್ಲಿ ಬೆಂಗಳೂರಿಗಿಂತ ಹೆಚ್ಚು ಐಷಾರಾಮಿ ಮತ್ತು ಸೂಪರ್ ಕಾರುಗಳು ರಸ್ತೆಗಿಳಿಯುತ್ತವೆ. ಇದನ್ನು ನೋಡಿದರೆ ಇಲ್ಲಿನ ಜನರು ಬಹಳಷ್ಟು ಹಣ ಗಳಿಸುತ್ತಾರೆ ಎಂದು ಅನಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಹೀಗಿತ್ತು ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೈದರಾಬಾದ್‌ನ ಒರ್ವ ಬಳಕೆದಾರರು, "ನೀವು ಹೈದರಾಬಾದ್‌ಗೆ ತಪ್ಪು ಸಮಯದಲ್ಲಿ ಬಂದಿದ್ದೀರಿ, ಕಳೆದ 30 ವರ್ಷದಲ್ಲಿ ನಾನು ಇಂತಹ ಕೆಟ್ಟ ಬೇಸಿಗೆಯನ್ನು ನೋಡಿಲ್ಲ" ಎಂದಿದ್ದಾರೆ. ಮತ್ತೆ ಕೆಲವರು, "ನಗರದ ಒಟ್ಟಾರೆ ಅನುಭವವು ನಾವು ವಾಸಿಸುವ ಏರಿಯಾದ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಹೇಳಿದ್ದಾರೆ. ಹಾಗೆಯೇ "ಹೈದರಾಬಾದ್ ಭಾರತದಲ್ಲೇ ವಾಸಿಸಲು ಅತ್ಯುತ್ತಮವಾದ ಸ್ಥಳವಾಗಿದೆ, ಆದರೆ ಇಲ್ಲಿ ಒಂಟಿತನ ಕಾಡುತ್ತದೆ" "ಭಾರತದ ಬಹುತೇಕ ಮೆಟ್ರೋ ನಗರಗಳಲ್ಲಿ ಜೀವನದ ಗುಣಮಟ್ಟ ಕುಸಿಯುತ್ತಿದೆ, ಆದರೆ ಹೈದರಾಬಾದ್ ತನ್ನ ಒಳ್ಳೆಯ ಜನರಿಂದಾಗಿ ಇಂದಿಗೂ ಉತ್ತಮವಾಗಿದೆ" ಎಂದು ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.