ಜೈಪುರದ 71 ವರ್ಷದ ತಾರಾಚಂದ್ ಅಗರ್ವಾಲ್ ಅವರು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ. ಮೊಮ್ಮಗಳಿಗೆ ಅಧ್ಯಯನದಲ್ಲಿ ಸಹಾಯ ಮಾಡುವಾಗ ಪರೀಕ್ಷೆ ಬರೆಯುವ ಆಸಕ್ತಿ ಮೂಡಿತು ಎಂದು ಅವರು ಹೇಳಿದ್ದಾರೆ. 

ಜೈಪುರ: ಸಿಎ ದೇಶದ ಅತ್ಯಂತ ಕಷ್ಟಕರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಆದರೆ ಎಲ್ಲಾ ಇತರ ಪರೀಕ್ಷೆಗಳಿಗಿರುವಂತೆ ಈ ಪರೀಕ್ಷೆಯನ್ನು ಬರೆಯುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ, ಯಾರು ಯಾವಾಗ ಬೇಕಾದರೂ ಈ ಪರೀಕ್ಷೆಯನ್ನು ಪಾಸು ಮಾಡಬಹುದು. ಹಾಗೆಯೇ ಈಗ 71 ವರ್ಷದ ತಾತ ಒಬ್ಬರು ಈ ಪರೀಕ್ಷೆಯನ್ನು ಪಾಸು ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ರಾಜಸ್ಥಾನದ ಜೈಪುರ ಮೂಲದ ತಾರಾಚಂದ್ ಅಗರ್ವಾಲ್ ಎಂಬುವವರು ತಮ್ಮ 71ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಕೆಲವು ವಿಚಾರಗಳಿಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ತಮ್ಮ ಮೊಮ್ಮಗಳಿಗೆ ಅಧ್ಯಯನ ನಡೆಸಲು ಸಹಾಯ ಮಾಡುತ್ತಿದ್ದ ವೇಳೆ ಅವರಿಗೂ ಇದರ ಮೇಲೆ ಅಧ್ಯಯನದ ಮೇಲೆ ಆಸಕ್ತಿ ಬಂತು ಎಂದು ಅವರು ಹೇಳಿಕೊಂಡಿದ್ದಾರೆ.

ಹೀಗೆ ಇಳಿವಯಸ್ಸಿನಲ್ಲಿ ಸಿಎ ಸಾಧನೆ ಮಾಡಿದ ಈ ತಾರಾಚಾಂದ್ ಅಗರ್ವಾಲ್ ಅವರು ಈಗ ಮುಚ್ಚಿ ಹೋಗಿರುವ ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಹಾಗೂ ಜೈಪುರ್‌ನ ಮಾಜಿ ಉದ್ಯೋಗಿಯಾಗಿದ್ದಾರೆ. ಆದರೆ ಈಗ ಅವರು ಎಲ್ಲರೂ ಅಧ್ಯಯನ ಮಾಡುವುದಕ್ಕೆ ನಾಚಿಕೆ ಪಡುವ ವಯಸ್ಸಿನಲ್ಲಿ ಈ ದೊಡ್ಡ ಸಾಧನೆ ಮಾಡಿದ್ದು ಸಿಎ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.

View post on Instagram

ಹಾಗಂತ ಸಿಎ ಪರೀಕ್ಷೆಗೆ ಇವರ ಸಿದ್ಧತೆ ಯಾವುದೋ ಕೋಚಿಂಗ್ ಕ್ಲಾಸ್‌ನಿಂದ ಆರಂಭವಾಗಿಲ್ಲ, ಬದಲಾಗಿ ಇವರು ತಮ್ಮ ಮೊಮ್ಮಗಳಿಗೆ ಪರೀಕ್ಷೆಗೆ ಸಿದ್ಧಗೊಳ್ಳಲು ತಯಾರಿ ಮಾಡುತ್ತಿದ್ದಾಗಲೇ ಇವರಿಗೂ ತಾನು ಪರೀಕ್ಷೆ ಪಾಸು ಮಾಡಿದರೆ ಹೇಗೆ ಎಂಬ ಆಸಕ್ತಿ ಬಂದಿದೆ. ತಮ್ಮ ಈ ಆಸೆಯನ್ನು ಅವರು ಪರೀಕ್ಷೆ ಬರೆಯುವ ಮೂಲಕ ನಿಜವಾಗಿಸಿಕೊಂಡಿದ್ದಾರೆ.

ಸಿಎ ನಿಕಿಲೇಶ್ ಕಟಾರಿಯಾ ಅವರು ಈ ತಾರಾಚಂದ್ ಅಗರ್ವಾಲ್ ಅವರ ಸ್ಪೂರ್ತಿದಾಯ ಕತೆಯನ್ನು ಲಿಂಕ್ಡಿನ್‌ನಲ್ಲಿ ಹಂಚಿಕೊಂಡಿದ್ದು, ಇವರ ಸಾಧನೆ ಅನೇಕರಿಗೆ ಪ್ರೇರಣೆ ನೀಡುತ್ತಿದೆ. ಮೊಮ್ಮಗಳಿಗೆ ಬೆಂಬಲದ ಸೂಚಕವಾಗಿ ಪ್ರಾರಂಭವಾದ ಇವರ ಅಧ್ಯಯನವೂ ದೊಡ್ಡ ಶೈಕ್ಷಣಿಕ ಸಾಧನೆಯಾಗಿ ಬದಲಾಯ್ತು. ವರ್ಷಗಳ ಪರಿಶ್ರಮದ ನಂತರ, ಅವರು ಭಾರತದ ಅತ್ಯಂತ ಕಠಿಣ ವೃತ್ತಿಪರ ಪರೀಕ್ಷೆಗಳಲ್ಲಿ ಒಂದನ್ನು ಉತ್ತೀರ್ಣರಾಗಿದ್ದಾರೆ. ಮನಸ್ಸಿದಲ್ಲಿ ಮಾರ್ಗವಿದೆ ಎಂಬುದಕ್ಕೆ ತಾರಾಚಂದ್ ಸಾಕ್ಷಿ ಎಂದು ನಿಕಿಲೇಶ್ ಕಟಾರಿಯಾ ಬರೆದುಕೊಂಡಿದ್ದಾರೆ.

ಇವರ ಈ ಲಿಂಕ್ಡಿನ್ ಪೋಸ್ಟ್ ನೋಡಿದ ಜನರಿಂದ ತಾರಾಚಂದ್ ಅವರ ಸಾಧನೆಗೆ ಅಭಿನಂದನೆಗಳ ಪ್ರವಾಹವೇ ಹರಿದು ಬಂದಿದೆ. ಇದು ಈ ವರ್ಷದ ಬಹಳ ಸ್ಪೂರ್ತಿದಾಯಕವಾದ ಕತೆ ಎಂದು ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅವರ ನಿರಂತರ ಪ್ರಯತ್ನ, ಜೀವನಪೂರ್ತಿ ಕಲಿಯಬೇಕು ಎಂಬ ಅವರ ಜೀವನಸ್ಪೂರ್ತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೂಲಕ ಕಲಿಯುವಿಕೆ ಅಂತ್ಯವೆಂಬುದು ಇಲ್ಲ ಎಂಬುದನ್ನು ತಾರಾಚಂದ್ ಅಗರ್‌ವಾಲ್ ಸಾಬೀತುಪಡಿಸಿದ್ದಾರೆ.

2005ರ ಸಿಎ ಪರೀಕ್ಷಾ ಫಲಿತಾಂಶವನ್ನು ಭಾರತದ ಚಾರ್ಟೆಡ್ ಸಂಸ್ಥೆ ಪ್ರಕಟಿಸಿದ್ದು(ICAI)ಎಎನ್‌ಐ ಮಾಹಿತಿ ಪ್ರಕಾರ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ನಿವಾಸಿ ರಂಜನ್ ಕಬ್ರಾ ಅವರು ಸಿಎ ಅಂತಿಮ ಪರೀಕ್ಷೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಅವರು ಒಂದನೇ ರಾಂಕ್ ಪಡೆದಿದ್ದಾರೆ. ಇವರಿಗೆ 600 ಅಂಕಗಳಲ್ಲಿ 516 ಅಂಕಗಳು ಬಂದಿದ್ದು, ಶೇಕಡಾ 86 ಅಂಕ ಗಳಿಸಿದ್ದಾರೆ. ಹಾಗೆಯೇ 2ನೇ ಸ್ಥಾನ ನಿಸ್ಥಾತ್ ಬೋತ್ರಾ ಪಾಲಾಗಿದೆ. ಮಾನವ್ ರಾಕೇಶ್ ಶಾ 3ನೇ ಸ್ಥಾನ ಪಡೆದಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು 14,247 ಜನ ಪಾಸ್ ಆಗಿ ಸಿಎಗಳಾಗಿ ಅರ್ಹತೆ ಪಡೆದಿದ್ದಾರೆ. ಈ ಬಾರಿಯ ಗ್ರೂಪ್ 1 ಹಾಗೂ ಗ್ರೂಪ್ 2ರ ಸಿಎ ಪರೀಕ್ಷೆ ಮೇ16 ಹಾಗೂ ಮೇ 24ರಂದು ನಡೆದಿತ್ತು.