ಗದಗದಲ್ಲಿ ತಂದೆಯೊಬ್ಬ ತನ್ನ ಮಗುವನ್ನು ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ವೈರಲ್ ಆಗಿದೆ. ಈ ಬೇಜವಾಬ್ದಾರಿ ಕೃತ್ಯಕ್ಕಾಗಿ ಪೊಲೀಸರು ಆತನನ್ನು ಪತ್ತೆಹಚ್ಚಿ, ದಂಡ ವಿಧಿಸಿ, ಮಗುವಿನ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಗದಗ (ಜೂ.25): ಹೆತ್ತವರಿಗೆ ತಮ್ಮ ಮಕ್ಕಳೇ ಪ್ರಾಣಕ್ಕಿಂತ ಹೆಚ್ಚು. ಮಕ್ಕಳ ಸುರಕ್ಷತೆಗಾಗಿ ಪೋಷಕರು ಎಷ್ಟೇ ಕಷ್ಟ ಬಂದರೂ ಎದುರಿಸುತ್ತಾರೆ. ಆದರೆ, ಗದಗ ಜಿಲ್ಲೆಯಲ್ಲಿ ತಂದೆಯೊಬ್ಬನ ಅತಿರೇಕದ ವರ್ತನೆ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನು ಪ್ರೀತಿಯಿಂದ ಎತ್ತಿಕೊಳ್ಳುವ ಬದಲು, ಬೈಕ್‌ನ ಲಗೇಜ್ ಇಡುವ ಸೈಡ್ ಬ್ಯಾಗ್‌ನಲ್ಲಿ ಮಗುವನ್ನು ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಗದಗ ನಗರದ ಟಿಪ್ಪು ಸರ್ಕಲ್‌ನಿಂದ ಡಿಸಿ ಕಚೇರಿ ಕಡೆಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ, ತನ್ನ ಪುಟ್ಟ ಕಂದಮ್ಮನನ್ನು ಬೈಕ್‌ನ ಸೈಡ್ ಪ್ಯಾಕೆಟ್‌ನಲ್ಲಿ (ಲಗೇಜ್ ಬ್ಯಾಗ್) ಲಗೇಜಿನಂತೆ ತುರುಕಿದ್ದನು. ಮಗು ಆ ಬ್ಯಾಗ್‌ನೊಳಗೆ ಇಕ್ಕಟ್ಟಿನಲ್ಲಿ ಕುಳಿತಿದ್ದು, ಮಗುವಿನ ತಲೆ ಮಾತ್ರ ಹೊರಗೆ ಕಾಣುತ್ತಿತ್ತು. ಈ ದೃಶ್ಯವನ್ನು ನೋಡಿದ ದಾರಿಹೋಕರು ತಕ್ಷಣ ಇದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆದ ಫೋಟೋ, ಪೊಲೀಸರ ಎಂಟ್ರಿ:

ಈ ಬೇಜವಾಬ್ದಾರಿ ತಂದೆಯ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗದಗ ಪೊಲೀಸರು, ಬೈಕ್ ಸಂಖ್ಯೆಯ ಆಧಾರದ ಮೇಲೆ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಪೇಟೆಗೆ ಹೋಗಿ ವಾಪಸ್ ಬರುವಾಗ ಈ ರೀತಿ ಮಾಡಿರುವುದಾಗಿ ವ್ಯಕ್ತಿ ಸಮರ್ಥನೆ ನೀಡಿದ್ದಾನೆ ಎನ್ನಲಾಗಿದೆ. ಆದರೆ, ಮಗುವಿನ ಜೀವದ ಜೊತೆ ಚೆಲ್ಲಾಟವಾಡಿದ ಈತನಿಗೆ ಪೊಲೀಸರು ಸರಿಯಾಗಿ ಬುದ್ಧಿ ಹೇಳಿದ್ದಾರೆ.

ದಂಡ ಮತ್ತು ಎಚ್ಚರಿಕೆ:

ಪೊಲೀಸರು ಈ 'ಬೆಪ್ಪ' ಅಪ್ಪನಿಗೆ ಭಾರೀ ದಂಡ ವಿಧಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯವೆಸಗಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಣ್ಣದೊಂದು ಆಯತಪ್ಪಿದರೂ ಮಗುವಿನ ಜೀವಕ್ಕೆ ಅಪಾಯವಿತ್ತು ಎಂದು ಸಾರ್ವಜನಿಕರು ಈತನ ಹುಚ್ಚಾಟದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆ ಮಾತ್ರವಲ್ಲದೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಇದೊಂದು ಗಂಭೀರ ಅಪರಾಧವಾಗಿದೆ.