ಬೆಂಗಳೂರಿನ ಮಾರತಹಳ್ಳಿಯಲ್ಲಿ, ಫ್ಲಿಪ್‌ಕಾರ್ಟ್ ಡೆಲಿವರಿ ಏಜೆಂಟ್ ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆಯು ಘಟನೆಯನ್ನು ವಿಡಿಯೋ ಮಾಡಿ ದೂರು ನೀಡಿದ ನಂತರ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ಫೋಟೋ ಮತ್ತು ಹಿನ್ನೆಲೆ ರಿವೀಲ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ 'ಫ್ಲಿಪ್‌ಕಾರ್ಟ್' (Flipkart) ಸಂಸ್ಥೆಯ ಡೆಲಿವರಿ ಏಜೆಂಟ್ ಒಬ್ಬ ಮಹಿಳೆಯ ಮನೆಗೆ ಬಲವಂತವಾಗಿ ನುಗ್ಗಿ, ಆಕೆಯ ಮುಂದೆ ಅಸಭ್ಯವಾಗಿ ವರ್ತಿಸಿದ ಘಟನೆ ನಗರದ ಮಾರತಹಳ್ಳಿಯಲ್ಲಿ ನಡೆದಿದ್ದು, ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಡೆದಿದ್ದೇನು?

ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಮಹಿಳೆಯೊಬ್ಬರು ಈ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಆರೋಪಿಯನ್ನು ವಿಜಯ್ ಮಲ್ಲಿಕಾರ್ಜುನ ಕಾಮತ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಹಿಳೆಯು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ್ದ ವಸ್ತುವನ್ನು ತಲುಪಿಸಲು ಆರೋಪಿ ಆಕೆಯ ಫ್ಲಾಟ್‌ಗೆ ಬಂದಿದ್ದನು. ಈ ವೇಳೆ ತನಗೆ ತುರ್ತಾಗಿ ಶೌಚಾಲಯ (Washroom) ಬಳಸಬೇಕೆಂದು ಮಹಿಳೆಯನ್ನು ಕೇಳಿಕೊಂಡಿದ್ದಾನೆ.

ಮಹಿಳೆಯ ನಿರಾಕರಣೆ ನಡುವೆಯೂ ದರ್ಪ:

ಅಪರಿಚಿತ ವ್ಯಕ್ತಿಗಳನ್ನು ಮನೆಗೆ ಸೇರಿಸಲು ಇಚ್ಛಿಸದ ಮಹಿಳೆಯು, ಆತನ ವಿನಂತಿಯನ್ನು ನಯವಾಗಿ ನಿರಾಕರಿಸಿದ್ದಾರೆ. 'ನಾನು ಅಪರಿಚಿತರನ್ನು ನನ್ನ ಮನೆಗೆ ಬಿಟ್ಟುಕೊಳ್ಳುವುದಿಲ್ಲ, ನಿಮಗೆ ಅಷ್ಟೊಂದು ತುರ್ತು ಇದ್ದರೆ ಪಕ್ಕದ ಮನೆಯಲ್ಲಿರುವ ಪುರುಷರನ್ನು ಕೇಳಿ' ಎಂದು ಸಲಹೆ ನೀಡಿದ್ದಾರೆ. ಆದರೂ ಕೇಳದ ಆರೋಪಿ, ಮಹಿಳೆಯ ತಡೆಯನ್ನು ಮೀರಿ ಬಲವಂತವಾಗಿ ಮನೆಯೊಳಗೆ ನುಗ್ಗಿದ್ದಾನೆ. ತನ್ನ ಪಾದರಕ್ಷೆಗಳನ್ನು ಹೊರಗೇ ಬಿಟ್ಟು, ಮಹಿಳೆಯ ಸಮ್ಮತಿಯಿಲ್ಲದೆ ಬಾತ್‌ರೂಮ್ ಪ್ರವೇಶಿಸಿದ್ದಾನೆ.

ಬಾತ್‌ರೂಮ್‌ನಿಂದ ಹೊರಬಂದು ವಿಕೃತಿ:

ಮಹಿಳೆಯ ದೂರಿನ ಪ್ರಕಾರ, ಆರೋಪಿಯು ಬಾತ್‌ರೂಮ್‌ನಿಂದ ಹೊರಬಂದ ನಂತರ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯ ಮುಂದೆ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ಪ್ರತಿರೋಧ ತೋರಿದ್ದಾರೆ. ಈ ಇಡೀ ಘಟನೆಯನ್ನು ಮಹಿಳೆ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಇದು ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿದೆ. ಈ ಘಟನೆಯನ್ನು ಮಹಿಳೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಸ್ವಂತ ಮನೆಯಲ್ಲೇ ನನಗೆ ಅಸುರಕ್ಷಿತ ಭಾವನೆ ಉಂಟಾಗುತ್ತಿದೆ. ಒಬ್ಬ ಮಹಿಳೆ 'ಇಲ್ಲ' (NO) ಎಂದು ಹೇಳಿದರೆ ಅಲ್ಲಿಗೆ ಆ ಮಾತು ಮುಗಿಯಬೇಕು. ಯಾರೇ ಆಗಲಿ ಮಹಿಳೆಯ ಖಾಸಗಿ ಗಡಿಗಳನ್ನು ಮೀರುವ ಹಕ್ಕು ಹೊಂದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಕ್ರಮ:

ಈ ವಿಷಯವು ಎಕ್ಸ್ (ಟ್ವಿಟ್ಟರ್) ಮೂಲಕ ಬೆಂಗಳೂರು ನಗರ ಪೊಲೀಸರ ಗಮನಕ್ಕೆ ಬಂದ ತಕ್ಷಣ, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅವರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಾರತಹಳ್ಳಿ ಪೊಲೀಸರು ಆರೋಪಿ ವಿಜಯ್ ಮಲ್ಲಿಕಾರ್ಜುನ ಕಾಮತ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75, 79 ಮತ್ತು 329(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಫ್ಲಿಪ್‌ಕಾರ್ಟ್‌ನಂತಹ ಪ್ರತಿಷ್ಠಿತ ಸಂಸ್ಥೆಗಳ ಡೆಲಿವರಿ ಏಜೆಂಟ್‌ಗಳಿಂದ ಇಂತಹ ವರ್ತನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮಹಿಳೆಯರು ಮನೆಯಲ್ಲಿ ಒಬ್ಬರೇ ಇರುವಾಗ ಡೆಲಿವರಿ ಪಡೆಯುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Scroll to load tweet…

ಫ್ಲಿಪ್ ಕಾರ್ಟ್ ಸ್ಪಷ್ಟನೆ

ಈ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದ್ದು, ಬಾಧಿತ ಗ್ರಾಹಕರಿಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ. ಗ್ರಾಹಕರ ಸುರಕ್ಷತೆಯ ವಿಷಯದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆ ಕಾರಣದಿಂದ ಈ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ, ಘಟನೆಯಲ್ಲಿ ಭಾಗಿಯಾದ ಡೆಲಿವರಿ ಪಾರ್ಟ್ ನರ್ ಅವರ ಸೇವೆಯನ್ನು ರದ್ದುಗೊಳಿಸಿದ್ದೇವೆ. ಈ ಕುರಿತು ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ತನಿಖಾಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಎಲ್ಲಾ ಡೆಲಿವರಿ ಪಾರ್ಟ್ ನರ್ ಗಳನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ಹಿನ್ನೆಲೆ ಪರಿಶೀಲನೆ ಮತ್ತು ತರಬೇತಿಗೆ ಒಳಪಡಿಸಲಾಗುತ್ತದೆ. ಈ ರೀತಿಯ ಘಟನೆಗಳು ಅತ್ಯಂತ ಅಪರೂಪವಾಗಿದ್ದರೂ ಇಂತಹ ಯಾವುದೇ ಘಟನೆಯನ್ನೂ ನಾವು ಎಂದಿಗೂ ಸಹಿಸುವುದಿಲ್ಲ. ನಮ್ಮ ಗ್ರಾಹಕರ ಸುರಕ್ಷತಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಕೈಗೊಳ್ಳಬೇಕಾದ ಹೆಚ್ಚುವರಿ ಕ್ರಮಗಳ ಕುರಿತು ನಾವು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ ಎಂದಿದೆ.