ಸರ್ಕಾರದ ಇಲಾಖೆಗಳು ಮಾಡುವ ಎಡವಟ್ಟುಗಳು ಅಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಎಷ್ಟರಮಟ್ಟಿಗೆ ನಿರ್ಲಕ್ಯದಿಂದ ಕೆಲಸ ಮಾಡುಯತ್ತಾರೆ ಎಂಬುದಕ್ಕೆ ಉದಾಹರಣೆ ಆಗಿರುತ್ತವೆ. ಇಲ್ಲೊಬ್ಬ ಮಹಿಳೆಯ ಗಂಡ ಸತ್ತು 42 ದಿನಗಳಾದ ಬಳಿಕ ನಿಮ್ಮ ಗಂಡ ಗುಣಮುಖರಾಗಿದ್ದು, ಮನೆಗೆ ವಾಪಸ್ ಬರುತ್ತಿದ್ದಾರೆ' ಎಂದು ಸಂದೇಶವನ್ನು ಕಳಿಸಿದೆ. ಆದರೆ, ಅಂತ್ಯಕ್ರಿಯೆ ಮಾಡಿದ್ದು ಯಾರನ್ನ? ತಿಳಿಯಿರಿ
ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ತಾಂತ್ರಿಕ ಎಡವಟ್ಟುಗಳಿಗೆ ಕೊನೆಯೇ ಇಲ್ಲವೇನೋ ಎಂಬಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಜೂನ್ ತಿಂಗಳಿನಲ್ಲೇ ಮರಣ ಹೊಂದಿದ್ದರೂ, ಆಯುಷ್ಮಾನ್ ಭಾರತ್ ಯೋಜನೆಯ ದಾಖಲೆಗಳಲ್ಲಿ ಅವರು ಸತತ 42 ದಿನಗಳ ಕಾಲ 'ಬದುಕಿದ್ದಾರೆ' ಎಂದು ನಮೂದಾಗಿತ್ತು! ಅಷ್ಟೇ ಅಲ್ಲದೆ, ಗಂಡ ಸತ್ತು ಒಂದೂವರೆ ತಿಂಗಳ ಬಳಿಕ ಅವರ ಪತಿಗೆ 'ನಿಮ್ಮ ಪತಿ ಚಿಕಿತ್ಸೆಯಿಂದ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ' ಎಂಬ ತಾಂತ್ರಿಕ ಆಟೋಮೇಟೆಡ್ ಮೆಸೇಜ್ ಕಳುಹಿಸಿ ಸರ್ಕಾರಿ ವ್ಯವಸ್ಥೆ ದೊಡ್ಡ ಮುಖಭಂಗ ಅನುಭವಿಸಿದೆ.
ಏನಿದು ಆರೋಗ್ಯ ಇಲಾಖೆ ಎಡವಟ್ಟು?
ಈ ಘಟನೆ ಛತ್ತೀಸ್‌ಗಢದ ಸರ್ಗುಜಾ ಜಿಲ್ಲೆಯಲ್ಲಿ ನಡೆದಿದೆ. ಛತ್ತೀಸ್‌ಗಢದ ಸಶಸ್ತ್ರ ಪಡೆ ಪಡೆಗಳಲ್ಲಿ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ದೇವನಾರಾಯಣ್ ರಾಮ್ ಎಂಬುವರು ತೀವ್ರ ಅನಾರೋಗ್ಯದ ಕಾರಣ ಜೂನ್ 26 ರಂದು ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 30 ರಂದೇ ಅವರು ಕೊನೆಯುಸಿರೆಳೆದರು. ಆಸ್ಪತ್ರೆಯ ಸಿಬ್ಬಂದಿ ಅಧಿಕೃತ ಮರಣ ಪ್ರಮಾಣಪತ್ರವನ್ನೂ ನೀಡಿದ್ದರು. ಕುಟುಂಬಸ್ಥರು ದುಃಖದಲ್ಲೇ ಅವರ ಅಂತ್ಯಕ್ರಿಯೆಯನ್ನೂ ಪೂರ್ಣಗೊಳಿಸಿದ್ದರು.
ಆದರೆ ಆಯುಷ್ಮಾನ್ ಭಾರತ್ ಯೋಜನೆಯ ಸಾಫ್ಟ್‌ವೇರ್‌ನಲ್ಲಿ ದೇವನಾರಾಯಣ್ ಅವರ ಚಿಕಿತ್ಸೆ ಮುಂದುವರಿದಂತೆ ದಾಖಲಾಗಿತ್ತು. ಮೃತರ ಪತ್ನಿ ಸೀಮಾ ಕುಜೂರ್ ಅವರು ಸ್ವತಃ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿ ಅವರ ಮೊಬೈಲ್‌ಗೆ 'ಆಯುಷ್ಮಾನ್ ಸಾರಥಿ' ಸಿಸ್ಟಮ್‌ನಿಂದ ಒಂದು ಸ್ವಯಂಚಾಲಿತ ಎಸ್‌ಎಂಎಸ್ (Automated SMS) ಬಂದಿದೆ. 'ಪ್ರಿಯ ದೇವನಾರಾಯಣ್, ನೀವು ಸಂಪೂರ್ಣವಾಗಿ ಗುಣಮುಖರಾಗಿದ್ದು, ಮನೆಗೆ ಮರಳುತ್ತಿದ್ದೀರಿ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ...' ಎಂಬ ಸಂದೇಶವನ್ನು ನೋಡಿ ಪತ್ನಿ ಸಂಪೂರ್ಣ ಶಾಕ್ ಆಗಿದ್ದಾರೆ.
ದೊಡ್ಡ ಮಟ್ಟದ ತನಿಖೆಗೆ ಪತ್ನಿ ಆಗ್ರಹ:
ಈ ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ ಸೀಮಾ ಕುಜೂರ್, 'ವ್ಯಕ್ತಿಯೊಬ್ಬರು ಮೃತಪಟ್ಟು 42 ದಿನಗಳಾದರೂ ಆರೋಗ್ಯ ಇಲಾಖೆಯ ಆಯುಷ್ಮಾನ್ ವ್ಯವಸ್ಥೆಗೆ ಮಾಹಿತಿ ಇಲ್ಲದಿರುವುದು ಹೇಗೆ ಸಾಧ್ಯ? ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೇ ಈ ಸ್ಥಿತಿ ಎದುರಾದರೆ, ಇನ್ನು ಸಾಮಾನ್ಯ ಹಾಗೂ ಬುಡಕಟ್ಟು ಜನರಿಗೆ ಏನೆಲ್ಲಾ ಮೋಸ ಆಗುತ್ತಿರಬೇಡ? ಇದರ ಹಿಂದೆ ದೊಡ್ಡ ಮಟ್ಟದ ಅಕ್ರಮ ಅಥವಾ ದಂಧೆ ಅಡಗಿದೆಯೇ ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿಯ ಸ್ಪಷ್ಟನೆ:
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಂಬಿಕಾಪುರ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಆರ್.ಸಿ. ಆರ್ಯ, 'ಮೃತರ ಚಿಕಿತ್ಸೆಗಾಗಿ ಕೇವಲ ₹16,500 ಮಾತ್ರ ವಿನಿಯೋಗಿಸಲಾಗಿದೆಯೇ ಹೊರತು ಅವರ ಮರಣದ ನಂತರ ಯಾವುದೇ ಹಣ ದುರ್ಬಳಕೆಯಾಗಿಲ್ಲ. ಈ ಎಸ್‌ಎಂಎಸ್ ಸ್ವಯಂಚಾಲಿತ ಸಿಸ್ಟಮ್‌ನಿಂದ ಬಂದಿದ್ದಾಗಿದೆ. ಪ್ರಕರಣ ಮುಕ್ತಾಯಗೊಂಡ ಮೇಲೆಯೂ ಇಂತಹ ಮೆಸೇಜ್‌ಗಳು ಮೃತರ ಕುಟುಂಬಸ್ಥರಿಗೆ ಹೋಗದಂತೆ ತಡೆಯಲು ಇಲಾಖೆಗೆ ಪತ್ರ ಬರೆಯುತ್ತೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ.


