15 ವರ್ಷದ ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ, ಯುವರಾಜ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಲಂಡನ್‌ನ ವಿಂಬಲ್ಡನ್ ಫೈನಲ್ ಪಂದ್ಯ ವೀಕ್ಷಿಸಿದರು. ಈ ವೇಳೆ ತಮ್ಮ ಮೊದಲ ವಿಂಬಲ್ಡನ್ ಅನುಭವ, ಟೆನಿಸ್ ಮೇಲಿನ ಆಸಕ್ತಿ ಮತ್ತು ಅಭಿಷೇಕ್ ಶರ್ಮಾ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಟೆನಿಸ್ ಡಬಲ್ಸ್ ಆಡುವುದಾದರೆ ಅಭಿಷೇಕ್ ಅವರನ್ನೇ ಪಾರ್ಟ್ನರ್ ಆಗಿ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್ ಲೋಕದ ಉದಯೋನ್ಮುಖ ತಾರೆ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ಲಂಡನ್‌ನ ಐತಿಹಾಸಿಕ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದರು. ಟೀಮ್ ಇಂಡಿಯಾದ ದಿಗ್ಗಜ ಯುವರಾಜ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ವೈಭವ್ ಸೆಂಟರ್ ಕೋರ್ಟ್‌ನಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ಭೇಟಿಯ ಅನುಭವ

ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್ ಅವರಿಗೆ ಇದು ಮೊದಲ ವಿಂಬಲ್ಡನ್ ಭೇಟಿ. ಜಿಯೋ ಸ್ಟಾರ್ ಜೊತೆ ಮಾತನಾಡಿದ ಅವರು, ಫೈನಲ್ ಪಂದ್ಯವನ್ನು ನೇರವಾಗಿ ನೋಡುವುದು ಮತ್ತು ಆಟಗಾರರು ಅಂತಹ ಒತ್ತಡದ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಗಮನಿಸುವುದು ಒಂದು ಅದ್ಭುತ ಅನುಭವ ಎಂದಿದ್ದಾರೆ. ಕಳೆದ 4-5 ವರ್ಷಗಳಿಂದ ಟೆನಿಸ್ ಫಾಲೋ ಮಾಡುತ್ತಿರುವ ವೈಭವ್, ತಾನು ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ. ನಾನು ಬೆಳೆಯುತ್ತಿರುವಾಗ ನಡಾಲ್ ಮತ್ತು ಜೊಕೊವಿಕ್ ಅವರ ಆಟವನ್ನು ತುಂಬಾ ಇಷ್ಟಪಡುತ್ತಿದ್ದೆ. ಅದರಲ್ಲೂ ಜೊಕೊವಿಕ್ ನನ್ನ ಫೇವರಿಟ್ ಎಂದು ತಿಳಿಸಿದ್ದಾರೆ. ಈ ಬಾರಿಯ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್ ಸಿನ್ನರ್ (Jannik Sinner) ಅವರನ್ನು ವೈಭವ್ ಬೆಂಬಲಿಸಿದ್ದರು.

ಸ್ಟೈಲಿಶ್ ಲುಕ್‌ನ ಹಿಂದೆ ಅಭಿಷೇಕ್ ಶರ್ಮಾ ಕೈವಾಡ!

ವಿಂಬಲ್ಡನ್‌ನ ಫೈನಲ್ ಪಂದ್ಯಕ್ಕಾಗಿ ವೈಭವ್ ಸೂರ್ಯವಂಶಿ ಅತ್ಯಂತ ಸ್ಟೈಲಿಶ್ ಆಗಿ ರೆಡಿಯಾಗಿದ್ದರು. ಈ ಬಗ್ಗೆ ಕೇಳಿದಾಗ, ನಾನು ಏನನ್ನೂ ಮೊದಲೇ ಪ್ಲಾನ್ ಮಾಡಿರಲಿಲ್ಲ. ಸಿಕ್ಕಿದ್ದನ್ನು ಧರಿಸಿದೆ. ಆದರೆ ನನ್ನ ಗೆಳೆಯ ಅಭಿಷೇಕ್ ಶರ್ಮಾ ನಾನು ರೆಡಿಯಾಗಲು ತುಂಬಾ ಸಹಾಯ ಮಾಡಿದರು ಎಂದು ನಗುತ್ತಾ ಉತ್ತರಿಸಿದ್ದಾರೆ.

ಟೆನಿಸ್ ಡಬಲ್ಸ್ ಪಾರ್ಟ್ನರ್ ಯಾರು?

ಒಂದು ವೇಳೆ ಟೆನಿಸ್ ಡಬಲ್ಸ್ ಆಡುವುದಾದರೆ ಯಾರನ್ನು ಪಾರ್ಟ್ನರ್ ಆಗಿ ಆರಿಸುತ್ತೀರಿ ಎಂಬ ಪ್ರಶ್ನೆಗೆ, ಅಭಿಷೇಕ್ ಭೈಯ್ಯಾ (ಅಭಿಷೇಕ್ ಶರ್ಮಾ) ಅವರನ್ನೇ ಆರಿಸುತ್ತೇನೆ. ಅವರು ಕ್ರಿಕೆಟ್‌ನಲ್ಲಿ ನನ್ನ ಓಪನಿಂಗ್ ಪಾರ್ಟ್ನರ್, ಹಾಗಾಗಿ ಇಲ್ಲಿಯೂ ಅವರೇ ಬೇಕು ಎಂದು ಹೇಳಿದ್ದಾರೆ. ಈ ಬಾರಿಯ ವಿಂಬಲ್ಡನ್‌ನಲ್ಲಿ ಭಾರತೀಯ ಕ್ರಿಕೆಟಿಗರ ಹವಾ ಜೋರಾಗಿತ್ತು. ಈ ವಾರದ ಆರಂಭದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಭಾರತ ತಂಡದ ನಾಯಕ ಶುಬ್ಮನ್ ಗಿಲ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದ್ದರು.

 ಭಾನುವಾರ ನಡೆದ ಫೈನಲ್‌ನಲ್ಲಿ ವೈಭವ್ ಜೊತೆಗೆ ಯುವರಾಜ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಹಾಜರಿದ್ದರು. ಭಾರತದ ಟಿ20 ತಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 0-4 ಅಂತರದಿಂದ ಸೋತ ಬೆನ್ನಲ್ಲೇ ಈ ಆಟಗಾರರು ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಕೇವಲ 15 ವರ್ಷಕ್ಕೆ ಭಾರತೀಯ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ ಬೆಳೆದಿರುವ ವೈಭವ್, ಇತರ ಕ್ರೀಡೆಗಳಿಂದಲೂ ಸ್ಫೂರ್ತಿ ಪಡೆಯುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Scroll to load tweet…